ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಸುತ್ತಿಗೆ ಕಶ್ಯಪ್‌

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕೌಲೂನ್‌: ಭಾರತದ ಪರುಪಳ್ಳಿ ಕಶ್ಯಪ್‌, ಹಾಂಕಾಂಗ್‌ ಓಪನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಕಶ್ಯಪ್‌ ಪುರುಷರ ಸಿಂಗಲ್ಸ್‌ ವಿಭಾಗದ ಅರ್ಹತಾ ಹಂತದಲ್ಲಿ ಮಂಗಳವಾರ ಎರಡು ಪಂದ್ಯಗಳನ್ನು ಗೆದ್ದಿದ್ದಾರೆ.

ಆರಂಭಿಕ ಹೋರಾಟದಲ್ಲಿ ಕಶ್ಯಪ್‌ 21–12, 21–10ರ ನೇರ ಗೇಮ್‌ಗಳಿಂದ ಚೀನಾ ತೈಪೆಯ ಕಾನ್‌ ಚಾವೊ ಯು ಅವರನ್ನು ಮಣಿಸಿದರು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತದ ಆಟಗಾರ ಮೊದಲ ಗೇಮ್‌ನಲ್ಲಿ ಅಬ್ಬರಿಸಿದರು. ಚುರುಕಿನ ಸರ್ವ್‌ ಮತ್ತು ಮನಮೋಹಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಹೆಕ್ಕಿದ ಅವರು ಸುಲಭವಾಗಿ ಎದುರಾಳಿಯ ಸವಾಲು ಮೀರಿದರು.

ಎರಡನೇ ಗೇಮ್‌ನಲ್ಲೂ ಕಶ್ಯಪ್‌ ಆಟ ರಂಗೇರಿತು. ಮಿಂಚಿನ ಡ್ರಾಪ್ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಅವರು ಎದುರಾಳಿಗೆ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.

ದಿನದ ಎರಡನೇ ಪಂದ್ಯದಲ್ಲಿ ಕಶ್ಯಪ್‌ 21–13, 21–19ರಲ್ಲಿ ಹಾಂಕಾಂಗ್‌ನ ಲೀ ಚೆವುಕ್‌ ಯಿಯು ಅವರನ್ನು ಸೋಲಿಸಿದರು. ಆರಂಭಿಕ ಪಂದ್ಯದಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿದ್ದ ಭಾರತದ ಆಟಗಾರ, ಎರಡೂ ಗೇಮ್‌ಗಳಲ್ಲೂ ಮೋಡಿ ಮಾಡಿದರು. ಮುಂದಿನ ಪಂದ್ಯದಲ್ಲಿ ಕಶ್ಯಪ್‌, ಕೊರಿಯಾದ ಲೀ ಡಾಂಗ್‌ ಕೆವುನ್‌ ವಿರುದ್ಧ ಆಡಲಿದ್ದಾರೆ.

ಅರ್ಜುನ್‌ ಜೋಡಿಗೆ ಮಿಶ್ರಫಲ: ‍ಪುರುಷರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಎಂ.ಆರ್‌.ಅರ್ಜುನ್‌ ಮತ್ತು ರಾಮಚಂದ್ರನ್‌ ಸ್ಲೋಕ್‌ ಅವರು ಮೊದಲ ದಿನ ಮಿಶ್ರಫಲ ಅನುಭವಿಸಿದರು.

ಅರ್ಹತಾ ಸುತ್ತಿನ ಆರಂಭಿಕ ಪಂದ್ಯದಲ್ಲಿ ಭಾರತದ ಜೋಡಿ 21–14, 21–18ರಿಂದ ಹಾಂಕಾಂಗ್‌ನ ಲಿ ಕುಯೆನ್‌ ಹಾನ್‌ ಮತ್ತು ಯೆವುಂಗ್‌ ಶಿಂಗ್‌ ಚೊಯ್‌ ಅವರನ್ನು ಮಣಿಸಿತು.

ಆದರೆ ನಂತರದ ಹಣಾಹಣಿಯಲ್ಲಿ 19–21, 17–21ರಿಂದ ಕೊರಿಯಾದ ಕಿಮ್‌ ವೊನ್‌ ಹೊ ಮತ್ತು ಸೆವುಂಗ್‌ ಜಾಯೆ ಸಿಯೊ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ 18–21, 11–21ರಲ್ಲಿ ಇಂಡೊನೇಷ್ಯಾದ ಹಫೀಜ್‌ ಫೈಜಲ್‌ ಮತ್ತು ಗ್ಲೋರಿಯಾ ಎಮಾನುಯೆಲೆ ವಿರುದ್ಧ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT