ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನ ಹೀಗೊಂದು ಅಂತಿಮ ಆಸೆ...

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ನಾಲ್ಕು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 9 ವರ್ಷದ ಈ ಪುಟಾಣಿ, ತನಗೇನಾಗಿದೆ ಎಂದು ತಿಳಿಯುವಷ್ಟರಲ್ಲಿಯೇ ತನ್ನ ಮುಂದಿರುವುದುಕೆಲವೇ ದಿನಗಳ ಬದುಕು ಎಂದು ಅರಿವಾಯಿತು. ಇಷ್ಟು ವರ್ಷ ತನ್ನ ಪೋಷಕರು ಕಂಬನಿ ಮಿಡಿಯುತ್ತಿ
ದ್ದುದು ಏಕೆ ಎಂಬ ಸತ್ಯದ ಅರಿವಾಗುವಷ್ಟರಲ್ಲಿಯೇ ಸಾವು ಅವನನ್ನು ಸಮೀಪಿಸಿತ್ತು.

ಜಾಕೋಬ್‌ಗೆ ಮಿದುಳು ಕ್ಯಾನ್ಸರ್‌ ಆಗಿತ್ತು. ಅದು ಕೊನೆಯ ಹಂತ ತಲುಪಿದಾಗ ವೈದ್ಯರೂ ಕೈಚೆಲ್ಲಿದರು. ಪೋಷಕರು ಕಂಗೆಟ್ಟರು. ಆದರೆ ಸಾವಿಗೆ ಹೆದರದ ಜಾಕೋಬ್ ಮಾತ್ರ ತನ್ನ ಅಂತಿಮ ದಿನಗಳನ್ನು ಸಂತೋಷದಿಂದ ಕಳೆಯಬಯಸಿದ. ಅದಕ್ಕಾಗಿ ಆತ ಈ ವರ್ಷದ ಕ್ರಿಸ್‌ಮಸ್‌ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಳ್ಳುವ ಬಯಕೆ ವ್ಯಕ್ತಪಡಿಸಿದ.

ತನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಜಾಕೋಬ್‌, ‘ಇದು ನನ್ನ ಕೊನೆಯ ಕ್ರಿಸ್‌ಮಸ್‌ ಆಗಲಿದೆ. ಈ ದಿನವನ್ನು ನಾನು ಅತ್ಯಂತ ಖುಷಿಯಿಂದ ಕಳೆಯಬಯಸುತ್ತೇನೆ. ಇದು ನನಗೆ ವಿಶೇಷ ದಿನವಾಗಬೇಕು. ಆದ್ದರಿಂದ ಹೆಚ್ಚು  ಮಂದಿ ಶುಭಾಶಯ ಪತ್ರ ಕಳುಹಿಸಿ’ ಎಂದು ಮನವಿ ಮಾಡಿದ.

ಮುದ್ದುಮೊಗದ ಈ ಬಾಲಕನ ಮನವಿಗೆ ಅದೆಷ್ಟೋ ಸಾವಿರ ಜನರು ಸ್ಪಂದಿಸಿದರು. ಗಣ್ಯರು ಸೇರಿದಂತೆ ದೇಶದ ಮೂಲೆಮೂಲೆಗಳಿಂದ ಅಸಂಖ್ಯ ಜನರು ವಿಧವಿಧ ರೀತಿಯ ಶುಭಾಶಯ ಪತ್ರ ಕಳುಹಿಸಿದರು. ವಾಟ್ಸ್‌ಆ್ಯಪ್‌, ಟ್ವಿಟರ್‌, ಫೇಸ್‌ಬುಕ್‌... ಹೀಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಅವನಿಗೆ ಶುಭಾಶಯ ಹರಿದುಬಂತು.

ಇವೆಲ್ಲವನ್ನೂ ನೋಡುತ್ತಿದ್ದ ಜಾಕೋಬ್‌ ಖುಷಿಯಿಂದ ಹಿಗ್ಗಿ ಹೋಗಿದ್ದ. ಕ್ರಿಸ್‌ಮಸ್‌ಗಾಗಿ ಕಾದು ಕುಳಿತ. ಇವೆಲ್ಲ ಶುಭಾಶಯ ಪತ್ರಗಳನ್ನು ಹಿಡಿದುಕೊಂಡು ಕ್ರಿಸ್‌ಮಸ್‌ ಆಚರಿಸಬೇಕು ಎಂದು ಪೋಷಕರಲ್ಲಿ ಹೇಳತೊಡಗಿದ. ಆದರೆ ವಿಧಿಲೀಲೆಯೇ ಬೇರೆಯಾಗಿತ್ತು. ಭಾನುವಾರ, ಜಾಕೋಬ್‌ ಈ ಶುಭಾಶಯ ಪತ್ರಗಳ ನಡುವೆಯೇ ಕೊನೆಯುಸಿರೆಳೆದ.

‘ನಮ್ಮ ಮಗ ತಾನಂದುಕೊಂಡಂತೆ ಕ್ರಿಸ್‌ಮಸ್‌ ಆಚರಿಸಲು ಸಾಧ್ಯವಾಗದಿದ್ದರೂ ಕೊನೆಯ ದಿನಗಳಲ್ಲಿ ಆತನ ಆಸೆಯನ್ನು ನೀವೆಲ್ಲಾ ಪೂರೈಸಿದ್ದೀರಿ. ನಿಮಗೆ ಹೇಗೆ ಧನ್ಯವಾದ ಸಲ್ಲಿಸಬೇಕೋ ತಿಳಿಯುತ್ತಿಲ್ಲ’ ಎಂದು ಆತನ ಪೋಷಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT