ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೂತ್ರಕ್ಕೆ ಹಾರ್ದಿಕ್‌ ಒಪ್ಪಿಗೆ

ಚುನಾವಣೆಗೆ ಮೊದಲು ಪಟೇಲ್‌ ಸಮುದಾಯದ ಮನವೊಲಿಸುವ ಪ್ರಯತ್ನಕ್ಕೆ ಯಶಸ್ಸು
Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡುವುದಕ್ಕಾಗಿ ಕಾಂಗ್ರೆಸ್‌ ಮುಂದಿಟ್ಟಿರುವ ಸೂತ್ರವನ್ನು ಒಪ‍್ಪಿಕೊಂಡಿರುವುದಾಗಿ ಪಟೇಲ್‌ ಮೀಸಲು ಹೋರಾಟದ ಮುಖಂಡ ಹಾರ್ದಿಕ್‌ ಪಟೇಲ್‌ ಹೇಳಿದ್ದಾರೆ. ಹಾರ್ದಿಕ್‌ ಅವರ ಈ ಘೋಷಣೆ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಬಲ ತುಂಬಲಿದೆ ಎಂದು ಹೇಳಲಾಗಿದೆ.

‘ಪಟೇಲ್‌ ಸಮುದಾಯಕ್ಕೆ ಮಾತ್ರವಲ್ಲ, ಮೀಸಲಾತಿ ಇಲ್ಲದ ಎಲ್ಲ ಸಮುದಾಯಗಳಿಗೆ ಮೀಸಲಾತಿ ಒದಗಿಸಲು ಕಾಂಗ್ರೆಸ್‌ ಸಮ್ಮತಿಸಿದೆ. ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡಲಾಗುವ ಪ್ರಯೋಜನಗಳನ್ನು ಮುಂದುವರಿದ ಸಮುದಾಯಗಳಿಗೆ ಸಾಂವಿಧಾನಿಕವಾಗಿಯೇ ಒದಗಿಸುವ ಸೂತ್ರವನ್ನು ಕಾಂಗ್ರೆಸ್‌ ಹೊಂದಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೀಸಲಾತಿ ಇಲ್ಲದ ಸಮುದಾಯಗಳಿಗೆ ಮೀಸಲು ನೀಡುವ ಪ್ರಸ್ತಾವವನ್ನು ಅಂಗೀಕರಿಸಲಿದೆ. ಈಗ ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಒಬಿಸಿಗೆ ಇರುವ ಶೇ 49ರಷ್ಟು ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಸಂವಿಧಾನ ಪ್ರಕಾರವೇ ನಮಗೆ ಶೇ 50ಕ್ಕೂ ಹೆಚ್ಚು ಮೀಸಲಾತಿ ನೀಡಲು ಅವಕಾಶ ಇದೆ’ ಎಂದು ಹಾರ್ದಿಕ್‌ ಹೇಳಿದ್ದಾರೆ.

‘ಒಬಿಸಿ ಆಯೋಗದ ನಿಯಮಗಳ ಅನುಸಾರ ಪಟೇಲ್‌ ಅಥವಾ ಇತರ ಯಾವುದೇ ಮುಂದುವರಿದ ಸಮುದಾಯದ ಸಮೀಕ್ಷೆ ನಡೆಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಈ ಸಮೀಕ್ಷೆಯ ಆಧಾರದಲ್ಲಿ ಮೀಸಲಾತಿ ಒದಗಿಸಲಾಗುವುದು’ ಎಂದು ಹಾರ್ದಿಕ್‌ ಹೇಳಿದ್ದಾರೆ.

ಶೇ 50ರ ಮಿತಿ ಮೀರಿ ನೀಡಲಾದ ಮೀಸಲಾತಿಯನ್ನು ನ್ಯಾಯಾಲಯ ರದ್ದು ಮಾಡಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್‌ ಅವರು, ಮೀಸಲಾತಿ ಶೇ 50ರಷ್ಟನ್ನು ಮೀರುವಂತಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸುಪ್ರೀಂ ಕೋರ್ಟ್ ನೀಡಿರುವುದು ಸಲಹೆ ಮಾತ್ರ ಎಂದು ಅವರು ವಿವರಿಸಿದ್ದಾರೆ.

1994ರ ಬಳಿಕ ಗುಜರಾತ್‌ ಸೇರಿ ಹಲವು ರಾಜ್ಯಗಳು ಶೇ 50ಕ್ಕೂ ಹೆಚ್ಚು ಮೀಸಲಾತಿ ನೀಡಿವೆ. ತಮಿಳುನಾಡು, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ 15–17 ವರ್ಷಗಳಿಂದ ಶೇ 50ಕ್ಕಿಂತ ಹೆಚ್ಚಿನ ಮೀಸಲಾತಿ ಇದೆ ಎಂದಿದ್ದಾರೆ.

ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿಯ (ಪಿಎಎಎಸ್‌) ಪರವಾಗಿ ಮಾತ್ರ ಈ ಸೂತ್ರವನ್ನು ತಾವು ಒಪ್ಪಿಕೊಂಡದ್ದಲ್ಲ. ಪಟೇಲ್‌ ಸಮುದಾಯದ ಸಂಘಟನೆಗಳಾದ ಖೋಡಲಧಾಮ್‌ ಮತ್ತು ಉಮಿಯಧಾಮ್‌ನ ಮುಖ್ಯಸ್ಥರ ಜತೆಗೂ ಈ ಬಗ್ಗೆ ಚರ್ಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್‌ ಸೂತ್ರದ ಬಗ್ಗೆ ತಮಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಈ ಎರಡೂ ಸಂಘಟನೆಗಳ ಮುಖ್ಯಸ್ಥರು ಹೇಳಿದ್ದಾರೆ. ತಮಗೆ ಈ ಸೂತ್ರದ ವಿವರಗಳು ದೊರೆತ ಬಳಿಕ ಅದರ ಬಗ್ಗೆ ಸಂವಿಧಾನ ತಜ್ಞ ವಕೀಲರ ಜತೆಗೆ ಚರ್ಚಿಸಿ ನಿಲುವು ತಿಳಿಸುವುದಾಗಿ ಅವರು ಹೇಳಿದ್ದಾರೆ.

ಪಟೇಲ್‌ ಸಮುದಾಯದ ಶೇ 60ರಷ್ಟು ಜನರು ಬಡವರಾಗಿರುವುದರಿಂದ ಮೀಸಲಾತಿಯ ಅಗತ್ಯ ಇದೆ. ಆದರೆ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಬದಲಿಗೆ, ಸಮುದಾಯದ ಪರವಾಗಿ ಕೆಲಸ ಮಾಡುವವರಿಗೆ ಬೆಂಬಲ ನೀಡಲಾಗುವುದು ಎಂದು ಖೋಡಲಧಾಮ್‌ ಟ್ರಸ್ಟ್‌ನ ಅಧ್ಯಕ್ಷ ಪರೇಶ್‌ ಗಜೇರಾ ಹೇಳಿದ್ದಾರೆ. ಹಾರ್ದಿಕ್‌ ಸುಳ್ಳು ಹೇಳುತ್ತಿದ್ದಾರೆ. ಅವರು ತಮ್ಮ ಸಂಘಟನೆಯ ಯಾರನ್ನೂ ಭೇಟಿಯಾಗಿಲ್ಲ ಎಂದು ಉಮಿಯಧಾಮ್‌ ಟ್ರಸ್ಟ್‌ನ ಅಧ್ಯಕ್ಷ ವಿಕ್ರಮ್‌ ಪಟೇಲ್‌ ಹೇಳಿದ್ದಾರೆ.

ಸೂತ್ರ ಏನು?

ಸಂವಿಧಾನದ ವಿಧಿ 15(4) ಮತ್ತು 16(4)ರ ಅನ್ವಯ ಯಾವುದೇ ಪ್ರಯೋಜನ ದೊರಕಿಲ್ಲದ 46ನೇ ವಿಧಿಯಲ್ಲಿ ನಮೂದಿಸಲಾಗಿರುವ ಸಮುದಾಯಗಳಿಗೆ ಒಬಿಸಿ ಸಮುದಾಯಗಳಿಗೆ ದೊರಕುವ ಎಲ್ಲ ಅನುಕೂಲಗಳನ್ನು ಒದಗಿಸುವುದು

ಇದಕ್ಕಾಗಿ ಈ ಜಾತಿಗಳನ್ನು ವಿಶೇಷ ವರ್ಗ ಎಂದು ಹೆಸರಿಸಲಾಗುವುದು

ಸಂಬಂಧಪಟ್ಟ ಎಲ್ಲರ ಜತೆ ಸಮಾಲೋಚನೆ ನಡೆಸಿ ಪ್ರತ್ಯೇಕ ಆಯೋಗವನ್ನು ರಚಿಸಲಾಗುವುದು

ಮೀಸಲಾತಿ ಸೂತ್ರವನ್ನು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿಯೂ ಸೇರಿಸಲಿದೆ

ವಘೇಲಾ ಪಕ್ಷದಿಂದ 69 ಅಭ್ಯರ್ಥಿಗಳು

ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನಿಂದ ಬಿಟ್ಟು ಬಂದಿರುವ ಶಂಕರ್‌ಸಿಂಹ ವಾಘೆಲಾ ಅವರ ಜನವಿಕಲ್ಪ ರಂಗವು ಗುಜರಾತ್‌ ಮೊದಲ ಹಂತದ ಚುನಾವಣೆಗೆ 69 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಐವರು ಪಕ್ಷೇತರರಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.

‘ಡಿ.9ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 89 ಕ್ಷೇತ್ರಗಳ ಪೈಕಿ 74ರಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅಖಿಲ ಭಾರತ ಹಿಂದುಸ್ಥಾನ್‌ ಕಾಂಗ್ರೆಸ್‌ ಪಕ್ಷಕ್ಕೆ ನೀಡಲಾಗಿರುವ ಟ್ರ್ಯಾಕ್ಟರ್‌ ನಮ್ಮ ಚಿಹ್ನೆ’ ಎಂದು ವಾಘೆಲಾ ಹೇಳಿದ್ದಾರೆ. ಮುಖ್ಯಮಂತ್ರಿ ವಿಜಯ ರೂಪಾಣಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜೀತೂ ವಘಾನಿ, ಕಾಂಗ್ರೆಸ್‌ ಮುಖಂಡರಾದ ಪರೇಶ್‌ ಧನಾನಿ ಮತ್ತು ಶಕ್ತಿಸಿಂಹ ಗೋಹಿಲ್‌ ಅವರ ವಿರುದ್ಧ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದೂ ತಿಳಿಸಿದ್ದಾರೆ.

* ಹಾರ್ದಿಕ್‌ಗಿಂತ ಮೂರ್ಖರನ್ನು ನಾನು ಕಂಡಿಲ್ಲ. ಅವರಿಗೆ ಚಿಕ್ಕ ವಯಸ್ಸು. ಅವರಿಗೆ ಸಮುದಾಯದಿಂದ ಸ್ವಲ್ಪ ಪ್ರೀತಿ ಸಿಕ್ಕಿದೆ. ಆದರೆ ಅದು ಶೀಘ್ರವೇ ನಷ್ಟವಾಗಲಿದೆ

–ನಿತಿನ್‌ ಪಟೇಲ್‌, ಗುಜರಾತ್‌ ಉಪ ಮುಖ್ಯಮಂತ್ರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT