ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ನಾಯಕರಿಗೆ ಆ್ಯಷಸ್ ಸವಾಲು

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್‌: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸರಣಿಗೆ ಗುರುವಾರ ಚಾಲನೆ ಸಿಗಲಿದೆ. ಬ್ರಿಸ್ಬೇನ್‌ನ ವೂಲೂನ್‌ಗಾಬಾ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಲು ಉಭಯ ತಂಡಗಳು ಸಿದ್ಧಗೊಂಡಿವೆ.

ಕೆವಿನ್ ಮಿಖಾಯೆಲ್‌ ನೇತೃತ್ವದಲ್ಲಿ ಸ್ಪರ್ಧಾತ್ಮಕ ಪಿಚ್ ಸಿದ್ಧಗೊಂಡಿದ್ದು ಎರಡು ಮತ್ತು ಮೂರನೇ ದಿನ ಚೆಂಡು ಹೆಚ್ಚು ಬೌನ್ಸ್ ಆಗಲಿದೆ ಎಂದು ಕ್ಯುರೇಟರ್ ಹೇಳಿದ್ದಾರೆ. ಆದ್ದರಿಂದ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

ಕ್ರಿಕೆಟ್ ಪ್ರಪಂಚದ ಇಬ್ಬರು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಾದ ಸ್ಟೀವ್ ಸ್ಮಿತ್ ಮತ್ತು ಜೋ ರೂಟ್ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳನ್ನು ಸರಣಿಯಲ್ಲಿ ಮುನ್ನಡೆಸುವರು. ಇಬ್ಬರಿಗೂ ನಾಯಕರಾಗಿ ಇದು ಮೊದಲ ಸರಣಿಯಾಗಿದೆ. ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸ್ಮಿತ್‌ ಎಂಥ ಕಠಿಣ ಪರಿಸ್ಥಿತಿಯಲ್ಲೂ ತಂಡವನ್ನು ಏಕಾಂಗಿಯಾಗಿ ಮುನ್ನಡೆಸುವ ಸಾಮರ್ಥ್ಯ ಇರುವ ಆಟಗಾರ. ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ರೂಟ್  ತಮ್ಮ ವಿಶಿಷ್ಟ ಆಟದ ಮೂಲಕ ಗಮನ ಸೆಳೆದಿದ್ದಾರೆ.

ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ವಿರುದ್ಧದ ಸರಣಿ ಗೆದ್ದು ಬೀಗುತ್ತಿರುವ ಜೋ ರೂಟ್‌ ಅವರು ಮೊದಲ ಬಾರಿ ನಾಯಕ
ನಾಗಿ ವಿದೇಶಿ ನೆಲದಲ್ಲಿ ಆಡಲು ಅಣಿಯಾಗಿದ್ದಾರೆ. ಅನುಭವಿ ನಾಯಕ ಸ್ಮಿತ್ ತಂತ್ರಗಳಿಗೆ ಅವರು ಯಾವ ರೀತಿ ಪ್ರತಿತಂತ್ರಗಳನ್ನು ಹೂಡುತ್ತಾರೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ.

ಸದ್ಯ ಉಭಯ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಮಸ್ಯೆಯನ್ನು ಎದುರಿಸುತ್ತಿವೆ. ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್‌ಗೆ ಜೇಮ್ಸ್ ಆ್ಯಂಡರ್ಸನ್‌ ಮತ್ತು ಸ್ಟುವರ್ಟ್‌ ಬ್ರಾಡ್‌ ಬಲ ತುಂಬಲಿದ್ದು ಆಸ್ಟ್ರೇಲಿಯಾ ತಂಡ ಸ್ಪಿನ್ನರ್ ನೇಥನ್ ಲಿಯಾನ್ ಅವರನ್ನು ಅವಲಂಬಿಸಿದೆ. ಬೆನ್‌ ಸ್ಟೋಕ್ಸ್ ಅನುಪಸ್ಥಿತಿ ಇಂಗ್ಲೆಂಡ್‌ಗೆ ಸಂಕಟ ತಂದೊಡ್ಡುವ ಸಾಧ್ಯತೆ ಇದೆ. ಕಳೆದ ಐದು ಪಂದ್ಯಗಳಲ್ಲಿ ನಿರಂತರ ಮೂರು ಸೇರಿದಂತೆ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್‌ ಆ್ಯಷಸ್‌ನಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಆಸ್ಟ್ರೇಲಿಯಾ ಕಳೆದ ಐದು ಪಂದ್ಯಗಳ ಪೈಕಿ ಒಂದನ್ನು ಮಾತ್ರ ಗೆದ್ದುಕೊಂಡಿದ್ದು ಒಂದರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಆ್ಯಷಸ್‌ ಸರಣಿ ತಂಡಕ್ಕೆ ಸವಾಲಿನದ್ದಾಗಲಿದೆ.

ತಂಡಗಳು: ಆಸ್ಟ್ರೇಲಿಯಾ: ಸ್ಟೀವನ್ ಸ್ಮಿತ್‌ (ನಾಯಕ), ಕ್ಯಾಮರೂನ್ ಬ್ಯಾಂಕ್ರೋಫ್‌, ಡೇವಿಡ್ ವಾರ್ನರ್‌, ಉಸ್ಮಾನ್ ಖ್ವಾಜಾ, ಪೀಟ್‌ ಹ್ಯಾಂಡ್ಸ್‌ಕಂಬ್‌, ಶಾನ್‌ ಮಾರ್ಷ್‌, ಟಿಮ್ ಪೈನೆ (ವಿಕೆಟ್ ಕೀಪರ್‌), ಮಿಚೆಲ್ ಸ್ಟಾರ್ಕ್‌, ಪ್ಯಾಟ್‌ ಕುಮಿನ್ಸ್‌, ನಥಾನ್‌ ಲಿಯಾನ್‌, ಜೋಶ್ ಹ್ಯಾಜಲ್‌ವುಡ್‌.

ಇಂಗ್ಲೆಂಡ್‌: ಜೋ ರೂಟ್‌ (ನಾಯಕ), ಅಲೆಸ್ಟರ್ ಕುಕ್‌, ಮಾರ್ಕ್ ಸ್ಟೋನ್‌ಮ್ಯಾನ್‌, ಜೇಮ್ಸ್ ವಿನ್ಸ್‌, ಡೇವಿಡ್‌ ಮಲಾನ್‌, ಮೊಯಿನ್ ಅಲಿ, ಜಾನಿ ಬೇಸ್ಟೊ (ವಿಕೆಟ್ ಕೀಪರ್‌), ಕ್ರಿಸ್ ವೋಕ್ಸ್‌, ಜೇಕ್ ಬಾಲ್‌, ಸ್ಟುವರ್ಟ್‌ ಬ್ರಾಡ್‌, ಜೇಮ್ಸ್ ಆ್ಯಂಡರ್ಸನ್‌.

ಪಂದ್ಯ ಆರಂಭ: ಮುಂಜಾನೆ 5.30 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT