ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುರುಸೊತ್ತು ಇಲ್ಲದ ರಾಜಕಾರಣಿಗಳು’

Last Updated 22 ನವೆಂಬರ್ 2017, 7:48 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ರಾಜಕಾರಣಿಗಳು ಒಳ್ಳೆಯವರು. ಆದರೆ, ಸ್ವಲ್ಪ ಪುರುಸೊತ್ತು ಮಾಡಿಕೊಳ್ಳಬೇಕು. ಆಗಾಗ್ಗೆ ಸಾಹಿತಿಗಳು, ಪ್ರಗತಿಪರರು, ಕಲಾವಿದರು, ಚಿಂತಕರ ಜೊತೆ ಮಾತುಕತೆ ನಡೆಸಬೇಕು. ಆಗ, ಅವರಿಗೂ ಜಿಲ್ಲೆಯನ್ನು ಪ್ರತಿನಿಧಿಸುವ ಅಂತಃಸತ್ವ ಬರುತ್ತದೆ. ಸಾಂಸ್ಕೃತಿಕ ವಲಯದ ಜೊತೆ ನಿರಂತರ ಸಂಪರ್ಕ ಇದ್ದಾಗ, ಜನ ಸಮುದಾಯದ ಮನಸ್ಥಿತಿ ಅರಿಯಲು ಸಾಧ್ಯ. ಬೆನ್ನು ಹತ್ತುವವರ ಬದಲು, ಅರ್ಹರಿಗೆ ಆದ್ಯತೆ ನೀಡಬಹುದು. ಅಲ್ಲದೇ, ಸಾಹಿತಿಗಳೂ ಲಾಬಿಗಿಂತ ಹೆಚ್ಚಾಗಿ ಮಾರ್ಗದರ್ಶನ, ಸಲಹೆ ಸೂಚನೆ ನೀಡಲು ರಾಜಕಾರಣಿಗಳ ಬಳಿ ಹೋಗಬೇಕು...

ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯ ಹಂಚಿಕೊಂಡರು. ಅವರ ಜೊತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

*ಸಮ್ಮೇಳನದ ಅಧ್ಯಕ್ಷತೆ ಮತ್ತು ಭಾಷಣದ ಬಗ್ಗೆ...
ಸಹಜವಾಗಿ ಖುಷಿ ಆಗಿದೆ. ಇದೊಂದು ಗೌರವ ಎಂದು ತಿಳಿದುಕೊಂಡಿದ್ದೇನೆ. ಗುರುತಿಸಿದ ಸಮಾಧಾನ ಇದೆ. ಅಲ್ಲದೇ, ಸಾಹಿತ್ಯ– ಲಲಿತಕಲೆಗಳಲ್ಲಿನ ಹೊಸ ಪೀಳಿಗೆಯನ್ನು ಒಗ್ಗೂಡಿಸಿ ಬೆಳೆಸುವುದು, ಜಿಲ್ಲೆಯು ರಾಜ್ಯಮಟ್ಟದಲ್ಲಿ ಗಮನ ಸೆಳೆಯುವ ದೃಷ್ಟಿಯಲ್ಲಿ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು, ಕೆರೆಗಳು, ಉದ್ಯೋಗ ಒದಗಿಸುವ ಸಣ್ಣ ಉದ್ಯಮಿಗಳ ಅಭಿವೃದ್ಧಿ ಕುರಿತು ಭಾಷಣ ಮಾಡಬೇಕು ಎಂಬ ಚಿಂತನೆ ಇದೆ. ಅಭಿವೃದ್ಧಿ ಮತ್ತು ಅಂತಃಸತ್ವ ದೃಷ್ಟಿ ಮುಖ್ಯವಾಗಿದೆ.


*ನಿಮ್ಮ ಸಾಹಿತ್ಯ ಚಟುವಟಿಕೆಗಳ ಮೂಲ ಪ್ರೇರಣೆ...
ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಓದುವ ಸಂದರ್ಭದಲ್ಲಿ ಸಾಹಿತ್ಯದ ಪ್ರೀತಿ ಬೆಳೆಯಿತು. ಪ್ರಾಂಶುಪಾಲರಾಗಿದ್ದ ಬೆಲ್ಲದ ಚಂದ್ರಶೇಖರ ಕಾಲೇಜಿಗೆ ಸಾಹಿತಿಗಳನ್ನು ಕರೆಯಿಸಿಕೊಳ್ಳುತ್ತಿದ್ದರು. ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಿದ್ದರು. ಆಗ, ನಾನು, ಸರಜೂ ಕಾಟ್ಕರ್ ಮತ್ತಿತರರು ಬರೆಯುತ್ತಿದ್ದೆವು. ಉರ್ದು ಸಾಹಿತಿ ಅಬ್ದುಲ್‌ ಮಜೀದ್ ಖಾನ್ ಪ್ರೋತ್ಸಾಹಿಸಿದರು. ನನಗೆ ಕಾವ್ಯ ಮತ್ತು ನಾಟಕದ ಕುರಿತು ಪ್ರೀತಿ ಹೆಚ್ಚು.

*ಬಂಡಾಯದ ಕುರಿತು...
70ರ ದಶಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆ ಬಯಸಿ ‘ಬಂಡಾಯ’ ಹಾಗೂ ‘ದಲಿತ’ ಚಳವಳಿ ಬಂದಾಗ, ಅವಕಾಶ ಹೆಚ್ಚಿತು. ಬರಹದ ಜವಾಬ್ದಾರಿಯನ್ನು ಕಲಿಸಿಕೊಟ್ಟಿತ್ತು. ಆದರೆ, ಬೆಳಗಾವಿ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ, ‘ಬಂಡಾಯದವರು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು’ ಎಂದು ಹಿರಿಯರು ಕರೆಕೊಟ್ಟರು. ನಾನು ರಾಜೀನಾಮೆ ನೀಡಿ ಹೊರಬಂದೆನು. ಬದ್ಧತೆಯ ಸಮಾಧಾನ ಹಾಗೂ ಮುಜುಗರಗಳೂ ಒಂದೇ ಬಾರಿಗೆ ಆಯಿತು.

*ಅಂದು ಹಾಗೂ ಇಂದಿನ ಸಾಹಿತ್ಯ ಲೋಕ ಹೇಗಿದೆ?
ಅಂದು ನಾವು ಎದುರಿಸುವ ಗುರಿ (ಕೋಮುವಾದ, ವರ್ಗ ಸಂಘರ್ಷ ಇತ್ಯಾದಿ) ಬಗ್ಗೆ ಸ್ಪಷ್ಟತೆ ಇತ್ತು. ಜಾಗತೀಕರಣದ ಬಳಿಕ ವ್ಯವಸ್ಥೆಯೇ ಬದಲಾಗಿದೆ. ಅವುಗಳನ್ನು ಎದುರಿಸಲು ಸಾಹಿತ್ಯದಲ್ಲಿ ಅಸ್ತ್ರ ಅಥವಾ ಶಕ್ತಿಯ ಕೊರತೆ ಇದೆಯೇ? ಎಂಬ ಗೊಂದಲ ಕಾಡುತ್ತದೆ. ನಾವು ಬೀದಿಗೆ ಬಂದು ಹೇಳುವ ಮೊದಲೇ, ಯಾರೋ ಸಾಮಾಜಿಕ ಜಾಲ ತಾಣಗಳಲ್ಲಿ ಏನೋ ಹೇಳಿರುತ್ತಾರೆ. ವ್ಯವಸ್ಥೆಯಲ್ಲಿ ಸೋಲು, ಹೊಂದಾಣಿಕೆ, ರಾಜಿಗಳು ಸಹಜ. ಆದರೆ, ತಾತ್ವಿಕ ಮತ್ತು ನೈತಿಕ ನಿಲುವು ಬಿಡಬಾರದು. ಈಗ ಹೋರಾಟಗಳ ತೀವ್ರತೆ ಕ್ಷೀಣವಾಗಿದೆಯೇ, ಹೊರತು ಹಿನ್ನಡೆ ಆಗಿಲ್ಲ. ನಮಗೂ ವಯಸ್ಸೂ ಆಗಿದೆಯಲ್ಲ...

*ಹೊಸ ಪೀಳಿಗೆ ಬಗ್ಗೆ ಹೇಳಿ...
ಅವರು ನಮಗಿಂತ ಜಾಣರು, ತಂತ್ರಜ್ಞಾನ ಬಲ್ಲವರು. ಅವರೇ ಭವಿಷ್ಯ. ಆದರೆ, ಅವರಲ್ಲಿ ಸಾಂಘಿಕ ಹೋರಾಟಕ್ಕಿಂತ ವೈಯಕ್ತಿಕ ಅಭಿವ್ಯಕ್ತಿಯೇ ಜಾಸ್ತಿ ಆಗಿದೆ. ಜಾಗೃತ ಯುವ ಪೀಳಿಗೆ ರೂಪಿಸುವ ಜವಾಬ್ದಾರಿ ಹಿರಿಯರ ಮೇಲಿದೆ.

*ಕನ್ನಡ ಉಳಿಸಲು ಏನು ಮಾಡಬೇಕು?
ಕನ್ನಡ ಭಾಷೆ ಸಾಯುವುದಿಲ್ಲ. ಆದರೆ, ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಕೊಡುಗೆಗಳನ್ನು ನೀಡುತ್ತಾ ರಾಜಕೀಯ ಶಕ್ತಿಗಳನ್ನು ಜಾಗೃತಗೊಳಿಸಬೇಕು. ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಪ್ರಗತಿಪರರು, ಬುದ್ಧಿ ಜೀವಿಗಳು ಇದ್ದಾಗ ಸಾಧ್ಯ. ಮಹಿಷಿ ವರದಿಯನ್ನು ಪುನರ್ ಪರಿಶೀಲಿಸಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಆದರೆ, ಈಗ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಿಗೆ ಸಣ್ಣ ಅಹಂ ಬಂದು, ಸಮಾಜದಲ್ಲಿ ತೊಡಗಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿತವರು, ಲೋಕಜ್ಞಾನದ ಮೂಲಕ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಸಂಶೋಧಕ ಎಂ.ಎಂ. ಕಲಬುರ್ಗಿ ಹೇಳಿದಂತೆ, ‘ಇಂಗ್ಲಿಷ್ ಬೆಳಕಾಗಬೇಕು. ಹೊರತು ಬೆಂಕಿ ಆಗಬಾರದು...’ ಲೋಹಿಯಾ ಹೇಳಿದಂತೆ, ‘ಮಾತೃಭಾಷೆಯಲ್ಲಿ ಕಲಿಯಲು ಸಮಯ ಹಾಗೂ ಕಾಳಜಿ ಬೇಡ. ಇಂಗ್ಲಿಷ್‌ಗೆ ಶಕ್ತಿ ವ್ಯಯ ಮಾಡಬೇಕಾಗುತ್ತದೆ’ ಎಂಬ ನೆನಪು ಇರಬೇಕು.

*ಅಭಿವ್ಯಕ್ತಿ ಸ್ವಾತಂತ್ರ್ಯದ ಈಚಿನ ಬೆಳವಣಿಗೆಗಳ ಕುರಿತು...
ಆಧುನಿಕ ತಂತ್ರಜ್ಞಾನವು ಅಭಿವ್ಯಕ್ತಿಯ ಜೊತೆಗೆ ಅಸೂಯೆ, ಮತ್ಸರದ ಮೂಲಕ ಪ್ರತಿಕ್ರಿಯಿಸಲೂ ಅವಕಾಶ ಕಲ್ಪಿಸಿದೆ. ಹೀಗಾಗಿ ಹತ್ತಿಕ್ಕುವ ದಬ್ಬಾಳಿಕೆ ಹೆಚ್ಚಾಗಿದೆ. ಈ ಹಿಂದೆ ಬರಹಗಾರ, ಫೋಟೊಗ್ರಾಫರ್, ಪತ್ರಕರ್ತರಾಗಲು ಸಲಹೆ ಕೇಳುತ್ತಿದ್ದರು. ಈಗ ಎಲ್ಲರೂ ಸ್ವಯಂ ಘೋಷಿತ ಸಾಹಿತಿಗಳು, ಪತ್ರಕರ್ತರು, ಫೋಟೊಗ್ರಾಫರ್‌ಗಳು. ಹೀಗಾಗಿ ಗೊಂದಲ ಹೆಚ್ಚಿದೆ. ಜವಾಬ್ದಾರಿಯುತ ಲೇಖಕ ಪರಿಹಾರವನ್ನು ನೀಡಬೇಕು. ಉತ್ತರಿಸುವ ಸಾಮರ್ಥ್ಯ ಇರಬೇಕು.
ಈಗ ಕೋಮುವಾದ, ದಬ್ಬಾಳಿಕೆ, ವೈಷಮ್ಯವೇ ಪ್ರಬಲವಾಗಿದೆ. ಪರಂಪರೆಯ ಬಗ್ಗೆ ಪೊಳ್ಳು ಪ್ರೀತಿ ಹೆಚ್ಚಿದೆ. ಅದಕ್ಕೆ ಹಿತಮಿತ, ಸಂಯಮದಿಂದ ಉತ್ತರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಮಾಜಕ್ಕೂ ಒಂದು ಜೀರ್ಣ ಶಕ್ತಿ ಇದೆ. ಅದು ಅರಗಿಸಿಕೊಳ್ಳುವ ಮಾದರಿಯಲ್ಲೇ ನಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸಬೇಕು. ಎಲ್ಲಿ? ಏನು? ಎಷ್ಟು? ಯಾವಾಗ? ಮಾತನಾಡಬೇಕು ಎಂಬ ಎಚ್ಚರಿಕೆಯನ್ನು ಕಲಿಯಬೇಕಾಗಿದೆ.

*ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕುರಿತು...
ಚಂಪಾ ಅಧ್ಯಕ್ಷತೆ ಖುಷಿ ನೀಡಿದೆ. ಆದರೆ, ಈ ಹಿಂದೆ ಜಿಲ್ಲೆಯು ಅವಕಾಶ ಕಳೆದುಕೊಂಡ ನೋವಿದೆ. ಆಗಿನ ಸಂದರ್ಭಕ್ಕೆ ಸಮಸ್ಯೆ ಸೃಷ್ಟಿಯಾಗಿತ್ತು. ಸಂಯಮ ಮತ್ತು ವಿವೇಕದಿಂದ ವರ್ತಿಸಿದ್ದರೆ ಉಳಿಸಿಕೊಳ್ಳಬಹುದಿತ್ತು.

*ಮಾಧ್ಯಮಗಳ ಕುರಿತು..
ಮಾಧ್ಯಮದ ಜವಾಬ್ದಾರಿ ಬಹಳ ಇದೆ. ಅಭಿವೃದ್ಧಿ ಫಲಿತವಾಗುವ ದೂರದೃಷ್ಟಿಯ ಬರಹ ಬೇಕು. ಹಾನಿ ಮಾಡುವ ವಿಚಾರವನ್ನು ಕಡೆಗಣಿಸಬೇಕು. ಹೋರಾಟಗಾರರೂ ಕೇವಲ ಪ್ರತಿಭಟನೆ, ಧರಣಿಗಳಿಗೆ ಸೀಮಿತಗೊಳ್ಳದೇ, ಸೃಜನಶೀಲ ಕಾರ್ಯದ ಮೂಲಕ ಚಳವಳಿ ರೂಪಿಸಬೇಕಾಗಿದೆ.

‘ಕಳಶ ಇಲ್ಲದ ಗುಡಿಯಲ್ಲಿ ನೆಲೆ ಇಲ್ಲದ ಸಾಹಿತಿಗಳು’
ಜಿಲ್ಲಾ ಕೇಂದ್ರದಲ್ಲೇ ಸಾಹಿತಿ– ಕಲಾವಿದರಿಗೆ ನೆಲೆ ಇಲ್ಲ. ಅದಕ್ಕಾಗಿ ರಂಗಭವನ ನಿರ್ಮಿಸಬೇಕು. ಸದ್ಯ ಜಿಲ್ಲಾ ಕೇಂದ್ರವು ಕಳಶ ಇಲ್ಲದ ಗುಡಿಯಾಗಿದೆ. ಇಲ್ಲಿನ ಸಾಹಿತಿ, ಕಲಾವಿದರು, ಬರಹಗಾರರ ಬರವಣಿಗೆ, ಪ್ರಕಟಣೆ, ಕೃತಿಗಳು ಹೆಚ್ಚಾಗಿ ಬರಬೇಕು. ಹೊಸ ಪೀಳಿಗೆಯನ್ನು ಕಟ್ಟಬೇಕು. ಅವರಿಗೆ ಮಾರ್ಗದರ್ಶನ ನೀಡಬೇಕು’ ಎಂದು ಸತೀಶ ಕುಲಕರ್ಣಿ ಹೇಳಿದರು. ಆದರೆ, ಈಚಿನ ಕೆಲವು ವರ್ಷಗಳಲ್ಲಿ ಗಾಂಧಿ ಭವನ, ರಂಗ ಮಂದಿರ, ಕಾಲೇಜುಗಳು ಘೋಷಣೆ ಆಗಿರುವುದು ನಿರೀಕ್ಷೆ ಹುಟ್ಟಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT