ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಭಾಗ್ಯ’ ರೈತರಿಗೆ ವರದಾನ

Last Updated 22 ನವೆಂಬರ್ 2017, 9:25 IST
ಅಕ್ಷರ ಗಾತ್ರ

ವಿಜಯಪುರ: ಬರದಿಂದ ತತ್ತರಿಸುತ್ತಿದ್ದ ಜಿಲ್ಲೆಯ ರೈತರ ಪಾಲಿಗೆ ‘ಕೃಷಿ ಭಾಗ್ಯ’ ಯೋಜನೆ ವರದಾನವಾಗಿದೆ. ನಾಲ್ಕು ವರ್ಷದ ಅವಧಿಯಲ್ಲಿ 16,066 ಕೃಷಿ ಹೊಂಡಗಳನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ಮೂಲಕ ರೈತರ ಹೊಲದಲ್ಲಿ ನಿರ್ಮಿಸಿದ್ದು, ಬಹುತೇಕ ಹೊಂಡಗಳು ಇದೀಗ ನೀರಿನಿಂದ ತುಂಬಿ ತುಳುಕುತ್ತಿವೆ.

ವಿಜಯಪುರ ತಾಲ್ಲೂಕಿನಲ್ಲಿ 3,253, ಇಂಡಿ–3,901, ಸಿಂದಗಿ–3,157, ಬಸವನಬಾಗೇವಾಡಿ–3,130, ಮುದ್ದೇಬಿಹಾಳ ತಾಲ್ಲೂಕಿನಲ್ಲಿ 2,625 ಕೃಷಿ ಹೊಂಡಗಳನ್ನು ₹ 155.87 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಮೂಲಗಳು ದೃಢಪಡಿಸಿವೆ.

‘ಕೃಷಿ ಹೊಂಡಗಳ ನಿರ್ಮಾಣದಿಂದ ಮಳೆ ನೀರು ಸಂಗ್ರಹಣೆಯಾಗಿ ರೈತರಲ್ಲಿ ಆತ್ಮವಿಶ್ವಾಸ ತುಂಬಿದೆ. ಕೃಷಿ, ತೋಟಗಾರಿಕೆ ಬೆಳೆಗಳಿಗೆ ಈ ಹೊಂಡಗಳ ನೀರು ಅತ್ಯಂತ ಉಪ ಯುಕ್ತ. ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಇದು ಸ್ಥಿರ ಇಳುವರಿ ನೀಡುವಲ್ಲಿಯೂ ಸಹಕಾರಿ’ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್‌ ತಿಳಿಸಿದರು.

‘2014-15ರಿಂದ ಯೋಜನೆ ಆರಂಭಗೊಂಡಿದೆ. ರೈತರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ, ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚಿನ ಕೃಷಿ ಹೊಂಡಗಳನ್ನು ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ’ ಎಂದು ಅವರು ಹೇಳಿದರು.

‘ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಳ್ಳುವ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ 90, ಸಾಮಾನ್ಯ ವರ್ಗದ ರೈತ ರಿಗೆ ಶೇ 80ರಷ್ಟು ಸಹಾಯಧನ ನಿಗದಿಪಡಿಸಲಾಗಿದೆ. ಪ್ರಾಣ ಹಾನಿ ತಡೆಯಲು ಮುನ್ನೆಚ್ಚರಿಕೆಯಾಗಿ ತಂತಿ ಬೇಲಿ ನಿರ್ಮಾಣಕ್ಕಾಗಿ ₹ 16,000 ಸಹಾಯ ಧನವನ್ನು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನೀಡುತ್ತಿದೆ. ಫೆಬ್ರುವರಿ, ಮಾರ್ಚ್‌, ಏಪ್ರಿಲ್, ಮೇ ತಿಂಗಳಲ್ಲಿ ರೈತರಿಗೆ ಈ ಕೃಷಿ ಹೊಂಡಗಳು ಅತ್ಯಂತ ಉಪಯುಕ್ತವಾಗಿ ನೆರವಾಗಲಿವೆ’ ಎಂದು ಅವರು ಮಾಹಿತಿ ನೀಡಿದರು.

ಸಂಕಷ್ಟದಲ್ಲಿ ಆಸರೆ: ‘ಕೃಷಿ ಹೊಂಡ ನಿರ್ಮಿಸಿಕೊಂಡಿರುವೆ. ಇದೀಗ ಅದರಲ್ಲಿ ನೀರು ತುಂಬಿದೆ. ಈ ನೀರನ್ನು ಬೇಸಿಗೆ ಇಲ್ಲವೇ ಮಳೆ ಕೊರತೆಯಾದಾಗ ಬೆಳೆಗೆ ಹರಿಸಿ, ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ದ್ರಾಕ್ಷಿ, ಮೆಕ್ಕೆಜೋಳ, ಕಡಲೆ, ಉದ್ದು, ತೊಗರಿ ಸೇರಿದಂತೆ ತರಕಾರಿ ಬೆಳೆಗಳಿಗೆ ಸಂಕಷ್ಟದ ಸಮಯದಲ್ಲಿ ಹೊಂಡದ ನೀರು ಹಾಯಿಸಿದೆ’ ಎಂದು ತೊರವಿಯ ಅಮಗೊಂಡ ಮಾಲಗಾರ ತಿಳಿಸಿದರು.

‘ಕೃಷಿ ಹೊಂಡ ಅತ್ಯಂತ ಉಪಯುಕ್ತವಾಗಿದೆ. ಹೊಂಡದಲ್ಲಿ ನೀರು ತುಂಬುವ ಮುನ್ನ 300 ಜಿಎಸ್ಎಂ ಪಾಲಿಥಿನ್ ಲೈನಿಂಗ್ ಹಾಳೆ ಹಾಸುವುದರಿಂದ ಭೂಮಿಯೊಳಗೆ ನೀರು ಇಂಗುವುದು ತಪ್ಪಿದೆ. ನಾಲ್ವರು ರೈತರು ಒಟ್ಟಾಗಿ ಸಬ್ಸಿಡಿ ದರದಲ್ಲಿ ಡೀಸೆಲ್‌ ಎಂಜಿನ್ ಕೂರಿಸಿಕೊಂಡಿದ್ದು, ವಿದ್ಯುತ್‌ ಸಮಸ್ಯೆ ಬಾಧಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಮಳೆ ಕೊರತೆಯಾದ ಸಂದರ್ಭ ಬೆಳೆಗೆ ನೀರು ಹರಿಸಿಕೊಂಡಿದ್ದೇವೆ.

ಪೈಪ್‌ಲೈನ್‌ ಮೂಲಕ ಹೊಲಕ್ಕೆ ನೀರು ಹರಿಸಿದ್ದು, ಸರ್ಕಾರದ ಸಹಾಯಧನದಲ್ಲಿ ಕೃಷಿ ಹೊಂಡದ ನಿರ್ಮಾಣದ ಜತೆಗೆ ಸ್ಪ್ರಿಂಕ್ಲರ್ ಸೌಲಭ್ಯ ನೀಡಿದ್ದು, ನೀರಿನ ಉಳಿತಾಯಕ್ಕೆ ಸಹಕಾರಿಯಾಗಿದೆ’ ಎಂದು ತೊರವಿಯ ಸುಭಾಸ ಬಾಬುಗೌಡ ಶಿವಗೊಂಡ, ಗೂಳಪ್ಪ ಪೂಜಾರಿ, ಅತಾಲಟ್ಟಿಯ ರೈತ ರುಕ್ಮುದ್ದೀನ್ ಮುಲ್ಲಾ ತಮ್ಮ ಅನಿಸಿಕೆ ಹಂಚಿಕೊಂಡರು.

* * 

ಕೃಷಿ ಭಾಗ್ಯ ಯೋಜನೆಯಡಿಯ ಕೃಷಿ ಹೊಂಡಗಳು, ಕೃಷಿಯಲ್ಲಿ ಸ್ಥಿರ ಇಳುವರಿಗೆ ನೆರವಾಗಿದ್ದು, ರೈತರಲ್ಲಿ ಆತ್ಮಸ್ಥೈರ್ಯ ತುಂಬಿವೆ
ಡಾ.ಬಿ.ಮಂಜುನಾಥ್
 ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT