ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ನಂತರ ಬಾಲಿವುಡ್ ಏಣಿ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬಾಲಿವುಡ್ ನಿರ್ದೇಶಕಿ ತನುಜಾ ಚಂದ್ರ ಕೊಚ್ಚಿ ತಲುಪಿದರು. ಒಂದಲ್ಲ; ಎರಡು ಸಲ. ಮೊದಲ ಸಲ ಅವರು ಹೋಗಿದ್ದು-ಒಂಬತ್ತು ವರ್ಷಗಳ ನಂತರ ತಾವು ನಿರ್ದೇಶಿಸಹೊರಟಿದ್ದ ಹಿಂದಿ ಚಿತ್ರಕ್ಕೆ ದಕ್ಷಿಣ ಭಾರತದ ನಾಯಕಿಯನ್ನು ಹುಡುಕಲೆಂದು. ಎರಡನೇ ಸಲ ಅವರು ಹೋಗಿದ್ದು-ಆರಿಸಿದ ನಟಿಗೆ ಕಡಿಮೆ ಮೇಕಪ್ ಮಾಡಿಕೊಳ್ಳಬೇಕು ಎಂದು ಹೇಳಲು.

ತನುಜಾ ಮೆಚ್ಚಿ, ಆಯ್ಕೆ ಮಾಡಿದ ನಾಯಕಿ ಪಾರ್ವತಿ. ಹೆಸರಿನ ಪಕ್ಕದಲ್ಲಿದ್ದ ‘ಮೆನನ್’ ಎಂಬ ಜಾತಿಸೂಚಕ ಪದವನ್ನು ಅವರು ಪ್ರಜ್ಞಾಪೂರ್ವಕವಾಗಿ ತೆಗೆದು ಹಾಕಿದ್ದರು. ಪಾರ್ವತಿ ಹನ್ನೊಂದು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಅವರು ಬಾಲ್ಯದಿಂದಲೇ ನಟಿಯಾಗಬೇಕು ಎಂದುಕೊಂಡವರಲ್ಲ. ಭರತನಾಟ್ಯ ಕಲಿಯುವಾಗ ಅದರಲ್ಲಷ್ಟೇ ಗಮನ ಕೇಂದ್ರೀಕರಿಸಿದ್ದರು. ಕೇಂದ್ರೀಯ ವಿದ್ಯಾಲಯದಲ್ಲಿ ಶಾಲೆ ಕಲಿತಾಗ ಓದಿನ ಕಡೆಯಷ್ಟೇ ಗಮನ.

ಸುಂದರ ವದನದ ಅವರಿಗೆ ಕರೈಲಿ ಟೀವಿ ವಾಹಿನಿಯಲ್ಲಿ ನಿರೂಪಕಿಯಾಗುವ ಅವಕಾಶ ಬಂತು. ಅದಕ್ಕೆ ಐವತ್ತು ಜನ ಅಂತಿಮ ಹಂತದ ಆಡಿಷನ್ ನಲ್ಲಿ ಇದ್ದರು. ಅವರೆಲ್ಲರನ್ನೂ ಹಿಂದಿಕ್ಕಿ ಪಾರ್ವತಿ ಆಯ್ಕೆಯಾದದ್ದು ಅವರ ನೋಟದಲ್ಲಿದ್ದ ಆತ್ಮವಿಶ್ವಾಸದಿಂದಾಗಿ.

ನಿರೂಪಕಿಯಾಗಿ ಅವರ ಹಾವ-ಭಾವ ಇಷ್ಟಪಟ್ಟ ಚಿತ್ರರಂಗದ ಮಂದಿ ಏಕಾಏಕಿ ಅವಕಾಶಗಳನ್ನು ಮುಂದಿಡಲಿಲ್ಲ. ಮೊದಲು ಅವರಿಗೆ ಸಿಕ್ಕಿದ್ದು ಪೋಷಕ ಪಾತ್ರ. ಅದರಲ್ಲಿ ಮನಸೂರೆಗೊಂಡ ಮೇಲೆ ಹುಡುಕಿಕೊಂಡು ಬಂದದ್ದು ಚಿಕ್ಕ ವಯಸ್ಸಿನಲ್ಲೇ ತಾಯಿಯಾಗಿ ಪಡಿಪಾಟಲು ಅನುಭವಿಸುವ ಹೊಸ ತಲೆಮಾರಿನ ಹುಡುಗಿಯ ಪಾತ್ರ. ಅದನ್ನು ಒಪ್ಪಿಕೊಳ್ಳದಿರುವಂತೆ ಅನೇಕ ಆಪ್ತೇಷ್ಟರು ಒತ್ತಡ ಹೇರಿದರು. ಆದರೆ, ಪಾರ್ವತಿ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದರಷ್ಟೇ ಉಳಿಗಾಲ ಎಂದು ತಾವೇ ನಿರ್ಧರಿಸಿ, ಉಳಿದವರ ಸಲಹೆಯನ್ನು ತಿರಸ್ಕರಿಸಿದರು.

ಮಲೆಯಾಳಂ ನಿರ್ದೇಶಕ ಶಶಿ ಚಿತ್ರದ ಅವಕಾಶ ಬಂದಾಗ ಪಾರ್ವತಿ ಆಕಾಶಕ್ಕೆ ಮೂರೇ ಗೇಣು ಎಂದು ಹಿಗ್ಗಿದರು. ಆದರೆ, ಆ ಪಾತ್ರಕ್ಕೆ ತಮ್ಮ ಚರ್ಮದ ಬಣ್ಣವನ್ನು ಅವರು ನಾಲ್ಕು ಪಟ್ಟು ಕಡಿಮೆ ಮಾಡಿಕೊಳ್ಳಬೇಕಾಯಿತು. ‘ಮೇಕಪ್ ಅಲರ್ಜಿ ಆದರೆ ಏನು ಗತಿ’ ಎಂದು ಆಗಲೂ ಅವರ ಸ್ಟೈಲಿಸ್ಟ್ ಆತಂಕ ವ್ಯಕ್ತಪಡಿಸಿದರು.

ಹನ್ನೆರಡು ಚಿತ್ರಗಳ ಅವಕಾಶದ ಸರತಿ ಸಾಲು ಎದುರಲ್ಲಿತ್ತು. ಅವರು ಮನಸ್ಸು ಮಾಡಿದ್ದರೆ ಶಶಿ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿ, ಗ್ಲಾಮರಸ್ ಪಾತ್ರಗಳತ್ತಲೇ ಮುಖ ಮಾಡಬಹುದಿತ್ತು. ಹಾಗೆ ಮಾಡಲಿಲ್ಲ.

ಶಶಿ ಮೂರು ಹಂತದ ಆಡಿಷನ್ ಮಾಡಿದರೂ ಬೇಸರ ಪಟ್ಟುಕೊಳ್ಳದೆ ಪರೀಕ್ಷೆಗೆ ಒಳಪಟ್ಟರು. ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಪ್ಪುಬಣ್ಣದ ಹೆಣ್ಣಮಗಳಾಗಿ ‘ಪೂ’ ಮಲಯಾಳಂ ಚಿತ್ರದಲ್ಲಿ ಅವರು ಕಾಣಿಸಿಕೊಂಡದ್ದು ಹಾಗೆ. ಒಂದು ಡಜನ್ ಸಿನಿಮಾವಕಾಶಗಳನ್ನು ಅದಕ್ಕಾಗಿ ಧಿಕ್ಕರಿಸಿದ್ದು ಕಳೆದ ದಶಕದಲ್ಲಿ ಅಪರೂಪವೇ ಹೌದು. ಅಷ್ಟೆಲ್ಲ ತ್ಯಾಗ ಮಾಡದೇ ಹೋಗಿದ್ದರೆ ಆ ಚಿತ್ರದ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿ ಹುಡುಕಿಕೊಂಡು ಬರುತ್ತಿರಲಿಲ್ಲ.

ಪಾರ್ವತಿ ಹಾಗೂ ಮೇಕಪ್ ಮೊದಲಿನಿಂದಲೂ ಆಸಕ್ತಿಕರ ಸಂಗತಿ ಎನಿಸಲು ಇನ್ನೊಂದು ಕಾರಣವಿದೆ. ಅವರ ಮೂಗಿನ ಮೇಲೆ ದಪ್ಪ ಮಚ್ಚೆ ಇದೆ. ಕನ್ನಡದಲ್ಲಿ ‘ಪೃಥ್ವಿ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಅವರು ಆ ಮಚ್ಚೆಯನ್ನು ಮುಚ್ಚುವ ಕಷ್ಟ ಹೇಳಿಕೊಂಡಿದ್ದರು.

ತನುಜಾ ಚಂದ್ರ ‘ಕರೀಬ್ ಕರೀಬ್ ಸಿಂಗಲ್’ ಹಿಂದಿ ಚಿತ್ರದ ಅವಕಾಶ ಮುಂದಿಟ್ಟು, ಮೇಕಪ್ ಕಡಿಮೆ ಇರಬೇಕು ಎಂದಾಗಲು ಪಾರ್ವತಿ ‘ಮಚ್ಚೆ ಮುಚ್ಚಿಕೊಳ್ಳಲು ಅವಕಾಶ ಕೊಡಿ’ ಎಂದೇ ಕೇಳಿಕೊಂಡಿದ್ದರು. ಹನ್ನೊಂದು ವರ್ಷಗಳ ನಂತರ ಬಾಲಿವುಡ್ ಚಿತ್ರವೊಂದರಲ್ಲಿ ಹುಡುಕಿಕೊಂಡು ಬಂದ ಅವಕಾಶ ಅವರ ವೃತ್ತಿಬದುಕಿಗೆ ಇನ್ನೊಂದು ತಿರುವು ನೀಡಿದೆ.

‘ಕಡಿಮೆ ಮೇಕಪ್ ಇರುವ ಕಾರಣಕ್ಕೇ ನಾನು ಹಿಂದಿ ಸಿನಿಮಾದಲ್ಲಿ ಬೇರೆ ರೀತಿಯೇ ಕಾಣುತ್ತಿದ್ದೇನೆ’ ಎಂದು ಪಾರ್ವತಿ ಪ್ರತಿಕ್ರಿಯಿಸಿದ್ದರು. ಪಾರ್ವತಿಯ ಈ ಸಿನಿಪಯಣದಲ್ಲಿ ಕೆಲವು ಪ್ರೇರಕ ಸಂಗತಿಗಳು ಹುದುಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT