ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

291 ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ: ಸಚಿವ ರಮಾನಾಥ ರೈ

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದೇ ಆರಂಭಿಸಿದ್ದ 291 ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.

ಜಲ ಹಾಗೂ ವಾಯು ಕಾಯ್ದೆ ಪ್ರಕಾರ ಮಂಡಳಿಯಿಂದ ಅನುಮತಿ ಪಡೆಯದ ಕಾರ್ಖಾನೆಗಳ ವಿರುದ್ಧ ಏನು ಕ್ರಮಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ರೈ, ‘2007 ರಿಂದ 2015ರ ವರೆಗೆ ಮಂಡಳಿಯಿಂದ ಅನುಮತಿ ಪಡೆಯದೇ 1,385 ಕಾರ್ಖಾನೆಗಳು ಆರಂಭವಾಗಿದ್ದವು. ಐದು ಪಟ್ಟು ಹೆಚ್ಚು ಆಡಳಿತಾತ್ಮಕ ಶುಲ್ಕವಾಗಿ ₹ 10.17 ಕೋಟಿ ಕಟ್ಟಿಸಿಕೊಂಡು ಇವುಗಳನ್ನು ಸಕ್ರಮಗೊಳಿಸಲಾಗಿತ್ತು. ಸಕ್ರಮಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಾಲಯ ಆದೇಶಿಸಿದ ಮೇಲೆ ಹಣವನ್ನು ವಾಪಸ್‌ ನೀಡಲಾಗಿದೆ’ ಎಂದರು.

‘ಈಗಾಗಲೇ 504 ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ 213 ಪ್ರಕರಣ ಇತ್ಯರ್ಥವಾಗಿದ್ದು, ಉಳಿದ 291 ಪ್ರಕರಣಗಳ ವಿಚಾರಣೆ ವಿವಿಧ ಹಂತಗಳಲ್ಲಿವೆ. ಕಾರ್ಖಾನೆಗಳವರು ಅನುಮತಿ ಪಡೆಯದಿದ್ದರೆ, ಬಂದ್ ಮಾಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಸಚಿವ ರೈ ವಿರುದ್ಧ ಹಕ್ಕುಚ್ಯುತಿ ಮಂಡನೆ
ಅರಣ್ಯ ಸಚಿವ ಬಿ. ರಮಾನಾಥ ರೈ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಪಾದಿಸಿದ ಜೆಡಿಎಸ್‌ನ ಮಂಜುನಾಥಗೌಡ ಹಕ್ಕುಚ್ಯುತಿ ಪ್ರಸ್ತಾಪ ಮಂಡಿಸಿದರು.

‘ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ 37 ಎಕರೆ ಅರಣ್ಯ ಭೂಮಿಯನ್ನು ಖಾಸಗಿಯವರು ಕಬಳಿಸಿದ್ದಾರೆ. ಈ ಬಗ್ಗೆ ಹಿಂದೆ ಕೇಳಿದ ಪ್ರಶ್ನೆಗೆ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಈ ಭೂಮಿ ಇದೆ ಎಂದು ಉತ್ತರ ನೀಡಲಾಗಿತ್ತು. ಇದೇ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ, ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲ, ಖಾಸಗಿಯವರಿಗೆ ಸೇರಿದ ಭೂಮಿ ಎಂದು ಉತ್ತರ ನೀಡಲಾಗಿದೆ. ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದು, ನನ್ನ ಹಕ್ಕುಚ್ಯುತಿಯಾಗಿದೆ’ ಎಂದು ಮಂಜುನಾಥಗೌಡ ಹೇಳಿದರು.

‘ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳಲಾಗುವುದು. ಹಕ್ಕುಚ್ಯುತಿ ವ್ಯಾಪ್ತಿ ಬಂದರೆ ಹಕ್ಕುಬಾಧ್ಯತಾ ಸಮಿತಿಗೆ ವಹಿಸಲಾಗುವುದು’ ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ಎನ್.ಎಚ್‌.ಶಿವಶಂಕರ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT