ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಸಂಸತ್‌ನಲ್ಲಿ ರಾಮ ಮಂದಿರ, ಗೋ ಹತ್ಯೆ ನಿಷೇಧ ಕುರಿತು ಚರ್ಚೆ

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಉಡುಪಿ: ‘ರಾಮ ಮಂದಿರ ನಿರ್ಮಾಣ, ಗೋ ಹತ್ಯೆ ನಿಷೇಧ ಹಾಗೂ ಧರ್ಮದ ಪ್ರಗತಿಗೆ ಅಗತ್ಯ ಇರುವ ಅಸ್ಪೃಶ್ಯತೆ ನಿವಾರಣೆ ಮುಂತಾದ ವಿಷಯಗಳು ಧರ್ಮ ಸಂಸತ್‌ನಲ್ಲಿ ಚರ್ಚೆಗೆ ಬರಲಿವೆ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಸ್ಪೃಶ್ಯತೆ ನಿವಾರಿಸಲು ಬಹಳ ವರ್ಷಗಳ ಹಿಂದೆಯೇ ಪ್ರಯತ್ನ ಆರಂಭಿಸಲಾಗಿದೆ, ಆದರೂ ಅದು ಸಂಪೂರ್ಣ ನಿವಾರಣೆಯಾಗಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ ಸಂಧಾನ ನಡೆಸಲು ಹಾಗೂ ಪ್ರತ್ಯೇಕ ಮಸೂದೆ ತರಲು ಅವಕಾಶ ಇದೆ. ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಅದರ ತೀರ್ಪಿಗೆ ಕಾಯಬೇಕಿಲ್ಲ’ ಎಂದರು.

‘ಗೋ ಹತ್ಯೆ ನಿಷೇಧ ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಅದನ್ನು ಜಾರಿಗೆ ತರಲು ಕೇಂದ್ರ ಮತ್ತು ಎಲ್ಲ ರಾಜ್ಯಗಳ ಒಪ್ಪಿಗೆ ಬೇಕಾಗುತ್ತದೆ. ಈ ಕುರಿತು ಚರ್ಚೆ ನಡೆಯಲಿದೆ. ಗೋ ಮಾಂಸ ರಫ್ತು ನಿಲ್ಲಿಸಿದರೂ ದೇಶದಲ್ಲಿ ಗೋ ಹತ್ಯೆಗೆ ಕಡಿವಾಣ ಬೀಳುವುದಿಲ್ಲ. ಆದ್ದರಿಂದ ಸಂಪೂರ್ಣ ಗೋ ಹತ್ಯೆ ನಿಷೇಧ ಮಾಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಧರ್ಮ ಸಂಸತ್ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜಕೀಯ ಪಕ್ಷಕ್ಕೂ ಧರ್ಮ ಸಂಸತ್‌ಗೂ ಯಾವುದೇ ಸಂಬಂಧ ಇಲ್ಲ. ಇದೊಂದು ಪಕ್ಷಾತೀತ ಕಾರ್ಯಕ್ರಮ’ ಎಂದರು.

‘ಪರ್ಯಾಯ ಪೀಠದಲ್ಲಿ ಕುಳಿತವರು ರಥಬೀದಿ ಬಿಟ್ಟು ಹೋಗಬಾರದು ಎಂಬ ನಿಯಮ ಇಲ್ಲ. ಎರಡು ಕಿ.ಮೀ ವರೆಗೆ ಸಂಚರಿಸಬಹುದು ಎಂದು ಮಧ್ವಾಚಾರ್ಯ ಸಹೋದರ ವಿಷ್ಣುತೀರ್ಥರ ‘ಸನ್ಯಾಸ ಪದ್ಧತಿ’ ಗ್ರಂಥದಲ್ಲಿ ಉಲ್ಲೇಖ ಇದೆ. 26ರಂದು ನಡೆಯುವ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳುವ ಬಗ್ಗೆ ತೀರ್ಮಾನ ಮಾಡುತ್ತೇನೆ’ ಎಂದು ಹೇಳಿದರು.

ಜೈನ, ಬೌದ್ಧ ಧರ್ಮದವರೂ ಭಾಗವಹಿಸಬಹುದು: ಭಾರತೀಯ ಪ್ರವಾದಿಗಳು ಪ್ರವರ್ತಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮವೇ ಎಂಬುದು ನಮ್ಮ ವ್ಯಾಖ್ಯಾನವಾಗಿದೆ. ಆದ್ದರಿಂದ ಜೈನ, ಬೌದ್ಧ ಧರ್ಮದವರೂ ಹಿಂದೂ ಧರ್ಮ ಸಂಸತ್‌ನಲ್ಲಿ ಭಾಗವಹಿಸಬಹುದು. ವೀರಶೈವ, ಲಿಂಗಾಯತ ಮಠಕ್ಕೆ ಸೇರಿದವರೂ ಪಾಲ್ಗೊಳ್ಳಬಹುದು. ಈ ಹಿಂದೆ ನಡೆದ ಧರ್ಮ ಸಂಸತ್‌ನಲ್ಲಿ ಜೈನರು ಭಾಗವಹಿಸಿದ ಉದಾಹರಣೆಗಳಿವೆ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಮೋಹನ ಭಾಗವತ್‌  ದಿಕ್ಸೂಚಿ ಭಾಷಣ

ಉಡುಪಿ: ಇಲ್ಲಿನ ರಾಯಲ್ ಗಾರ್ಡನ್‌ ಮೈದಾನದಲ್ಲಿ ಇದೇ 24 ಮತ್ತು 25ರಂದು ನಡೆಯುವ ಧರ್ಮ ಸಂಸತ್ ಸಮಾವೇಶಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.

150 ಮಂದಿ ಸಂತರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಐದು ಸಾವಿರ ಜನರು ಕುಳಿತುಕೊಳ್ಳುವಂತೆ ಪೆಂಡಾಲ್ ನಿರ್ಮಾಣ ಮಾಡಲಾಗಿದೆ.

ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್‌, ‘ 2 ಸಾವಿರ ಸಂತರು ಬಂದು ಉಳಿದುಕೊಂಡು ಸಂಸತ್‌ನಲ್ಲಿ ಪಾಲ್ಗೊಳ್ಳಲು ಎಲ್ಲ ರೀತಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ದೂರದ ರಾಜ್ಯಗಳ, ಊರಿನ ಸ್ವಾಮೀಜಿಗಳು ಬರಲಾಂಭಿಸಿದ್ದಾರೆ. ಗುರುವಾರ ಸಂಜೆಯ ವೇಳೆಗೆ ಎಲ್ಲರೂ ಬಂದು ಸೇರಲಿದ್ದಾರೆ’ ಎಂದರು.

‘ಸುಮಾರು 500 ಮಂದಿ ಸ್ವಯಂ ಸೇವಕರು ಕೆಲಸ ಆರಂಭಿಸಿದ್ದಾರೆ. ಅವರಿಗೆ 80 ವಿಭಾಗಗಳಲ್ಲಿ ಕೆಲಸವನ್ನು ಹಂಚಿಕೆ ಮಾಡಲಾಗಿದೆ. ಸಂತರಿಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಖಾದ್ಯಗಳನ್ನು ಬಡಿಸಲಾಗುವುದು.

‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ ಭಾಗವತ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುವರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿರುವರು’ ಎಂದು ವಿಎಚ್‌ಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಹೇಳಿದರು.

‘ನಗರದ ಎಂಜಿಎಂ ಕಾಲೇಜಿನ ಮೈದಾನದಲ್ಲಿ 26ರಂದು ನಡೆಯುವ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಷಣ ಮಾಡುವರು. ಕೇಂದ್ರ ಸಚಿವೆ ಉಮಾ ಭಾರತಿ ಅವರಿಗೂ ಆಹ್ವಾನ ನೀಡಲಾಗಿದೆ. ರಾಜಕಾರಣಿಗಳಿಗೆ ವೇದಿಕೆ ಹತ್ತಲು ಅವಕಾಶ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT