ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ

Last Updated 21 ನವೆಂಬರ್ 2017, 9:26 IST
ಅಕ್ಷರ ಗಾತ್ರ

ಕೋಲಾರ: ’ಕುರುಬ ಜನಾಂಗದ ಮುಖಂಡರ ವಿರುದ್ಧ ಹೇಳಿಕೆ ನೀಡಿರುವ ಶಾಸಕ ವರ್ತೂರು ಪ್ರಕಾಶ್‌ಗೆ ಸಮುದಾಯದವರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಿ.ಎಚ್.ನಾಗರಾಜ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಕುರುಬರ ವೇದಿಕೆಯ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ವರ್ತೂರು ಪ್ರಕಾಶ್‌ ಶಾಸಕರಾಗಿದ್ದರೂ ಸಮುದಾಯಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ. ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಕ್ಷೇತ್ರಕ್ಕೆ ಬಂದ ವರ್ತೂರು ಪ್ರಕಾಶ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಸಮುದಾಯದ ಬೆಂಬಲದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು ಎಂದರು.

ಅವರು ಶಾಸಕರಾಗಿದ್ದರಿಂದ ಕುರುಬ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ ನಿರೀಕ್ಷೆ ಹುಸಿಯಾಯಿತು. ಶಾಸಕರು ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನ ಕಾರಿಯಾಗಿ ಮಾತನಾಡು ತ್ತಿರುವುದನ್ನು ಕುರುಬ ಸಮುದಾಯ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

’ವರ್ತೂರು ಪ್ರಕಾಶ್‌, ಸಿದ್ದರಾಮಯ್ಯರ ಹೆಸರು ಹೇಳಿಕೊಂಡು ಶಾಸಕರಾಗಿದ್ದನ್ನು ಮರೆತಿದ್ದಾರೆ. ಸಿದ್ದರಾಮಯ್ಯ ಬೆಂಬಲಿಸದಿದ್ದರೆ ಅವರು ಗ್ರಾಮ ಪಂಚಾಯಿತಿ ಸದಸ್ಯ ಸಹ ಆಗುತ್ತಿರಲಿಲ್ಲ’ ಎಂದು ರಾಜ್ಯ ಕುರುಬರ ಸಂಘದ ನಿರ್ದೇಶಕ ಅಶೋಕ್‌ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಅವರನ್ನು ಟೀಕಿಸಿರುವಂತಹ ವ್ಯಕ್ತಿಯನ್ನು ಸಮುದಾಯದವರು ದೂರ ಇಡಬೇಕು. ಕುರುಬ ಸಮುದಾಯದ ಯಾವುದೇ ವ್ಯಕ್ತಿ ಕಾಸಿಗಾಗಿ ಶಾಸಕರ ಬಳಿ ಹೋಗಿಲ್ಲ. ಯಾರೂ ತಮ್ಮನ್ನು ಮಾರಿಕೊಂಡಿಲ್ಲ. ಕುರುಬರು ಎಂದರೆ ಸ್ವಾಭಿಮಾನದ ಸಂಕೇತ ಎಂಬುದನ್ನು ತೋರಿಸಿಕೊಡಬೇಕು ಎಂದು ಅವರು ಹೇಳಿದರು.

ಮುಖಂಡರ ಮೂಲೆಗುಂಪು: ವರ್ತೂರು ಪ್ರಕಾಶ್‌ ಅವರಿಂದ ಕುರುಬ ಸಮಯುದಾಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಅವರು ಚುನಾವಣೆಗಳಲ್ಲಿ ಹಿಂಬಾಲಕರು, ಸಂಬಂಧಿಕರನ್ನು ಗೆಲ್ಲಿಸಿಕೊಂಡರೆ ಹೊರತು ಸಾಮಾನ್ಯ ಕುರುಬನಿಗೆ ಯಾವ ಸ್ಥಾನವನ್ನೂ ಕಲ್ಪಿಸಿಲ್ಲ. ಬದಲಿಗೆ ಸಹಾಯ ಮಾಡಿದ ಮುಖಂಡರನ್ನೇ ಮೂಲೆಗುಂಪು ಮಾಡಿದ್ದಾರೆ ಎಂದು ದೂರಿದರು. ವರ್ತೂರು ಪ್ರಕಾಶ್‌ರನ್ನು ಕ್ಷೇತ್ರದಿಂದ ಓಡಿಸುವ ಸಮಯ ಹತ್ತಿರ ಬಂದಿದೆ. ಸಮುದಾಯದವರು ಎಚ್ಚೆತ್ತು ಕೊಳ್ಳಬೇಕು ಎಂದು ಕರೆ ಅವರು ನೀಡಿದರು.

ಸಮುದಾಯಕ್ಕೆ ಕೊಡುಗೆ ಶೂನ್ಯ: ‘ವರ್ತೂರು ಪ್ರಕಾಶ್ ಕುರುಬ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿ ದ್ದಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿ ಕೊಂಡು ಹೇಳಿಕೆ ನೀಡಲಿ. ಸಿದ್ದರಾಮಯ್ಯ ಅವರನ್ನು ಟೀಕಿಸಿ ರುವುದಕ್ಕೆ ಕುರುಬರು ಸೇರಿದಂತೆ ಎಲ್ಲ ಸಮುದಾಯವರಿಗೂ  ನೋವಾಗಿದೆ. ಶಾಸಕರು ಇನ್ನಾದರೂ ತಮ್ಮ ನಾಲಿಗೆ ಹಿಡಿತದಲ್ಲಿ ಇಟ್ಟುಕೊಳ್ಳಲಿ. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ರಾಜ್ಯ ಕೈಮಗ್ಗ ನಿಗಮದ ನಿರ್ದೇಶಕ ವೆಂಕಟೇಶ್‌ ಗೌಡ ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯ ಜೆಡಿಎಸ್‌ನ ಮೋಹನ್ ಪ್ರಸಾದ್, ಸಮುದಾಯದ ಮುಖಂಡರಾದ ಜೆ.ಕೆ.ಜಯರಾಮ್, ವೆಂಕಟೇಶಪ್ಪ, ಅಶ್ವತ್ಥ್‌, ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ, ನಗರಸಭೆ ಮಾಜಿ ಅಧ್ಯಕ್ಷ ವಿ.ಪ್ರಕಾಶ್, ಸದಸ್ಯ ಚಂಗೋಲಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ದುರಹಂಕಾರದ ಪರಮಾವಧಿ
ಸಮುದಾಯದ ಬೆಂಬಲದಿಂದ ಶಾಸಕರಾಗಿ ಜನಾಂಗದ ಮುಖಂಡರನ್ನೇ ನಿಂದಿಸುವ ಮಟ್ಟಕ್ಕೆ ಬೆಳೆದಿರುವುದು ದುರಾಹಂಕಾರದ ಪರಮಾವಧಿ ಎಂದು ರಾಜ್ಯ ಕುರುಬರ ಸಂಘದ ನಿರ್ದೇಶಕ ಅಶೋಕ್‌ ಹೇಳಿದರು.

ಶಾಸಕರಿಗೆ ತಕ್ಕ ಪಾಠ ಕಲಿಸಲು ಸಮುದಾಯದ ಪ್ರತಿಯೊಬ್ಬರು ಸ್ವಾಭಿಮಾನಿಯಾಗಬೇಕು. ಸಮುದಾಯದವರ ಮಧ್ಯೆ ವಿಷ ಬೀಜ ಬಿತ್ತುತ್ತಿರುವ ಶಾಸಕರ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

* * 

ಸಮುದಾಯದ ಯುವಕ ಬೆಳೆಯಲಿ ಎಂದು ಸಿದ್ದರಾಮಯ್ಯ ಅವರು ವರ್ತೂರು ಪ್ರಕಾಶ್‌ರ ಬೆನ್ನಿಗೆ ನಿಂತರು. ಆದರೆ ಅವಕಾಶವಾದಿ ವರ್ತೂರು ಪ್ರಕಾಶ್‌ ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರೆ
ಪಿ.ಎಚ್.ನಾಗರಾಜ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT