ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಟರ್ನ್‌ ಸರಳಗೊಳಿಸಲು ಸಮಿತಿ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿಯಲ್ಲಿ ರಿಟರ್ನ್‌ ಸಲ್ಲಿಕೆ ಸರಳಗೊಳಿಸುವ ಸಲುವಾಗಿ ಜಿಎಸ್‌ಟಿಎನ್‌ ಅಧ್ಯಕ್ಷ ಅಜಯ್‌ ಭೂಷಣ್‌ ಪಾಂಡೆ ನೇತೃತ್ವದಲ್ಲಿ 10 ಸದಸ್ಯರ ಸಮಿತಿ ರಚನೆ ಮಾಡಲಾಗಿದೆ.

ಕೇಂದ್ರ ಅಬಕಾರಿ ಆಯುಕ್ತ ಮನಿಶ್‌ ಕುಮಾರ್‌ ಸಿನ್ಹಾ ಅವರು ಸಮಿತಿಯ ಕಾರ್ಯದರ್ಶಿಯಾಗಿರಲಿದ್ದಾರೆ. ಕರ್ನಾಟಕ, ಗುಜರಾತ್‌, ಪಂಜಾಬ್‌ ಮತ್ತು ಆಂಧ್ರಪ್ರದೇಶ ರಾಜ್ಯಗಳ ತೆರಿಗೆ ಆಯುಕ್ತರೂ ಸಮಿತಿಯಲ್ಲಿ ಇರಲಿದ್ದಾರೆ.

ರೆವೆನ್ಯೂ ಇಲಾಖೆಯ ಜಂಟಿ ಕಾರ್ಯದರ್ಶಿ ಉದಯ್‌ ಕುಮಾರ್ ಕುಮಾವತ್‌, ಜಿಎಸ್‌ಟಿ ಆಯುಕ್ತ ಉಪೇಂದ್ರ ಗುಪ್ತಾ, ಜಿಎಸ್‌ಟಿಎನ್‌ ಸಿಇಒ ಪ್ರಕಾಶ್‌ ಕುಮಾರ್ ಮತ್ತು ಗುಜರಾತ್‌ನ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಪಿ.ಡಿ. ವಘೇಲಾ ಸಮಿತಿಯಲ್ಲಿ ಇರುವ ಸದಸ್ಯರಾಗಿದ್ದಾರೆ.

ರಿಟರ್ನ್‌ ಸಲ್ಲಿಕೆಗೆ ಸಂಬಂಧಿಸಿದಂತೆ ಇರುವ ನಿಯಮ, ವಿಧಾನಗಳಲ್ಲಿ ಬದಲಾವಣೆ, ತಿದ್ದುಪಡಿಗಳಿದ್ದರೆ ಆ ಬಗ್ಗೆ ಸಲಹೆ ನೀಡಿ ಡಿಸೆಂಬರ್ 15ರ ಒಳಗೆ ಸಮಿತಿಯು ವರದಿ ಸಲ್ಲಿಸಲಿದೆ.

ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸುವ ಬಗ್ಗೆ ಸಲಹೆ ನೀಡಲು ಸಮಿತಿಯೊಂದನ್ನು ರಚನೆ ಮಾಡುವುದಾಗಿ ಜಿಎಸ್‌ಟಿ ಮಂಡಳಿ ನವೆಂಬರ್‌ 10ರಂದು ಘೋಷಣೆ ಮಾಡಿತ್ತು. ಅದರಂತೆ ಈ ಸಮಿತಿ ರಚನೆ ಮಾಡಲಾಗಿದೆ.

ಸಲಹೆ, ಅಭಿಪ್ರಾಯ ಸಂಗ್ರಹ:  ‘ಜಿಎಸ್‌ಟಿಯಲ್ಲಿ ರಿಟರ್ನ್‌ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲು ತಜ್ಞರು ಮತ್ತು ವರ್ತಕರಿಂದ ಸಲಹೆ ಪಡೆಯುವಂತೆ ಜಿಎಸ್‌ಟಿಎನ್‌ ಸಮಿತಿಗೆ ಸೂಚನೆ ನೀಡಲಾಗಿದೆ’ ಎಂದು ಜಿಎಸ್‌ಟಿಎನ್‌ ಅಧ್ಯಕ್ಷ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

‘ಮುಖ್ಯವಾಗಿ ಕನಿಷ್ಠ ವಹಿವಾಟು ನಡೆಸುವವರನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ. ರಿಟರ್ನ್‌ ಸಲ್ಲಿಕೆಯನ್ನು ಸರಳವಾಗಿಸುವುದು ಹೇಗೆ ಎಂದು ಪರಿಣತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಭಾಗಿದಾರರಿಂದ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗುತ್ತಿದೆ.

‘ಕೆಲವು ವರ್ತಕರು ಭವಿಷ್ಯದಲ್ಲಿ ಅಗತ್ಯ ಬೀಳಬಹುದು ಎನ್ನುವ ಕಾರಣಕ್ಕೆ ಜಿಎಸ್‌ಟಿಗೆ ನೋಂದಣಿ ಮಾಡಿಸಿದ್ದಾರೆ. ಸದ್ಯ ಅವರು ರಿಟರ್ನ್ ಸಲ್ಲಿಸುತ್ತಿಲ್ಲ. ಮಾರಾಟ ಅಥವಾ ಖರೀದಿ ವಹಿವಾಟನ್ನೂ ನಡೆಸುತ್ತಿಲ್ಲ. ಇಂತಹ ವರ್ತಕರು ಸರಳವಾಗಿ ಜಿಎಸ್‌ಟಿಆರ್‌–1 ಮತ್ತು ಜಿಎಸ್‌ಟಿಆರ್‌–3ಬಿ ಸಲ್ಲಿಸಲು ಅನುಕೂಲ ಆಗಿರುವಂತೆ ಇರಬೇಕೆಂದು ಹೇಳಿದ್ದಾರೆ.

‘ಜಿಎಸ್‌ಟಿಎನ್‌ ಸಮಿತಿಯು ಜಿಎಸ್‌ಟಿ ರಿಟರ್ನ್ ಸಲ್ಲಿಕೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸರಳಗೊಳಿಸುವ ಬಗ್ಗೆ ಗಮನ ನೀಡಲಿದೆ. ಗ್ರಾಹಕರು, ವರ್ತಕರು ಮತ್ತು ಉದ್ಯಮಗಳಿಂದ ಪ್ರತಿಕ್ರಿಯೆ ಪಡೆದು ಸೂಕ್ತ ಯೋಜನೆ ರೂಪಿಸಲಿದೆ’ ಎಂದು ತಿಳಿಸಿದ್ದಾರೆ.

ಜಿಎಸ್‌ಟಿಎನ್‌ನಲ್ಲಿ ರಿಟರ್ನ್ ಸಲ್ಲಿಸುವವರಲ್ಲಿ ಶೇ 40ರಷ್ಟು ಮಂದಿಗೆ ತೆರಿಗೆ ಇಲ್ಲ. ಕನಿಷ್ಠ ಮೊತ್ತದ ವಹಿವಾಟು ನಡೆಸುತ್ತಿರುವವರು ಎಲ್ಲರೂ ಸಲ್ಲಿಸಲು ಇರುವ ಪೂರ್ತಿ ಅರ್ಜಿಯನ್ನು ಭರ್ತಿ ಮಾಡಬೇಕಿಲ್ಲ. ಅವರಿಗಾಗಿ ಸರಳ ಆಯ್ಕೆಗಳಿರುವ ಜಿಎಸ್‌ಟಿಆರ್‌–3ಬಿ ಅರ್ಜಿ ನೀಡಲಾಗಿದೆ. ಮಾರ್ಚ್ 31ರವರೆಗೆ ಅದನ್ನೇ ಭರ್ತಿ ಮಾಡಬೇಕು ಎಂದು ಅವರು ಹೇಳಿದ್ದಾರೆ.

43.67 ಲಕ್ಷ ರಿಟರ್ನ್ ಸಲ್ಲಿಕೆ
ಅಕ್ಟೋಬರ್‌ನಲ್ಲಿ 43.67 ಲಕ್ಷ ಜಿಎಸ್‌ಟಿಆರ್‌–3ಬಿ ಸಲ್ಲಿಕೆಯಾಗಿದೆ. ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ರಿಟರ್ನ್‌ ಸಲ್ಲಿಕೆ ಅವಧಿ ಮುಗಿಯುವುದಕ್ಕೂ ಮೊದಲು ಅತೀ ಹೆಚ್ಚಿನ ರಿಟರ್ನ್‌ ಸಲ್ಲಿಕೆ ಇದಾಗಿದೆ ಎಂದು ಜಿಎಸ್‌ಟಿಎನ್‌ ತಿಳಿಸಿದೆ.

ಜಿಎಸ್‌ಟಿಆರ್‌–3ಬಿ ಸಲ್ಲಿಕೆಗೆ ಸೋಮವಾರ ಅಂತಿಮ ದಿನವಾಗಿತ್ತು. ಅದೇ ದಿನ 14.76 ಲಕ್ಷ ತೆರಿಗೆದಾರರು ರಿಟರ್ನ್‌ ಸಲ್ಲಿಸಿದ್ದಾರೆ.

ನೋಂದಾಯಿತ ತೆರಿಗೆದಾರರಲ್ಲಿ ಶೇ 56 ರಷ್ಟು ಮಂದಿ ಅಕ್ಟೋಬರ್‌ ತಿಂಗಳ ರಿಟರ್ನ್‌ ಸಲ್ಲಿಸಿದ್ದಾರೆ. ರಿಟರ್ನ್‌ ಸಲ್ಲಿಕೆಯಲ್ಲಿ ಪಂಜಾಬ್ ಮೊದಲ ಸ್ಥಾನದಲ್ಲಿದೆ. ಶೇ 73.09 ರಷ್ಟು ಗರಿಷ್ಠ ಪ್ರಮಾಣದಲ್ಲಿ ರಿಟರ್ನ್‌ ಸಲ್ಲಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT