ಚಿಕ್ಕಬಳ್ಳಾಪುರ

ನಗರಸಭೆಗೆ ಸಿಬ್ಬಂದಿಯ ಸುಳ್ಳಿಗೆ ಸುಸ್ತಾದರು!

ಕಾನೂನು ಬದ್ಧವಾಗಿ 1993ರಲ್ಲಿಯೇ ಭೂ ಪರಿವರ್ತನೆಯಾಗಿರುವ ಬಡಾವಣೆಯಲ್ಲಿರುವ ತಮ್ಮ ಎರಡು ನಿವೇಶನಗಳಿಗೆ ಗೋಪಾಲ್ ಅವರು ಈವರೆಗೆ ಕಂದಾಯ ಕಟ್ಟುತ್ತ ಬಂದಿದ್ದಾರೆ

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಿಂದ ನಗರಸಭೆಗೆ ಸೇರ್ಪಡೆಗೊಂಡ ಪ್ರದೇಶಗಳಲ್ಲಿ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿರುವ ನಿವೇಶನಗಳಿಗೆ ಖಾತೆ ವರ್ಗಾವಣೆ ಮಾಡಿಕೊಡುವಲ್ಲಿ ನಗರಸಭೆ ಸಿಬ್ಬಂದಿ ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತ, ಖಾತೆಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಆಕ್ರೋಶ ಮಡುಗಟ್ಟುವಂತೆ ಮಾಡುತ್ತಿದೆ.

‘ಕೈ ಬೆಚ್ಚಗೆ’ ಮಾಡಿದವರಿಗೆ ಒಳಗೊಳಗೆ ಖಾತೆ ಮಾಡಿ ಕೊಡುವ ನಗರಸಭೆ ಅಧಿಕಾರಿಗಳು ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸಿದ ನಾಗರಿಕರಿಗೆ ಇಲ್ಲದ ಸಬೂಬು ಹೇಳಿ ಅನೇಕ ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಕೇಳಿದರೂ ಮಾಹಿತಿ ಒದಗಿಸುತ್ತಿಲ್ಲ’ ಎಂದು ಕಳೆದ ಐದು ವರ್ಷಗಳಿಂದ ನಗರಸಭೆಗೆ ಖಾತೆಗಾಗಿ ಅರ್ಜಿ ಸಲ್ಲಿಸಿ, ಅಲೆದಾಡಿ ಸುಸ್ತಾಗಿರುವ 4ನೇ ವಾರ್ಡ್ ವ್ಯಾಪ್ತಿಯ ಪ್ರಶಾಂತ ನಗರದ ಹೊಸ ಬಡಾವಣೆ ನಿವಾಸಿ ಎಸ್‌.ಗೋಪಾಲ್ ಆರೋಪಿಸಿದರು.

ಕಸಬಾ ಹೋಬಳಿ, ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಸ್ಟೂರಿನ ಸರ್ವೆ ನಂಬರ್ 250ರಲ್ಲಿ ನಿರ್ಮಿಸಿದ್ದ ಹೊಸ ಬಡಾವಣೆಯಲ್ಲಿ ಸದ್ಯ ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ಎಸ್‌.ಗೋಪಾಲ್‌ ಅವರ ಪತ್ನಿ ಎಂ.ಗಂಗಮ್ಮ ಅವರು ಈ ಹಿಂದೆ ಎರಡು ನಿವೇಶನಗಳನ್ನು ಖರೀದಿಸಿದ್ದರು. ಆ ಪೈಕಿ ನಿವೇಶನ ಸಂಖ್ಯೆ 6ರಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಉಳಿದೊಂದು ನಿವೇಶನವನ್ನು (ಸಂಖ್ಯೆ 5) ಮಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಕಾನೂನು ಬದ್ಧವಾಗಿ 1993ರಲ್ಲಿಯೇ ಭೂ ಪರಿವರ್ತನೆಯಾಗಿರುವ ಬಡಾವಣೆಯಲ್ಲಿರುವ ತಮ್ಮ ಎರಡು ನಿವೇಶನಗಳಿಗೆ ಗೋಪಾಲ್ ಅವರು ಈವರೆಗೆ ಕಂದಾಯ ಕಟ್ಟುತ್ತ ಬಂದಿದ್ದಾರೆ. 2008ರಲ್ಲಿ ಹೊಸ ಬಡಾವಣೆ ಪ್ರದೇಶ ನಗರಸಭೆಗೆ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ. ಬಳಿಕ ಗಂಗಮ್ಮ ಅವರು 2012ರಲ್ಲಿ ತಮ್ಮ ಎರಡು ನಿವೇಶನಗಳಿಗೆ ಖಾತೆ ನೀಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಅವರ ಹೆಸರಿನಲ್ಲಿ ಖಾತೆ ವರ್ಗಾವಣೆಯಾಗಿಲ್ಲ.

‘ನಗರಸಭೆ ಅಧಿಕಾರಿಗಳು ಖಾತೆಗಾಗಿ ಅರ್ಜಿ ಸಲ್ಲಿಸಿದಾಗ ಕೆಲ ದಾಖಲೆಗಳನ್ನು ಕೇಳುವ ಜತೆಗೆ ಕಂದಾಯ ಪಾವತಿಸುವಂತೆ ಹೇಳಿದರು. ಅದರಂತೆ ನಾನು ದಾಖಲೆಗಳನ್ನು ಒದಗಿಸುವುದರೊಂದಿಗೆ ಸುಮಾರು ₹ 30 ಸಾವಿರ ಕಂದಾಯ ಕಟ್ಟಿದ್ದೇನೆ. ಆ ಬಳಿಕ ಅಧಿಕಾರಿಗಳು ಗ್ರಾಮಾ ಠಾಣಾ ವ್ಯಾಪ್ತಿಗೆ ಸೇರಿದ ನಿವೇಶನಗಳಿಗೆ ಖಾತೆ ಮಾಡಿಕೊಡಲು ನಮಗೆ ಅಧಿಕಾರವಿಲ್ಲ. ಈ ಬಗ್ಗೆ ನಿರ್ದೇಶನ ಕೋರಿ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳುತ್ತ ಐದು ವರ್ಷಗಳಿಂದ ದಿನದೂಡುತ್ತ ಬಂದಿದ್ದಾರೆ’ ಎಂದು ಗೋಪಾಲ್‌ ಅವರು ಬೇಸರ ವ್ಯಕ್ತಪಡಿಸಿದರು.

‘ನಮಗೆ ಖಾತೆ ಮಾಡಿಕೊಡಲು ಬರುವುದಿಲ್ಲ ಎಂದು ಹೇಳುವ ಅಧಿಕಾರಿಗಳೇ ನಮ್ಮ ಪಕ್ಕದ ನಿವೇಶನಗಳು ಸೇರಿದಂತೆ ಅನೇಕ ನಿವೇಶನಗಳಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ನಾನು ಪೌರಾಯುಕ್ತರಿಗೆ ಆರ್‌ಟಿಐ ಅಡಿ ಮಾಹಿತಿ ಕೇಳಿದರೆ ಒದಗಿಸಲಿಲ್ಲ. ಅದರಿಂದಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿ ಮಾಹಿತಿ ಕೋರಿದರೆ ಅವರು ಪೌರಾಯುಕ್ತರ ಬಳಿಯೇ ಮಾಹಿತಿ ಪಡೆಯುವಂತೆ ತಿಳಿಸಿದ್ದಾರೆ. ಮೇಲಾಧಿಕಾರಿಗಳೇ ಹೀಗೆ ಕೈಚೆಲ್ಲಿದರೆ ನಾವು ಯಾರನ್ನು ಕೇಳಬೇಕು’ ಎಂದು ಪ್ರಶ್ನಿಸಿದರು.

‘2012ರಲ್ಲಿಯೇ ನಾನು ಅರ್ಜಿ ಸಲ್ಲಿಸುವಾಗ ನಗರಸಭೆ ಅಧಿಕಾರಿಗಳು ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎನ್ನುವುದಾಗಿದ್ದರೆ ನಮಗೆ ಲಿಖಿತ ಹಿಂಬರಹದಲ್ಲಿ ತಿಳಿಸಬೇಕಿತ್ತು. ಅದನ್ನು ಬಿಟ್ಟು, ದಾಖಲೆಗಳನ್ನು ಪಡೆದುಕೊಂಡು, ಕಂದಾಯ ಕಟ್ಟಿಸಿಕೊಂಡು, ನಾಲ್ಕೈದು ವರ್ಷಗಳಿಂದ ಅಲೆದಾಡಿದರೂ ಸುಳ್ಳು ಹೇಳುವುದು ಏಕೆ? ಈಗಿರುವ ಪೌರಾಯುಕ್ತರು ಹಿಂದೆ ಏನಾಗಿದೆಯೋ ನಮಗೆ ಗೊತ್ತಿಲ್ಲ. ಸಧ್ಯ ಖಾತೆ ಮಾಡಿಕೊಡಲು ಬರುವುದಿಲ್ಲ ಎನ್ನುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಖಾಲಿ ನಿವೇಶನವನ್ನು ಮದುವೆಯ ಬಳಿಕ ಮಗಳಿಗೆ ಉಡುಗೊರೆಯಾಗಿ ನೀಡಿದ್ದೇವೆ. ಅವರು ಮನೆ ಕಟ್ಟಿಸಿಕೊಳ್ಳಲು ಬ್ಯಾಂಕ್‌ ಸಾಲ ತೆಗೆಸಲು ಹೋದರೆ ಖಾತೆ ಕೇಳುತ್ತಿದ್ದಾರೆ. ಇದರಿಂದ ನಮಗೆ ತುಂಬಾ ತೊಂದರೆಯಾಗಿದೆ. ನಮ್ಮಂತೆ ಅನೇಕರು ಇದೇ ಕಾರಣಕ್ಕಾಗಿ ನಿವೇಶನ ಮಾರಾಟ ಮಾಡಲು, ಹಸ್ತಾಂತರಿಸಲು, ಮನೆ ಕಟ್ಟಿಸಲು ಅನುಮತಿ ಪಡೆಯಲು ಆಗದೆ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ಹೇಳಿದರು.

‘ನಾವು ಕಂದಾಯ ಬಾಕಿ ಉಳಿಸಿಕೊಂಡರೆ ನಗರಸಭೆಯವರು ಬಡ್ಡಿ ಸಮೇತ ವಸೂಲಿ ಮಾಡುತ್ತಾರೆ. ಹಾಗಿದ್ದರೆ, ಕಂದಾಯ ಕಟ್ಟಿದರೂ ಖಾತೆ ನೀಡದವರಿಗೆ ಏನು ಮಾಡಬೇಕು? ಕಾನೂನುಬದ್ಧ ರೀತಿಯಲ್ಲಿ ನಡೆದುಕೊಂಡು, ವರ್ಷಾನುಗಟ್ಟಲೇ ತಾಳ್ಮೆಯಿಂದ ಇದ್ದೇವೆ. ಆದರೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಹೀಗಾದರೆ ಇನ್ನೂ ಎಷ್ಟು ದಿನ ಕಾಯಬೇಕು ಹೇಳಿ’ ಎಂದು ಕೇಳಿದರು.

‘ನೀರು, ವಿದ್ಯುತ್ ಬಿಟ್ಟರೆ ನಮ್ಮ ಬಡಾವಣೆಗೆ ಯಾವುದೇ ಮೂಲಸೌಕರ್ಯ ಒದಗಿಸಿಲ್ಲ. ಸುಸಜ್ಜಿತವಾದ ರಸ್ತೆ ಇಲ್ಲ. ಚರಂಡಿ, ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಇಷ್ಟಾದರೂ ನಾವು ಸಹಿಸಿಕೊಂಡು ಬದುಕುತ್ತಿದ್ದೇವೆ. ಇವತ್ತು ನಗರಸಭೆಯಲ್ಲಿ ಸೌಜನ್ಯದಿಂದ ವರ್ತಿಸುವ ನಾಗರಿಕರಿಗೆ ಬೆಲೆ ಇಲ್ಲದಂತಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ಮಿತಿಮೀರಿದೆ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕಿದೆ’ ಎಂದು ಗೋಪಾಲ್ ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಗರಸಭೆ ಆಯುಕ್ತ ಉಮಾಕಾಂತ್‌ ಅವರನ್ನು ಸೋಮವಾರ ಸಂಪರ್ಕಿಸಿದಾಗ ಅವರ ಮೊಬೈಲ್ ಸ್ವಿಚ್ಡ್‌ಆಫ್‌ ಆಗಿತ್ತು. ಮಂಗಳವಾರ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

* * 

ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎನ್ನುವುದಾದರೆ ನಗರಸಭೆಯವರು ಹಿಂಬರಹ ನೀಡಿ, ಕಟ್ಟಿದ ಕಂದಾಯ ವಾಪಸ್ ಕೊಡಲಿ. ನಾವು ಕಾನೂನು ಹೋರಾಟ ನಡೆಸುತ್ತೇವೆ.
ಎಸ್‌.ಗೋಪಾಲ್,
ಪ್ರಶಾಂತ ನಗರದ ಹೊಸ ಬಡಾವಣೆ ನಿವಾಸಿ

Comments
ಈ ವಿಭಾಗದಿಂದ ಇನ್ನಷ್ಟು

ಗೌರಿಬಿದನೂರು
5ನೇ ಬಾರಿ ಶಾಸಕ ಸ್ಥಾನಕ್ಕೆ ಶಿವಶಂಕರರೆಡ್ಡಿ ನಾಮಪತ್ರ

ಐದನೇ ಬಾರಿಗೆ ಶಾಸಕರಾಗುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎನ್.ಎಚ್. ಶಿವಶಂಕರರೆಡ್ಡಿ ಶುಕ್ರವಾರ ಉಮೇದುವಾರಿಕೆಗೆ ಅರ್ಜಿ ಸಲ್ಲಿಸಿದರು.

21 Apr, 2018

ಚಿಕ್ಕಬಳ್ಳಾಪುರ
‘ಬರ’ದ ಬೀಡಿನಲಿ ಸಿರಿವಂತರ ‘ಉಮೇದು’ವಾರಿಕೆ

ಬಯಲು ಸೀಮೆಯ ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಈವರೆಗೆ ನಾಮಪತ್ರ ಸಲ್ಲಿಸಿದವರ ಪೈಕಿ ಬಹುತೇಕರು ಕೋಟ್ಯಧಿಪತಿಗಳೇ ಇದ್ದಾರೆ. ಅವರಿಗೆ...

21 Apr, 2018

ಚಿಕ್ಕಬಳ್ಳಾಪುರ
ನಾಲ್ಕನೇ ದಿನ 16 ನಾಮಪತ್ರ

ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಶುಕ್ರವಾರ ಜಿಲ್ಲೆ ಐದು ಕ್ಷೇತ್ರಗಳ ಪೈಕಿ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಪೈಕಿ ಐದು...

21 Apr, 2018

ಚಿಕ್ಕಬಳ್ಳಾಪುರ
ಶಾಸಕರ ಪತ್ನಿ ₹ 10 ಕೋಟಿ ಸಾಲಗಾರ್ತಿ!

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಶಾಸಕನಾಗಿ ಅಧಿಕಾರ ನಡೆಸಿ ಎರಡನೇ ಬಾರಿಗೆ ‘ಅದೃಷ್ಟ’ ಪರೀಕ್ಷೆಗೆ ಮುಂದಾಗಿರುವ ಡಾ.ಕೆ.ಸುಧಾಕರ್ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಇದೇ...

21 Apr, 2018

ಶಿಡ್ಲಘಟ್ಟ
ಕಾಂಗ್ರೆಸ್‌ ಅಭ್ಯರ್ಥಿ ವಿ.ಮುನಿಯಪ್ಪ ಉಮೇದುವಾರಿಕೆಗೆ ಅರ್ಜಿ

ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಹಿರಿಯ ಮುಖಂಡ ವಿ.ಮುನಿಯಪ್ಪ ಬುಧವಾರ ನಾಮಪತ್ರ ಸಲ್ಲಿಸಿದರು.

20 Apr, 2018