ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಯುವ ಹಸಿವಿದೆ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

*ಸಂಗೀತದಲ್ಲಿ ಆಸಕ್ತಿ ಮೂಡಿದ್ದು ಹೇಗೆ?
ಸಂಗೀತ ಎನ್ನುವ ಮಾಂತ್ರಿಕ ಶಕ್ತಿ ನನ್ನನ್ನು ಆವರಿಸಿಕೊಂಡು ಬಹಳ ವರ್ಷಗಳೇ ಕಳೆಯಿತು. ಸಂಗೀತಕ್ಕೆ ಭಾಷೆಯಿಲ್ಲ. ಅದು ಒಂದು ಮಾಂತ್ರಿಕ ಶಕ್ತಿ. ಹಾಡುಗಳನ್ನು ಕೇಳುತ್ತಲೇ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ.

‘ಸನಬರ್ನ್‌ ಸಂಗೀತ ಹಬ್ಬ’ ಆಯೋಜನೆಯ ಮುಖ್ಯ ಉದ್ದೇಶ ಏನು?
ನಾನು ವಿಶ್ವದ ಸಂಗೀತ ಸಂಸ್ಕೃತಿಯನ್ನು ನಮ್ಮ ದೇಶದವರೆಗೂ ತಂದಿದ್ದೇನೆ. ವಿಶ್ವದ ಹಲವೆಡೆ ಇರುವ ಖ್ಯಾತ ಸಂಗೀತ ವಿದ್ವಾಂಸರು ಇಲ್ಲಿಗೆ ಬಂದು ಸಂಗೀತದ ಅಲೆಯನ್ನು ವಿಸ್ತರಿಸುತ್ತಿದ್ದಾರೆ. ಜೀವನದಲ್ಲಿ ಸುಲಭದ ಕೆಲಸ ಎಂದರೆ ಅದು ಹಣ ಗಳಿಸುವುದು. ಆದರೆ ಬದಲಾವಣೆ ಮಾಡುವುದು ತುಂಬಾ ಕಷ್ಟ. ನನಗೆ ಹಣ ಗಳಿಸುವುದಕ್ಕಿಂದ ಬದಲಾವಣೆ ತರುವುದೇ ಮುಖ್ಯ. ಶಿಕ್ಷಣದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಬಂದ ಹಣವನ್ನು ನಾನು ಭಾರತದಲ್ಲಿನ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತೇನೆ. ಆ ಮೂಲಕ ನಾನು ಸಂತೋಷ ಕಾಣುತ್ತೇನೆ.

ನಿಮ್ಮ ಆಸಕ್ತಿಯ ಕ್ಷೇತ್ರಗಳು
ನನಗೆ ಆಸಕ್ತಿ ಮತ್ತು ಒಲವಿರುವ ಕ್ಷೇತ್ರಗಳೆಂದರೆ ಸಂಗೀತ, ಸಿನಿಮಾ ಮತ್ತು ಕ್ರೀಡೆ. ನಾನು ಬಾಲಿವುಡ್‌ನಲ್ಲಿ 74 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ, ರಾಷ್ಟ್ರಪಶಸ್ತಿ ಗಳಿಸಿದ್ದ ತಮಿಳು ಚಿತ್ರ ಕಾಂಜಿವರಂ ಚಿತ್ರಕ್ಕೂ ನಾನು ನಿರ್ಮಾಪಕನಾಗಿದ್ದೆ.

ಮಲ್ಟಿಟಾಸ್ಕಿಂಗ್ ಹಿಂದಿನ ರಹಸ್ಯವೇನು?
ನಾನು ಅಹರ್ತೆಯುಳ್ಳವನಲ್ಲ, ಆದರೆ ನಾನು ಹಸಿದವ, ನನಗೆ ಕಲಿಯುವ ಹಸಿವಿದೆ, ಅಷ್ಟೇ ಅಲ್ಲದೇ ನನಗೆ ಭಯವೂ ಜಾಸ್ತಿ. ಇರುವ ಒಂದೇ ಒಂದು ಜೀವನದಲ್ಲಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಬೇಕು ಎಂಬ ಹಸಿವು. ನಾನು ಅಂದುಕೊಂಡ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದಾಗ ನನಗೆ ತುಂಬಾ ಭಯವಾಗುತ್ತದೆ. ಭಯ ಮತ್ತು ಹಸಿವು ನನ್ನನ್ನು ವಿಶ್ರಾಂತಿ ಇಲ್ಲದಂತೆ ಮಾಡುತ್ತದೆ.

ಸನ್‌ಬರ್ನ್‌ ಎಂದರೆ ಏನು?
ಸನ್‌ಬರ್ನ್ ಕ್ರಿಕೆಟ್‌ನಲ್ಲಿ ಐಪಿಎಲ್ ಇದ್ದಂತೆ. ಪ್ರಪಂಚಕ್ಕಾಗಿ ಭಾರತದಲ್ಲೇ ತಯಾರಾದ ಬೌದ್ಧಿಕ ಆಸ್ತಿ. ಐಪಿಎಲ್‌ ಹುಟ್ಟಿದ್ದು ಭಾರತದಲ್ಲೇ. ಸನ್‌ಬರ್ನ್ ಕೂಡ. ವ್ಯತ್ಯಾಸ ಎಂದರೆ ಅದು ಕ್ರಿಕೆಟ್, ಇದು ಸಂಗೀತ.

ಸನ್‌ಬರ್ನ್‌ನ ಹುಟ್ಟಿಗೆ ಕಾರಣವೇನು?
ಪ್ರಪಂಚದಲ್ಲೇ ಅತಿಹೆಚ್ಚು ಯುವಜನರನ್ನು ಹೊಂದಿರುವ ದೇಶ ನಮ್ಮದು. ಯುವಜನರಿಗೆ ಸಂಗೀತ ಆಲಿಸುವುದು ಇಷ್ಟ. ನನಗೆ ಸೂಫಿ, ಬಾಲಿವುಡ್‌, ಶಾಸ್ತ್ರೀಯ, ದಕ್ಷಿಣ ಭಾರತದ ಸಂಗೀತ ಸೇರಿದಂತೆ ಎಲ್ಲಾ ಸಂಗೀತದ ಪ್ರಕಾರಗಳು ವಿಭಿನ್ನ ಹಾಗೂ ವಿಶಿಷ್ಟವಾಗಿದೆ ಎನ್ನಿಸುತ್ತದೆ. ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಹೊಸ ಜನರನ್ನು ಭೇಟಿಯಾಗಬಹುದು, ಸಂಗೀತ ‍ಪ್ರಕಾರಗಳ ಒಳಹೊರಗನ್ನು ತಿಳಿಯಬಹುದು. ಇದೇ ಕಾರಣಕ್ಕೆ ‘ಸನ್‌ಬರ್ನ್‌’ ಆರಂಭಿಸಿದೆ.

ಉಳಿದ ಸಂಗೀತ ಹಬ್ಬಕ್ಕಿಂತ ‘ಸನಬರ್ನ್’ ಹೇಗೆ ಭಿನ್ನ ಎನ್ನಿಸುತ್ತದೆ?
ವಿಭಿನ್ನತೆಯನ್ನು ನಾವು ರೆಸ್ಟೊರೆಂಟ್‌ಗಳಿಗೆ ಹೋಲಿಸಬಹುದು. ಬೇರೆ ಬೇರೆ ರೆಸ್ಟೊರೆಂಟ್‌ಗಳಲ್ಲಿ ಒಂದೇ ರೀತಿಯ ತಿನಿಸುಗಳು ಸಿಗಬಹುದು. ಆದರೆ ಅವುಗಳ ರುಚಿ ಮಾತ್ರ ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುತ್ತದೆ, ಹಾಗೆಯೇ ಸಂಗೀತ ಹಬ್ಬ. ಅಡುಗೆ ಎನ್ನುವುದು ಬಾಣಸಿಗನ ಮೇಲೆ ಅವಲಂಬಿಸಿದೆ. ಹೊಸರುಚಿಗಳನ್ನು ಗ್ರಾಹಕರಿಗೆ ಉಣಬಡಿಸುವ ಕಾಯಕ ಬಾಣಸಿಗನದ್ದು. ಹಾಗೆಯೇ ಸನ್‌ಬರ್ನ್‌ನಲ್ಲಿ ನಾನೊಬ್ಬ ಬಾಣಸಿಗನಷ್ಟೆ.

ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ (ಇಡಿಎಂ) ಎಂದರೇನು?
ಇದೊಂದು ವಿಶ್ವವಿಖ್ಯಾತಿ ಪಡೆದಿರುವ ನೃತ್ಯ ಸಂಗೀತದ ಪರಿ. ನನ್ನ ಅನುಭವದ ಪ್ರಕಾರ 1972ರಲ್ಲಿ ಮೊದಲ ಬಾರಿ ಗೋವಾದಲ್ಲಿ ಇದು ಆರಂಭವಾಯಿತು. ಗೋವಾದಿಂದ ಇದು ತನ್ನ ಹಾದಿಯನ್ನು ಯುರೋಪ್‌ನ ಒಂದು ದ್ವೀಷ ರಾಷ್ಟ್ರವಾದ ಇಭಿಝಾಃಗೆ ವಿಸ್ತರಿಸಿತು. ಅಲ್ಲಿಂದ ಇದು ವಿಶ್ವವಿಖ್ಯಾತಿ ಪಡೆಯಿತು.

ಬೆಂಗಳೂರಿನ ಬಗ್ಗೆ ನಿಮ್ಮ ಅನುಭವದ ನುಡಿ?
ಐ ಲವ್ ಬೆಂಗಳೂರು. ಈ ನಗರ ಒಂದೇ ಸಮಯದಲ್ಲಿ ಶಾಂತವಾಗಿಯೂ ಬ್ಯುಸಿಯಾಗಿಯೂ ಇರುವಂತಹ ನಗರ. ಅದರೊಂದಿಗೆ ಈ ನಗರ ನನಗೆ ಲಂಡನ್‌ನನ್ನು ನೆನಪಿಸುತ್ತದೆ. ಬೇಸಿಗೆಯಲ್ಲೂ ಹಿತವಾದ ತಂಪಿನ ಅನುಭವವನ್ನು ನೀಡುತ್ತದೆ ಬೆಂಗಳೂರು.

ಯುವಸಂಗೀತಗಾರರಿಗೆ ನಿಮ್ಮ ಸಂದೇಶವೇನು?
ನಿಮ್ಮ ಹೃದಯ ಹಾಗೂ ಮನಸ್ಸನ್ನು ಹಿಂಬಾಲಿಸುವುದನ್ನು ಕಲಿಯಿರಿ, ನಿಮ್ಮ ಸಂಗೀತಕ್ಕೆ ದೊಡ್ಡ ಮಟ್ಟದ ಮಾರುಕಟ್ಟೆಗೆ ನಿರ್ಮಾಣವಾಗಬೇಕು. ಅದನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮಲಿರುವ ಅದ್ಬುತ ಪ್ರತಿಭೆ ನಿಮ್ಮಲ್ಲಿ ಕೊನೆಯಾಗುತ್ತದೆ. ಹಾಗಾಗಿ ನಿಮ್ಮನ್ನು ನೀವು ಜಗತ್ತಿಗೆ ತೆರೆದುಕೊಳ್ಳುವ ರೀತಿಯನ್ನು ಕಲಿತುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT