ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹ ನಿರ್ಮಾಣ ಖಾಸಗಿಗೆ

ಕೇಂದ್ರ ಸರ್ಕಾರದ ಕರಡು ಪ್ರಕಟ
Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉಪಗ್ರಹಗಳು, ರಾಕೆಟ್‌ ಮತ್ತು ಬಾಹ್ಯಾಕಾಶ ನೌಕೆಗಳ ನಿರ್ಮಾಣದಂತಹ ಚಟುವಟಿಕೆಗಳಲ್ಲಿ ಖಾಸಗಿಯವರು ಬಂಡವಾಳ ತೊಡಗಿಸಲು ಅನುಕೂಲವಾಗುವ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ಕಾಯ್ದೆಯಿಂದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ನಿರ್ಮಿಸಿ ದೇಶ– ವಿದೇಶಗಳ ಬಾಹ್ಯಾಕಾಶ ಏಜೆನ್ಸಿಗಳಿಗೆ ಪೂರೈಸಲು ಖಾಸಗಿ ಉದ್ಯಮಗಳಿಗೆ ಅವಕಾಶ ಸಿಗಲಿದೆ.

ಈ ಸಂಬಂಧ ‘ಬಾಹ್ಯಾಕಾಶ ಚಟುವಟಿಕೆಗಳ ಮಸೂದೆ 2017’ ಕರಡನ್ನು ಬಾಹ್ಯಾಕಾಶ ವಿಜ್ಞಾನ ಇಲಾಖೆ ಬಿಡುಗಡೆ ಮಾಡಿದೆ. ಇದರ ಕುರಿತು ಆಸಕ್ತರು ತಮ್ಮ ಅಭಿಪ್ರಾಯಗಳನ್ನು 30 ದಿನಗಳಲ್ಲಿ ತಿಳಿಸಬಹುದು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಆಗಲಿದೆ.

ಇಸ್ರೊ ಮಾಜಿ ನಿರ್ದೇಶಕ ನಿರ್ದೇಶಕ ಬಿ.ಎನ್‌.ಸುರೇಶ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ‘ದೇಶದ ಬಾಹ್ಯಾಕಾಶ ಚಟುವಟಿಕೆಯ ಅಗತ್ಯ ಪೂರೈಸಲು ‘ಇಸ್ರೊ’ವೊಂದರಿಂದಲೇ ಸಾಧ್ಯವಾಗುವುದಿಲ್ಲ. ಅಧಿಕ ಸಂಖ್ಯೆಯ ಉಪಗ್ರಹಗಳ ನಿರ್ಮಾಣ ಮತ್ತು ಅವುಗಳ ಉಡಾವಣೆ ಕಾರ್ಯದಲ್ಲಿ ಖಾಸಗಿಯವರ ನೆರವು ಬೇಕೇ ಬೇಕು. ಹೇಗೆ ಒಂದು ಕಾರು ತಯಾರಿಸಬೇಕಾದರೆ, ಅದರ ಬಿಡಿ ಭಾಗಗಳನ್ನು ಬೇರೆ ಬೇರೆ ಕಂಪೆನಿಯವರು ತಯಾರಿಸುತ್ತಾರೊ ಅದೇ ರೀತಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ನಿರ್ಮಾಣ ಮತ್ತು ನಿರ್ವಹಣೆಯನ್ನು ವಿವಿಧ ಕಂಪೆನಿಗಳು ಸೇರಿ ಮಾಡಬೇಕಾದ ಕಾಲ ಬಂದಿದೆ’ ಎಂದರು.

‘ ಉಪಗ್ರಹ ಮತ್ತು ರಾಕೆಟ್‌ಗಳ ತಯಾರಿಕೆ ತಂತ್ರಜ್ಞಾನವನ್ನು ಖಾಸಗಿಯವರಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದಕ್ಕಾಗಿ ಉದ್ಯಮಗಳ ಒಕ್ಕೂಟವನ್ನು ರೂಪಿಸಲಾಗುವುದು. ಈ ಒಕ್ಕೂಟದ ಮೂಲಕ ವಿವಿಧ ಕಂಪೆನಿಗಳ ಸೇರಿ ಈ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತವೆ. ಆದರೆ, ಗುಣಮಟ್ಟ ಮತ್ತು ಸೂಕ್ತ ಸಮಯಕ್ಕೆ ಸಾಧನಗಳನ್ನು ತಯಾರಿಸಿಕೊಡುತ್ತವೆಯೆ ಎಂಬ ಪ್ರಶ್ನೆ ಉದ್ಭವಿಸುತ್ತದೆ’ ಎಂದು ಅವರು ತಿಳಿಸಿದರು.

ಕಾಯ್ದೆಯ ಅಗತ್ಯವಿತ್ತು

‘ಕಳೆದ ಆರು ದಶಕಗಳಿಂದ ಬಾಹ್ಯಾಕಾಶ ಚಟುವಟಿಕೆ ಸರ್ಕಾರದ ಸ್ವಾಮ್ಯದಲ್ಲಿಯೇ ನಡೆಯುತ್ತಿದೆ. ಉಪಗ್ರಹ, ರಾಕೆಟ್‌ ನಿರ್ಮಾಣ ಮತ್ತು ಉಡಾವಣೆ, ಉಪಗ್ರಹಗಳ ಸೇವೆಯನ್ನು ‘ಇಸ್ರೊ‘ ನೀಡುತ್ತಿದೆ. ಅನ್ಯಗ್ರಹಗಳಿಗೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿ ಸಂಶೋಧನೆ ನಡೆಸುವುದರಲ್ಲೂ ತನ್ನ ಛಾಪು ಬೀರಿದೆ. ಆದರೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತೀಯರು ಜಾಗತಿಕ ಮಟ್ಟದ ಶಕ್ತಿಯಾಗಿ ಹೊರ ಹೊಮ್ಮಲು ಕಾಯ್ದೆಯ ಅಗತ್ಯವಿತ್ತು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ’ ಎಂದು ಇಸ್ರೊ ವಿಜ್ಞಾನಿಯೊಬ್ಬರು ತಿಳಿಸಿದರು.

‘ಮಸೂದೆಯಲ್ಲಿ ಕೆಲವು ವಿಷಯಗಳ ಬಗ್ಗೆ ಸ್ಪಷ್ಟತೆ ಮೂಡಬೇಕಾಗಿದೆ. ವಿಶೇಷವಾಗಿ ಸಂಶೋಧನಾ ಚಟುವಟಿಕೆಗಳ ಮೇಲೆ ಕಣ್ಣಿಡುವುದಕ್ಕೆ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ’ ಎಂದೂ ಅವರು ಹೇಳಿದರು.

‘ಭಾರತದಲ್ಲಿ ಕಡಿಮೆ ವೆಚ್ಚದಲ್ಲಿ ಉಪಗ್ರಹ, ರಾಕೆಟ್‌ ಮತ್ತು ಬಾಹ್ಯಾಕಾಶ ನೌಕೆಗಳ ನಿರ್ಮಾಣ ಮಾಡಬಹುದು. ಇದಕ್ಕೆ ’ಮಂಗಳಯಾನ‘, ’ಚಂದ್ರಯಾನ‘ ಯೋಜನೆಗಳಿಗೆ ಆದ ವೆಚ್ಚವೇ ನಿದರ್ಶನ. ಬೇರೆ ದೇಶಗಳ ಬಾಹ್ಯಾಕಾಶ ಏಜೆನ್ಸಿಗಳು ತಮಗೆ ಬೇಕಾದ ಸಾಧನಗಳನ್ನು ಕಡಿಮೆ ವೆಚ್ಚದಲ್ಲಿ ಭಾರತದಲ್ಲಿ ನಿರ್ಮಿಸಿಕೊಳ್ಳಬಹುದು. ಇದರಿಂದ ಭಾರತವು ಬಾಹ್ಯಾಕಾಶ ಚಟುವಟಿಕೆಯ ಕೇಂದ್ರವಾಗಿ ರೂಪುಗೊಳ್ಳುವುದಕ್ಕೆ ಅವಕಾಶ ಸಿಗುತ್ತದೆ. ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.

ಮುಖ್ಯಾಂಶಗಳು

* ಚಟುವಟಿಕೆ ನಡೆಸಲು ಸರ್ಕಾರದಿಂದ ಪರವಾನಗಿ

* ಕಾಯ್ದೆ ಉಲ್ಲಂಘಿಸಿದರೆ ₹ 1 ಕೋಟಿವರೆಗೆ ದಂಡ

* ಗಂಭೀರ ಅಪರಾಧಕ್ಕೆ ಜೈಲು ಶಿಕ್ಷೆಯ ಪ್ರಸ್ತಾಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT