ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 130 ಕೋಟಿ ಕಾಮಗಾರಿ ಶೀಘ್ರ ಆರಂಭ

Last Updated 22 ನವೆಂಬರ್ 2017, 6:30 IST
ಅಕ್ಷರ ಗಾತ್ರ

ಬೆಳಗಾವಿ: ‘ಸವದತ್ತಿಯ ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗಾಗಿ ಸುಮಾರು ₹ 130.50 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರದಲ್ಲಿ ಕಾಮಗಾರಿಗಳು ಆರಂಭಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ’ ಎಂದು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮನಗೌಡ ತೀಪರಾಶಿ ಹೇಳಿದರು.

‘ಗ್ರಾಮೀಣ ನೀರು ಸರಬರಾಜು ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ ವತಿಯಿಂದ ₹ 56.20 ಕೋಟಿ, ಲೋಕೋಪಯೋಗಿ ಇಲಾಖೆಯಿಂದ ₹ 31.78 ಕೋಟಿ ಹಾಗೂ ದೇವಸ್ಥಾನದ ಉಳಿತಾಯದ ಹಣದಿಂದ ₹ 42.53  ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎರಡನೇ ಹಂತದ ಕುಡಿಯುವ ನೀರಿನ ಯೋಜನೆ (₹ 31.50 ಕೋಟಿ), ಸಮುದಾಯ ಶೌಚಾಲಯ ಹಾಗೂ ವಿವಿಧ ಪ್ರದೇಶಗಳಲ್ಲಿ ಶೌಚಾಲಯ ಕಟ್ಟಡ ನಿರ್ಮಾಣ (₹ 5.96 ಕೋಟಿ), 200 ಲೀಟರ್‌ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ (₹ 74 ಕೋಟಿ), ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ವರ್ತುಲ ರಸ್ತೆ ಹಾಗೂ ಕ್ಷೇತ್ರದಲ್ಲಿಯ ಮುಖ್ಯ ರಸ್ತೆಗಳ ವಿಸ್ತರಣೆ ಕಾಮಗಾರಿ (₹ 18 ಕೋಟಿ)  ಯೋಜನೆಗಳನ್ನು ಗ್ರಾಮೀಣ ನೀರು ಸರಬರಾಜು ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ’ ಎಂದು ನುಡಿದರು.

’ಲೋಕೋಪಯೋಗಿ ಇಲಾಖೆಯಿಂದ ಸವದತ್ತಿ ಹಂಚಿನಾಳ – ಯಲ್ಲಮ್ಮನ ಗುಡ್ಡದ ರಸ್ತೆಯನ್ನು ಬೈಪಾಸ್‌ ರಸ್ತೆಯನ್ನಾಗಿ ಮಾಡಲು ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ (₹ 15 ಕೋಟಿ), ಸವದತ್ತಿ– ಹಂಚಿನಾಳ ಜಿಲ್ಲಾ ಮುಖ್ಯ ರಸ್ತೆ ಹಾಗೂ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ವಿಸ್ತರಣೆ ಕಾಮಗಾರಿ (₹ 16.78 ಕೋಟಿ) ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದರು.

‘ದೇವಸ್ಥಾನದ ಉಳಿತಾಯ ಖಾತೆಯಿಂದ ಒಳಚರಂಡಿ ವ್ಯವಸ್ಥೆ (₹12 ಕೋಟಿ), 500 ಜನರ ಸಾಮರ್ಥ್ಯದ ಅನ್ನದಾಸೋಹ ಕಟ್ಟಡ ನಿರ್ಮಾಣ (₹ 2.57 ಕೋಟಿ), ಕೊಳ್ಳದ ಪ್ರದೇಶದಲ್ಲಿ ವಾಹನ ನಿಲುಗಡೆಗಾಗಿ ವ್ಯವಸ್ಥೆ (₹ 5.78 ಕೋಟಿ), 25 ಜನ ಸಾಮರ್ಥ್ಯದ ನಾಲ್ಕು ತಂಗುದಾಣಗಳ ನಿರ್ಮಾಣ (₹ 3.04 ಕೋಟಿ), 50 ಜನ ಸಾಮರ್ಥ್ಯದ ನಾಲ್ಕು ತಂಗುದಾಣಗಳ ನಿರ್ಮಾಣ (₹ 3.60 ಕೋಟಿ), ರಸ್ತೆಗಳ ಬದಿ 275 ಅಂಗಡಿಗಳ ನಿರ್ಮಾಣ (₹ 9.63 ಕೋಟಿ), ವರ್ತುಲ ರಸ್ತೆ ಹಾಗೂ ಕೂಡು ರಸ್ತೆಗಳ ಮಧ್ಯೆ ಭಾಗದ ಪ್ರದೇಶದ ಅಭಿವೃದ್ಧಿ (₹ 5.63 ಕೋಟಿ), ಸಿದ್ಧನಗವಿಯ ಅಭಿವೃದ್ಧಿ (₹ 26 ಲಕ್ಷ) ಸೇರಿದಂತೆ ಒಟ್ಟು ₹ 42.53 ಕೋಟಿ ವೆಚ್ಚದ ಕಾಮಗಾರಿಗಳು ನಡೆಯಲಿವೆ’ ಎಂದು ರಾಮನಗೌಡ ತೀಪರಾಶಿ ಮಾಹಿತಿ ನೀಡಿದರು.

ಸಚಿವರಾದ ಎಚ್‌.ಕೆ. ಪಾಟೀಲ, ಎಚ್‌.ಸಿ. ಮಹದೇವಪ್ಪ, ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರ ಸಹಕಾರದಿಂದ ಅನುದಾನ ಮಂಜೂರಾಗಿದೆ. ಶೀಘ್ರದಲ್ಲಿ ಟೆಂಡರ್‌ ಕರೆದು, ಕಾಮಗಾರಿ ಆರಂಭಿಸಲಾಗುವುದು ಎಂದರು. ಸಮಿತಿಯ ನಿರ್ದೇಶಕರಾದ ಎಂ.ಐ.ಪುರದಗುಡಿ, ಎಸ್.ಆರ್.ಪಾಟೀಲ, ಎಸ್.ವಿ.ಬಳ್ಳಾರಿ, ಎಚ್.ವಿ.ಉಳ್ಳಾಗಡ್ಡಿ, ಸೋಮಶೇಖರ ನಾಯಕ ಉಪಸ್ಥಿತರಿದ್ದರು.

* * 

ದೇವಸ್ಥಾನದ ಹೆಸರಿನಲ್ಲಿ 79 ಎಕರೆ ಜಾಗವಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಜಾಗದ ಕೊರತೆ ಇಲ್ಲ.
 ಎಸ್‌.ಸಿ. ಕೋಟಾರಗಸ್ತಿ,
ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT