ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಹಿಡಿದು ಕಾಡು ಅಲೆವ ವೇದಾಂಶ್

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕೋರಮಂಗಲದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ 13 ವರ್ಷದ ವೇದಾಂಶ್ ಪಾಂಡೆಗೆ ಕಾಡು ಮತ್ತು ಕಾಡುಪ್ರಾಣಿಗಳೆಂದರೆ ಬಲುಪ್ರೀತಿ. ಕೈಲಿ ಭಾರವಾದ ಕ್ಯಾಮೆರಾ ಹಿಡಿದು ಕಾಡು ಅಲೆಯುವ ಈ ಹುಡುಗನಿಗೆ ಹುಲಿ, ಆನೆಗಳೊಂದಿಗೆ ಸ್ನೇಹ ಮಾಡಿಕೊಳ್ಳುವ ಆಸೆ. ಶಾಲೆಗೆ ರಜೆ ಇದ್ದಾಗ ಈ ಹುಡುಗ ಕಾಡು ತಿರುಗಿ ತೆಗೆದಿರುವ ಚಿತ್ರಗಳನ್ನು ಖ್ಯಾತ ವನ್ಯಜೀವಿ ಛಾಯಾಗ್ರಾಹಕರೂ ಮೆಚ್ಚಿಕೊಂಡಿದ್ದಾರೆ.

ವೇದಾಂಶ್ ಹುಟ್ಟೂರು ಮಂಗಳೂರು. ಮೈಸೂರು ಮತ್ತು ಶಿವಮೊಗ್ಗದಲ್ಲಿಯೂ ಕೆಲ ಸಮಯ ಇದ್ದ. ಚಿಕ್ಕ ವಯಸ್ಸಿನಿಂದಲೇ ಕಾಡು ಅವನ ಗಮನ ಸೆಳೆದಿತ್ತು. ಅಜ್ಜ ತಂದುಕೊಟ್ಟ ಪುಸ್ತಕಗಳು ವನ್ಯಜೀವಿಗಳ ಕುರಿತು ಆಸಕ್ತಿ ಮೊಳೆಯುವಂತೆ ಮಾಡಿದವು. ಅವಕಾಶ ಸಿಕ್ಕಾಗಲೆಲ್ಲಾ ಪೋಷಕರೊಡನೆ ಕಾಡುಗಳಿಗೆ ಭೇಟಿ ನೀಡಲು ಆರಂಭಿಸಿದ. ಈ ಸಂದರ್ಭ ತಂದೆ ಹೊತ್ತುತರುತ್ತಿದ್ದ ಕ್ಯಾಮೆರಾ ಪಡೆದು, ತಾನೇ ಚಿತ್ರ ತೆಗೆಯುತ್ತಿದ್ದ. ಮೊಮ್ಮಗನ ಫೋಟೊಗ್ರಫಿ ಆಸೆಯನ್ನು ನೀರೆರೆದು ಪೋಷಿಸಿದವರು ಅಜ್ಜ ದುಬೆ.

ಮಗನ ಈ ಆಸಕ್ತಿ ಗುರುತಿಸಿದ ಪೋಷಕರು ವ್ಯಾಸಂಗಕ್ಕೆ ಚ್ಯುತಿ ಆಗದಂತೆ ಕಾಡುಗಳಿಗೆ ಕರೆದೊಯ್ಯುತ್ತಿದ್ದರು. ಪೋಷಕರ ಪ್ರೋತ್ಸಾಹದಿಂದ ಉತ್ತೇಜಿತನಾದ ವೇದಾಂಶ್ ವಿವಿಧ ಅರಣ್ಯಗಳಲ್ಲಿ ಸಂಚರಿಸಿ, ಖುಷಿಯಿಂದ ವನ್ಯಜೀವಿಗಳ ಛಾಯಾಚಿತ್ರಗಳನ್ನು ತೆಗೆದ. ಇದೀಗ ತನ್ನ ಕಲಾಕೃತಿಗಳನ್ನು ಪ್ರದರ್ಶಿಸಲು ಸಿದ್ಧತೆ ನಡೆಸಿದ್ದಾನೆ. ಈ ಮೂಲಕ ರಾಜ್ಯದಲ್ಲಿ ವನ್ಯಜೀವಿ ಛಾಯಾಚಿತ್ರಗಳನ್ನು ಪ್ರದರ್ಶಿಸಿದ ಅತಿಕಿರಿಯ ಛಾಯಾಗ್ರಾಹಕ ಎಂಬ ಕೀರ್ತಿಗೆ ಪಾತ್ರನಾಗುತ್ತಿದ್ದಾನೆ.

ಕಬಿನಿ, ನಾಗರಹೊಳೆ, ಬಂಡೀಪುರ, ಆಗುಂಬೆ ಮತ್ತು ಕೊಡಗಿನ ಅರಣ್ಯ ಪ್ರದೇಶಗಳಲ್ಲಿ ತೆಗೆದಿರುವ ಛಾಯಾಚಿತ್ರಗಳು ಇವನ ಸಂಗ್ರಹದಲ್ಲಿವೆ. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ವರ್ಲ್ಡ್‌ ವೈಲ್ಡ್‌ ಲೈಫ್ ಫಂಡ್ ಸಹಯೋಗದಲ್ಲಿ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿದೆ.

‘ಜಾಗತಿಕ ಪರಿಸರ ಕಮ್ಮಟ’ದಲ್ಲಿ (ಗ್ಲೋಬಲ್ ಎನ್‌ವಿರಾನ್‌ಮೆಂಟ್‌ ಸಮಿಟ್) ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು, ವೇದಾಂಶ್‌ನ ಪರಿಸರ ಕಾಳಜಿಗೆ ಸಿಕ್ಕ ಗೌರವ. ಇಸ್ರೊ ಅಧ್ಯಕ್ಷ ಕಿರಣ್‌ ಕುಮಾರ್ ಸೇರಿ ಒಂಬತ್ತು ಮಂದಿ ಪಾಲ್ಗೊಂಡಿದ್ದ ಈ ಕಮ್ಮಟದಲ್ಲಿ ವೇದಾಂಶ್‌ನ ಮಾತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT