ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯ: ವಿಜಯ್‌ ಶಂಕರ್‌ಗೆ ಸ್ಥಾನ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ತಮಿಳುನಾಡಿನ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಭುವನೇಶ್ವರ್‌ ಕುಮಾರ್‌ ಮತ್ತು ಶಿಖರ್‌ ಧವನ್‌ ಅವರು ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ವಿಜಯ್‌ಗೆ 14 ಸದಸ್ಯರ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿಜಯ್‌ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ಇದೇ ಮೊದಲು.

ವೇಗದ ಬೌಲರ್‌ ಭುವನೇಶ್ವರ್‌ ಸದ್ಯದಲ್ಲೇ ತಮ್ಮ ಗೆಳತಿ ನೂಪುರ್‌ ನಗರ್‌ ಅವರನ್ನು ವಿವಾಹವಾಗಲಿದ್ದಾರೆ. ಹೀಗಾಗಿ ಎರಡು ಮತ್ತು ಮೂರನೇ ಟೆಸ್ಟ್‌ ಪಂದ್ಯಗಳಲ್ಲಿ ಕಣಕ್ಕಿಳಿಯದಿರಲು ತೀರ್ಮಾನಿಸಿದ್ದಾರೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ‘ಭುವಿ’ ಎಂಟು ವಿಕೆಟ್‌ ಉರುಳಿಸಿ, ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ ಧವನ್‌ ದೆಹಲಿಯಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಆಡಲಿದ್ದಾರೆ. ಲಂಕಾ ವಿರುದ್ಧದ ಎರಡನೇ ಪಂದ್ಯ ನವೆಂಬರ್ 24ರಿಂದ ನಾಗಪುರದಲ್ಲಿ ಜರುಗಲಿದೆ.

ತಂಡ ಇಂತಿದೆ: ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌.ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ರೋಹಿತ್‌ ಶರ್ಮಾ, ವೃದ್ಧಿಮಾನ್‌ ಸಹಾ (ವಿಕೆಟ್‌ ಕೀಪರ್‌), ಆರ್‌.ಅಶ್ವಿನ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಮಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಇಶಾಂತ್‌ ಶರ್ಮಾ ಮತ್ತು ವಿಜಯ್‌ ಶಂಕರ್‌.

‘ಕನಸು ನನಸಾದ ಕ್ಷಣ’
ಚೆನ್ನೈ:
‘ಎಳವೆಯಲ್ಲೇ ಭಾರತ ತಂಡದಲ್ಲಿ ಆಡುವ ಕನಸು ಕಂಡಿದ್ದೆ. ಅದು ಈಗ ನನಸಾಗಿದೆ. ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ ಇದು. ಈ ಕ್ಷಣ ನನ್ನ ಪಾಲಿಗೆ ಅವಿಸ್ಮರಣೀಯ’ ಎಂದು ವಿಜಯ್‌ ಶಂಕರ್‌ ಖುಷಿ ವ್ಯಕ್ತಪಡಿಸಿದ್ದಾರೆ.

‘ಭಾರತ ‘ಎ’ ತಂಡದ ಪರ ಹಲವು ಪಂದ್ಯಗಳನ್ನು ಆಡಿದ್ದೇನೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕು ಎಂಬುದನ್ನು ಅರಿತುಕೊಂಡಿದ್ದೇನೆ’ ಎಂದಿದ್ದಾರೆ.

‘ಬೌಲಿಂಗ್‌ನಲ್ಲೂ ನೈಪುಣ್ಯ ಸಾಧಿಸಿದ್ದೇನೆ. ಮುಂಬೈ ಎದುರಿನ ರಣಜಿ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಉರುಳಿಸಿದ್ದರಿಂದ ಮನೋಬಲ ಹೆಚ್ಚಿದೆ’ ಎಂದು ವಿಜಯ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT