ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯಲು ವಿದೇಶಿ ನೀರು, ಬಂಗಲೆ ಗುಂಡು ನಿರೋಧಕ!

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚಂಡೀಗಡ: ಆಮದು ಮಾಡಿದ ಕುಡಿಯುವ ನೀರು, ನೂರಾರು ಜೊತೆ ಶೂಗಳು, ದುಬಾರಿ ಟೊಪ್ಪಿಗಳು, ವಸ್ತ್ರವಿನ್ಯಾಸಕಾರರು ರೂಪಿಸಿರುವ ಉಡುಪುಗಳು, ದುಬಾರಿ ಹೂದಾನಿಗಳು...

– ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ನ ವೈಭವೋಪೇತ ಜೀವನಕ್ಕೆ ನಿದರ್ಶನಗಳಿವು.

ಪಂಜಾಬ್‌ ಮತ್ತು ಹರಿಯಾಣದ ಹೈಕೋರ್ಟ್‌ ನೇಮಿಸಿರುವ ನ್ಯಾಯಾಲಯ ಕಮಿಷನರ್‌ ಅವರು ಸಿದ್ಧಪಡಿಸಿರುವ ವರದಿಯು ಗುರ್ಮೀತ್‌ನ ಐಷಾರಾಮಿ ಜೀವನ ಶೈಲಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದೆ.

ಸಿರ್ಸಾದಲ್ಲಿ ಗುರ್ಮೀತ್‌ ನೆಲೆಸಿದ್ದ ಅರಮನೆಯಂತಹ ಬಂಗಲೆಯ ಬಾಗಿಲುಗಳು ಮತ್ತು ಕಿಟಕಿಗಳು ಗುಂಡುನಿರೋಧಕವಾಗಿದ್ದವು. ಆತ ದುಬಾರಿ ಸುಂಗಧದ್ರವ್ಯ ಮತ್ತು ಪ್ರಸಾಧನ ಸಾಮಗ್ರಿಗಳನ್ನು ಬಳಸುತ್ತಿದ್ದ. ಗೂಢಚರ್ಯೆ ಮಾಡುವ ಕ್ಯಾಮೆರಾಗಳೂ ಪತ್ತೆಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಗುರ್ಮೀತ್‌ಗೆ ಸರ್ಕಾರ ಝಡ್‌ ಪ್ಲಸ್‌ ಭದ್ರತೆ ನೀಡಿತ್ತು. ಮೇ 25ರಂದು ಆತ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ ತಕ್ಷಣ ಭದ್ರತೆಯನ್ನು ವಾಪಸ್‌ ಪಡೆಯಲಾಗಿತ್ತು.

ಡೇರಾ ಸಚ್ಚಾ ಸೌದಾ ಆಶ್ರಮವನ್ನು ಪರಿಶೀಲಿಸುವುದಕ್ಕಾಗಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಎ.ಕೆ.ಎಸ್‌ ಪನ್ವಾರ್‌ ಅವರನ್ನು ನ್ಯಾಯಾಲಯದ ಕಮಿಷನರ್‌ ಆಗಿ ನೇಮಿಸಿತ್ತು.

ರಹಸ್ಯ ಮಾರ್ಗ: ಗುರ್ಮೀತ್‌ನ ಕೋಣೆಯಲ್ಲಿದ್ದ ಕಿಟಕಿಯೊಂದರ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಅದನ್ನು ಪರಿಶೀಲಿಸಿದಾಗ ಅದೊಂದು ರಹಸ್ಯ ಮಾರ್ಗವಾಗಿತ್ತು. ಅದನ್ನು ಮರದ ಕಪಾಟಿನಿಂದ ಮುಚ್ಚಲಾಗಿತ್ತು. ಅದು ಮಹಿಳಾ ಅನುಯಾಯಿಗಳು ತಂಗುತ್ತಿದ್ದ ಹಾಸ್ಟೆಲ್‌ಗೆ ನೇರ ಸಂಪರ್ಕ ಕಲ್ಪಿಸುತ್ತಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಮೂರು ದಿನ ನಡೆದಿದ್ದ ಈ ಪರಿಶೀಲನಾ ಕಾರ್ಯದ ಸಂದರ್ಭದಲ್ಲಿ ಕದ್ದ ಅಥವಾ ಅಕ್ರಮವಾಗಿ ಖರೀದಿ ಮಾಡಿದ್ದ ವಾಹನಗಳೂ ಪತ್ತೆಯಾಗಿವೆ. ಡೇರಾದ ಮ್ಯಾನೇಜರ್‌ಗಳು ಈ ವಾಹನಗಳ ಮಾಲೀಕತ್ವದ ವಿವರಗಳನ್ನು ನೀಡಿಲ್ಲ ಎಂದು ವರದಿ ಹೇಳಿದೆ.

ಒಬಿ ವ್ಯಾನ್‌ ಪತ್ತೆ: ಆಶ್ರಮದ ಆವರಣದಲ್ಲಿ ವಾರಸುದಾರರಿಲ್ಲದ ಒಂದು ಒಬಿ ವ್ಯಾನ್‌ ಕೂಡ ಪತ್ತೆಯಾಗಿದೆ. ಬೇಹುಗಾರಿಕೆ ಚಟುವಟಿಕೆಗೆ ಅಥವಾ ವಿದೇಶಕ್ಕೆ ರಹಸ್ಯ ಮಾಹಿತಿ ರವಾನಿಸಲು ಇದನ್ನು ಬಳಸಲಾಗುತ್ತಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ವರದಿಯಲ್ಲಿ ಹೈಕೋರ್ಟ್‌ಗೆ ಸಲಹೆ ನೀಡಲಾಗಿದೆ.

ಸಂಪಾದನೆ ₹3,500, ಖರ್ಚು ₹18 ಸಾವಿರ! 

ಹೊರಗಡೆ ಇದ್ದಾಗ ವಿವಿಧ ಮೂಲಗಳಿಂದ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದ ಗುರ್ಮೀತ್‌ ಈಗ ರೋಹ್ಟಕ್‌ ಜೈಲಿನಲ್ಲಿ ಮಾಲಿಯಾಗಿ ಕೆಲಸ ಮಾಡುತ್ತಿದ್ದಾನೆ. ದಿನದ ಸಂಬಳ ₹40.

ಮೂರು ತಿಂಗಳಿನಿಂದ ಜೈಲಿನಲ್ಲಿರುವ ಆತ, ಇದುವರೆಗೆ ₹3,500 ಸಂಪಾದನೆ ಮಾಡಿದ್ದಾನೆ. ಆದರೆ, ಈ ಅವಧಿಯಲ್ಲಿ ನೀರಿನ ಬಾಟಲಿ, ಹಾಲು ಇತ್ಯಾದಿಗಾಗಿ ₹18 ಸಾವಿರ ಖರ್ಚು ಮಾಡಿದ್ದಾನೆ ಎಂದು ಜೈಲಿನ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT