ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಸೋರಿಕೆ: ತನಿಖೆಗೆ ಚಾಲನೆ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಷೇರುಪೇಟೆಯಲ್ಲಿ ನೋಂದಾಯಿತ ಪ್ರಮುಖ 24 ಕಂಪನಿಗಳ ಹಣಕಾಸು ಮಾಹಿತಿ ವಾಟ್ಸ್ಆ್ಯಪ್‌ ಮೂಲಕ ಅಕ್ರಮವಾಗಿ ಸೋರಿಕೆ ಆಗಿದೆ ಎಂಬ ದೂರುಗಳ ಬಗ್ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಷೇರು ವಿನಿಮಯ ಕೇಂದ್ರಗಳು ತನಿಖೆ ಆರಂಭಿಸಿವೆ.

ನಿಯಮ ಉಲ್ಲಂಘನೆ ಆಗಿರುವುದನ್ನು ಖಾತರಿಪಡಿಸಿಕೊಳ್ಳಲು, ಷೇರು ವಿನಿಮಯ ಕೇಂದ್ರಗಳು ಕಂಪನಿಗಳ 12 ತಿಂಗಳ ವಹಿವಾಟಿನ ಮಾಹಿತಿ ಪರಿಶೀಲನೆ ನಡೆಸುತ್ತಿವೆ. ಇನ್ನೊಂದೆಡೆ ‘ಸೆಬಿ’, ದತ್ತಾಂಶ ದಾಸ್ತಾನು ಮತ್ತು ಬೇಹುಗಾರಿಕಾ ವ್ಯವಸ್ಥೆಗಳಿಂದಲೂ ಮಾಹಿತಿ ಕಲೆಹಾಕುತ್ತಿದೆ.

‘ಸೆಬಿ’ ನಿಯಮಗಳ ಪ್ರಕಾರ. ಷೇರುಪೇಟೆಯಲ್ಲಿ ನೋಂದಾಯಿತ ಎಲ್ಲಾ ಕಂಪನಿಗಳ ಹಣಕಾಸು ಮಾಹಿತಿಯನ್ನು ಷೇರು ವಿನಿಮಯ ಕೇಂದ್ರದ ಮೂಲಕವೇ ಪ್ರಕಟಿಸಬೇಕು.

ಕಂಪನಿಗಳ ಹಣಕಾಸು ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಕ್ಕೂ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ
ಹರಿಬಿಟ್ಟಿರುವವರ ದೂರವಾಣಿ ಕರೆ ಮಾಹಿತಿ ಕಲೆಹಾಕಲೂ ‘ಸೆಬಿ’ ಮುಂದಾಗಿದೆ.

ಎಸ್‌ಎಂಎಸ್‌, ವಾಟ್ಸ್‌ಆ್ಯಪ್‌ ಒಳಗೊಂಡು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಸೋರಿಕೆ ಮಾಡಲಾಗಿದೆ. ಕೆಲವು ಪ್ರತಿಷ್ಠಿತ ದಲ್ಲಾಳಿ ಸಂಸ್ಥೆಗಳು ಮತ್ತು  ವಿನಿಮಯ ಕೇಂದ್ರಗಳ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಈ ಹಿಂದೆಯೂ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ‘ಸೆಬಿ’ ಕ್ರಮ ಕೈಗೊಂಡಿದೆ.

ನೋಂದಣಿ ಮಾಡಿಕೊಳ್ಳದೇ ಹೂಡಿಕೆ ಸಲಹೆ ನೀಡುತ್ತಿದ್ದ ಎಂಸಿಎಕ್ಸ್‌ ಬಿಜ್‌ ಸಲ್ಯೂಷನ್ಸ್‌, ಮನಿವರ್ಲ್ಡ್‌ ರಿಸರ್ಚ್ ಆ್ಯಂಡ್ ಅಡ್ವೈಸರಿ, ಗ್ಲೋಬಲ್‌ ಮೌಂಟ್‌ ಮನಿ ರಿಸರ್ಚ್‌ ಆ್ಯಂಡ್‌ ಅಡ್ವೈಸರಿ, ಗೋ ಕ್ಯಾಪಿಟಲ್‌, ಕ್ಯಾಪಿಟಲ್‌ ವಯಾ ಗ್ಲೋಬಲ್ ರಿಸರ್ಚ್‌ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡಿದೆ.

ಜಾಗೃತಿ ಕಾರ್ಯಕ್ರಮ: ಅಕ್ರಮ ಅಥವಾ ವಂಚನೆ ವಹಿವಾಟು ತಡೆಯುವ ಉದ್ದೇಶದಿಂದ ‘ಸೆಬಿ’ ಕಾಲಕಾಲಕ್ಕೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಎಸ್‌ಎಂಎಸ್‌, ಸಾಮಾಜಿಕ ಮಾಧ್ಯಮ, ಜಾಲತಾಣ ಮತ್ತು ಇತರೆ ಸಾರ್ವಜನಿಕ ಮಾಧ್ಯಮಗಳಲ್ಲಿ ಬರುವ ಸಲಹೆ, ಸೂಚನೆಗಳನ್ನು ಅನುಸರಿಸಿ ವಹಿವಾಟು ನಡೆಸದಂತೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡುತ್ತಿದೆ.

‘ಸೆಬಿ’ಯಲ್ಲಿ ನೋಂದಾಯಿಸಿಕೊಂಡಿರುವ ಹೂಡಿಕೆ ಸಲಹೆಗಾರ ಮತ್ತು ಸಂಶೋಧನಾ ವಿಶ್ಲೇಷಕರ ಜತೆಗೆ ಮಾತ್ರ ವ್ಯವಹಾರ ನಡೆಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಭಾರಿ ಲಾಭ ಮಾಡಿಕೊಡುವುದಾಗಿ ಎಸ್‌ಎಂಎಸ್‌ ಸಂದೇಶದ ಮೂಲಕ ಹೂಡಿಕೆದಾರರಿಗೆ ವಂಚಿಸುತ್ತಿದ್ದ ಜಾಲವನ್ನು ಪತ್ತೆ ಮಾಡಲು ಕಳೆದ ಆಗಸ್ಟ್‌ನಲ್ಲಿಸೆಬಿ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನೆರವು ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT