ತುಮಕೂರು

ಕಡಿಮೆ ಖರ್ಚು, ಹೆಚ್ಚು ಆರೋಗ್ಯ

‘ಬೆಳೆಗಳಿಗೆ ಹೆಚ್ಚೆಚ್ಚು ಸಾರಜನಕದ ಅವಶ್ಯಕತೆ ಇದ್ದು ವಾತಾವರಣದಲ್ಲಿ ಶೇ 78 ಸಾರಜನಕ ಲಭ್ಯವಿದೆ.

ಪ್ರಗತಿ ಪರ ರೈತ ಮಹೇಶ್ ಬೆಳೆದಿರುವ ಭತ್ತದ ಗದ್ದೆಯನ್ನು ರೈತರು ವೀಕ್ಷಿಸಿದರು

ತುಮಕೂರು: ‘ಕೃಷಿಯಲ್ಲಿ ಸಾವಯವ ನೈಸರ್ಗಿಕ ವಿಧಾನ ಬಳಸುವುದರಿಂದ ರೈತರ ಖರ್ಚು ಕಡಿಮೆ ಆಗುವುದರ ಜತೆಗೆ, ಆಹಾರ ಬೆಳೆಗಳು ವಿಷಮುಕ್ತವಾಗಿರುವುದರಿಂದ ಆರೋಗ್ಯ ಹೆಚ್ಚಿಸಿಕೊಳ್ಳಬಹುದು’ ಎಂದು ಶೂನ್ಯ ಬಂಡವಾಳ ನೈಸರ್ಗಿಕ ಆಂದೋಲನ ವೇದಿಕೆಯ ಪ್ರಸನ್ನಮೂರ್ತಿ ಹೇಳಿದರು.

ತಾಲ್ಲೂಕಿನ ಹೆಬ್ಬೂರು ಹೋಬಳಿಯ ಚನ್ನಿಗಪ್ಪನಪಾಳ್ಯದ ಪ್ರಗತಿಪರ ರೈತ ಮಹೇಶ್‌ ಅವರ ಜಮೀನಿನಲ್ಲಿ ಮಂಗಳವಾರ ನಡೆದ ಭತ್ತದ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

‘ಭತ್ತದ ಕೃಷಿಯನ್ನು ಬಹಳ ಸುಲಭವಾದ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಬಹಳ ಕಡಿಮೆ ಖರ್ಚಿನಿಂದ ಮಾಡಬಹುದಾಗಿದೆ. ಆದರೆ ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡುತ್ತಾ ಹೆಚ್ಚೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ’ ಎಂದರು.

‘ಭತ್ತ ಹುಲ್ಲಿನ ಜಾತಿಯ ಗಿಡವಾಗಿದ್ದು, ಕಾಲು ಕೆ.ಜಿ ಭತ್ತದ ಬೀಜವನ್ನು ಹಾಕಿ 2 ಟನ್‌ ಭತ್ತವನ್ನು ಬೆಳೆಯಬಹುದಾಗಿದೆ. ಬೀಜದ ಪೂರೈಕೆಯಾಗುತ್ತಿಲ್ಲ ಎಂದು ಹೋರಾಡುವುದನ್ನು ಬಿಟ್ಟು ರೈತರು ಇಂತಹ ವಿಧಾನಗಳ ಬಗ್ಗೆ ತಿಳಿದುಕೊಂಡು ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕಾಗಿದೆ’ ಎಂದರು.

‘ಬೆಳೆಗಳಿಗೆ ಹೆಚ್ಚೆಚ್ಚು ಸಾರಜನಕದ ಅವಶ್ಯಕತೆ ಇದ್ದು ವಾತಾವರಣದಲ್ಲಿ ಶೇ 78 ಸಾರಜನಕ ಲಭ್ಯವಿದೆ. ಆದರೆ ಇದನ್ನು ಭೂಮಿಯಲ್ಲಿ ಸೇರಿಸಬೇಕಾದರೆ ಸಾರಜನಕ ಯಥೇಚ್ಚವಾಗಿರುವ ಬೇವು, ಹೊಂಗೆ, ಎಕ್ಕೆ ಸೊಪ್ಪುಗಳನ್ನು ಗದ್ದೆಯಲ್ಲಿ ಹಾಕಿ ತುಳಿಯಬೇಕು. ಇಲ್ಲವೇ ಭತ್ತ ಕಟಾವಿನ ನಂತರ ದ್ವಿದಳ ದಾನ್ಯಗಳನ್ನು ಬೆಳೆದು ನಂತರ ಅವನ್ನು ಅಲ್ಲಿಯೇ ತುಳಿಯುವುದರಿಂದಲೂ ಭೂಮಿಯಲ್ಲಿ ಸಾರಜನಕದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು’ ಎಂದರು.

ರೈತರು ಭತ್ತಕ್ಕೆ ಹೆಚ್ಚು ನೀರು ಬೇಕು ಎನ್ನುವ ಭ್ರಮೆಯಲ್ಲಿದ್ದು, ಗದ್ದೆಯಲ್ಲಿ ಹೆಚ್ಚು ನೀರನ್ನು ನಿಲ್ಲಿಸಿರುತ್ತಾರೆ. ಹೀಗೆ ಮಾಡುವುದನ್ನು ಬಿಟ್ಟು ಸ್ವಲ್ಪ ನೀರನ್ನು ಮಾತ್ರ ನಿಲ್ಲಿಸಿದರೆ ಗದ್ದೆಯಲ್ಲಿ ಪಾಚಿ ಕೂಡ ಬೆಳೆದು ಭೂಮಿಯಲ್ಲಿ ಸಾರಜನಕದ ಪ್ರಮಾಣ ಹೆಚ್ಚಿಸಲು ಸಹಾಯವಾಗುತ್ತದೆ. ಮತ್ತು ಜಾಸ್ತಿ ನೀರು ನಿಲ್ಲಿಸುವುದರಿಂದ ಭತ್ತದ ಕಾಂಡಗಳು ಮೃದುವಾಗಿ, ಗಾಳಿಗೆ ಮಗುಚಿಕೊಳ್ಳುತ್ತವೆ’ ಎಂದರು.

‘15 ದಿನಕ್ಕೊಮ್ಮೆ ಭತ್ತಕ್ಕೆ ಜೀವಾಮೃತ ನೀಡುವುದರಿಂದ ಭತ್ತಕ್ಕೆ ಬೇರೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಹಾಕಬೇಕಾದ ಅವಶ್ಯಕತೆ ಇರುವುದಿಲ್ಲ. ಭತ್ತದ ಭಿತ್ತನೆಯಿಂದ ಕಟಾವಿನವರೆಗೆ 200 ಲೀಟರ್‌ನಂತೆ 8 ಬಾರಿ ಜೀವಾಮೃತ ನೀಡಬೇಕು’ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರ ಕುಮಾರ್‌, ಹೆಬ್ಬೂರು ಕೃಷಿ ಅಧಿಕಾರಿ ರಹೀಂ ಶರೀಫ್‌, ರೈತ ಸಂಘದ ಗುಬ್ಬಿ ತಾಲ್ಲೂಕು ಘಟಕದ ಅಧ್ಯಕ್ಷ ನಿಜಾನಂದ ಮೂರ್ತಿ ಇದ್ದರು.

38 ಗುಂಟೆ ಜಮೀನು; 2 ಟನ್‌ಗಿಂತ ಜಾಸ್ತಿ ಭತ್ತ
‘ಒಂದು ತರಬೇತಿ ಕಾರ್ಯಕ್ರಮದಲ್ಲಿ ಪ್ರಸನ್ನಮೂರ್ತಿ ಹೇಳಿದ ಮಾತಿನಿಂದ ಪ್ರಭಾವಿತನಾಗಿ ನಾನು ಕಳೆದ ವರ್ಷವೂ ಭತ್ತ ಬೆಳೆದಿದ್ದೆ ಆದರೆ ಕಡಿಮೆ 1 ಅಡಿ ಅಂತರದಲ್ಲಿ ಬೆಳೆದಿದ್ದರಿಂದ ಹೆಚ್ಚು ಎತ್ತರ ಬೆಳೆದಿರಲಿಲ್ಲ. ಮತ್ತು ಭತ್ತದ ಕಾಂಡಗಳು ಹೆಚ್ಚು ದಪ್ಪ ಬೆಳೆಯದ ಪರಿಣಾಮ ಗಾಳಿ ಬಂದಾಗ ಮಗುಚಿಬಿದ್ದು ನಷ್ಟವಾಗಿತ್ತು’ ಎಂದು ಪ್ರಗತಿ ಪರ ರೈತ ಮಹೇಶ್‌ ಹೇಳಿದರು.

ಆದರೆ ಈ ಬಾರಿ 1 ಕಾಲು ಅಡಿ ಅಂತರದಲ್ಲಿ ‘ರಾಜಮುಡಿ’ ನಾಟಿ ಮಾಡಿದ್ದರಿಂದ 6 ಅಡಿಗಿಂತ ಜಾಸ್ತಿ ಎತ್ತರ ಬೆಳೆದಿದೆ. 38 ಗುಂಟೆ ಜಮೀನಿನಲ್ಲಿ ಭತ್ತ ಬೆಳೆದಿದ್ದು 26 ಚೀಲ ಭತ್ತ ಸಿಗಲಿದೆ. ಒಂದು ಚೀಲ ಸುಮಾರು 86 ಕೆ.ಜಿ ತೂಗಲಿದ್ದು ಒಟ್ಟು ಸುಮಾರು 2 ಟನ್‌ ಭತ್ತವನ್ನು ಪಡೆಯಲಿದ್ದೇನೆ ಎಂದರು. ‘ಕೇವಲ ₹ 20 ಸಾವಿರ ಖರ್ಚು ಮಾಡಿ ಸುಮಾರು ₹ 1 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸಲಿದ್ದೇನೆ’ ಎಂದರು.

ಗಳಿಸುವುದು ಮಾತ್ರವಲ್ಲ, ಉಳಿಸುವುದೂ ಆದಾಯವೇ
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾದೇವಿ ಮಾತನಾಡಿ ಮಾತನಾಡಿ, ‘ರೈತರು ಆದಾಯವೆಂದರೆ ಕೇವಲ ಗಳಿಸುವುದು ಮಾತ್ರ ಎಂದು ತಿಳಿದುಕೊಂಡಿದ್ದಾರೆ. ಆದರೆ ಅವಶ್ಯವಿದ್ದಲ್ಲಿ ಆದಷ್ಟು ಹಣವನ್ನು ಉಳಿಸುವುದು ಕೂಡ ಆದಾಯವೇ ಆಗಿರುತ್ತದೆ’ ಎಂದರು.

‘ಮೊದಲೆಲ್ಲಾ ಕೃಷಿ ವ್ಯವಸ್ಥೆ ಬಹಳ ವ್ಯವಸ್ಥಿತವಾಗಿಯೇ ಇತ್ತು. ಆದರೆ ಇತ್ತೀಚೆಗೆ ಕೃಷಿ ಇಳುವರಿ ಹೆಚ್ಚಿಸಲು ಕೈಗೊಂಡ ಕೆಲವು ಸುಧಾರಣೆಗಳಿಂದ ಇರಬಹುದು ಅಥವಾ ನಮ್ಮಲ್ಲಿ ಹೆಚ್ಚಿರುವ ಸೋಮಾರಿತನದಿಂದ ಕೃಷಿ ಯಾಂತ್ರೀಕರಣಗೊಂಡಿದ್ದು ರೈತರು ಹೆಚ್ಚೆಚ್ಚು ಬಂಡವಾಳ ಹೂಡಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ತುಮಕೂರು: ಸೆರೆಯಾದ ಚಿರತೆ ಬನ್ನೇರುಘಟಕ್ಕೆ

ಮನೆಯಲ್ಲಿ ಅಡಗಿ ಕೂತಿತ್ತು
ತುಮಕೂರು: ಸೆರೆಯಾದ ಚಿರತೆ ಬನ್ನೇರುಘಟಕ್ಕೆ

20 Jan, 2018
ಅಡುಗೆ ಕೋಣೆಯ ಸಜ್ಜಾ ಮೇಲೆ ಅಡಗಿ ಕುಳಿತಿದ್ದ ಚಿರತೆಗೆ ತಜ್ಞರಿಂದ ಅರವಳಿಕೆ; ಕಾರ್ಯಾಚರಣೆ ಯಶಸ್ವಿ

ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ ಸೆರೆ
ಅಡುಗೆ ಕೋಣೆಯ ಸಜ್ಜಾ ಮೇಲೆ ಅಡಗಿ ಕುಳಿತಿದ್ದ ಚಿರತೆಗೆ ತಜ್ಞರಿಂದ ಅರವಳಿಕೆ; ಕಾರ್ಯಾಚರಣೆ ಯಶಸ್ವಿ

20 Jan, 2018
ಭೈರವೇಶ್ವರನಿಗೆ ಮದ್ಯಾರಾಧನೆ!

ಹುಲಿಯೂರುದುರ್ಗ
ಭೈರವೇಶ್ವರನಿಗೆ ಮದ್ಯಾರಾಧನೆ!

20 Jan, 2018
ಮಾವಿನ ಬೆಳೆಗೆ ಬೂದಿರೋಗ

ಗುಬ್ಬಿ
ಮಾವಿನ ಬೆಳೆಗೆ ಬೂದಿರೋಗ

20 Jan, 2018
ಮತ ದೃಢೀಕರಣಕ್ಕೆ ’ವಿವಿ ಪ್ಯಾಟ್ ’

ತುಮಕೂರು
ಮತ ದೃಢೀಕರಣಕ್ಕೆ ’ವಿವಿ ಪ್ಯಾಟ್ ’

19 Jan, 2018