ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕ ಕೊಡುಗೆಗಳನ್ನೂ ಮರೆಯದ ಜನ

Last Updated 21 ನವೆಂಬರ್ 2017, 9:55 IST
ಅಕ್ಷರ ಗಾತ್ರ

ತುಮಕೂರು: ‘ಈ ಜಿಲ್ಲೆಯೊಂದಿಗೆ ಮೈಸೂರು ಮಹಾರಾಜರ ಸಂಬಂಧ ಅನನ್ಯವಾದುದು. ಆಗ ಮಹಾರಾಜರು ನೀಡಿದ್ದ ಚಿಕ್ಕ ಚಿಕ್ಕ ಕೊಡುಗೆಗಳನ್ನು ಜನರು ಮರೆತಿಲ್ಲ' ಎಂದು ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಸೋಮವಾರ ತುಮಕೂರು ನಾಗರಿಕ ಸಮಿತಿಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.

'ನನ್ನನ್ನು ಸನ್ಮಾನಿಸುವ ಮೂಲಕ ರಾಜರು, ಪ್ರಜೆಗಳ ಸಂಬಂಧವನ್ನು ನೆನಪಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದ ಅವರು, ‘10ನೇ ಚಾಮರಾಜ ಒಡೆಯರು 147 ವರ್ಷಗಳ ಹಿಂದೆ ಶಿರಾ ಪಟ್ಟಣದ ಅಂಬಾಭವಾನಿ ದೇವಸ್ಥಾನಕ್ಕೆ ಭೂಮಿ ಕೊಟ್ಟಿದ್ದನ್ನು ಜನರು ಮರೆತಿಲ್ಲ’ ಎಂದರು.

‘ಮಹಾರಾಜರ ದೊಡ್ಡ ದೊಡ್ಡ ಕೊಡುಗೆಗಳು ನನಗೆ ಗೊತ್ತಿವೆ. ಆದರೆ, ಚಿಕ್ಕ ಚಿಕ್ಕ ಕೊಡುಗೆಗಳು ಗೊತ್ತಿರುವುದಿಲ್ಲ. ಜನರೇ ನೆನಪಿಟ್ಟುಕೊಂಡು ಆಹ್ವಾನಿಸಿ ನನ್ನನ್ನು ಸನ್ಮಾನಿಸುತ್ತಿದ್ದಾರೆ’ ಎಂದು ಹೇಳಿದರು.

‘ಕಳೆದ ಬಾರಿ ತುಮಕೂರು ಜಿಲ್ಲೆಗೆ ಬಂದಾಗ ಮಳೆ, ಬೆಳೆ ಇರಲಿಲ್ಲ. ಈ ಬಾರಿ ಮಳೆ, ಬೆಳೆ ಚೆನ್ನಾಗಿದೆ. ಕೆರೆ ಕಟ್ಟೆಗಳು ತುಂಬಿವೆ. ಇದೇ ರೀತಿ ಅಂಬಾಭವಾನಿ ನಾಡಿನ ಜನರಿಗೆ ಆರೋಗ್ಯ, ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ‘ಮೈಸೂರು ಮಹಾರಾಜರ ಪ್ರಜಾ ಕಾಳಜಿ, ಅವರ ಆಡಳಿತ ವೈಭವ ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ’ ಎಂದು ತಿಳಿಸಿದರು.

‘ರಾಜ ಪ್ರತ್ಯಕ್ಷ ದೇವತಾ’ ಎಂಬಂತೆ ಮಹಾರಾಜರು ದೇವರಂತೆ ಬದುಕಿದರು. ಅವರು ಕಟ್ಟಿಸಿದ ಕೆರೆ,ಕಟ್ಟೆ, ದೇವಸ್ಥಾನಗಳನ್ನು ಈಗ ಉಳಿಸಿಕೊಳ್ಳಲೂ ಆಗುತ್ತಿಲ್ಲವಲ್ಲ ಎಂಬುದು ದೊಡ್ಡ ನೋವಿನ ಸಂಗತಿಯಾಗಿದೆ’ ಎಂದು ನುಡಿದರು.

‘ಆಗ ಮಹಾರಾಜರು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಸಹಾಯ ಮಾಡಲು ಮೈಸೂರು ಮಹಾರಾಜರು ಮುಂದಾಗಿದ್ದರು ಎಂಬುದು ರಾಮಕೃಷ್ಣ ಆಶ್ರಮದಲ್ಲಿನ ದಾಖಲೆಯಲ್ಲಿದೆ’ ಎಂದರು.

‘ಹಾಗೆಯೇ ಕಲಾವಿದರು, ಯತಿಗಳನ್ನು ಸಂರಕ್ಷಣೆ ಮಾಡಿದ್ದರು. ದೇವಸ್ಥಾನ ಅಭಿವೃದ್ಧಿಪಡಿಸಿದ್ದರು. ಆದರೆ,ಈಗ ಅನೇಕ ದೇವಸ್ಥಾನಗಳನ್ನು ನೋಡಿದರೆ ದುಃಖವಾಗುತ್ತದೆ. ದೇವರ ಪೂಜೆಗೂ ಹಣವಿಲ್ಲದ ಸ್ಥಿತಿ ಕಾಣುತ್ತಿದ್ದೇವೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಮೈಸೂರು ಮಹಾರಾಜರ ಬಗ್ಗೆ, ಅವರ ಕೊಡುಗೆಗಳ ಬಗ್ಗೆ ಇಂದಿಗೂ ಅಪಾರ ಗೌರವ, ಅಭಿಮಾನ ಜನರಲ್ಲಿ ಇದೆ. ಹೀಗಾಗಿ, ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವರ್ಷದಲ್ಲಿ ಕನಿಷ್ಠ 100 ದಿನ ರಾಜ್ಯದ ವಿವಿಧ ಜಿಲ್ಲೆಗಳ ಜನರನ್ನು ಭೇಟಿ ಮಾಡಬೇಕು. ಪ್ರವಾಸ ಮಾಡಿದರೆ ಸಾಕು ಒಂದು ಸಂಚಲನವಾಗುತ್ತದೆ’ ಎಂದು ಆಶಯ ವ್ಯಕ್ತಪಡಿಸಿದರು.

ರಮೇಶ್‌ಬಾಬು ಅವರು ಪ್ರಾಸ್ತಾವಿಕ ಮಾತನಾಡಿದರು. ಲಾಡ್ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎನ್.ಕೃಷ್ಣ, ವೆಂಕಟೇಶ್ ಲಾಡ್, ಮಧುಗಿರಿ ಶ್ರೀನಿವಾಸ್, ನ್ಯಾಯಾಧೀಶ ಬಾಬಾಸಾಹೇಬ್ ಜಿನರಾಳ್ಕರ್, ಸುರೇಶ್ ಶಾಸ್ತ್ರಿ, ಚಿದಾನಂದ್, ಕಮಲಾಕರ್ ಪಾಟೀಲ್, ಅಂಜನಪ್ಪ ವೇದಿಕೆಯಲ್ಲಿದ್ದರು.

ಸನ್ಮಾನಕ್ಕೆ ನೂಕು ನುಗ್ಗಲು
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ವೈಯಕ್ತಿಕವಾಗಿ ಸನ್ಮಾನಿಸ ಬಯಸುವವರ ಹೆಸರಿನ ಪಟ್ಟಿಯನ್ನು ಸಂಘಟಕರು ರೂಪಿಸಿದ್ದರು. ಆದರೆ, ಈ ಪಟ್ಟಿಯಲ್ಲಿದ್ದ ಹೆಸರುಗಳನ್ನು ಕರೆಯುವಷ್ಟರಲ್ಲಿ ನಾಗರಿಕರು ನಾ ಮುಂದು ತಾ ಮುಂದು ಎಂದು ವೇದಿಕೆಗೆ ನುಗ್ಗಿದರು. ಸಂಘಟಕರು ಮಾಡಿದ ಮನವಿ ಕೇಳಲಿಲ್ಲ. ಕೊನೆಗೆ ಪೊಲೀಸರು ಬಂದು ನಿಯಂತ್ರಿಸಬೇಕಾಯಿತು.

ಹಳತು–ಹೊಸತು
‘ಹಳೆಯದನ್ನು ಕಳಚದೇ ಆಧುನಿಕತೆಯನ್ನು ಅಪ್ಪಿಕೊಂಡು ಬೆಳೆದು ಬಂದುದು ಮೈಸೂರು ಸಾಮ್ರಾಜ್ಯದ ವಿಶೇಷತೆಯಾಗಿದೆ. ದೇಶದ ಬೇರೆ ಯಾವ ರಾಜ ಮನೆತನದಲ್ಲೂ ಇಂತಹ ವಿಶೇಷತೆ ಕಾಣುವುದಿಲ್ಲ’ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ ರಾಜ್ ನುಡಿದರು.

‘ತುಮಕೂರು ಜಿಲ್ಲೆಗೆ ಮಹಾರಾಜರು ಸರ್ವ ಕಾಲಕ್ಕೂ ನೆನಪಿಡುವಂತಹ ಕೊಡುಗೆಗಳಾದ ಕೆರೆ, ಕಟ್ಟೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಅವುಗಳನ್ನು ಕಾಪಾಡಿಕೊಳ್ಳುವ ಹೊಣೆ ಎಲ್ಲರದ್ದಾಗಿದೆ. ರಾಜವಂಶಸ್ಥರು ಜಿಲ್ಲೆಗೆ ಭೇಟಿ ನೀಡಿರುವುದು ನಾಗರಿಕರಿಗೆ ಸಂತೋಷವನ್ನುಂಟು ಮಾಡಿದೆ’ ಎಂದು ಹೇಳಿದರು.

* * 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಬಂದಾಗ ಅವರು ಯಾವ ಪಾರ್ಟಿ ಎಂದು ಜನರು ಪ್ರಶ್ನಿಸುತ್ತಾರೆ. ಆದರೆ, ರಾಜರದ್ದು ದೇವರ ಪಾರ್ಟಿ.
 ಸ್ವಾಮಿ ವಿರೇಶಾನಂದ ಸರಸ್ವತಿ,
ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT