ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡ ಜಂಗಮ ಪ್ರಮಾಣ ಪತ್ರಕ್ಕೆ ಒತ್ತಾಯ

Last Updated 22 ನವೆಂಬರ್ 2017, 7:23 IST
ಅಕ್ಷರ ಗಾತ್ರ

ಧಾರವಾಡ: ಹಿಂದೂ ಜಂಗಮ ಸಮುದಾಯದವರಿಗೆ ರಾಜ್ಯ ಸರ್ಕಾರ ‘ಬೇಡ ಜಂಗಮ’ ಎಂದೇ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಡಾ.ಅಂಬೇಡ್ಕರ್‌ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

‘1950ರಲ್ಲಿ ಸಂವಿಧಾನ ರಚನೆಯಾದಾಗ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಜಂಗಮ ಮತ್ತು ಮಾಲ ಜಂಗಮ ಜಾತಿಗಳನ್ನು ಕುಲ ಕಸುಬಿನ ಆಧಾರದ ಮೇಲೆ ಬೇಡ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿದ್ದಾರೆ. ಹಾಗೆಯೇ 1976ರಲ್ಲಿ ಬೇಡ ಜಂಗಮರು ಕಲಬುರ್ಗಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮಾತ್ರವಲ್ಲ ರಾಜ್ಯದ ಇತರ ಭಾಗಗಳಲ್ಲೂ ನೆಲೆಸಿದ್ದಾರೆ. ಈ ಕುರಿತು ರಾಷ್ಟ್ರಪತಿ ಅವರು ತಿದ್ದುಪಡಿ ಆದೇಶಕ್ಕೆ ಸಹಿ ಹಾಕಿದ್ದಾರೆ’ ಎಂದು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.

‘ಬೇಡ ಜಂಗಮರ ಕುರಿತು ಕೆ.ಎಸ್‌.ಸಿಂಗ್ ಅವರ ‘ಬೇಡ’ ಎಂದರೆ ಬೇಡುವುದು ಹಾಗೂ ‘ಜಂಗಮ’ ಎಂದರೆ ಆರಾಧಿಸುವವರು ಎಂದು ನಮೂದಿಸಿದ್ದಾರೆ. ಲಿಂಗಾಯತ ತತ್ವಗಳನ್ನು ಆಚರಣೆಗೆ ತರುವರು ಎಂದಿದೆ. ಆದರೆ, ರಾಜ್ಯ ಸರ್ಕಾರ ಬೇಡ ಜಂಗಮರ ವಿರುದ್ಧ ಮೂರು ಸುತ್ತೋಲೆ ಹೊರಡಿಸಿದ್ದು ಅದರಲ್ಲಿ ಈ ಸಮುದಾಯದವರು ಬೇಡರು, ಬೇಟೆ ಆಡುವವರು, ಮಾಂಸ ಭಕ್ಷಕರು, ಮದ್ಯ ವ್ಯಸನಿಗಳು ಎಂದು ಸುಳ್ಳಾಗಿ ನಮೂದಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

‘2016ರ ಡಿಸೆಂಬರ್‌ 21ರಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬೇಡ ಜಂಗಮ ಜಾತಿ/ಸಿಂಧುತ್ವ ಪ್ರಮಾಣ ಪತ್ರ ನೀಡುವಾಗ ಸರ್ಕಾರದ ಎಲ್ಲ ಸುತ್ತೋಲೆಗಳು, ಹೈಕೋರ್ಟ್‌ ಆದೇಶ, ಡಾ.ಸೂರ್ಯನಾಥ ಕಾಮತ್‌ ವರದಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ನೀಡುವ ಜಾತಿ ಗುರುತಿನ ಪ್ರಮಾಣ ಪತ್ರಗಳನ್ನು ಪರಿಗಣಿಸಬೇಕು ಎಂದು ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಈ ಕುರಿತಂತೆ ಹೈಕೋರ್ಟ್ ಆದೇಶ ಇದ್ದರೂ ಸಿಂಧುತ್ವ ಪ್ರಮಾಣ ಪತ್ರ ನೀಡುವಾಗ ಬಹುತೇಕ ತಹಶೀಲ್ದಾರರು ಕಾನೂನು ಉಲ್ಲಂಘಿಸಿದ್ದು, ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆದೇಶಿಸಿದೆ. ಆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈಗಲಾದರೂ ಈ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಪತ್ರದಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT