ಸಂಗತ

ಇವರದು ಸೇವೆಯಲ್ಲ, ಉದ್ಯೋಗವಷ್ಟೇ

‘ಹೋಟೆಲ್‌ನವರು ರೇಟ್ ನಿರ್ಧರಿಸಬಹುದು, ಲಾಜ್‌ನವರು ನಿರ್ಧರಿಸಬಹುದು, ನಾವೇಕೆ ನಮ್ಮ ದರಗಳನ್ನು ನಿರ್ಧರಿಸುವಂತಿಲ್ಲ’ ಎಂದು ಪ್ರಶ್ನಿಸುತ್ತ ಅವರು ತಮ್ಮ ಸ್ಥಾನವನ್ನು ಉಳಿದೆಲ್ಲ ಉದ್ದಿಮೆಗಳ ಮಟ್ಟಕ್ಕೆ ತಂದಿಟ್ಟುಬಿಟ್ಟಿದ್ದಾರೆ. ಜನರ ದಯನೀಯ ಸ್ಥಿತಿ ಬಳಸಿಕೊಂಡು ಲಾಭ ಮಾಡಿಕೊಳ್ಳುವವರು ಸೇವಾ ನಿರತರೇ?

–ಸಾಂದರ್ಭಿಕ ಚಿತ್ರ

‘ವೈದ್ಯರ ಮುಷ್ಕರ ಸಮಾಪ್ತಿ, ಸೇವೆ ಶುರು’ ಎಂಬ ತಲೆಬರಹ ಓದಿ ಆಶ್ಚರ್ಯವಾಯಿತು. ವೈದ್ಯರ ಕೆಲಸವನ್ನು ಈಗಲೂ ಸೇವೆ ಎಂದು ಕರೆಯಬಹುದೇ? ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ತಿದ್ದುಪಡಿ) ಮಸೂದೆಗೆ ಭಾರತೀಯ ವೈದ್ಯಕೀಯ ಸಂಘ ತೋರಿದ ವಿರೋಧವನ್ನು ನೋಡಿದವರಿಗೆ, ಆ ವೇಳೆಯಲ್ಲಿ ಅವರ ವಾದಗಳನ್ನು ಕೇಳಿದವರಿಗೆ, ಬರಹಗಳನ್ನು ಓದಿದವರಿಗೆ ‘ಇವರು ಸೇವೆಗಾಗಿ ನಿಂತವರಲ್ಲ, ವ್ಯಾಪಾರಕ್ಕಾಗಿ ನಿಂತವರು’ ಎನ್ನುವುದು ಸ್ಪಷ್ಟವಾಗಿದೆ.

‘ಹೋಟೆಲ್‌ನವರು ರೇಟ್ ನಿರ್ಧರಿಸಬಹುದು, ಲಾಜ್‌ನವರು ನಿರ್ಧರಿಸಬಹುದು, ನಾವೇಕೆ ನಮ್ಮ ದರಗಳನ್ನು ನಿರ್ಧರಿಸುವಂತಿಲ್ಲ’ ಎಂದು ಪ್ರಶ್ನಿಸುತ್ತ ಅವರು ತಮ್ಮ ಸ್ಥಾನವನ್ನು ಉಳಿದೆಲ್ಲ ಉದ್ದಿಮೆಗಳ ಮಟ್ಟಕ್ಕೆ ತಂದಿಟ್ಟುಬಿಟ್ಟಿದ್ದಾರೆ (ಆದರೆ ಹೋಟೆಲ್, ಲಾಜ್‌ಗೆ ಹೋಗುವುದು ಗಿರಾಕಿಗಳಿಗೆ ಆಯ್ಕೆಯ ವಿಷಯ. ಆಸ್ಪತ್ರೆಗೆ ಹೋಗುವುದು ಆಯ್ಕೆಯಾಗಿರುವುದಿಲ್ಲ). ಜನರ ದಯನೀಯ ಸ್ಥಿತಿ ಬಳಸಿಕೊಂಡು ಲಾಭ ಮಾಡಿಕೊಳ್ಳುವವರು ಸೇವಾ ನಿರತರೇ?

ಇವರಲ್ಲಿ ಸರ್ಕಾರಿ ವೈದ್ಯ, ಖಾಸಗಿ ವೈದ್ಯ ಎಂಬ ಭಿನ್ನತೆ ಎಲ್ಲಿದೆ? ಸರ್ಕಾರಿ ಸೇವೆಯಲ್ಲಿದ್ದರೂ ಸ್ವಂತ ಕ್ಲಿನಿಕ್– ಆಸ್ಪತ್ರೆಗಳನ್ನು ಇಟ್ಟುಕೊಂಡು ಖಾಸಗಿಯಾಗಿ ಪ್ರಾಕ್ಟೀಸ್ ಮಾಡದ ವೈದ್ಯರನ್ನು ಹುಡುಕಬೇಕು! ಎಣಿಸಿ ನೋಡಬೇಕಷ್ಟೇ. ಸರ್ಕಾರಿ ಆಸ್ಪತ್ರೆಗೆ ಬಂದವರನ್ನು ‘ಸಂಜೆ ನಮ್ಮ ‘ದವಾಖಾನೆಗೆ ಬಂದು ನೋಡಿ’ ಎನ್ನುವವರು, ಹೊರಗೆ ಖರೀದಿಸಲು ಔಷಧ ಬರೆದುಕೊಡುವವರು, ಇವರನ್ನೆಲ್ಲ ಸರ್ಕಾರಿ ವೈದ್ಯರೆಂದು ಹೇಗೆ ಅನ್ನೋಣ? ಇವರೆಲ್ಲರೂ ‘ಸರ್ಕಾರಿ ಸಂಬಳ ಪಡೆಯುವ ಖಾಸಗಿ ವೈದ್ಯರು’.

ಇನ್ನು ತಮ್ಮ ದವಾಖಾನೆ– ಆಸ್ಪತ್ರೆಗೆ ಅಟ್ಯಾಚ್ ಆದ ಔಷಧ ಅಂಗಡಿಯಲ್ಲಿ ಮಾತ್ರವೇ ಸಿಗುವ ಬ್ರ್ಯಾಂಡ್ ಔಷಧ ಬರೆದು ಕೊಡುವ, ಹೊರಗಡೆ ಕಡಿಮೆ ಬೆಲೆಯ ಬ್ರ್ಯಾಂಡೆಡ್ ಔಷಧಿ ಸಿಗುತ್ತಿದ್ದರೂ ಖರೀದಿಸದಂತೆ ತಡೆಯುವ, ಜೆನರಿಕ್ ಔಷಧವನ್ನು ಖರೀದಿಸಬಹುದೇ ಎಂದು ಕೇಳಿದ ರೋಗಿಗೆ ‘ನಿಮ್ಮ ರಿಸ್ಕ್‌ನಲ್ಲಿ ಖರೀದಿಸಿ’ ಎಂದು ನುಣುಚಿಕೊಳ್ಳುವ, ಕಮಿಷನ್‌ಗಾಗಿ ಅನವಶ್ಯಕವಾಗಿ ಸ್ಕ್ಯಾನಿಂಗ್‌, ರಕ್ತಪರೀಕ್ಷೆಗಳಿಗೆ ಓಡಿಸುವ ವೈದ್ಯರು ಮಾಡುತ್ತಿರುವುದು ‘ಸೇವೆ’ ಎಂದು ಹೇಗೆ ಹೇಳಬೇಕು? ಇದು ಎಲ್ಲೋ ಅಲ್ಲೊಂದಿಲ್ಲೊಂದು ಕಾಣಬಹುದಾದ ಅಪರೂಪದ ಬೆರಳೆಣಿಕೆಯ ವೈದ್ಯರ ಉದಾಹರಣೆಗಳಲ್ಲ. ಬದಲಿಗೆ ಇದಕ್ಕೆ ಹೊರತಾದ ವೈದ್ಯರ ಸಂಖ್ಯೆ ಬೆರಳೆಣಿಕೆಯಷ್ಟು. ಅಂಥ ವೈದ್ಯರ ಬಗ್ಗೆ ಪೂರ್ಣ ಗೌರವವಿಟ್ಟುಕೊಂಡೇ ಈ ಲೇಖನವನ್ನು ಬರೆದಿದ್ದೇನೆ.
ವೈದ್ಯರೂ ನಮ್ಮಂತೆ ಮಾನವರು ಎಂಬುದನ್ನು ಮೊದಲು ನಾವು ಒಪ್ಪಿಕೊಳ್ಳೋಣ. ಆಸ್ಪತ್ರೆ–ಕ್ಲಿನಿಕ್ ತೆರೆದು ವೇಳಾಪಟ್ಟಿಯಂತೆ ಬಂದು ಕುಳಿತು ರೋಗಿಗಳನ್ನು ಪರೀಕ್ಷಿಸಿ, ಕಾಯಿಲೆಗೆ ಔಷಧಗಳ ಪಟ್ಟಿ ಬರೆದುಕೊಡುವುದು ಕೂಡ ಇನ್ನಾವ ಉದ್ಯೋಗದಂತೆಯೇ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ. ಅವರು ಹೆಚ್ಚಿನವರೆಂಬ ಕಿರೀಟವಿಟ್ಟಾಗ ಅವರಿಂದ ಹೆಚ್ಚಿನ ನಿರೀಕ್ಷೆಗಳೂ ಶುರುವಾಗುತ್ತವೆ. ಒಬ್ಬ ವೈದ್ಯ ತನ್ನ ರೋಗಿಯನ್ನು ಸ್ವತಃ ಕರೆದುಕೊಂಡು ತಜ್ಞ ವೈದ್ಯರಲ್ಲಿ ತೋರಿಸಿ ಗುಣ ಮಾಡಿಸಿದ ಉದಾಹರಣೆ ಇದ್ದರೆ ಅದು ಆ ವೈದ್ಯನಲ್ಲಿರುವ ಹೆಚ್ಚಿನ ಮಾನವೀಯತೆ. ಅಂತೆಯೇ ವೈದ್ಯನೊಬ್ಬ ‘ಹಣ ಕೊಡದ ಹೊರತು ಹೆಣ ಕೊಡುವುದಿಲ್ಲ’ ಎಂದು ಕಾಡುತ್ತಿದ್ದರೆ ಅದು ಆತನಲ್ಲಿರುವ ಅಮಾನವೀಯತೆ. ಮೊದಲು ಹೇಳಿದಂಥ ವ್ಯಕ್ತಿಗಳು ಪ್ರಶಂಸೆಗೆ, ಪ್ರಶಸ್ತಿಗೆ ಒಂದಿಲ್ಲೊಂದು ಸಮಯದಲ್ಲಿ ಭಾಜನರಾಗುತ್ತಾರೆ. ಆದರೆ ಎರಡನೆಯ ಗುಂಪಿನ ವೈದ್ಯರಿಗೆ? ಅಂಥವರನ್ನು ನಿಯಂತ್ರಿಸಲು ಕಾಯ್ದೆ ಮಾಡಹೊರಟಾಗ ಈ ಸಶಕ್ತರ ಸಂಘಟನೆಯ ಪ್ರತಿರೋಧ ಅದೆಷ್ಟು? ‘ಮೊದಲು ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ’ ಎಂದು ಅತ್ತ ಬೆರಳು ಮಾಡಿ ತೋರಿಸುವುದು ಎಷ್ಟು ಸರಿ?

‘ಮೊದಲು ಅವರನ್ನು ಸರಿಪಡಿಸಿ’ ಎಂಬ ವೈದ್ಯರ ಮಾತು ಹೊಸದಲ್ಲ. ಹೆಣ್ಣು ಭ್ರೂಣ ಹತ್ಯೆಯ ಸಂದರ್ಭಗಳಲ್ಲಿ ವೈದ್ಯರ ಬಗ್ಗೆ ಮಾತನಾಡಿದಾಗಲೂ ಎಗ್ಗಿಲ್ಲದೇ ಬರುವ ಪ್ರತ್ಯಾರೋಪ ಇದು. 1994ರಲ್ಲಿ ಜಾರಿಗೆ ಬಂದ ‘ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ನಿಷೇಧ’ ಕಾನೂನು ಅತ್ಯಂತ ಶ್ರೇಷ್ಠವಾದ ಕಾನೂನು. ವೈದ್ಯರೆಂದು ಸರ್ಟಿಫಿಕೇಟ್ ಪಡೆದವರಿಂದ ಆಗುತ್ತಿದ್ದ ತಪ್ಪುಗಳಿಂದ ಸಮಾಜದಲ್ಲಿ ಹೆಣ್ಣು ಸಂತತಿಯೇ ನಾಶವಾಗಿ ಹೋಗುತ್ತಿರುವುದು ಗಮನಕ್ಕೆ ಬಂದಾಗ- ಸ್ಕ್ಯಾನಿಂಗ್ ಮಷಿನುಗಳನ್ನಿಟ್ಟುಕೊಂಡ ವೈದ್ಯರು ಮುಂಬೈ ರೈಲು ಡಬ್ಬಿಗಳಲ್ಲಿ ‘ನಾಳೆ 50 ಸಾವಿರ ರೂಪಾಯಿ ಖರ್ಚು ಮಾಡುವ ಬದಲು ಇಂದು 500 ರೂಪಾಯಿ ಖರ್ಚು ಮಾಡಿ ನಿಮ್ಮ ಭಾರ ಕಳಚಿಕೊಳ್ಳಿ’ ಎಂಬ ಜಾಹೀರಾತು ಫಲಕಗಳನ್ನು ಹಾಕಿದ್ದರು. ಟ್ರೇನಿನಲ್ಲಿ ನಿತ್ಯ ಪಯಣಿಸುತ್ತಿದ್ದವರು ಇದರ ಬಗ್ಗೆ ಚರ್ಚೆ ಆರಂಭಿಸಿ, ಹೆಣ್ಣು ಭ್ರೂಣ ಹತ್ಯೆಯೇ ಇದರ ಹಿಂದಿರುವ ಸಂದೇಶ ಎಂಬುದು ಬೆಳಕಿಗೆ ಬಂದಾಗ ಇಂಥದ್ದೊಂದು ಕಾಯ್ದೆ ಮಾಡಲಾಯಿತು. ನಿಂತಿತೇ ಹೆಣ್ಣು ಭ್ರೂಣ ಹತ್ಯೆ? ಖಂಡಿತ ಇಲ್ಲ. ಗರ್ಭಪೂರ್ವ ಲಿಂಗ ನಿರ್ಧಾರ ಮಾಡಿಸುವುದು ಹೆಚ್ಚಾದಾಗ ಮತ್ತೆ ಕಾನೂನಿಗೆಿ ತಿದ್ದುಪಡಿ ತಂದು ಅದನ್ನೂ ನಿಷೇಧಿಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕಾಯ್ತು.

‘ಲಿಂಗಪತ್ತೆ ಮಾಡಿಸುವವರು ಹೆಣ್ಣು ಬೇಡವಾದವರು. ಅವರಿಗೆ ಹೇಳಿ, ಸಮಾಜವನ್ನು ಮೊದಲು ತಿದ್ದಿ, ಆ ನಂತರ ನಮ್ಮಲ್ಲಿಗೆ ಬರುವಿರಂತೆ’ ಎಂದು ಅನೇಕ ವೈದ್ಯರು ಅತ್ತ ಬೆರಳು ತೋರಿಸುತ್ತಾರೆ. ಖಂಡಿತ ಹೌದು. ಸಮಾಜವನ್ನು ತಿದ್ದಬೇಕಾಗಿದೆ, ಪುರುಷ ಪ್ರಧಾನ ಮೌಲ್ಯವನ್ನು ಹೋಗಲಾಡಿಸಬೇಕಾಗಿದೆ. ಹೆಣ್ಣು ಮಗು ಬೇಡ ಎನ್ನುವ ಧೋರಣೆ ಬದಲಾಗಬೇಕಾಗಿದೆ. ಅದು ಬದಲಾಗುವವರೆಗೆ ಪುರುಷ ಪ್ರಾಧಾನ್ಯ ರೋಗಪೀಡಿತರು ವೈದ್ಯರ ಮೊರೆ ಹೋಗುತ್ತಲೇ ಇರುತ್ತಾರೆ. ಆಗ ಇವರು ಮಾಡಬೇಕಾದ್ದೇನು? ಮಾಡುತ್ತಿರುವುದೇನು? ತಾನು ಮಾಡದಿದ್ದರೆ ಇನ್ನೊಬ್ಬ ವೈದ್ಯರು ಮಾಡುತ್ತಾರೆ ಎನ್ನುತ್ತ ಹೆಣ್ಣು ಭ್ರೂಣವನ್ನು ಹೊರಹಾಕಲಿಲ್ಲವೇ ನಮ್ಮ ವೈದ್ಯರು? ಆಯುಧವನ್ನು ಕೈಗೆ ತೆಗೆದುಕೊಳ್ಳುವ ಮೊದಲು ತಾನು ಇವರಿಗಿಂತ ಹೆಚ್ಚು ಕಲಿತವ, ಹೆಚ್ಚು ಪ್ರಜ್ಞಾವಂತ, ತನ್ನಿಂದ ಪ್ರಾಣ ಉಳಿಯಬೇಕೇ ಹೊರತು ಹರಣವಾಗಬಾರದು, ತಾನೊಬ್ಬ ವೈದ್ಯ, ತನ್ನ ಸೇವೆಗೆ ಬಹಳ ಮಹತ್ವವಿದೆ ಎಂದು ‘ಸೇವೆಯ’ ಬಗ್ಗೆ ನೆನಪಿಸಿಕೊಂಡರೇ?

ಪಿಸಿಪಿಎನ್‌ಡಿಟಿ ಕಾನೂನಿನ ಪ್ರಕಾರ ಸ್ಕ್ಯಾನಿಂಗ್ ಮಷಿನ್‌ ಖರೀದಿಸುವವರು ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು, ₹ 4000 ಇದ್ದ ನೋಂದಣಿ ಫೀ ಇಂದು ₹ 35 ಸಾವಿರಕ್ಕೆ ಏರಿದೆ. ನೋಂದಣಿಗಳು, ನವೀಕರಣಗಳು ಆಗಿಯೇ ಆಗುತ್ತಿವೆ. ಆದರೂ ಲಿಂಗಾನುಪಾತ ಹೆಚ್ಚುತ್ತಿಲ್ಲವೇಕೆ? ಕಮಿಷನ್ ಪಡೆಯುವುದನ್ನು, ಖಾಸಗಿ ಪ್ರಾಕ್ಟೀಸ್ ಮಾಡುವುದನ್ನು, ತಮ್ಮದೇ ಅಂಗಡಿಯಲ್ಲಿ ಮಾತ್ರ ಸಿಗುವ ಮಾತ್ರೆ ಬರೆದುಕೊಡುವುದನ್ನು, ಔಷಧಗಳ ಉದ್ದುದ್ದ ಪಟ್ಟಿ ಬರೆಯುವುದನ್ನು... ಎಲ್ಲವನ್ನೂ ಕ್ಷಮಿಸೋಣ. ಆದರೆ ಲಿಂಗ ಪತ್ತೆ ಮಾಡುವುದನ್ನು, ಲಿಂಗ ನಿರ್ಧಾರ ಮಾಡುವುದನ್ನು ಮಾತ್ರ ಕ್ಷಮಿಸಲು ಸಾಧ್ಯವಿಲ್ಲ. ಬಹುತೇಕ ವೈದ್ಯರು ಮಾಡುತ್ತಿಲ್ಲ, ಆದರೆ ಯಾರು ಮಾಡುತ್ತಿದ್ದಾರೆಂಬುದು ಅವರಿಗೆ ಗೊತ್ತಿದೆಯಲ್ಲ! ತಪ್ಪು ಮಾಡುತ್ತಿರುವವರನ್ನು ಶಿಕ್ಷೆಗೊಳಪಡಿಸಲೆಂದು ಕಾನೂನು ಮಾಡ ಹೊರಟರೆ ‘ನಮ್ಮಲ್ಲಿ ಶೇ 80ರಷ್ಟು ಜನ ಒಳ್ಳೆಯವರು’ ಎಂದು ಹೇಳುತ್ತ ಕಾನೂನಿಗೇ ತಡೆ ಒಡ್ಡುವುದು ತಪ್ಪಿತಸ್ಥರ ಪರ ನಿಂತಂತಾಗುತ್ತದಷ್ಟೇ.

ಕಾನೂನು ಬಂದಾಕ್ಷಣ ಎಲ್ಲವೂ ಸರಿಯಾಗುತ್ತದೆ ಎನ್ನುವುದೂ ಭ್ರಮೆಯೇ. ಅತ್ಯುತ್ತಮವಾದ ಕಾನೂನು ಎಂದೇ ಹೇಳುವ ಪಿಸಿಪಿಎನ್‌ಡಿಟಿಯ ಸೋಲನ್ನು ನಾವಿಂದು ಕಾಣುತ್ತಿದ್ದೇವೆ. ಪಿಸಿಪಿಎನ್‌ಡಿಟಿ ಸೆಲ್‌ನ ನಿರ್ದೇಶಕರು ವೈದ್ಯರು. ಜಿಲ್ಲಾ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರು ವೈದ್ಯರು. ಇವರೆಲ್ಲ ಎಷ್ಟು ಆಸ್ಪತ್ರೆಗಳ ಮೇಲೆ, ಎಷ್ಟು ವೈದ್ಯರ ಮೇಲೆ ಕ್ರಮ ಕೈಗೊಂಡ ಉದಾಹರಣೆಗಳಿವೆ? ವೃತ್ತಿ ಬಂಧುಗಳ ಮೇಲಿನ ಇಂಥ ಪ್ರೇಮವನ್ನು ಇನ್ನಾವ ವೃತ್ತಿಯಲ್ಲೂ ನಾವು ಕಾಣುವುದಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು

ಸಂಗತ
ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ...

16 Mar, 2018

ಸಂಗತ
ಡಿಜಿಟಲ್ ಮಾರುಕಟ್ಟೆ ಗ್ರಾಹಕಸ್ನೇಹಿಯೇ?

ಇಂದು ಅಂತರರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ. ‘ಡಿಜಿಟಲ್ ಮಾರುಕಟ್ಟೆಯನ್ನು ನ್ಯಾಯಸಮ್ಮತವಾಗಿಸುವುದು’ ಈ ವರ್ಷದ ಘೋಷವಾಕ್ಯ

15 Mar, 2018

ಸಂಗತ
ಕನ್ನಡ ಮಾಧ್ಯಮಕ್ಕೂ ಇರಲಿ ಬದ್ಧತೆ

ನಾಡಧ್ವಜದ ಮೂಲಕ ಸರ್ಕಾರವು ನಾಡು- ನುಡಿಯ ಅಭಿಮಾನವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲೆತ್ನಿಸುತ್ತಿರುವುದು ವಿಷಾದನೀಯ.

14 Mar, 2018
ನಾಡ ಧ್ವಜವೋ ಕನ್ನಡ ಧ್ವಜವೋ!

ಸಂಗತ
ನಾಡ ಧ್ವಜವೋ ಕನ್ನಡ ಧ್ವಜವೋ!

13 Mar, 2018

ಸಂಗತ
ಸೊರಗಿದ ದಲಿತೋದ್ಧಾರ

ಪರಿಶಿಷ್ಟ ಜಾತಿಯವರ ಮೀಸಲಾತಿಯನ್ನು ಹೋಳು ಮಾಡಲು ಹೊರಟಿರುವುದು ದಲಿತೋದ್ಧಾರಕ್ಕೆ ನೆರವಾಗುವುದೇ ಎಂಬ ಜಿಜ್ಞಾಸೆ ಇದೀಗ ಎದ್ದಿದೆ

12 Mar, 2018