ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಲ್ಲಿ ಗುಂಪುಗಾರಿಕೆ ಇಲ್ಲ

Last Updated 21 ನವೆಂಬರ್ 2017, 9:21 IST
ಅಕ್ಷರ ಗಾತ್ರ

ಕೋಲಾರ: ‘ಜೆಡಿಎಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಒಂದು ವೇಳೆ ಗುಂಪುಗಾರಿಕೆ ನಡೆದರೆ ಚುನಾವಣೆಯಲ್ಲಿ ಪಕ್ಷವು ಮಣ್ಣು ಮುಕ್ಕಬೇಕಾಗುತ್ತದೆ’ ಎಂದು ಇಫ್ಕೋ ಟೋಕಿಯೊ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಹೇಳಿದರು. 11 ಮಂದಿ ಅನಾರೋಗ್ಯಪೀಡಿತರಿಗೆ ವೈದ್ಯಕೀಯ ವೆಚ್ಚಕ್ಕಾಗಿ ನಗರದಲ್ಲಿ ಸೋಮವಾರ ಹಣಕಾಸು ನೆರವಿನ ಚೆಕ್‌ ವಿತರಿಸಿ ಮಾತನಾಡಿದರು.

ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು. ಅದು ಬಿಟ್ಟು ಗುಂಪುಗಾರಿಕೆ ಮಾಡಿದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂದರು. ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ನ.26ರಂದು ನಗರಕ್ಕೆ ಬರುವ ಕಾರಣ ಅಂದು ಪಕ್ಷದ ಸಮಾವೇಶ ಆಯೋಜಿಸಲಾಗಿದೆ. ದೇವೇಗೌಡರು ನ.29ರಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಾರೆ. ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ತಿಳಿಸಿದರು.

ಬಣ್ಣ ಬಯಲಾಗಿದೆ: ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗದ ಶಾಸಕ ವರ್ತೂರು ಪ್ರಕಾಶ್‌ರ ನಿಜ ಬಣ್ಣ ಬಯಲಾಗಿದೆ. ಜನ ಅವರ ಯೋಗ್ಯತೆ ತಿಳಿದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅವರಿಗೆ ಖಂಡಿತ ಗೇಟ್ ಪಾಸ್ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಗೆ ಈ ಹಿಂದೆ ಬಹುಮತದ ಕೊರತೆ ಎದುರಾದಾಗ ಬಿ.ಎಸ್.ಯಡಿಯೂರಪ್ಪ ಅವರು ವರ್ತೂರು ಪ್ರಕಾಶ್‌ಗೆ ಕೋಟಿಗಟ್ಟಲೆ ಹಣ ಕೊಟ್ಟು ಬೆಂಬಲ ಪಡೆದಿದ್ದರು. ಆ ಹಣ ಇಲ್ಲದೆ ಹೋಗಿದ್ದರೆ ವರ್ತೂರು ಪ್ರಕಾಶ್‌ ಇಷ್ಟೊತ್ತಿಗೆ ಕ್ಷೇತ್ರದಿಂದ ಜಾಗ ಖಾಲಿ ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಸದಾ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರು ಜಪಿಸುತ್ತಿದ್ದ ಶಾಸಕರು ಈಗ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಉಂಡ ಮನೆಗೆ ದ್ರೋಹ ಬಗೆದಿರುವ ಶಾಸಕರು ಮುಜುಗರ ಅನುಭವಿಸುವಂತಾಗಿದೆ ಎಂದು ಟೀಕಿಸಿದರು. ಜೆಡಿಎಸ್ ಮುಖಂಡರಾದ ವೆಂಕಟೇಶಪ್ಪ, ಬಿಸ್ಸೇಗೌಡ, ಚಂದ್ರೇಗೌಡ, ಶ್ರೀನಿವಾಸ್, ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT