ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಚಳಿಗಾಲ ಅಧಿವೇಶನ ವಿಳಂಬ: ಅಸಮರ್ಪಕ ನಡೆ

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸಂಸತ್ತಿನ ಚಳಿಗಾಲದ ಅಧಿವೇಶನ ವಾಡಿಕೆಯಂತೆ ಈ ತಿಂಗಳಲ್ಲಿ ಅಂದರೆ ನವೆಂಬರ್‌ ಮೂರನೇ ವಾರದಲ್ಲಿಯೇ ಶುರು ಆಗಬೇಕಿತ್ತು. ಆದರೆ ಈ ಸಲ ಆಗಿಲ್ಲ. ಈಗೇನೋ ‘ಡಿಸೆಂಬರ್‌ನಲ್ಲಿ ಅಧಿವೇಶನ ನಡೆಸುತ್ತೇವೆ, ಸದ್ಯದಲ್ಲಿಯೇ ದಿನಾಂಕ ಪ್ರಕಟಿಸುತ್ತೇವೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಹೇಳಿದ್ದಾರೆ. ಅದೂ ಕಾಂಗ್ರೆಸ್‌ ಮತ್ತು ಇತರ ಕೆಲ ವಿರೋಧ ಪಕ್ಷಗಳು ವಿಳಂಬವನ್ನು ಆಕ್ಷೇಪಿಸಿದ ನಂತರ. ತಡವಾಗಲು ಕಾರಣ ಏನು ಎಂದು ಸರ್ಕಾರ ಇದುವರೆಗೂ ಯಾವುದೇ ಅಧಿಕೃತ ವಿವರಣೆ ಕೊಟ್ಟಿಲ್ಲ. ಆದರೆ ‘ಮುಂದಿನ ತಿಂಗಳು ಎರಡನೇ ವಾರದವರೆಗೂ ಗುಜರಾತ್‌ ಚುನಾವಣೆ ಇದೆ; ಪ್ರಧಾನಿ ಮತ್ತು ಅನೇಕ ಸಚಿವರು, ಸಂಸದರು ಅಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆದ್ದರಿಂದ ತಡ’ ಎಂದು ಹೇಳಲಾಗುತ್ತಿದೆ. ಅದಕ್ಕಿಂತ ಮಿಗಿಲಾಗಿ, ಚುನಾವಣೆ ವೇಳೆಯಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ವಾಗ್ದಾಳಿಗೆ ಆಹಾರ ಆಗುವುದನ್ನು ತಪ್ಪಿಸಿಕೊಳ್ಳುವುದು ಬಿಜೆಪಿಯ ಉದ್ದೇಶ ಎಂದೂ ವಿಶ್ಲೇಷಿಸಲಾಗುತ್ತಿದೆ. ಇವೆಲ್ಲ ರಾಜಕೀಯ ಕಾರಣಗಳು. ಜನತಂತ್ರ ವ್ಯವಸ್ಥೆ ಎನ್ನುವುದು ಇವೆಲ್ಲವನ್ನೂ ಮೀರಿದ್ದು. ಆದ್ದರಿಂದ ರಾಜಕೀಯ ಅನುಕೂಲಕ್ಕಾಗಿ ಅಧಿವೇಶನವನ್ನು ತಡ ಮಾಡುವುದು ಸಂಸದೀಯ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧ. ಸರ್ಕಾರದ ಈ ನಡೆಯೇ ಪ್ರಶ್ನಾರ್ಹ ಮತ್ತು ಅದು ಯಾವುದೇ ಸಬೂಬು, ಸಮರ್ಥನೆ ಕೊಟ್ಟರೂ ಅರ್ಥಹೀನ. ಸಂಸತ್ತಿನ ಘನತೆ, ಪಾವಿತ್ರ್ಯ, ಗೌರವಕ್ಕೆ ಕುಂದು ತಂದಂತೆ.

ಸದನವನ್ನು ಎದುರಿಸದೆ ತಪ್ಪಿಸಿಕೊಳ್ಳಲು ಒಳಹಾದಿಯನ್ನು ಹುಡುಕಿಕೊಳ್ಳುವ, ಅನುಕೂಲಸಿಂಧು ನೀತಿ ಅನುಸರಿಸುವ ವಿಷಯದಲ್ಲಿ ಆ ಪಕ್ಷ ಈ ಪಕ್ಷ ಎಂದೇನಿಲ್ಲ. ಇವರಿಗೆಲ್ಲ ಅಧಿಕಾರಕ್ಕೆ ಏರಿದ ಕೂಡಲೇ ಅದೇನಾಗುತ್ತದೆಯೋ ಗೊತ್ತಿಲ್ಲ. ನಡವಳಿಕೆ, ಚಹರೆ, ಮಾತು– ಕೃತಿ ಎಲ್ಲವೂ ಬದಲಾಗುತ್ತವೆ. ಈಗ ಬಿಜೆಪಿಯದೂ ಅದೇ ಕತೆ. ಹಿಂದೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲೂ 2008 ಮತ್ತು 2013ರಲ್ಲಿ ಚಳಿಗಾಲದ ಅಧಿವೇಶನ ನವೆಂಬರ್‌ ಬದಲು ಡಿಸೆಂಬರ್‌ನಲ್ಲಿ ಆರಂಭವಾಗಿತ್ತು. ಅಂದರೆ, ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಕಾದು ನಂತರ ಚಳಿಗಾಲದ ಅಧಿವೇಶನ ಪ್ರಾರಂಭಿಸುವ ಚಾಳಿಯಲ್ಲಿ ಕಾಂಗ್ರೆಸ್‌ನ ಪಾಲು ಕೂಡ ಇದೆ. ಆದರೆ ಸಮರ್ಥನೆಗೆ ಅದನ್ನು ಬಿಜೆಪಿ ಬಳಸಿಕೊಳ್ಳಬಾರದು. ತಮ್ಮದು ಕಾಂಗ್ರೆಸ್‌ಗಿಂತ ಭಿನ್ನವಾದ ರಾಜಕೀಯ ಸಂಸ್ಕೃತಿ, ಕಾಂಗ್ರೆಸ್‌ ಮಾಡಿದ ತಪ್ಪುಗಳನ್ನು ತಾವು ಮಾಡುವುದಿಲ್ಲ ಎಂದು ಭಾಷಣ ಬಿಗಿದದ್ದನ್ನು ಬಿಜೆಪಿ ನಾಯಕರು ಮರೆಯಬಾರದು. ಶಾಸನಸಭೆಗಳ ಅಧಿವೇಶನಗಳು ವಾಡಿಕೆಯಂತೆಯೇ ನಡೆಯಬೇಕು. ಅಷ್ಟೇ ಅಲ್ಲ, ಅಲ್ಲಿ ಉಪಯುಕ್ತ ಚರ್ಚೆಗಳಾಗಬೇಕು, ಸದನದ ಗೌರವ ಕಾಪಾಡುವಂತಹ ವಾತಾವರಣ ನಿರ್ಮಿಸಬೇಕು. ಅನಗತ್ಯವಾಗಿ ಗಲಾಟೆ ಎಬ್ಬಿಸುವುದು, ಕಲಾಪ ಮುಂದೂಡುವಂತೆ ಮಾಡುವುದನ್ನು ಜನ ಇಷ್ಟಪಡುವುದಿಲ್ಲ. ಅವರ ನಂಬಿಕೆಗೆ ದ್ರೋಹ ಮಾಡಬಾರದು. ಅಧಿವೇಶನ ವಿಳಂಬವನ್ನು ಪ್ರಶ್ನಿಸುತ್ತಿರುವವರು ಈ ಅಂಶವನ್ನೂ ಮರೆಯಬಾರದು.

ಶಾಸನಸಭೆಗಳ ಕಲಾಪದ ಅವಧಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಬರುತ್ತಿದೆ. 50 ರ ದಶಕದಲ್ಲಿ ವರ್ಷಕ್ಕೆ ಸರಾಸರಿ 127 ದಿನಗಳ ಕಾಲ ಸಂಸತ್‌ ಅಧಿವೇಶನ ನಡೆದಿತ್ತು. ಆದರೆ 2012ರಲ್ಲಿ ಅದು 74 ದಿನಗಳಿಗೆ ಇಳಿದಿತ್ತು. ಕಳೆದ ವರ್ಷ 76ಕ್ಕೆ ಏರಿತ್ತು. ಆದರೆ ಈ ವರ್ಷ ಇದುವರೆಗೆ ನಡೆದದ್ದು 48 ದಿನಗಳು ಮಾತ್ರ.

ಸರ್ಕಾರ ಸಂಸತ್ತನ್ನು ಇಷ್ಟು ಹಗುರವಾಗಿ ಪರಿಗಣಿಸಬಾರದು. ಎರಡು ಅಧಿವೇಶನಗಳ ಮಧ್ಯೆ ಗರಿಷ್ಠ ಆರು ತಿಂಗಳ ಕಾಲಾವಕಾಶ ಇದೆ ಎನ್ನುವುದೇನೋ ನಿಜ. ಆದರೆ ಅದನ್ನು ಅವಧಿ ಮೊಟಕಿಗೆ, ಅಧಿವೇಶನ ಮುಂದೂಡಿಕೆಗೆ ಗುರಾಣಿಯಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸಂಸದೀಯ ಸತ್‌ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ಹೊಣೆ ಮುಖ್ಯವಾಗಿ ಸರ್ಕಾರದ ಮೇಲಿದೆ. ಅದು ಈ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಅಧಿವೇಶನದ ದಿನವನ್ನು ತಕ್ಷಣವೇ ಪ್ರಕಟಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT