ಕಿಂಡಲ್ ಇ–ಬುಕ್ ರೀಡರ್‌; ಕನ್ನಡ ಬೇಡವಂತೆ

ಅಮೆಜಾನ್‌ನವರ ಕಿಂಡಲ್ ಇ–ಬುಕ್ ರೀಡರ್‌ನಲ್ಲಿ ಕನ್ನಡದ ಬೆಂಬಲವಿದೆ. ಆದರೆ ಅವರು ಕನ್ನಡ ಪುಸ್ತಕ ನೀಡುತ್ತಿಲ್ಲ...

ಕಿಂಡಲ್ ಇ–ಬುಕ್ ರೀಡರ್‌; ಕನ್ನಡ ಬೇಡವಂತೆ

ಪುಸ್ತಕಗಳು ತಾಳೆಗರಿಗಳಿಂದ ಮುಂದುವರೆದು ಕಾಗದ ಮುದ್ರಣ ಹಂತವನ್ನು ದಾಟಿ ಈಗ ವಿದ್ಯುನ್ಮಾನ ಮಾಧ್ಯಮದ ಮೂಲಕ ವಿ-ಪುಸ್ತಕವಾಗಿ (e-book) ಅವತಾರ ತಾಳಿದೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಲಭ್ಯವಿರುವ ಪುಸ್ತಕವನ್ನು ವಿ-ಪುಸ್ತಕ ಅಥವಾ ಇ-ಬುಕ್ ಎನ್ನುತ್ತಾರೆ. ಅದರಲ್ಲಿ ಪಠ್ಯದ ಜೊತೆ ಚಿತ್ರಗಳೂ ಇರಬಹುದು. ಇವುಗಳನ್ನು ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳಲ್ಲಿ ಓದಬಹುದು. ಇವೆಲ್ಲ ಅಲ್ಲದೆ ಇಂತಹ ಪುಸ್ತಕಗಳನ್ನು ಓದಲೆಂದೇ ಇ-ಬುಕ್ ರೀಡರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಅಮೆಜಾನ್ ಕಿಂಡಲ್ ತುಂಬ ಪ್ರಸಿದ್ಧ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಮೆಜಾನ್ ಕಿಂಡಲ್ ಪೇಪರ್‌ವೈಟ್ (Amazon Kindle Paperwhite) ಎಂಬ ಇ–ಬುಕ್ ರೀಡರ್ ಅನ್ನು.

ಗುಣವೈಶಿಷ್ಟ್ಯಗಳು

6 ಇಂಚಿನ ಪರದೆ, 300 ppi ರೆಸೊಲ್ಯೂಶನ್, 169 x 117 x 9.1 ಮಿ.ಮೀ. ಗಾತ್ರ, ವೈಫೈ ಹಾಗೂ 3ಜಿ ಸಂಪರ್ಕ, 4 ಗಿಗಾಬೈಟ್ ಮೆಮೊರಿ, ಯುಎಸ್‌ಬಿ ಕಿಂಡಿ, ಸ್ವಂತ ಬೆಳಕು. ಬೆಲೆ ₹10,999.

ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಕೈಯಲ್ಲಿ ಹಿಡಿದಾಗಿನ ಅನುಭವ ಉತ್ತಮವಾಗಿದೆ. ಪರದೆಯ ಗುಣಮಟ್ಟವೂ ಚೆನ್ನಾಗಿದೆ. ಬ್ಯಾಟರಿ ತುಂಬ ಕಾಲ ಬಾಳಿಕೆ ಬರುತ್ತದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ವಾರಗಳ ಕಾಲ ಬಳಸಬಹುದು. ವಿ-ಪುಸ್ತಕಗಳನ್ನು ಟ್ಯಾಬ್ಲೆಟ್‌ಗಳಲ್ಲೂ ಓದಬಹುದು. ಆದರೆ ಇ–ಬುಕ್ ರೀಡರ್‌ಗಳಲ್ಲಿ ಬಳಸಿರುವ ವಿಶೇಷ ತಂತ್ರಜ್ಞಾನದಿಂದಾಗಿ ರಾತ್ರಿ ಹೊತ್ತು ಕತ್ತಲೆಯಲ್ಲಿ ವಿ-ಪುಸ್ತಕಗಳನ್ನು ಓದುವಾಗ ಕಣ್ಣಿಗೆ ಶ್ರಮವಾಗುವುದಿಲ್ಲ. ಈ ತಂತ್ರಜ್ಞಾನ ಟ್ಯಾಬ್ಲೆಟ್‌ಗಳಲ್ಲಿಲ್ಲ. ಅಕ್ಷರಗಳ ಗಾತ್ರವನ್ನು ದೊಡ್ಡದು ಅಥವಾ ಚಿಕ್ಕದು ಮಾಡಬಹುದು. ಪುಟಗಳನ್ನು ಪುಸ್ತಕದ ಮಾದರಿಯಲ್ಲೇ ತಿರುವಬಹುದು. ಅಕ್ಷರಗಳ ಗಾತ್ರ ದೊಡ್ಡದು ಅಥವಾ ಚಿಕ್ಕದು ಮಾಡಿದಾಗ ಸಾಲುಗಳು ಮುಂದಕ್ಕೆ ಹೊರಳುತ್ತವೆ (wordwrap). ಇದರಲ್ಲಿ ಟಿಪ್ಪಣಿ ಮಾಡುವುದು, ಬುಕ್‌ಮಾರ್ಕ್ ಮಾಡುವ ಸವಲತ್ತುಗಳೂ ಇವೆ.

4 ಗಿಗಾಬೈಟ್ ಮೆಮೊರಿ ಇದೆ. ವಸುಧೇಂದ್ರರ 228 ಪುಟಗಳಿರುವ ‘ಐದು ಪೈಸೆ ವರದಕ್ಷಿಣೆ’ ಪುಸ್ತಕದ ಅಮೆಜಾನ್ ಕಿಂಡಲ್ ಆವೃತ್ತಿ ಕೇವಲ 171 ಕಿಲೋಬೈಟ್‌ಗಳಷ್ಟಿದೆ. 1024 ಕಿಲೋಬೈಟ್ = 1 ಮೆಗಾಬೈಟ್. 1024 ಮೆಗಾಬೈಟ್ = 1 ಗಿಗಾಬೈಟ್. ಒಂದು ಕಿಂಡಲ್‌ನಲ್ಲಿ ಎಷ್ಟು ಪುಸ್ತಕಗಳನ್ನು ಇಟ್ಟುಕೊಳ್ಳಬಹುದು ಎಂದು ನೀವೇ ಲೆಕ್ಕ ಹಾಕಿಕೊಳ್ಳಿ. ಪ್ರಯಾಣ ಕಾಲದಲ್ಲಿ ಪುಸ್ತಕಗಳನ್ನು ಇ–ಬುಕ್ ರೀಡರ್‌ನಲ್ಲಿ ಹಾಕಿಕೊಂಡು ಹೋಗುವುದು ಮತ್ತು ಓದುವುದು ದಪ್ಪ ದಪ್ಪ ಪುಸ್ತಕಗಳನ್ನು ಹೊರುವುದಕ್ಕಿಂತ ತುಂಬ ಅನುಕೂಲಕರ.

ಕಿಂಡಲ್‌ನಲ್ಲಿ ಹಲವು ನಮೂನೆಯ ಫೈಲ್‌ಗಳನ್ನು ತೆರೆಯಬಹುದು. ಪ್ರಮುಖವಾಗಿ ಅವರದೇ ಆದ AZW3 ಮತ್ತು AZW, MOBI, ಪಿಡಿಎಫ್, ಪಠ್ಯ, ಇತ್ಯಾದಿ. ನಿಮ್ಮದೇ ಪುಸ್ತಕಗಳನ್ನು ನೀವು ಅವರ ಫೈಲ್ ನಮೂನೆಗೆ ಗಣಕದಲ್ಲಿ ಪರಿವರ್ತಿಸಿ ಯುಎಸ್‌ಬಿ ಕೇಬಲ್ ಮೂಲಕ ಕಿಂಡಲ್‌ಗೆ ವರ್ಗಾಯಿಸಿ ಓದಬಹುದು. ಇಮೇಲ್ ಮೂಲಕವೂ ನಿಮ್ಮ ಸಾಧನಕ್ಕೆ ಕಳುಹಿಸಬಹುದು. ಪಿಡಿಎಫ್ ಪುಸ್ತಕವಾದರೆ ಸಾಲುಗಳು ಹೊರಳುವುದಿಲ್ಲ.

ಅಮೆಜಾನ್‌ ಜಾಲತಾಣದಲ್ಲಿ ಕಿಂಡಲ್‌ಪುಸ್ತಕಗಳಿಗೆ ಪ್ರತ್ಯೇಕ ವಿಭಾಗವಿದೆ, ಅದರಲ್ಲಿ ಸಾವಿರಾರು ಪುಸ್ತಕಗಳಿವೆ. ಅವುಗಳನ್ನು ಕೊಂಡುಕೊಂಡು ನಿಮ್ಮ ಸಾಧನಕ್ಕೆ ಇಳಿಸಿಕೊಂಡು ಓದಬಹುದು. ಹಲವಾರು ಉಚಿತ ಪುಸ್ತಕಗಳೂ ಇವೆ. ಈ ಜಾಲತಾಣದಲ್ಲಿ ನೀವು ಖರೀದಿಸಿದ ಪುಸ್ತಕಗಳನ್ನು

ನಿಮ್ಮ ಗಣಕದಲ್ಲಿ (ಬ್ರೌಸರ್ ಮೂಲಕ), ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲೂ (ಆ್ಯಪ್ ಮೂಲಕ) ಓದಬಹುದು.

ಈ ಸಾಧನದಲ್ಲಿ ಕನ್ನಡದ ಬೆಂಬಲವಿದೆ. ಅಂದರೆ ಕನ್ನಡದ ವಿ-ಪುಸ್ತಕಗಳನ್ನೂ ಓದಬಹುದು. ನೀವು ಲೇಖಕರಾಗಿದ್ದರೆ ನಿಮ್ಮ ಪುಸ್ತಕವನ್ನು ಅಮೆಜಾನ್
ವಿ-ಪುಸ್ತಕವಾಗಿ (AZW3) ಅಥವಾ MOBI ಆಗಿ ಪರಿವರ್ತಿಸಿ ಸಾಧನಕ್ಕೆ ವರ್ಗಾಯಿದರೆ ಕಿಂಡಲ್‌ನಲ್ಲಿ ಓದಬಹುದು. ಪಠ್ಯದ ಗಾತ್ರ ದೊಡ್ಡದು ಅಥವಾ ಚಿಕ್ಕದು ಮಾಡುವುದು, ಹಾಗೆ ಮಾಡಿದಾಗ ಸಾಲುಗಳು ಹೊರಳುವುದು ಎಲ್ಲ ಸಾಧ್ಯ.

ಎಲ್ಲ ಓಕೆ, ಆದರೆ ಕನ್ನಡವಿಲ್ಲ ಯಾಕೆ?

ಅಮೆಜಾನ್ ಕಿಂಡಲ್ ಜಾಲತಾಣದಲ್ಲಿ ಲಭ್ಯವಿರುವ ಪುಸ್ತಕಗಳಲ್ಲಿ ಭಾರತೀಯ ಭಾಷೆಗಳ ಪುಸ್ತಕಗಳೂ ಇವೆ. ಆದರೆ ಅಲ್ಲಿ ಹಿಂದಿ, ತಮಿಳು, ಮರಾಠಿ, ಗುಜರಾತಿ ಮತ್ತು ಮಲಯಾಳಂ ಭಾಷೆಯ ಪುಸ್ತಕಗಳು ಮಾತ್ರವೇ ಇವೆ. ಸಾಧನವು ತಾಂತ್ರಿಕವಾಗಿ ಕನ್ನಡದ ಪುಸ್ತಕವನ್ನು ಓದಲು ಬೇಕಾದ ಎಲ್ಲ ಸವಲತ್ತುಗಳನ್ನು ಒಳಗೊಂಡಿದೆ. ಆದರೆ ಅಮೆಜಾನ್‌ನವರು ಮಾತ್ರ ಕನ್ನಡದ ಪುಸ್ತಕಗಳನ್ನು ನೀಡಿಲ್ಲ. ಅಮೆಜಾನ್ ಜಾಲತಾಣದಲ್ಲಿ ನಾವು ಪುಸ್ತಕ ಪ್ರಕಾಶಕ ಎಂದು ನೋಂದಾಯಿಸಿಕೊಂಡು ನಮ್ಮ ವಿ-ಪುಸ್ತಕಗಳನ್ನು ಮಾರಾಟಕ್ಕೆ ಇಡಬಹುದು. ಅಲ್ಲಿ ಸೇರಿಸುವ ಮೊದಲು ಪುಸ್ತಕವನ್ನು ಅವರ ನಮೂನೆಗೆ ಪರಿವರ್ತಿಸಬೇಕು. ತಾಂತ್ರಿಕವಾಗಿ ಕಿಂಡಲ್ ಸಾಧನವು ಕನ್ನಡ ಭಾಷೆಯನ್ನು ಬೆಂಬಲಿಸುತ್ತಿದೆ. ಆದರೆ ಅಮೆಜಾನ್‌ನವರು ತಮ್ಮ ಕಿಂಡಲ್ ಪುಸ್ತಕಗಳ ಜಾಲತಾಣದಲ್ಲಿ ಕನ್ನಡ ಪುಸ್ತಕಗಳನ್ನು ನೀಡುತ್ತಿಲ್ಲ. ನಾವೇ ಪ್ರಕಾಶಕರಾಗಿದ್ದು ನಮ್ಮ ಕನ್ನಡ ಪುಸ್ತಕವನ್ನು ಅಲ್ಲಿ ಸೇರಿಸುವ ಸೌಲಭ್ಯವನ್ನೂ ನೀಡಿಲ್ಲ. ವಸುಧೇಂದ್ರ ಅವರು ತಮ್ಮ ‘ಐದು ಪೈಸೆ ವರದಕ್ಷಿಣೆ’ ಪುಸ್ತಕವನ್ನು ಅಲ್ಲಿ ಸೇರಿಸಿದ್ದರು. ನಾಲ್ಕೇ ದಿನಗಳಲ್ಲಿ ಅದನ್ನು ಅಲ್ಲಿಂದ ತೆಗೆದುಹಾಕಿದ್ದರು. ಯಾಕೆ ತೆಗೆದಿದ್ದು ಎಂದು ಕೇಳಿದರೆ ಕಿಂಡಲ್‌ನಲ್ಲಿ ಕನ್ನಡದ ಬೆಂಬಲವಿಲ್ಲ ಎಂದರು. ಆದರೆ ನಾವು ಪರಿಶೀಲಿಸಿದಾಗ ಸಾಧನದಲ್ಲಿ ಕನ್ನಡದ ಬೆಂಬಲವಿದೆ ಎಂದು ತಿಳಿದುಬಂತು. ಇದರರ್ಥವೇನೆಂದರೆ ಅಮೆಜಾನ್‌ಗೆ ಕನ್ನಡದ ಪುಸ್ತಕಗಳನ್ನು ಮಾರುವ ಇಷ್ಟವಿಲ್ಲ, ಕನ್ನಡಿಗರು ಬೇಡ, ಕನ್ನಡದಿಂದ ಬರುವ ಹಣ ಬೇಡ ಎಂದು ನಾವು ತೀರ್ಮಾನಿಸಬಹುದು.

ಅಮೆಜಾನ್ ಪ್ರತಿನಿಧಿಯವರೊಂದಿಗೆ ಫೋನಿನಲ್ಲಿ ಮಾತನಾಡಿದಾಗ ಕನ್ನಡವನ್ನು ಸೇರಿಸುವ ಉದ್ದೇಶ ನಮಗಿದೆ, ಆದರೆ ಯಾವಾಗ ಎಂದು ಇದಮಿತ್ಥಂ ಆಗಿ ಹೇಳುವುದಿಲ್ಲ ಎಂದಿದ್ದಾರೆ.

ನಿಮಗೆ ಕನ್ನಡದ ವಿ-ಪುಸ್ತಕಗಳನ್ನು ಓದಬೇಕಿದ್ದರೆ ನೀವು ಯಾವುದೇ ಟ್ಯಾಬ್ಲೆಟ್ ಕೂಡ ಬಳಸಬಹುದು. ಅದರಲ್ಲಿ ಅಮೆಜಾನ್ ಕಿಂಡಲ್ ಆ್ಯಪ್ ಹಾಕಿಕೊಂಡು ಕಿಂಡಲ್ ವಿ-ಪುಸ್ತಕಗಳನ್ನು ಓದಬಹುದು. ಟ್ಯಾಬ್ಲೆಟ್‌ನಲ್ಲಿ ಓದಿದರೆ ಕಿಂಡಲ್ ಇ-ಬುಕ್ ರೀಡರ್‌ನಲ್ಲಿ ಓದಿದ ಅನುಭವ ಮಾತ್ರ ಬರುವುದಿಲ್ಲ.

***

ವಾರದ ಆ್ಯಪ್:  ಕವಣೆ

ಚಿಕ್ಕಂದಿನಲ್ಲಿ ಕವಣೆ ಬಳಸಿ ಆಟ ಆಡಿದ್ದು ನೆನಪಿರಬಹುದಲ್ಲವೇ? ನಿಮ್ಮ ಆ್ಯಂಡ್ರಾಯ್ಡ್ ಫೋನಿನಲ್ಲಿ ಕವಣೆ ಆಟ ಆಡಬೇಕೇ? ಹೌದಾದಲ್ಲಿ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ The Catapult ಎಂದು ಹುಡುಕಿ ಅಥವಾ http://bit.ly/gadgetloka304 ಜಾಲತಾಣಕ್ಕೆ ಭೇಟಿ ನೀಡಿ. ಇದು ತುಂಬ ಸರಳ ಆಟ. ಬಹುಮಟ್ಟಿಗೆ ಆ್ಯಂಗ್ರಿ ಬರ್ಡ್ಸ್‌ನ ಪ್ರಾಥಮಿಕ ಹಂತ ಇದ್ದಂತಿದೆ. ಎಡದ ಬದಿಯಲ್ಲಿ ಒಬ್ಬ ಆಟಗಾರ ಕವಣೆ ಇಟ್ಟುಕೊಂಡು ನಿಂತಿರುತ್ತಾನೆ. ಉಳಿದ ಖಾಲಿ ಜಾಗದಲ್ಲಿ ಎಲ್ಲಿ ಬೇಕಾದರೂ ಇದ್ದಕ್ಕಿದ್ದಂತೆ ಇನ್ನೊಬ್ಬ ಕವಣೆ ಇಟ್ಟುಕೊಂಡು ಪ್ರತ್ಯಕ್ಷನಾಗುತ್ತಾನೆ. ಆತ ಕವಣೆ ಬಳಸಿ ನಿಮ್ಮ (ನಿಮ್ಮ ಆಟಗಾರನ) ಮೇಲೆ ಕಲ್ಲು ಎಸೆಯುವ ಮೊದಲೇ ನೀವು ನಿಮ್ಮ ಕವಣೆಯಿಂದ ಕಲ್ಲು ಎಸೆದು ಆತನನ್ನು ಕೊಲ್ಲಬೇಕು. ಆಟ ಮುಂದುವರೆದಂತೆ ಒಂದಕ್ಕಿಂತ ಹೆಚ್ಚು ಎದುರಾಳಿಗಳು ಪ್ರತ್ಯಕ್ಷರಾಗುತ್ತಾರೆ. ಅಂತಹ ಅದ್ಭುತ ಆಟವೇನಲ್ಲ. ಸಮಯ ಕಳೆಯಲು ಸಾಕು. ಒಬ್ಬನೇ ಫೋನ್ ಜೊತೆ ಆಡಬಹುದು ಅಥವಾ ಇಬ್ಬರು ಆಡಬಹುದು.

***
ಗ್ಯಾಜೆಟ್ ಸುದ್ದಿ: ಐಫೋನ್‌ 10ನಲ್ಲಿರುವ ಮುಖಚಹರೆ ಪತ್ತೆಯನ್ನು ಸೋಲಿಸಿದ್ದು

ಹೊಸ ಐಫೋನ್ 10 ಫೋನಿನಲ್ಲಿ ಬಳಕೆದಾರರ ಮುಖವನ್ನೇ ಪಾಸ್‌ವರ್ಡ್ ಆಗಿಟ್ಟುಕೊಂಡು ಫೋನನ್ನು ಅನ್‌ಲಾಕ್ ಮಾಡಬಹುದು. ಇದು ತುಂಬ ಸುರಕ್ಷಿತ, ಇದರ ಕಣ್ಣಿಗೆ ಮಣ್ಣೆರಚಲು ಸಾಧ್ಯವೇ ಇಲ್ಲ ಎಂದು ಆಪಲ್ ಕಂಪೆನಿ ಹೇಳಿಕೊಂಡಿದೆ.

ನೀವು ಮುಖವಾಡ ಅಥವಾ ಮೂರು ಆಯಾಮಗಳಲ್ಲಿ ಮುದ್ರಿಸಿದ ಮುಖದ ಪ್ರತಿಕೃತಿ ಬಳಸಿಯೂ ಇದನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರ ಅಂಬೋಣ. ಆದರೆ ಫಿಲಿಪ್ಪೀನ್ಸ್‌ನ ವಿಜ್ಞಾನಿಗಳು ಐಫೋನ್ 10ಗೆ ಮೋಸ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಅವರು ಮೂರು ಆಯಾಮಗಳಲ್ಲಿ ಮುದ್ರಿಸಿದ ಮುಖವಾಡ ಬಳಸಿ ಫೋನನ್ನು ಅನ್‌ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

***

ಗ್ಯಾಜೆಟ್ ತರ್ಲೆ

ಬಾಡಿಗೆಗೆ ಮನೆ ಹುಡುಕುವಾಗ ಮಾಡಬೇಕಾದ ಒಂದು ಪ್ರಮುಖ ಕೆಲಸವೆಂದರೆ ನಿಮ್ಮ ಮೊಬೈಲ್ ಫೋನ್ ಅನ್ನು ಕೈಯಲ್ಲಿ ಹಿಡಿದುಕೊಂಡು ಮನೆಯ ಎಲ್ಲ ಭಾಗಗಳಲ್ಲೂ ಮೊಬೈಲ್ ಸಿಗ್ನಲ್, 3ಜಿ, 4ಜಿ, ವೋಲ್ಟೆ ಎಲ್ಲ ಸರಿಯಾಗಿ ಬರುತ್ತಿವೆಯೇ ಎಂದು ಪರಿಶೀಲಿಸುವುದು.

***

ಗ್ಯಾಜೆಟ್ ಸಲಹೆ

ರೋಹನರ ಪ್ರಶ್ನೆ: ಗೂಗಲ್‌ ಡ್ರೈವ್ ಅಪ್‌ಡೇಟ್ ಮಾಡುವುದರಿಂದ ಏನು ಲಾಭ?

ಉ: ನಿಮ್ಮ ಪ್ರಶ್ನೆ ಗೂಗಲ್ ಡ್ರೈವ್ ಆ್ಯಪ್ ಅನ್ನು ಅಪ್‌ಡೇಟ್ ಮಾಡುವುದರ ಬಗೆಗಾ ಅಥವಾ ಗೂಗಲ್‌ ಡ್ರೈವ್‌ನಲ್ಲಿರುವ ಮಾಹಿತಿಯನ್ನು ಅಪ್‌ಡೇಟ್ ಮಾಡುವ ಬಗೆಗಾ ಎಂದು ಸ್ಪಷ್ಟವಾಗಿಲ್ಲ. ಸರಳವಾಗಿ ಹೇಳುವುದಾದರೆ ಎರಡನ್ನೂ ಅಪ್‌ಡೇಟ್ ಮಾಡುತ್ತಿರುವುದು ಉತ್ತಮ. ಆ್ಯಪ್ ಅಪ್‌ಡೇಟ್ ಮಾಡುವುದರಿಂದ ಹೊಸ ಸವಲತ್ತುಗಳು ದೊರೆಯುತ್ತವೆ ಅಥವಾ ದೋಷಗಳು ನಿವಾರಣೆಯಾಗುತ್ತವೆ. ಗೂಗಲ್‌ ಡ್ರೈವ್ ಅಪ್‌ಡೇಟ್ ಮಾಡುವುದರಿಂದ ಗಣಕ ಅಥವಾ ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಡ್ರೈವ್‌ಗೆ ಸಿಂಕ್ ಮಾಡಿದ ಮಾಹಿತಿಗಳು ಫೋನಿನಲ್ಲಿ ದೊರೆಯುತ್ತವೆ.

Comments
ಈ ವಿಭಾಗದಿಂದ ಇನ್ನಷ್ಟು
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

15 Mar, 2018
ಕಡಿಮೆ ಬೆಲೆಯ ಸಾಧನಗಳು

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಸಾಧನಗಳು

8 Mar, 2018
ನೋಟ್ 4ನ ಉತ್ತರಾಧಿಕಾರಿ

ಗ್ಯಾಜೆಟ್ ಲೋಕ
ನೋಟ್ 4ನ ಉತ್ತರಾಧಿಕಾರಿ

1 Mar, 2018
ಒಂದು ಉತ್ತಮ ಫೋನ್

ಗ್ಯಾಜೆಟ್ ಲೋಕ
ಒಂದು ಉತ್ತಮ ಫೋನ್

22 Feb, 2018
ಟಿ.ವಿ.ಯನ್ನು  ಸ್ಮಾರ್ಟ್ ಮಾಡಿ

ಗ್ಯಾಜೆಟ್ ಲೋಕ
ಟಿ.ವಿ.ಯನ್ನು ಸ್ಮಾರ್ಟ್ ಮಾಡಿ

15 Feb, 2018