ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲು ಕವಿದ ಅಮಾವಾಸ್ಯೆ ಕತ್ತಲು

ಮೂಢನಂಬಿಕೆ, ಮೌಢ್ಯಾಚರಣೆಗಳು ಸಾರ್ವಜನಿಕ ವಲಯಕ್ಕೆ ಬಂದಾಗ ಅದರಿಂದ ನಾಗರಿಕ ವ್ಯವಸ್ಥೆ ಹಾಳಾಗುತ್ತದೆ
Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅಂದು (ನ. 18) ಶನಿವಾರ, ಛಟ್ಟಿ ಅಮಾವಾಸ್ಯೆ ಬೇರೆ. ಹ್ಯಾಗ್ರೀ ಒಂದು ಮಹತ್ವದ ಸಭೆಯನ್ನು ನಡೆಸೋದಕ್ಕೆ ಸಾಧ್ಯ? ಅದಕ್ಕೇ ಸಂಪ್ರದಾಯಕ್ಕೆ ಗೌರವ ನೀಡಿ ವಿಜಯಪುರದ ಜಿಲ್ಲಾ ಪಂಚಾಯ್ತಿ ಸಭೆಯನ್ನು ಹತ್ತು ದಿನ ಮುಂದೂಡಲಾಯಿತು. ಆದರೆ, ಈ ಕುರಿತು ವರದಿಯ ಶೀರ್ಷಿಕೆಯೊಂದಿಗೆ ‘ಮೌಢ್ಯ ನಿಷೇಧ ಮಸೂದೆ ಅಂಗೀಕಾರವಾದರೂ ಮೂಢನಂಬಿಕೆ ತಪ್ಪಲಿಲ್ಲ’ ಎಂಬ ಉಪಶೀರ್ಷಿಕೆ ಇದೆ. ಅಲ್ಲದೇ ಕರ್ನಾಟಕ ವಿಧಾನಸಭೆ ನವೆಂಬರ್ 16ರಂದು ಅಸ್ತು ಎಂದಿದ್ದು ‘ಮೌಢ್ಯ ನಿಷೇಧ ಮಸೂದೆಗೆ’ ಎಂದು ವರದಿಯಾಗಿರುವುದೂ ಒಂದು ರೀತಿಯಲ್ಲಿ ತಪ್ಪೇ!

2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಸಕ್ತಿಯನ್ನು ಅನುಸರಿಸಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಕಾರ್ಯತಂಡ ರೂಪಿಸಿದ್ದ ಕರಡಿನಲ್ಲಿ ಮಸೂದೆಯ ಹೆಸರು ‘ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ’ ಎಂದು. ಅದು ಏನನ್ನು ಪ್ರತಿಬಂಧಿಸಲು ಉದ್ದೇಶಿಸಿದೆ ಎನ್ನುವ ಕುರಿತು ಇಲ್ಲಸಲ್ಲದ ಗಾಳಿಸುದ್ದಿಯನ್ನು ಹರಡಿ ಹಿಂದೂ ಧಾರ್ಮಿಕ ಭಾವನೆಯನ್ನು ಬಡಿದೆಬ್ಬಿಸಿ, ಈ ಮಸೂದೆಯು ಇತರ ಧರ್ಮಗಳನ್ನು ಕಡೆಗಣಿಸಿ ಹಿಂದೂ ಧರ್ಮವನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ಕೆಲವು ಹಿತಾಸಕ್ತಿಗಳು ಗುಲ್ಲೆಬ್ಬಿಸಿದವು. ಈ ಕರಡು ಮೂಲೆಗುಂಪಾಯಿತು.

ಇದಾದ ನಂತರವೂ ಹಲವು ಚಳವಳಿ, ಆಂದೋಲನಗಳ ಫಲವಾಗಿ ಮಸೂದೆಗೆ ಜೀವ ಮರಳಿತು. ಆದರೆ ಅಷ್ಟು ಹೊತ್ತಿಗೆ ಮಸೂದೆ ಆಗ ಇದ್ದ ರೂಪದಲ್ಲಿ ಜಾರಿಗೇನಾದರೂ ಬಂದರೆ ತಮ್ಮ ಕಪಟೋದ್ಯಮಕ್ಕೆ ಕಲ್ಲುಬೀಳುತ್ತದೆ ಎಂದು ದಿಗಿಲುಗೊಂಡ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದಾಗಿ ಮಸೂದೆ ಒಂದೊಂದೇ ಹಲ್ಲನ್ನು ಕಳೆದುಕೊಳ್ಳ ತೊಡಗಿತು. ಮುಖ್ಯಮಂತ್ರಿಗಳು ಮೊದಲ ಸಲ ಆಸಕ್ತಿ ತೋರಿಸಿದಂದಿನಿಂದ ನಾಲ್ಕು ವರ್ಷಗಳ ನಂತರ ಅಂತೂ ಇಂತೂ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಮಸೂದೆ ಖಂಡಿತವಾಗಿಯೂ ‘ಮೂಢನಂಬಿಕೆ’ ಅಥವಾ ‘ಮೂಢನಂಬಿಕೆ ಆಚರಣೆ (ಮೌಢ್ಯಾಚರಣೆ)’ ವಿರುದ್ಧ ಅಲ್ಲವೇ ಅಲ್ಲ. ತೀರಾ ಈಚಿನವರೆಗೆ ಇದ್ದ ‘ಮೂಢನಂಬಿಕೆ’ ಎಂಬ ಪದವನ್ನು ನಿವಾರಿಸಿ ಈಗ ಮಸೂದೆಯ ಹೆಸರು, ‘ಕರ್ನಾಟಕ ಅಮಾನವೀಯ, ದುಷ್ಟ ಪದ್ಧತಿ ಮತ್ತು ಬ್ಲ್ಯಾಕ್ ಮ್ಯಾಜಿಕ್ ಪ್ರತಿಬಂಧನೆ ಮತ್ತು ನಿವಾರಣೆ ವಿಧೇಯಕ– 2017’ ಆಗಿದೆ.

ಮೊದಲಿದ್ದ ಮಸೂದೆಯಿಂದ ಬಿಟ್ಟಿರುವ ಅಂಶಗಳಲ್ಲಿ ಪ್ರಮುಖವಾಗಿ ಎದ್ದು ಕಾಣುವುದು ಜ್ಯೋತಿಷ, ವಾಸ್ತು, ಸಂಖ್ಯಾಶಾಸ್ತ್ರ ಇತ್ಯಾದಿಗಳು. ಎರಡು ಕಾರಣಗಳನ್ನು ನೀಡಲಾಗಿದೆ. ಇಂಥ ಪದ್ಧತಿಗಳನ್ನು ಶಾಸನದ ಮೂಲಕ ‘ಅಪರಾಧೀಕರಿಸಲು’ ಸಾಧ್ಯವಾಗುವುದಿಲ್ಲ. ಎರಡನೆಯದಾಗಿ, ಒಬ್ಬ ವ್ಯಕ್ತಿ ಏನನ್ನಾದರೂ ನಂಬುತ್ತಾನೆ ಎಂದರೆ ಅದನ್ನು ಸರ್ಕಾರದವರು ಹೇಗೆ ತಡೆಯಲು ಸಾಧ್ಯ? ಕಾನೂನಿನಿಂದ ಮೂಢನಂಬಿಕೆಯನ್ನು ತೊಡೆದುಹಾಕಲು ಸಾಧ್ಯವಿಲ್ಲ. ಅದರಿಂದಾಗುವ ಶೋಷಣೆಯನ್ನು ಸ್ವಲ್ಪಮಟ್ಟಿಗೆ ತಡೆಗಟ್ಟಬಹುದು ಎಂಬುದು.

ನಂಬಿಕೆಗಳು ವೈಯಕ್ತಿಕವಾಗಿರುವವರೆಗೆ ಬಹುಶಃ ಅವುಗಳಿಂದ ಬೇರೆಯವರಿಗೆ ಅಪಾಯವಿಲ್ಲ. ಆದರೆ ನಂಬಿಕೆಗಳು ಮೂಢನಂಬಿಕೆಯಾದಾಗ, ಅವುಗಳನ್ನು ಬಳಸಿಕೊಂಡು ಅಂಥವರನ್ನು ಮೋಸಗೊಳಿಸುವ ದಂಧೆಗಳು ಆರಂಭವಾಗುತ್ತವೆ. ಮೂಢನಂಬಿಕೆ– ಆಚರಣೆಗಳು ಸಾರ್ವಜನಿಕ ವಲಯಕ್ಕೆ ಬಂದಾಗ ಅದರಿಂದ ಕೋಮು ಸೌಹಾರ್ದ, ಶಾಂತಿ ಸುವ್ಯವಸ್ಥೆ, ನಾಗರಿಕ ವ್ಯವಸ್ಥೆ ಹಾಳಾಗುತ್ತದೆ. ಅಲ್ಲದೆ ಮೂಢನಂಬಿಕೆಯನ್ನು ಇಟ್ಟುಕೊಂಡಿರುವ, ಯಾವುದೇ ರೀತಿಯಲ್ಲಿ ಆಚರಣೆ ಮಾಡುವ ಮನಸ್ಥಿತಿ ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ಹಾಗೆ ಇಡೀ ಜನತಂತ್ರ ವ್ಯವಸ್ಥೆ ಗೆದ್ದಲು ಹಿಡಿದುಹೋಗುತ್ತದೆ. ಏಕೆಂದರೆ ಸ್ವವಿವೇಚನೆ, ಪ್ರಶ್ನೆ ಕೇಳುವ ಸ್ವಭಾವ ನಿಜವಾದ ಜನಸತ್ತಾತ್ಮಕ ಜಾತ್ಯತೀತ ಸಮಾಜವಾದಿ ವ್ಯವಸ್ಥೆಯ ಮೂಲ ಬುನಾದಿ.

‘ಯಾವುದು ನಂಬಿಕೆ, ಯಾವುದು ಮೂಢನಂಬಿಕೆ’ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟು ಕೆಲವು ಶಾಸಕರು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಜಾರಿಕೊಳ್ಳುತ್ತಾರೆ. ಏಕೆಂದರೆ ಮಾತುಮಾತಿಗೆ ಹೋಮ, ಪೂಜೆ, ವ್ರತ, ವಾಸ್ತು ಇತ್ಯಾದಿ ಮೂಢಾಚರಣೆಗಳನ್ನು ಅಧಿಕೃತವಾಗಿ ಅನುಸರಿಸುವವರೇ ನೂರಕ್ಕೆ ತೊಂಬತ್ತರಷ್ಟು ಇರುವ ವ್ಯವಸ್ಥೆಯಲ್ಲಿ ಮೌಢ್ಯದ ಘೋರ ದುಷ್ಪರಿಣಾಮಗಳನ್ನು ಅರ್ಥ ಮಾಡಿಸುವುದು ಕಷ್ಟ. ಅರ್ಥ ಮಾಡಿಕೊಳ್ಳುವ ಮನಸ್ಸಿದ್ದರೆ, ವ್ಯಾಖ್ಯೆಯಲ್ಲಿ ಯಾವುದೇ ಗೊಂದಲವಿಲ್ಲ. ‘ಯಾವುದೇ ಪುರಾವೆ ಇಲ್ಲದೇ ಅಥವಾ ಪುರಾವೆಯ ನಿರೀಕ್ಷೆಯೂ ಇಲ್ಲದೇ ಒಂದು ವ್ಯಕ್ತಿ, ಶಕ್ತಿ, ಸಂಗತಿ ಇದೆ–ನಿಜ ಎಂದು ಭಾವಿಸುವ ಮನಸ್ಥಿತಿಯೇ ನಂಬಿಕೆ’. ಮುಂದೊಂದು ದಿನ ಒಂದು ನಂಬಿಕೆಗೆ ಯಾವುದೇ ಪುರಾವೆ ಇಲ್ಲ, ಅದು ಸುಳ್ಳು ಎಂದು ಸಾಬೀತಾಗುತ್ತದೆ. ಸ್ವತಃ ಅರಿವಿಗೂ ಬರುತ್ತದೆ. ಇದರ ಹೊರತಾಗಿಯೂ ಆ ನಂಬಿಕೆಯನ್ನು ಬಿಡದೇ ಮುಂದುವರಿಸಿದರೆ ಅದು ‘ಮೂಢನಂಬಿಕೆ’ ಆಗುತ್ತದೆ.

ಉದಾಹರಣೆಗೆ, ಒಂದು ಕಾಲದಲ್ಲಿ ರಾಹು ನವಗ್ರಹಗಳಲ್ಲಿ ಒಂದು ಎಂದು ನಂಬಲಾಗಿತ್ತು. ಗೋಚರ ವಿಶ್ವದ ಕೊನೆಯ ಅಂಚಿನವರೆಗಿನ ನಮಗೆ ದೊರಕಿರುವ ಗ್ರಹ, ನಕ್ಷತ್ರವ್ಯೂಹ, ಗ್ಯಾಲಕ್ಸಿ ಇತ್ಯಾದಿಗಳ ಸಾವಿರಾರು ಸಾವಿರಾರು ಚಿತ್ರಗಳಲ್ಲಿ ನಮಗೆ ರಾಹು ಎಲ್ಲಿಯೂ ಗೋಚರಿಸುವುದಿಲ್ಲ. ಇದು ಕೇವಲ ಕಲ್ಪನೆ. ಇದು ಹಗಲಿನ ಬೆಳಕಿನಷ್ಟು ಸ್ಪಷ್ಟವಾಗಿ ಗೊತ್ತಾದ ನಂತರವೂ ‘ರಾಹುಕಾಲ’ ಅಂತ ಇದೆ, ಅದು ಅಶುಭ ಎಂದು ನಂಬುವುದು ಮೂಢನಂಬಿಕೆ ಅಲ್ಲದಿದ್ದರೆ ಇನ್ನೇನು?

ಇಂಥ ನೂರಾರು, ಸಾವಿರಾರು ಆಧಾರರಹಿತ, ಅಲೌಕಿಕ, ದೈವಿಕ ಎನ್ನುವ ಮೌಢ್ಯಗಳು ಎಲ್ಲ ಮತಧರ್ಮಗಳ ಅನುಯಾಯಿಗಳಲ್ಲಿಯೂ ಬೇರೂರಿಬಿಟ್ಟಿವೆ. ಈ ಮನೋದಾಸ್ಯ ಸಾರ್ವತ್ರಿಕಗೊಂಡಾಗ ಅದು ಶೋಷಣೆಗೆ ಫಲವತ್ತಾದ ನೆಲೆಯನ್ನು ಒದಗಿಸುತ್ತದೆ. ಇದು ವ್ಯಕ್ತಿಗಳಿಗೆ, ಸಮಾಜಕ್ಕೆ ಅಪಾಯಕಾರಿ.

ಕೊನೆಯಪಕ್ಷ ಮಾಟ ಮಂತ್ರ, ಭೂತೋಚ್ಚಾಟನೆಗಳ ದುರಾಚರಣೆ, ನಂಬಿಕೆ–ಆಚರಣೆಯ ಹೆಸರಿನಲ್ಲಿ ಮಹಿಳೆಯರನ್ನು ಅವಮಾನಿಸುವಂಥ ಕೆಲವು ದುಷ್ಟ, ಅಮಾನವೀಯ ಪದ್ಧತಿಗಳನ್ನು ಶಿಕ್ಷಾರ್ಹ ಮಾಡಿರುವುದಕ್ಕಾಗಿ ನಾವು ಪ್ರಸ್ತುತ ಮಸೂದೆಯನ್ನು ಅಭಿನಂದಿಸಬೇಕು. ಆದರೂ ಕೆಲವು ಆಚರಣೆಗಳನ್ನು ‘ಇನ್ನೊಬ್ಬರ ಮೇಲೆ ಹೇರಿದರಷ್ಟೇ ಶಿಕ್ಷಾರ್ಹ’ ಎಂಬ ನಿಬಂಧನೆ ಮಸೂದೆಯಲ್ಲಿ ಇರುವುದರಿಂದ, ಅವುಗಳನ್ನು ಸ್ವ–ಇಚ್ಛೆಯಿಂದ ಮಾಡಿದರೆ ಅಡ್ಡಿಯಿಲ್ಲ ಎಂಬ ಅರ್ಥ ಬರುತ್ತದೆ. ಆಗ ಒತ್ತಾಯವನ್ನೂ ಸ್ವ–ಇಚ್ಛೆ ಎಂಬ ಅರ್ಥ ನೀಡಿ, ಸಾಬೀತುಪಡಿಸಿ ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಉದಾಹರಣೆಗೆ: ಗರ್ಭಿಣಿಯರು, ಮುಟ್ಟಾದ ಹೆಣ್ಣು ಮಕ್ಕಳನ್ನು ಪ್ರತ್ಯೇಕಪಡಿಸುವುದನ್ನು ಆಯಾ ವ್ಯಕ್ತಿಯೇ ಇಚ್ಛಿಸಿದರೆ ಕಾನೂನು ಅದನ್ನು ತಡೆಯಲು ಸಾಧ್ಯವಿಲ್ಲ. ಇತರರು ಹೇರಿದರಷ್ಟೆ ಅಪರಾಧ. ಇವುಗಳ ನಡುವೆ ವ್ಯತ್ಯಾಸ ತೀರಾ ಅಸ್ಪಷ್ಟ.

ಅದೇ ರೀತಿ ಜ್ಯೋತಿಷ, ವಾಸ್ತು, ಸಂಖ್ಯಾಶಾಸ್ತ್ರ ಇತ್ಯಾದಿಗಳನ್ನು ಜನರೇ ಸ್ವ–ಇಚ್ಛೆಯಿಂದ ನಂಬಿದರೆ ಸರ್ಕಾರ ಏನೂ ಮಾಡುವಂತಿಲ್ಲವೇ? ಮಾಡಬಹುದು. ಕೊನೆಗೂ ಅಮಾನವೀಯ, ದುಷ್ಟ ಮತ್ತು ಮಾಟಮಂತ್ರಗಳನ್ನು ಗುರುತಿಸಿ ಅವುಗಳನ್ನು ನಿಷೇಧಕ್ಕೆ ಕಾನೂನು ತರಲು ಹೊರಟಿರುವ ಸರ್ಕಾರ, ಜನರಲ್ಲಿ ಮೂಲಭೂತವಾಗಿ ಮೂಢನಂಬಿಕೆ, ಮೂಢ ಆಚರಣೆಗಳನ್ನೇ ತೊಡೆದುಹಾಕುವಲ್ಲಿ ಮಹತ್ವದ ಕೊಡುಗೆಯನ್ನು ನೀಡಬಹುದು. ಮೊದಲನೆಯದಾಗಿ, ಜ್ಯೋತಿಷ, ವಾಸ್ತು ಇತ್ಯಾದಿಗಳು ಈಗ ವಾಣಿಜ್ಯ ಸರಕುಗಳಾಗಿವೆ. ಅವರು ಸಮೂಹ ಮಾಧ್ಯಮಗಳಲ್ಲಿ ಸೇವೆಯ ಸೋಗಿನಲ್ಲಿ ಪ್ರಚಾರ ಮಾಡಿಕೊಳ್ಳುತ್ತಾರೆ. ಊರು ನಗರಗಳ ವಾಣಿಜ್ಯ ಪ್ರದೇಶಗಳಲ್ಲಿ ಉಳಿದೆಲ್ಲ ಅಂಗಡಿಗಳ ತರಹ ತಮ್ಮದೂ ಜ್ಯೋತಿಷ್ಯಾಲಯ, ವಾಸ್ತು ಸೇವಾ ಕೇಂದ್ರವನ್ನು ತೆರೆದಿರುತ್ತಾರೆ. ಇವರೆಲ್ಲರನ್ನೂ ಗ್ರಾಹಕ ಸೇವಾ ಕಾನೂನಿನ ಅಡಿಯಲ್ಲಿ ತರಬೇಕು. ಪೌರ ಸಂಸ್ಥೆಗಳು ಇವರಿಗೂ ನಿರ್ದಿಷ್ಟವಾದ ನಿಬಂಧನೆಗಳುಳ್ಳ ವ್ಯಾಪಾರ, ಸೇವೆ ಪರವಾನಗಿಯನ್ನು ನೀಡಬೇಕು. ಇವರು ನೀಡುವ ‘ಸೇವೆ’ಗಾಗಿ ಶುಲ್ಕ ವಸೂಲಿ ಮಾಡುವುದಿಲ್ಲವೇ, ಕೇವಲ ‘ಕಾಣಿಕೆ’ಯನ್ನು ಸ್ವೀಕರಿಸುತ್ತಾರೆಯೇ, ಆದಾಯ ತೆರಿಗೆಯನ್ನು ಕಟ್ಟುತ್ತಾರೆಯೇ, ಗಳಿಕೆಯ ಸಾಧನಗಳಿಗೆ ತಕ್ಕ ಹಾಗೆ ಮಾತ್ರ ಇವರ ಆಸ್ತಿ ಪಾಸ್ತಿ ಇದೆಯೇ ಇವುಗಳನ್ನು ನಿಬಂಧಿಸಬೇಕು.

ಅಲ್ಲದೇ ಟಿ.ವಿ. ವಾಹಿನಿಗಳ ಮೇಲೆ ನಿಬಂಧನೆಯನ್ನು ಹೇರುವ ‘ಕೇಬಲ್‌ ಟೆಲಿವಿಷನ್ ನೆಟ್‌ವರ್ಕ್ (ರೆಗ್ಯುಲೇಷನ್) ಆ್ಯಕ್ಟ್, 1995’ ಹಲವು ನಿಬಂಧನೆಗಳೊಂದಿಗೆ ‘ಅರೆಸತ್ಯವಾದ, ಅತೀಂದ್ರಿಯ ನಂಬಿಕೆ ಅಥವಾ ಕುರುಡು ನಂಬಿಕೆಗಳನ್ನು ಪ್ರೋತ್ಸಾಹಿಸುವಂಥ’ ಕಾರ್ಯಕ್ರಮಗಳನ್ನು ಬಿತ್ತರಿಸಲು ನಿಷೇಧವಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಇದಕ್ಕಿಂತ ಮಹತ್ವದ ಮತ್ತು ಬೃಹತ್ತಾದ ಇನ್ನೊಂದು ಕೆಲಸವಿದೆ. ಭಾರತ ಸಂವಿಧಾನದ ಅನುಚ್ಛೇದ 51 ಎ (ಎಚ್)ರಲ್ಲಿ ನಾಗರಿಕರ ಮೂಲಭೂತ ಕರ್ತವ್ಯವಾಗಿ ವಿಧಿಸಲಾಗಿರುವ ‘ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ ಮತ್ತು ಜಿಜ್ಞಾಸೆ, ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು’ ಎಂಬುದನ್ನು ಸಾಕಾರಗೊಳಿಸಲು ಸರ್ಕಾರ ಸಕ್ರಿಯವಾಗಬಹುದು. ವೈಜ್ಞಾನಿಕ ಮನೋವೃತ್ತಿಯ ಕುರಿತು ಜನರಲ್ಲಿ ಜಾಗೃತಿ, ಅರಿವು ಮೂಡಿಸುವುದು ಮತ್ತು ಬದುಕಿನಲ್ಲಿ ಅದನ್ನು ಅಳವಡಿಸಿಕೊಳ್ಳುವ ಕೌಶಲ ಇತ್ಯಾದಿಗಳನ್ನು ಕಲಿಸುವುದನ್ನು ಒಂದು ಬೃಹತ್ ಅಭಿಯಾನವನ್ನಾಗಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸರ್ಕಾರದಲ್ಲಿ ಒಂದು ಪ್ರತ್ಯೇಕ ಪ್ರಾಧಿಕಾರ–ವಿಭಾಗ ಸ್ಥಾಪಿಸಿ ‘ಒಂದಂಶ ಕಾರ್ಯಕ್ರಮ’ ಎನ್ನುವ ರೀತಿಯಲ್ಲಿ ಯಾವುದೇ ಸಂದಿಗ್ಧತೆ ಇಲ್ಲದೆ ಅನುಷ್ಠಾನಕ್ಕೆ ತರಬೇಕು. ಇದಕ್ಕೆ ಜೊತೆ ಕೊಡುವ ಸಾವಿರಾರು ಸಂಘ–ಸಂಸ್ಥೆಗಳು ರಾಜ್ಯದಲ್ಲಿವೆ, ಅವುಗಳನ್ನು ಗುರುತಿಸಿ ಸಹಯೋಗವನ್ನು ಪಡೆಯಬೇಕು.

ಮೂಢನಂಬಿಕೆ, ಅಂಧಶ್ರದ್ಧೆಯನ್ನೇ ಬಂಡವಾಳವಾಗಿಸಿಕೊಂಡು ದಂಧೆ ನಡೆಸುವವರು ಎಲ್ಲಾ ಮಾಧ್ಯಮಗಳನ್ನು ಬಳಸಿ ಪ್ರಚಾರ ಮಾಡಿಕೊಳ್ಳುತ್ತಾರೆ; ಅದಕ್ಕಿಂತಲೂ ಬೃಹತ್ತಾದ ಜನಾಂದೋಲನಕ್ಕೆ ಸರ್ಕಾರ ಪ್ರೇರಣೆ, ನೆರವು ನೀಡಬೇಕು. ಈ ಒಂದು ಜಾಗೃತಿಯ ಬೆಳಕಿನಲ್ಲಿ ಇವತ್ತು ಕಾನೂನಿನಿಂದ ತಪ್ಪಿಸಿಕೊಂಡಿರುವ ಅನೇಕ ಶಾಸ್ತ್ರ–ಸಂಪ್ರದಾಯಗಳ ಕಪಟ ನಾಟಕ ಬಯಲಾಗುತ್ತದೆ. ಜನರೇ ಸ್ವ–ಇಚ್ಛೆ, ಸ್ವವಿವೇಕದಿಂದ ಇಂಥ ಶೋಷಣೆಗಳಿಂದ ದೂರವಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT