ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 4,400 ಕೋಟಿ ಸಾಲ ವಿತರಣೆ ಗುರಿ

Last Updated 22 ನವೆಂಬರ್ 2017, 8:50 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೆಪ್ಟೆಂಬರ್‌ ಅಂತ್ಯಕ್ಕೆ ₹ 1,604 ಕೋಟಿ ಸಾಲ ವಿತರಿಸಲಾಗಿದೆ ಎಂದು ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ಸಹಾಯಕ ಮಹಾ ಪ್ರಬಂಧಕ ಎಂ.ನಾಣಯ್ಯ ಮಾಹಿತಿ ನೀಡಿದರು. ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬ್ಯಾಂಕ್‌ಗಳ ಜಿಲ್ಲಾ ಸಮನ್ವಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಒಟ್ಟು ₹ 4,400 ಕೋಟಿ ವಿತರಣೆಯ ಗುರಿ ಹೊಂದಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ₹ 874.91 ಕೋಟಿ ಬೆಳೆ ಸಾಲ, ₹ 141.36 ಕೋಟಿ ಕೃಷಿ ಅಭಿವೃದ್ಧಿಯ ಅವಧಿ ಸಾಲ,
₹ 21.58 ಕೋಟಿ ಕೃಷಿ ಸಂಬಂಧಿತ ಇತರ ಚಟುವಟಿಕೆಯ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.

ಕೈಗಾರಿಕೆ, ವ್ಯಾಪಾರ ಹಾಗೂ ಸೇವಾ ವಲಯಕ್ಕೆ ₹ 318.86 ಕೋಟಿ ಸಾಲ ವಿತರಣೆಯಾಗಿದ್ದು, ಒಟ್ಟು ₹ 1,603.83 ಕೋಟಿ ಸಾಲ ವಿತರಣೆಯಾಗಿದೆ. ಶೇ 36ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಸಮರ್ಪಕ ಭೂದಾಖಲೆಗಳ ಕೊರತೆ, ಸಾಲ ಮರು ಪಾವತಿಯಲ್ಲಿ ವಿಳಂಬ ಹಾಗೂ ಇನ್ನಿತರ ಗಂಭೀರ ಸಮಸ್ಯೆಗಳ ಹೊರತಾಗಿಯೂ, ಜಿಲ್ಲೆಯ ಎಲ್ಲಾ ಬ್ಯಾಂಕುಗಳು, ಕೃಷಿ ಕ್ಷೇತ್ರ ಹಾಗೂ ಇನ್ನಿತರ ವಲಯಗಳ ಅಭಿವೃದ್ಧಿಯ ದೃಷ್ಟಿಯಿಂದ ರೈತರಿಗೆ ಸಕಾಲಕ್ಕೆ ಗರಿಷ್ಠ ಸಾಲ ವಿತರಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕುಗಳು ಸಹಕರಿಸಿ ನಿಗದಿತ ಸಾಲ ವಿತರಣೆಯ ಗುರಿಯಲ್ಲಿ ಕನಿಷ್ಠ ಶೇ 80 ಸಾಧನೆ ಮಾಡಬೇಕು ಎಂದು ಸೂಚಿಸಿದರು.

ಸರ್ಕಾರದ ಯಾವುದೇ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಇಲಾಖೆ ಮುಖ್ಯಸ್ಥರು ನೈಜ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸಾಲ ಒದಗಿಸಬೇಕು ಎಂದು ನಾಣಯ್ಯ ಹೇಳಿದರು.

ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಮಾತನಾಡಿ, ಜಿಲ್ಲೆ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದಿದೆ. ಇದನ್ನು ಉಳಿಸಿಕೊಳ್ಳಬೇಕಾದರೆ ಬ್ಯಾಂಕ್‌ ಹಾಗೂ ಸರ್ಕಾರಿ ಇಲಾಖೆಗಳು ಬಹಳಷ್ಟು ಶ್ರಮ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೃಷಿ ಭೂಮಿ ಹೆಚ್ಚು ಪಾಳು ಬೀಳುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಜಿಲ್ಲೆ ಕೃಷಿ ರಹಿತ ಜಿಲ್ಲೆಯಾಗಲಿದೆ. ಗಂಭೀರ ಸ್ಥಿತಿ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಇನ್ನಿತರ ವಲಯಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಕೃಷಿ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಕೃಷಿ ಕ್ಷೇತ್ರವನ್ನು ಉಳಿಸುವ ಹಾಗೂ ಸಮೃದ್ಧವಾಗಿ ಬೆಳೆಸುವಲ್ಲಿ ಎಲ್ಲರೂ ಗಂಭೀರ
ಚಿಂತನೆ ಮಾಡಬೇಕು ಎಂದು ಸೂಚಿಸಿದರು.

ಕಾರ್ಪೊರೇಷನ್ ಬ್ಯಾಂಕಿನ ಮೈಸೂರಿನ ವಲಯ ಕಚೇರಿಯ ಸಹಾಯಕ ಮಹಾ ಪ್ರಬಂಧಕ ರಾಮಚಂದ್ರ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ಬಂಗಾರು ಗುಪ್ತ, ಭಾರತೀಯ ರಿಸರ್ವ್ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ವಿದ್ಯಾಸಾಗರ್, ಡಾ.ಸುರೇಶ್ ಹಾಜರಿದ್ದರು.

* *

ಕೊಡಗು ಜಿಲ್ಲೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಅಂತರ ಹೆಚ್ಚಾಗಿದೆ; ಬ್ಯಾಂಕ್‌ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಈ ಅಂತರ ಕಡಿಮೆ ಮಾಡಬಹುದು
 ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಡಿ.ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT