ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯ ವಂಚಿತ ಪೋತ್ನಾಳ

Last Updated 21 ನವೆಂಬರ್ 2017, 9:38 IST
ಅಕ್ಷರ ಗಾತ್ರ

ಮಾನ್ವಿ: ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕಿನ ಮೂವತ್ತಕ್ಕೂ ಅಧಿಕ ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಪೋತ್ನಾಳ ಗ್ರಾಮವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಮೂಲ ಸೌಕರ್ಯದ ಕೊರತೆ ಎದುರಿಸುತ್ತಿದೆ.

ಗ್ರಾಮ ಪಂಚಾಯಿತಿ ಕೇಂದ್ರವಾದ ಪೋತ್ನಾಳದಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಇದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಈ ಗ್ರಾಮದಲ್ಲಿ ಬಸ್‌ ನಿಲ್ದಾಣದ ವ್ಯವಸ್ಥೆಯೂ ಇಲ್ಲ. ಪ್ರತಿ ದಿನ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ತೆರಳುವ ಪೋತ್ನಾಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆದ್ದಾರಿ ಬದಿ ನಿಂತು ಬಸ್‌ಗಳಿಗೆ ಕಾಯಬೇಕಾದ ಪರಿಸ್ಥಿತಿ ಇದೆ.

ಗ್ರಾಮದಲ್ಲಿ ಸುಮಾರು 10 ಎಕರೆ ವಿಸ್ತಿರ್ಣದ ಕೆರೆ ಇದ್ದರೂ ಪೈಪ್‌ಲೈನ್‌ ಮೂಲಕ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಿಲ್ಲ. ಗ್ರಾಮದ ಪಕ್ಕದ ಹಳ್ಳದಿಂದ ಕುಡಿಯವ ನೀರು ಪೂರೈಸಲಾಗುತ್ತಿದೆ. ಅಲ್ಲದೇ ಆಸ್ಪತ್ರೆ ಪಕ್ಕದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಓವರ್‌ಹೆಡ್‌ ಟ್ಯಾಂಕ್‌ ನಿರುಪಯುಕ್ತವಾಗಿದೆ. ಬೇಸಿಗೆಯಲ್ಲಿ ಹಳ್ಳದ ನೀರು ಬತ್ತಿದರೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುತ್ತದೆ. ಕೆರೆ ಸಮೀಪ ಶುದ್ಧೀಕರಣ ಘಟಕ ಅಳವಡಿಸಿ ಪೈಪ್‌ಲೈನ್‌ ಮೂಲಕ ಪೂರೈಸುವ ಶಾಶ್ವತ ಕುಡಿಯವ ನೀರಿನ ಯೋಜನೆ ಜಾರಿಗೊಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಒಬ್ಬ ಆಯುಷ್‌ ವೈದ್ಯ ಮಾತ್ರ ಸೇವೆಗೆ ಲಭ್ಯವಿದ್ದಾರೆ. ತಜ್ಞ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ಇಲ್ಲದ ಕಾರಣ ಈ ಭಾಗದ ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಮರೀಚಿಕೆಯಾಗಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಆಸ್ಪತ್ರೆಯ ಸಿಬ್ಬಂದಿ ವಸತಿ ಕಟ್ಟಡಗಳು ಹಾಗೂ ರೈತ ಸಂರ್ಪಕ ಕೇಂದ್ರದ ಕಟ್ಟಡಗಳು ಶಿಥಿಲಗೊಂಡಿವೆ.

ಗ್ರಾಮದಲ್ಲಿ ಸಂತೆ ಮಾರುಕಟ್ಟೆಗೆ ಸ್ಥಳ ಇಲ್ಲ. ಮುದ್ದನಗುಡ್ಡಿ ರಸ್ತೆಯಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತದೆ. ಗ್ರಾಮದ ಹಲವು ಕಡೆ ಸುಸಜ್ಜಿತ ರಸ್ತೆ, ಒಳಚರಂಡಿ ಹಾಗೂ ಬೀದಿ ದೀಪಗಳ ವ್ಯವಸ್ಥೆ ಇಲ್ಲ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಹೆದ್ದಾರಿ ಪಕ್ಕದಲ್ಲಿ ಎರಡು ಕಡೆ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಮದ ಕೊಳಚೆ ನೀರು ಹರಿಯಲು ವ್ಯವಸ್ಥೆ ಕಲ್ಪಿಸದ ಕಾರಣ ರಸ್ತೆ ಬದಿಯ ಒಳಚರಂಡಿಗಳು ನಿರುಪಯುಕ್ತವಾಗಿವೆ.

ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಧ್ಯಾಹ್ನ ಬಿಸಿಊಟ ಮಾಡುವ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರಸಕ್ತಸಾಲಿನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ. ಸರ್ಕಾರದ ವಸತಿ ಶಾಲೆಗಳು, ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಕಾಲೇಜು ಮಂಜೂ ರಾಗಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿವೆ. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಶಿಕ್ಷಕರ ವಸತಿಗಾಗಿ ಕಟ್ಟಡ ನಿರ್ಮಿಸಿ ನಾಲ್ಕು ವರ್ಷಗಳು ಕಳೆದರೂ ಹಸ್ತಾಂತರವಾಗಿಲ್ಲ. ಪಾಳುಬಿದ್ದಿರುವ ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಎರಡು ಮಹಿಳಾ ಶೌಚಾಲಯಗಳು ನಿರುಪಯುಕ್ತವಾಗಿವೆ. ಪ್ರತಿ ಮನೆಗೆ ಶೌಚಾಲಯ ಹೊಂದುವ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ. ದಶಕಗಳಿಂದ ನನೆಗುದಿಗೆ ಬಿದ್ದಿರುವ ಮುನಿರಾಬಾದ್‌– ಮಹಿಬೂಬನಗರ ರೈಲ್ವೆ ಯೋಜನೆಯ ಭೂ ಸ್ವಾಧೀನಕ್ಕಾಗಿ ಸಮೀಕ್ಷೆ ಕಾರ್ಯ ನಡೆದಿದೆ. ಯೋಜನೆ ಜಾರಿಯಾದರೆ ಗ್ರಾಮಕ್ಕೆ ರೈಲ್ವೆ ನಿಲ್ದಾಣ ಮಂಜೂರು ಮಾಡಬೇಕು ಎಂಬುದು ಇಲ್ಲಿನ ಜನರ ಪ್ರಮುಖ ಬೇಡಿಕೆಯಾಗಿದೆ.

* * 

ಪೋತ್ನಾಳ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಬೇಕು.
ಎಚ್‌.ಶರ್ಪುದ್ದೀನ್‌ ಪೋತ್ನಾಳ
ಕಾರ್ಮಿಕ ಸಂಘಟನೆ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT