ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉಪ ಕಸಬುಗಳನ್ನು ಪ್ರೋತ್ಸಾಹಿಸಿ

Last Updated 21 ನವೆಂಬರ್ 2017, 9:34 IST
ಅಕ್ಷರ ಗಾತ್ರ

ರಾಯಚೂರು: ‘ಗ್ರಾಮೀಣ ಭಾಗದಲ್ಲಿ ರೈತರಿಗೆ ಅನುಕೂಲವಾಗಲು ಸಹ ಕಾರ ಬ್ಯಾಂಕುಗಳಿಂದ ಕೃಷಿ ಉಪ ಕಸುಬುಗಳನ್ನು ಪ್ರೋತ್ಸಾಹಿಸಬೇಕು’ ಎಂದು ಸಂಸದ ಬಿ.ವಿ.ನಾಯಕ ಸಲಹೆ ನೀಡಿದರು.

ನಗರದ ಗಂಜ್‌ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿ ಸಿದ್ದ 64ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರಿಗೆ ಹೆಚ್ಚಿನ ನೆರವು ನೀಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯ. ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಸಹಕಾರ ಬ್ಯಾಂಕುಗಳಿಂದ ಕೌಶಲ ತರಬೇತಿ ನೀಡುತ್ತಿರುವುದು ಒಳ್ಳೆಯ ವಿಚಾರ. ಕೌಶಲಕ್ಕೆ ಮಹತ್ವ ನೀಡುವುದರೊಂದಿಗೆ ಗುಡಿ ಕೈಗಾರಿಕೆಗಳನ್ನು ಬೆಳೆಸಬೇಕು. ಗುಡಿ ಕೈಗಾರಿಕೆಗಳಿಂದ ಹೆಚ್ಚು ಜನರು ಉದ್ಯೋಗ ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಸಹಕಾರ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಸರ್ಕಾರವು ಬಂಡವಾಳ ಶಾಹಿಗಳ ಕೈಗೊಂಬೆಯಾಗಿಲ್ಲ. ರೈತರು ಮತ್ತು ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಸಹಕಾರಿ ರಂಗದಲ್ಲೂ ಅನೇಕ ಸೌಲಭ್ಯ ಒದಗಿಸುವುದಕ್ಕೆ ಚಿಂತನ ಮಂಥನ ಮಾಡಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಸಹಕಾರ ಸಪ್ತಾಹ ಉದ್ಘಾಟನೆ ಮಾಡಲಾಗಿತ್ತು. ಆನಂತರ ಮಂಗಳೂರು, ಕೋಲಾರ, ಬಾಗಲಕೋಟೆ, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳನ್ನು ಮಾಡಲಾಗಿತ್ತು. ಅಖಂಡ ಧಾರವಾಡ ಜಿಲ್ಲೆಯಾಗಿದ್ದ ಇಂದಿನ ಗದಗ ಜಿಲ್ಲೆಯಲ್ಲಿ 1905ರಲ್ಲಿ ಸಿದ್ದನಗೌಡ ಪಾಟೀಲ ಅವರು ಗಾಂಧೀಜಿ ತತ್ವ ಪರಿಕಲ್ಪನೆಯೊಂದಿಗೆ ಕರ್ನಾಟಕದಲ್ಲಿ ಪ್ರಥಮ ಸಹಕಾರಿ ಸಂಘವನ್ನು ಸ್ಥಾಪಿಸಿದ್ದರು. ಇದೀಗ ದೇಶದ ಗಮನ ಸೆಳೆಯುವಂತೆ ಸಹಕಾರ ಕ್ಷೇತ್ರ ಬೆಳವಣಿಗೆ ಹೊಂದಿದೆ ಎಂದು ತಿಳಿಸಿದರು.

‘ಸಹಕಾರ’ ವಾರಪತ್ರಿಕೆಯ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಸಹಕಾರಿ ರತ್ನ ಪುರಸ್ಕೃತ ಹಿರಿಯರಿಗೆ ಮತ್ತು ಉತ್ತಮ ಸೇವೆಯಲ್ಲಿ ತೊಡಗಿದ ವಿವಿಧ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಸಹಕಾರಿ ಸಂಘಗಳಿಂದ ಸಾಲ ವಿತರಣೆ ಚೆಕ್ ಮತ್ತು ರೂಪೇ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ರಾಯಚೂರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಕೆ.ಓ.ಎಫ್ ಬೆಂಗಳೂರಿನ ನಿರ್ದೇಶಕರಾದ ವೆಂಕಟರಾವ್ ನಾಡಗೌಡ, ಎ.ವಸಂತಕುಮಾರ, ಸಂಯುಕ್ತ ಸಹಕಾರಿ ನಿಗಮ ನಿರ್ದೇಶಕರಾದ ತಿಮ್ಮಯ್ಯ ಶೆಟ್ಟಿ, ರಾಜಶೇಖರ ನಾಯ್ಕ್, ಕಲಬುರಗಿ ಹಾಗೂ ಯಾದಗಿರಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿದ್ರಾಮರೆಡ್ಡಿ, ರಾಯಚೂರು ಜಿಲ್ಲೆ ಸಹಕಾರ ಸಂಘಗಳ ಉಪ ನಿಬಂಧಕಿ ಸುನೀತಾ ಸಿದ್ರಾಮ್ ಇದ್ದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರಗೌಡ ವಿ.ಮಾಲಿಪಾಟೀಲ ಸ್ವಾಗತಿಸಿದರು. ಕಲಬುರ್ಗಿಯ ವಲಯದ ಸಹಕಾರ ಸಂಘಗಳ ಜಂಟಿ ನಿಬಂಧಕ ಐ.ಎಸ್‌. ಗಿರಡ್ಡಿ ವಂದಿಸಿದರು. ಬೆಳಗಾವಿಯ ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕಿ ವಸಂತಗೀತಾ ಹಿರೇಮಠ ನಿರೂಪಿಸಿದರು.

ಸಭಾಂಗಣ ಭರ್ತಿ
ವಿಶಾಲವಾದ ಗಂಜ್‌ ಸಭಾಂಗಣವು ಸಹಕಾರಿಗಳಿಂದ ಸಂಪೂರ್ಣ ಭರ್ತಿಯಾಗಿತ್ತು. ಜನರು ಎಲ್ಲ ಆಸನಗಳಲ್ಲಿ ಕುಳಿತಿದ್ದ ಕಾರಣ, ಬಹಳ ಜನರು ನಿಂತುಕೊಳ್ಳುವುದು ಅನಿವಾರ್ಯವಾಗಿತ್ತು. ಒಳಗೆ ನಿಲ್ಲುವುದಕ್ಕೂ ಜಾಗ ಇರದೆ ಸಭಾಂಗಣದ ಪ್ರವೇಶದ್ವಾರಗಳನ್ನು ಪೊಲೀಸರು ಬಂದ್‌ ಮಾಡಿಸಿದ್ದರು. ಕಾರ್ಯಕ್ರಮ ಆರಂಭವಾದ ಬಳಿಕ ಕಲ್ಯಾಣ ಮಂಟಪದ ಆವರಣದಲ್ಲಿ ಕಾಲಿಡುವುದು ಕಷ್ಟವಾಗಿತ್ತು. ಹೈದರಾಬಾದ್‌ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿಗಳು ಭಾಗಿಯಾಗಿದ್ದರು.

* *

ರಾಜ್ಯದ ಎಲ್ಲ ಸಹಕಾರಿ ಬ್ಯಾಂಕುಗಳು ಆರ್‌ಟಿಜಿಎಸ್‌ ಹಾಗೂ ಎನ್‌ಇಎಫ್‌ಟಿ ಸೌಲಭ್ಯವನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.\
ರಮಣರೆಡ್ಡಿ ,
ಸಹಕಾರ ಅಪೆಕ್ಸ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT