ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಮಳಿಗೆಗಳಿಗೆ ಭರಪೂರ ಸ್ಪಂದನೆ

Last Updated 22 ನವೆಂಬರ್ 2017, 5:48 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ನ. 24ರಿಂದ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಳಿಗೆಗಳಿಗೆ ಭರಪೂರ ಸ್ಪಂದನೆ ವ್ಯಕ್ತವಾಗಿದೆ. ಎಲ್ಲ 729 ಮಳಿಗೆಗಳೂ ಭರ್ತಿಯಾಗಿವೆ. ಮಳಿಗೆಗಳ ನೋಂದಣಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಗಿದ ಬಳಿಕವೂ ವ್ಯಾಪಾರಿಗಳಿಂದ ಅರ್ಜಿಗಳು ಬರುತ್ತಲೇ ಇವೆ.

ಪುಸ್ತಕ ಮಾರಾಟಕ್ಕೆ 449 ಮಳಿಗೆಗಳು ಮೀಸಲಾಗಿವೆ. 260 ವಾಣಿಜ್ಯ ಮಳಿಗೆಗಳು ಇವೆ. ಇದಲ್ಲದೇ 20 ಉಚಿತ ಪ್ರದರ್ಶನ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನೂ ನೂರಕ್ಕೂ ಅಧಿಕ ಮಂದಿ ವಾಣಿಜ್ಯ ಹಾಗೂ ಪುಸ್ತಕ ಮಳಿಗೆಗಳು ಬೇಕು ಎಂದು ಮನವಿ ಮಾಡಿದ್ದಾರೆ ಎಂದು ಸಮ್ಮೇಳನದ ಪುಸ್ತಕ ಮಳಿಗೆಯ ಸಂಚಾಲಕ ಎ.ಜಿ.ದೇವರಾಜು ತಿಳಿಸಿದರು.

ಬಾಡಿಗೆ ಮೊತ್ತ: ಮೂರು ದಿನಗಳಿಗೆ ಪುಸ್ತಕ ಮಳಿಗೆಗೆ ₹ 2,500, ವಾಣಿಜ್ಯ ಮಳಿಗೆಗಳಿಗೆ ₹ 3,000 ಬಾಡಿಗೆಯನ್ನು ನಿಗದಿಪಡಿಸಲಾಗಿದೆ. ಒಂದು ಮಳಿಗೆ 10X10 ಅಡಿ ಅಳತೆ ಹೊಂದಿದೆ. ಇದರಲ್ಲಿ ವಿದ್ಯುತ್ ಹಾಗೂ ಊಟದ ವೆಚ್ಚ ಸೇರಿದೆ. ಮಳಿಗೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದರೆ, ಶೌಚಾಲಯ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ.

ಅಂತಿಮಗೊಳ್ಳದ ಊಟದ ಕೇಂದ್ರ:ಸಾರ್ವಜನಿಕರಿಗೆ ಸ್ಕೌಟ್‌ ಮತ್ತು ಗೈಡ್ಸ್‌ ಮೈದಾ ನದಲ್ಲಿ ಹಾಗೂ ವಿಶೇಷ ಆಹ್ವಾನಿತರಿಗೆ ಮುಖ್ಯ ವೇದಿಕೆಯ ಸಮೀಪದಲ್ಲೇ ಇರುವ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲು ಸಿದ್ಧತೆಗಳು ನಡೆದಿವೆ. ಸಾಹಿತ್ಯ ಪರಿಷತ್ತಿನ 8 ಸಾವಿರ ಪ್ರತಿನಿಧಿಗಳಿಗೆಂದು ಅರಸು ಬೋರ್ಡಿಂಗ್ ಶಾಲೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿತ್ತು. ಆದರೆ, ಶಾಲೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮತ್ತೊಂದು ಜಾಗಕ್ಕಾಗಿ ಹುಡುಕಾಟ ನಡೆದಿದೆ.

ಅಂತಿಮ ಹಂತದಲ್ಲಿ ಸಿದ್ಧತೆ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಸಿದ್ದತಾ ಕೆಲಸಗಳು ಭರದಿಂದ ಸಾಗಿವೆ. ಮುಖ್ಯವೇದಿಕೆ ಮತ್ತು ಬೃಹತ್‌ ಪೆಂಡಾಲ್‌ ನಿರ್ಮಾಣ ಕೆಲಸ ನಡೆಯುತ್ತಿದ್ದು, ಶೇ 75ರಷ್ಟು ಪೂರ್ಣಗೊಂಡಿದೆ.

ಪ್ರಧಾನ ವೇದಿಕೆಯು 135 ಅಡಿ ಅಗಲ ಮತ್ತು 48 ಅಡಿ ಉದ್ದ ಇರಲಿದ್ದು, ಮೈಸೂರು ಅರಮನೆಯ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ. ವೇದಿಕೆಯಲ್ಲಿ 50 ಮಂದಿ ಗಣ್ಯರು ಕುಳಿತುಕೊಳ್ಳಬಹುದು. ಸಮ್ಮೇಳನಕ್ಕೆ ಬರುವವರ ಹೆಸರು ನೋಂದಣಿಗೆ 28 ಕೌಂಟರ್‌ಗಳನ್ನು ತೆರೆಯಲಾಗಿದೆ.

ಪೆಂಡಾಲ್‌ನ ಒಟ್ಟು ವಿಸ್ತೀರ್ಣ 250 ಅಡಿ ಅಗಲ ಮತ್ತು 550 ಅಡಿ ಉದ್ದ ಇರಲಿದೆ. ಮಧ್ಯದಲ್ಲಿ ಯಾವುದೇ ಕಂಬಗಳು ಇಲ್ಲದಿರುವುದು ವಿಶೇಷ. ಹಿಂಭಾಗದಲ್ಲಿ ಕುಳಿತಿರುವವರಿಗೆ ಯಾವುದೇ ಅಡೆತಡೆಯಿಲ್ಲದೆ ವೇದಿಕೆ ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಾಗಲಿದೆ. ಇದರ ಜತೆಗೆ, 8 ಅಡಿ ಅಗಲ ಮತ್ತು 6 ಅಡಿ ಉದ್ದದ ಬೃಹತ್ 10 ಎಲ್‌ಇಡಿ ಪರದೆಗಳನ್ನು ಹಾಕುವ ಕಾರ್ಯ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT