ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯೆಟಾ ಕಿಮ್‌ ಕಿ ಡುಕ್‌

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪಿಯೆಟಾ ಅಂದರೆ ಕರುಣೆ ಎಂದರ್ಥ. ಮೈಖೆಲೆಂಜಿಲೋ ರೂಪಿಸಿರುವ ಯೇಸುವನ್ನು ಮಡಿಲಲ್ಲಿ ಇರಿಸಿಕೊಂಡಿರುವ ಮೇರಿಯ ಶಿಲ್ಪಕ್ಕೂ ಪಿಯೆಟಾ ಎಂಬ ಹೆಸರಿದೆ. ಅಲ್ಲಿಯೂ ಅದರ ಕೇಂದ್ರಭಾವ ಕರುಣೆಯೇ. ಆದರೆ ಈ ಸಿನಿಮಾದ ನಾಯಕ ಲೀ ಕಾಂಗ್‌ ಡೂ ಕರುಣೆಯ ಲವಲೇಶವೂ ಇಲ್ಲದ ಪರಮ ಕ್ರೂರಿ. ಸಾಲ ತೆಗೆದುಕೊಂಡವರನ್ನು ಅತಿಯಾಗಿ ಹಿಂಸಿಸಿ ಅವರಿಂದ ಸಾಲ ವಸೂಲಿ ಮಾಡುವವ. ಶ್ರಮಿಸುವ ಜನರನ್ನು ನಿರ್ದಯವಾಗಿ ಹಿಂಸಿಸಿ, ಅಗತ್ಯ ಬಿದ್ದರೆ ಕೊಲೆಯನ್ನೂ ಮಾಡುವ ಪಾತಕಿ. ಅವನಿಗೆ ಹಿಂದುಮುಂದಿಲ್ಲ. ಹೇಳಿ ಕೇಳುವವರೂ ಇಲ್ಲ. ಹಣಕ್ಕಾಗಿ ಎಂಥ ಕೀಳು ಕೆಲಸವನ್ನಾದರೂ ಮಾಡುವ ವ್ಯಕ್ತಿ.

ಇಂಥ ವ್ಯಕ್ತಿಯನ್ನು ಒಂದು ದಿನ ಒಮ್ಮಿಂದೊಮ್ಮೆಲೇ ಒಬ್ಬಳು ಮಧ್ಯವಯಸ್ಕ ಹೆಂಗಸು ಹಿಂಬಾಲಿಸಲು ಶುರು ಮಾಡುತ್ತಾಳೆ. ಕೇಳಿದರೆ ನಾನು ನಿನ್ನ ತಾಯಿ ಅನ್ನುತ್ತಾಳೆ. ಇದು ಕಾಂಗ್‌ ಡೂಗೆ ಆಘಾತಕಾರಿ ವಿಷಯ. ಹಲವು ರೀತಿಯಲ್ಲಿ ಅವಳನ್ನು ಓಡಿಸಲು ಪ್ರಯತ್ನಿಸುತ್ತಾನೆ. ಕೊನೆಗೆ ಸಾಧ್ಯವಾಗದೇ ಅವನೇ ಅವಳ ವಾತ್ಸಲ್ಯಕ್ಕೆ ಕರಗತೊಡಗುತ್ತಾನೆ. ಅಲ್ಲಿಂದ ಆ ಕ್ರೂರಿಯ ಬದುಕು ವಾತ್ಸಲ್ಯದ, ಮಾನವೀಯತೆಯ ಹಳಿಯ ಮೇಲೆ ಓಡತೊಡಗುತ್ತದೆ. ಅಲ್ಲಿಗೆ ಕಥೆ ಮುಗಿಯುವುದಿಲ್ಲ. ಬದಲಿಗೆ ಅಸಲಿ ಕಥೆ ಶುರುವಾಗುವುದೇ ಅಲ್ಲಿಂದ.

2012ರಲ್ಲಿ ಬಿಡುಗಡೆಯಾದ ಈ ಕೊರಿಯನ್‌ ಸಿನಿಮಾದ ನಿರ್ದೇಶಕ ಕಿಮ್‌ ಕಿ ಡುಕ್‌. ಕೆಲವು ಮೂಲಭೂತ ಪ್ರಶ್ನೆಗಳನ್ನು ಇಟ್ಟುಕೊಂಡು ತನ್ನದೇ ಬಗೆಯಲ್ಲಿ ಅದನ್ನು ವಿಶ್ಲೇಷಿಸುತ್ತ ಸಾಗುವುದು ಕಿಮ್‌ ಕಿ ಡುಕ್ ಶೈಲಿ. ಕ್ರೌರ್ಯ ಎನ್ನುವುದು ಅವನಿಗೆ ಎಷ್ಟು ಪ್ರಿಯವೋ, ಮೂಲಭೂತ ಪ್ರಶ್ನೆಗಳಿಗೆ ಎದುರಾಗುವುದೂ ಅವನಿಗೆ ಅಷ್ಟೇ ಮುಖ್ಯ.

ಕ್ರೂರಿ ಡಕಾಯತ ಅಂಗುಲಿಮಾಲ ಜ್ಞಾನೋದಯವಾದ ಮೇಲೆ ಎದುರಿಸುವ ಸಂಕಷ್ಟಗಳ ಕಥೆಯನ್ನೂ ಈ ಸಿನಿಮಾ ನೆನಪಿಸುವಂತಿದೆ. ನಿಷ್ಕರುಣಿಯಾಗಿ ಎಷ್ಟೋ ಜನರನ್ನು ಹಿಂಸಿಸಿದ, ಅವರ ಬದುಕನ್ನು ಅಭದ್ರತೆಗೆ ದೂಡಿದ ಕಾಂಗ್‌ ಡೂ ಕೊನೆಗೆ ಆ ಎಲ್ಲ ಆತಂಕ, ಭಯಗಳನ್ನು ತಾನೇ ಅನುಭವಿಸಬೇಕಾಗಿ ಬರುತ್ತದೆ. ಸಾವೆಂದರೆ ಹೂ ಹಿಸುಕಿದಷ್ಟೇ ಸಲೀಸಾಗಿದ್ದ ಅವನಿಗೆ ಅಮ್ಮನ ಸಾವಿನ ಎದುರು ಹಣೆ ಮಣ್ಣಿಗೊತ್ತಿ ಅಂಗಲಾಚಬೇಕಾಗಿ ಬರುತ್ತದೆ. ಅಂಗುಲಿಮಾಲನ ಕಥೆಯಲ್ಲಿ ಅವನಿಗೆ ಪ್ರೇಮಜಲದಲ್ಲಿ ಮೀಯಿಸಿ ಕೊಳೆ ತೊಳೆದದ್ದು ಬುದ್ಧನಾದರೆ ಇಲ್ಲಿ ನಾಯಕನಿಗೆ ‘ನಾನು ನಿನ್ನ ಅಮ್ಮ’ ಎಂದು ಹೇಳಿಕೊಂಡು ತನ್ನ ಮಗನ ಸಾವಿನ ಸೇಡನ್ನು ತೀರಿಸಿಕೊಳ್ಳಲು ಬರುವ ಹೆಂಗಸು ಸಂಬಂಧಗಳ ಬೆಸುಗೆಯ ಮಹತ್ವವನ್ನು ತಿಳಿಸಿಕೊಡುತ್ತಾಳೆ.

ಕಿಮ್‌ ಕಿ ಡುಕ್‌ ಬಹುತೇಕ ಎಲ್ಲ ಸಿನಿಮಾಗಳಂತೆ ಈ ಸಿನಿಮಾದಲ್ಲಿಯೂ ಮಾತು ಕಮ್ಮಿ. ಮುಖಭಾವ, ರೂಪಕಗಳು, ಕ್ಯಾಮೆರಾ ಚಲನೆಗಳ ಮೂಲಕವೇ ಅವನು ಅನುಭವವನ್ನು ಪ್ರೇಕ್ಷಕನಿಗೆ ದಾಟಿಸುತ್ತಾನೆ.

ಈ ಚಿತ್ರದಲ್ಲಿನ ಅತಿಯಾದ ಕ್ರೌರ್ಯದ ಮತ್ತು ಲೈಂಗಿಕ ದೃಶ್ಯಗಳು ಸಾಕಷ್ಟು ವಿವಾದಗಳನ್ನೂ ಹುಟ್ಟಿಹಾಕಿದ್ದವು. ಅದರಲ್ಲಿಯೂ ಮಗ ತನ್ನ ಗುಪ್ತಾಂಗದ ಭಾಗವನ್ನೇ ಕತ್ತರಿಸಿ ಹೆಂಗಸಿಗೆ ಕೊಟ್ಟು ‘ನೀನು ನನ್ನ ತಾಯಿಯೇ ಆಗಿದ್ದರೆ ಇದನ್ನು ತಿನ್ನು’ ಎನ್ನುವ ದೃಶ್ಯದ ಕುರಿತು ತುಂಬ ಆಕ್ಷೇಪಗಳು ಕೇಳಿಬಂದಿದ್ದವು. ಈ ಎಲ್ಲವನ್ನೂ ಹೊರತುಪಡಿಸಿ ಇಡೀ ಚಿತ್ರ ನೀಡುವ ಅನುಭವ ತುಂಬ ಘನವಾದದ್ದು. ಚಿಂತನೆಗೆ ಹಚ್ಚುವಂಥದ್ದು ಎನ್ನುವುದನ್ನು ಯಾರೂ ನಿರಾಕರಿಸಲಾಗದು. https://goo.gl/jsFZoK ಕೊಂಡಿ ಬಳಸಿ ‘ಪಿಯೆಟಾ’ ಚಿತ್ರವನ್ನು ಅಂತರ್ಜಾಲದಲ್ಲಿ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT