ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪು, ಹುಳಿ, ಖಾರ: ಹದವಾಗಿದ್ದರೆ ಒಳಿತು!

Last Updated 21 ನವೆಂಬರ್ 2017, 11:52 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪ್ಪು ಹುಳಿ ಖಾರ’ ಸಿನಿಮಾದ ಟೀಸರ್‌ ಬಿಡುಗಡೆ ಆಗಿದ್ದು, ಮಾಲಾಶ್ರೀ ಅವರು ಪಂಚಿಂಗ್‌ ಡೈಲಾಗ್‌ ಹೇಳಿದ್ದು ಈಗ ಹಳತು. ಈ ಸಿನಿಮಾ ಶುಕ್ರವಾರ (ನವೆಂಬರ್ 24) ತೆರೆಗೆ ಬರುತ್ತಿರುವುದು ಹೊಸ ಸುದ್ದಿ.

ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ನೀಡಲು ಚಿತ್ರತಂಡದ ಕಫ್ತಾನ (ನಿರ್ದೇಶಕ) ಇಮ್ರಾನ್ ಸರ್ದಾರಿಯಾ ಸುದ್ದಿಗೋಷ್ಠಿ ಕರೆದಿದ್ದರು. ಮೊದಲ ಮಾತು ಇಮ್ರಾನ್ ಅವರದ್ದೇ ಆಗಿತ್ತು. ಮೊದಲಿಗೆ ಅವರು ತಮ್ಮ ಸಿನಿಮಾ ಯಾವ ಬಗೆಯದ್ದು ಎಂಬುದನ್ನು ಹೇಳಿದರು.

‘ಸಿನಿಮಾದ ಪಾತ್ರಗಳು ಸಂಕಷ್ಟಕ್ಕೆ ಸಿಲುಕಿರುತ್ತವೆ. ಪಾತ್ರಗಳು ತೊಳಲಾಟದಲ್ಲಿ ಇರುತ್ತವೆ. ಆದರೆ ಆ ಪಾತ್ರಗಳ ಒದ್ದಾಟವನ್ನು ತೆರೆಯ ಮೇಲೆ ವೀಕ್ಷಿಸುವಾಗ ಜನರ ಮುಖದಲ್ಲಿ ನಗು ಮೂಡುತ್ತದೆ. ಇಂಥವನ್ನು ಡಾರ್ಕ್‌ ಕಾಮಿಡಿ ಸಿನಿಮಾಗಳು ಎನ್ನುತ್ತಾರೆ. ಈ ಬಗೆಯ ಸಿನಿಮಾ ನಮ್ಮದು’ ಎಂದರು ಇಮ್ರಾನ್.

ತಮ್ಮ ಸಿನಿಮಾಕ್ಕೆ ಈ ಹೆಸರು ಇಟ್ಟಿರುವುದಕ್ಕೆ ಕಾರಣವನ್ನೂ ಅವರು ಹೇಳಿದರು. ‘ಉಪ್ಪು, ಹುಳಿ ಮತ್ತು ಖಾರ ಜೀವನದಲ್ಲೂ ಹಿತಮಿತವಾಗಿ, ಸಮತೋಲನದಲ್ಲಿ ಇರಬೇಕು. ಯಾವುದೇ ಒಂದು ಹೆಚ್ಚಾದರೂ ಸಮಸ್ಯೆ ಎದುರಾಗುತ್ತದೆ’ ಎಂದರು.

ಮಾಲಾಶ್ರೀ ಅವರು ಈ ಸಿನಿಮಾದಲ್ಲಿ ಖಡಕ್ ಆಗಿಯೂ, ಹಾಸ್ಯಮಯ ಆಗಿಯೂ ಇರುವ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರಂತೆ. ಅವರ ಪಾತ್ರದ ಹೆಸರು ದೇವಿ.

ನಟ ಧನು ಮಾಸ್ಟರ್ ಅವರು ಸಿನಿಮಾದಲ್ಲಿ, ವಿದೇಶಿ ಹೆಣ್ಣನ್ನು ಪ್ರೀತಿಸುವ ಪಾತ್ರ ನಿಭಾಯಿಸಿದ್ದಾರೆ. ‘ವಿದೇಶಿ ಹೆಣ್ಣುಮಗಳನ್ನು ಪ್ರೀತಿಸುವ ಪಾತ್ರ ನನಗೆ ಬಹಳ ಕಷ್ಟವಾಗಿತ್ತು. ನಮ್ಮದು ಒಂದರ್ಥದಲ್ಲಿ ಬ್ಲ್ಯಾಕ್‌ ಅಂಡ್ ವೈಟ್‌ ಮಿಶ್ರಣದಂತೆ ಇತ್ತು’ ಎಂದು ಖುಷಿ ಹಂಚಿಕೊಂಡರು ಧನು.

ಬಿಗ್‌ ಬಾಸ್‌ ಮೂಲಕ ಜನಪ್ರಿಯತೆ ಗಳಿಸಿದ ಜಯಶ್ರೀ ಅವರದ್ದು ಈ ಸಿನಿಮಾದಲ್ಲಿ ಬಿಂದಾಸ್ ಹುಡುಗಿಯ ಪಾತ್ರ. ತಪ್ಪು ಮಾರ್ಗದಲ್ಲಿ ಇರುವ ಯುವಕರನ್ನು ಸರಿದಾರಿಗೆ ತರುವ ಕಥೆ ಈ ಸಿನಿಮಾದಲ್ಲಿ ಇದೆ ಎಂದು ತಂಡ ಹೇಳಿದೆ.

ಅನುಶ್ರೀ ಅವರದ್ದು ಈ ಸಿನಿಮಾದಲ್ಲಿ ಜಾಹ್ನವಿ ಎಂಬ ಪಾತ್ರ. ‘ಈ ಸಿನಿಮಾದಲ್ಲಿ ಹೊಸ ಮುಖಗಳು ಇವೆ. ಹೊಸ ಆಲೋಚನೆಗಳಿವೆ’ ಎಂದರು ಅನುಶ್ರೀ. ರಮೇಶ್ ರೆಡ್ಡಿ ಸಿನಿಮಾದ ನಿರ್ಮಾಪಕರು. ಚಿತ್ರವನ್ನು ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಗುರಿ ಸಿನಿತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT