ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಸಿಕ್‌ಗೆ ಪ್ರಯಾಸ; ಅಡ್ರಿಯಾನ್‌ಗೆ ನಿರಾಸೆ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಂತ್ರಕ್ಕೆ ಪ್ರತಿತಂತ್ರ, ಪಟ್ಟಿಗೆ ಬಿಗಿ ಪಟ್ಟು ಹಾಕಿ ಛಲ ಬಿಡದೆ ಹೋರಾಡಿದ ಬೋಸ್ನಿಯಾದ ತೊಮಿಸ್ಲೊವ್‌ ಬ್ರಿಕ್‌ ಅವರು ಟೆನಿಸ್ ಪ್ರಿಯರನ್ನು ರೋಮಾಂಚನಗೊಳಿಸಿದರು. ಒಂದನೇ ಶ್ರೇಯಾಂಕದ ಆಟಗಾರನ ಮುಂದೆ ದಿಟ್ಟ ಆಟವಾಡಿದ ತೊಮಿಸ್ಲೊವ್‌ ನಗರದ ಕೆಎಸ್ಎಲ್‌ಟಿಎ ಅಂಗಣದಲ್ಲಿ ಮಂಗಳವಾರ ಮಿಂಚು ಹರಿಸಿದರು. ಪಂದ್ಯದಲ್ಲಿ ಸ್ಲೊವಾಕಿಯಾದ ಬ್ಲಾಜ್ ಕಾವ್ಸಿಕ್‌ ಗೆದ್ದರೂ ತೊಮಿಸ್ಲೊವ್‌ ಪ್ರೇಕ್ಷಕರ ಮನಗೆದ್ದರು.

ಎಟಿಪಿ ಬೆಂಗಳೂರು ಓಪನ್‌ ಚಾಲೆಂಜ್‌ ಟೆನಿಸ್ ಟೂರ್ನಿಯ ಎರಡನೇ ದಿನದ ಪ್ರಮುಖ ಆಕರ್ಷಣೆಯಾಗಿದ್ದವರು ಕಾವ್ಸಿಕ್‌. ಎಟಿಪಿ ರ‍್ಯಾಂಕಿಂಗ್‌ನಲ್ಲಿ 102ನೇ ಸ್ಥಾನದಲ್ಲಿರುವ ಅವರಿಗೆ 247ನೇ ರ‍್ಯಾಂಕ್ ಹೊಂದಿರುವ ತೊಮಿಸ್ಲೊವ್‌ ಸುಲಭ ತುತ್ತಾಗುವರು ಎಂದುಕೊಂಡವರಿಗೆ ಪಂದ್ಯದಲ್ಲಿ ಅಚ್ಚರಿ ಕಾದಿತ್ತು.

ಮೂರು ಸೆಟ್‌ಗಳ ವರೆಗೆ ಮುಂದುವರಿದ ಪಂದ್ಯದ ಸವಿಯುಂಡ ಟೆನಿಸ್ ಪ್ರಿಯರ್ ಪ್ರತಿ ಕ್ಷಣವನ್ನೂ ಆನಂದಿಸಿದರು. ಮೊದಲ ಸೆಟ್‌ನಲ್ಲಿ 6–2ರ ಸುಲಭ ಜಯ ಸಾಧಿಸಿದ ಬ್ಲಾಜ್‌ಗೆ ಎರಡನೇ ಸೆಟ್‌ನಿಂದ ತೊಮಿಸ್ಲೊವ್‌ ದಿಟ್ಟ ಉತ್ತರ ನೀಡಿದರು. ಎರಡೂವರೆ ತಾಸು ನಡೆದ ಹಣಾಹಣಿಯಲ್ಲಿ ಒಟ್ಟು ಒಟ್ಟು 10 ಏಸ್‌ಗಳನ್ನು ಸಿಡಿಸಿದ ಅವರು ನಿರ್ಣಾಯಕ ಹಂತಗಳಲ್ಲಿ ಪಂದ್ಯವನ್ನು ರೋಚಕ ಟೈಬ್ರೇಕರ್‌ಗಳಿಗೆ ಕೊಂಡೊಯ್ದರು.

ಪಂದ್ಯದ ಆರಂಭದಲ್ಲೇ ತೊಮಿಸ್ಲೊವ್‌ ಎದುರಾಳಿಯಲ್ಲಿ ನಡುಕ ಹುಟ್ಟಿಸಿದ್ದರು. ಮೊದಲ ಗೇಮ್‌ನಲ್ಲಿ 1–1ರ ಸಮಬಲ ಸಾಧಿಸಿದ್ದಾಗ ಏಸ್ ಸಿಡಿಸಿದ ಅವರು 2–1ರಿಂದ ಮುನ್ನಡೆದರು. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಬ್ಲಾಜ್‌ ಪಾಯಿಂಟ್‌ಗಳನ್ನು ಹೆಕ್ಕಿದರು. ಬೇಸ್‌ಲೈನ್‌ನಿಂದ ಬಲಶಾಲಿ ಹೊಡೆತಗಳೊಂದಿಗೆ ಮುನ್ನುಗ್ಗಿ ಚೆಂಡನ್ನು ಸ್ಲೈಸ್ ಮಾಡಿಯೂ ಚಪ್ಪಾಳೆ ಗಿಟ್ಟಿಸಿಕೊಂಡ ಅವರು ಕೊನೆಗೆ ಸೆಟ್ ಗೆದ್ದುಕೊಂಡರು.

ಪ್ರಭಾವಿ ಆಟವಾಡಿದ ತೊಮಿಸ್ಲೊವ್‌
ಎರಡನೇ ಸೆಟ್‌ನಲ್ಲಿ ತೊಮಿಸ್ಲೊವ್‌ ಪ್ರಭಾವಿ ಆಟವಾಡಿದರು. ಬ್ಲಾಜ್ ಕೂಟ ಪಟ್ಟು ಬಿಡಲಿಲ್ಲ. ಹೀಗಾಗಿ ಅಂಗಣ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಫೋರ್‌ಹ್ಯಾಂಡ್ ಮತ್ತು ಬ್ಯಾಕ್‌ ಹ್ಯಾಂಡ್ ಹೊಡೆತಗಳನ್ನು ಒಳಗೊಂಡ ಮೋಹಕ ರ‍್ಯಾಲಿಗಳು ಮುದನೀಡಿದವು. ಈ ಸೆಟ್‌ನ ಆರಂಭದಲ್ಲಿ ಕಾವ್ಸಿಕ್ 2–0ಯಿಂದ ಮುಂದಿದ್ದರು. ನಂತರ ಸುಧಾರಿಸಿಕೊಂಡ ತೊಮಿಸ್ಲೊವ್‌ 4–3ರ ಮುನ್ನಡೆ ಸಾಧಿಸಿದರು.

ಸ್ಫೋಟಕ ಏಸ್ ಸಿಡಿಸಿ 4–4ರ ಸಮಬಲ ಸಾಧಿಸಿದರು. ನಂತರ ಅವರ ಮುನ್ನಡೆ 5–5ಕ್ಕೆ ಏರಿತು. ಪ್ರತ್ಯುತ್ತರ ನೀಡಿದ ಕಾವ್ಸಿಕ್‌ ಹತ್ತನೇ ಗೇಮ್‌ನಲ್ಲಿ ಎರಡು ಏಸ್ ಸಿಡಿಸಿ 5–5ರ ಸಮಬಲ ಸಾಧಿಸಿದರು. ನಂತರ ಸೆಟ್‌ 6–6ರಿಂದ ಸಮವಾಯಿತು. ಟೈ ಬ್ರೇಕರ್‌ನಲ್ಲೂ ರೋಮಾಂಚಕ ಆಟವಾಡಿದ ತೊಮಿಸ್ಲೊವ್‌ ಸೆಟ್ ಗೆದ್ದು ಬೀಗಿದರು.

ಮೂರನೇ ಸೆಟ್‌ ಇನ್ನಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಜಿದ್ದಾಜಿದ್ದಿಯ ಹಣಾಹಣಿ ಟೈ ಬ್ರೇಕರ್‌ಗೆ ತಲುಪಿತು. ಅಂತಿಮ ಕ್ಷಣದ ವರೆಗೂ ಭರವಸೆ ಕೈಚೆಲ್ಲದೆ ಆಡಿದ ಬ್ಲಾಜ್‌ ಗೆಲುವಿನ ನಗೆ ಸೂಸಿದರು.

ಬೋರ್ನಾಗೆ ಅಚ್ಚರಿಯ ಗೆಲುವು
ಅರ್ಹತಾ ಸುತ್ತಿನ ಮೂಲಕ ಮುಖ್ಯ ಸುತ್ತು ಪ್ರವೇಶಿಸಿದರ ಕ್ರೊವೇಷಿಯಾದ ಬೋರ್ನಾ ಗೋಜೊ ಮಂಗಳವಾರ ಅಚ್ಚರಿಯ ಗೆಲುವು ದಾಖಲಿಸಿದರು. ಎರಡನೇ ಶ್ರೇಯಾಂಕದ ಆಟಗಾರ ಸ್ಪೇನ್‌ನ ಅಡ್ರಿಯಾನ್ ಮೆನೆಂಡೆಜ್‌ ಎದುರು ಅವರು 6–3, 1–6, 7–5 ಅಂತರದಿಂದ ಗೆದ್ದರು. ಎರಡನೇ ಸೆಟ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿದರೂ ಸಿಡಿದೆದ್ದು ನಿರ್ಣಾಯಕ ಮೂರನೇ ಸೆಟ್‌ ತಮ್ಮದಾಗಿಸಿಕೊಂಡು ಎರಡನೇ ಸುತ್ತು ಪ್ರವೇಶಿಸಿದರು.

ಎರಡನೇ ದಿನದ ಫಲಿತಾಂಶಗಳು (ಮೊದಲ ಸುತ್ತು) ಸಿಂಗಲ್ಸ್‌: ಸ್ಲೊವಾಕಿಯಾದ ಬ್ಲಾಜ್ ಕಾವ್ಸಿಕ್‌ಗೆ ಬೋಸ್ನಿಯಾದ ತೊಮಿಸ್ಲೊವ್‌ ಬ್ರಿಕ್‌ ಎದುರು 6–2, 6–7 (0), 7–6 (6)ರಿಂದ ಸೋಲು; ಸ್ವೀಡನ್‌ನ ಎಲಿಯಾಸ್ ಎಮಿರ್‌ಗೆ ಭಾರತದ ಸೂರಜ್ ಪ್ರಬೋಧ್‌ ಎದುರು 6–4, 7–6(2)ರಿಂದ ಜಯ; ಕ್ರೊವೇಷಿಯಾದ ಬೋರ್ನಾ ಗೋಜೊಗೆ ಸ್ಪೇನ್‌ನ ಅಡ್ರಿಯಾನ್‌ ಮೆನೆಂಡೆಜ್‌ ಮಸೆರಾಸ್‌ ವಿರುದ್ಧ 6–3, 1–6, 7–5ರಿಂದ ಗೆಲುವು; ಕ್ರೊವೇಷಿಯಾದ ಆಂಟೆ ಪಾವ್ಸಿಕ್‌ಗೆ ಜಪಾನ್‌ನ ಕಾಯ್ಚಿ ಉಚಿಡಾ ಎದುರು 6–3, 6–4ರಿಂದ ಜಯ; ಕಜಕಸ್ತಾನದ ಅಲೆಕ್ಸಾಂಡ್ರ ನೆಡೊವ್ಯೆಸೊವ್‌ಗೆ ಕ್ರೊವೇಷಿಯಾದ ಮಟೆ ಸಬನೊವ್‌ ಎದುರು 6–4, 6–1ರಿಂದ ಗೆಲುವು; ಥೈಪೆಯ ತ್ಸಂಗ್ ಹುವಾಗೆ ಸ್ಪೇನ್‌ನ ಬೆರ್ನಾಬೆ ಜಪಾಟ ಮಿರಾಲೆಸ್‌ ವಿರುದ್ಧ 7–6 (1), 3–0 (ನಿವೃತ್ತಿ) ಗೆಲುವು; ಸ್ಪೇನ್‌ನ ಮಾರಿಯೊ ವಿಲ್ಲೇಲಗೆ ಭಾರತದ ವಿಷ್ಣುವರ್ಧನ್ ಎದುರು 6–3, 6–3ರಿಂದ ಗೆಲುವು;  ಜಪಾನ್‌ನ ನವೋಕಿ ನಗಕವಗೆ ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್‌ ಎದುರು 7–6(5), 6–3ರಿಂದ ಗೆಲುವು; ಭಾರತದ ಯೂಕಿ ಭಾಂಬ್ರಿಗೆ ಭಾರತದ ಶ್ರೀರಾಮ್ ಬಾಲಾಜಿ ಎದುರು 6–3, 6–3ರಿಂದ ಜಯ.

ಡಬಲ್ಸ್‌ (ಮೊದಲ ಸುತ್ತು)
ಕಜಕಸ್ತಾನದ ತಿಮುರ್‌ ಕಬಿಬುಲಿನ್‌–ಅಲೆಕ್ಸಾಂಡ್ರ ನೆಡೊವ್ಯೆಸೊವ್‌ ಜೋಡಿಗೆ ಬ್ರಿಟನ್‌ನ ಸ್ಕಾಟ್‌ ಕ್ಲೇಟನ್‌–ಜಾನಿ ಒಮಾರ ಜೋಡಿ ವಿರುದ್ಧ 6–4, 4–6, 10–7ರಿಂದ ಜಯ; ಭಾರತದ ದಿವಿಜ್ ಶರಣ್‌–ರಷ್ಯಾದ ಕಿಖಾಯಲ್‌ ಎಲ್ಜಿನ್ ಜೋಡಿಗೆ ಫ್ರಾನ್ಸ್‌ನ ಜೆಫ್ರಿ ಬ್ಲಾಂಕನೆಕ್ಸ್‌– ಬ್ರಿಟನ್‌ನ ಜೇ ಕ್ಲಾರ್ಕ್‌ ಜೋಡಿ ವಿರುದ್ಧ 5–7, 6–4, 10–5ರಿಂದ ಜಯ;

ಭಾರತದ ಸುಮಿತ್ ನಗಾಲ್‌–ಸ್ವೀಡನ್‌ನ ಎಲಿಯಾಸ್‌ ಯೆಮರ್‌ ಜೋಡಿಗೆ ಭಾರತದ ಜೀವನ್‌ ನೆಡುಂಚೆಳಿಯನ್‌–ಎನ್‌.ವಿಜಯಸುಂದರ್‌ ಪ್ರಶಾಂತ್ ಎದುರು 6–4, 1–6, 10–7ರಿಂದ ಗೆಲುವು.

ವಿಷ್ಣುವರ್ಧನ್‌, ಸೂರಜ್‌ಗೆ ಸೋಲು
ಭಾರತದ ಭರವಸೆಯ ಆಟಗಾರ, ಒಲಿಂಪಿಯನ್‌ ವಿಷ್ಣುವರ್ಧನ್‌ ಮತ್ತು ಮೈಸೂರಿನ ಸೂರಜ್‌ ಪ್ರಬೋಧ್‌ ಮಂಗಳವಾರ ಸೋಲುಂಡರು. ಸ್ಪೇನ್‌ನ ಆಟಗಾರ ಮಾರಿಯೊಗೆ ವಿಷ್ಣುವರ್ಧನ್‌ ನೇರ ಸೆಟ್‌ಗಳಿಂದ ಸುಲಭವಾಗಿ ಮಣಿದರೆ ಸೂರಜ್‌ ರೋಚಕ ಹೋರಾಟದ ಕೊನೆಯಲ್ಲಿ ನೇರ ಸೆಟ್‌ಗಳಿಂದ ಸೋತರು. ಕಳೆದ ವಾರ ನಡೆದ ಪುಣೆ ಓಪನ್‌ನಲ್ಲೂ ವಿಷ್ಣುವರ್ಧನ್‌ ಮೊದಲ ಸುತ್ತಿನಲ್ಲಿ ಹೊರಬಿದ್ದಿದ್ದರು.

ಕಳೆದ ಬಾರಿ ಆಸ್ಟ್ರೇಲಿಯಾ ಓಪನ್‌ನ ಜೂನಿಯರ್ ವಿಭಾಗದಲ್ಲಿ ಆಡಿದ್ದ ಸೂರಜ್‌ ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್‌ ಆಗಿದ್ದರು.

‘ಸೂರಜ್ ಅತ್ಯುತ್ತಮ ಆಟಗಾರ. ಚೆಂಡನ್ನು ಹಿಂದಿರುಗಿಸುವಲ್ಲಿ ಅವರು ತೋರುವ ಸಾಮರ್ಥ್ಯ ಅಸಾಮಾನ್ಯ. ಇಂಥ ಆಟಗಾರನನ್ನು ಮಣಿಸಿರುವುದು ಹೆಮ್ಮೆಯ ವಿಷಯ’ ಎಂದು ಸೂರಜ್ ಪ್ರಬೋಧ್ ಅವರ ಎದುರಾಳಿ ಎಲಿಯಾಸ್ ಯೆಮರ್‌ ಪಂದ್ಯದ ನಂತರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT