ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಆಯೋಗ

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಅಂಗೀಕಾರ
Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸ್ವತಂತ್ರ ಆಯೋಗ ರಚಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶಕುಮಾರ್‌ ಬುಧವಾರ ವಿಧಾನಸಭೆಯಲ್ಲಿ ಪ್ರಕಟಿಸಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ‘ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಲಾಗುವುದು’ ಎಂದರು.

‘ಸ್ವತಂತ್ರ ಆಯೋಗಕ್ಕೆ ನ್ಯಾಯಧೀಶರೊಬ್ಬರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗುವುದು. ಯಾರು ಬೇಕಾದರೂ ದೂರು ಸಲ್ಲಿಸಬಹುದು. ವೈದ್ಯರ ಮೇಲೆ ನಡೆಯುವ ಹಲ್ಲೆ ಹಾಗೂ ದೌರ್ಜನ್ಯ ತಡೆಯಲು ಆಯೋಗ ಕ್ರಮ ಕೈಗೊಳ್ಳಲಿದೆ’ ಎಂದರು.

‘ರೋಗಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಎಂಬ ತಾರತಮ್ಯ ಇಲ್ಲ. ನಿರ್ಲಕ್ಯ್ಯ ಎಲ್ಲೇ ನಡೆದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಕುರಿತು ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಎತ್ತಿದ ಪ್ರಶ್ನೆಗಳು ಮತ್ತು ಅನುಮಾನಗಳಿಗೆ ಸುದೀರ್ಘವಾಗಿ ಉತ್ತರಿಸಿದ ಅವರು, ‘ಈ ಮಸೂದೆಯನ್ನು ಖಾಸಗಿ ಸಂಸ್ಥೆಗಳ ನಿಯಂತ್ರಣಕ್ಕೆ ತರಲಾಗಿದೆಯೇ ಹೊರತು ವೈದ್ಯರ ನಿಯಂತ್ರಣಕ್ಕೆ ಅಲ್ಲ’ ಎಂದರು.

‘ವೈದ್ಯಕೀಯ ಚಿಕಿತ್ಸಾ ಶುಲ್ಕವನ್ನು ಸರ್ಕಾರ ನಿಗದಿಪಡಿಸುವುದಿಲ್ಲ. ತಜ್ಞರ ಸಮಿತಿ, ವೈದ್ಯರ ಜೊತೆ ಚರ್ಚಿಸಿ ತೀರ್ಮಾನಿಸುತ್ತದೆ. ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಿದ ಬಳಿಕ ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಆತಂಕಪಡುವ ಅಗತ್ಯ ಇಲ್ಲ’ ಎಂದರು.

‘ಕಳೆದ ಅಧಿವೇಶನದಲ್ಲಿ ಮಸೂದೆ ಮಂಡಿಸಿದಾಗ ವೈದ್ಯರು ಗಾಬರಿಯಾದರು. ಇದಕ್ಕೆ ತಪ್ಪು ತಿಳಿವಳಿಕೆ ಕಾರಣ. ನೋಂದಣಿ ಪ್ರಾಧಿಕಾರ ಮತ್ತು ಕುಂದುಕೊರತೆ ಸಮಿತಿ ಎರಡೂ ಪ್ರತ್ಯೇಕವಾಗಿರಲಿದ್ದು, ಎರಡಕ್ಕೂ ಜಿಲ್ಲಾಧಿಕಾರಿ ಮುಖ್ಯಸ್ಥರಾಗಿರುತ್ತಾರೆ’ ಎಂದರು.

'ಕ್ರಿಮಿನಲ್‌ ಸ್ವರೂಪದ ದೂರುಗಳು ಬಂದರೆ ಸಮಿತಿಯು ಎಸ್‌ಪಿ ಮತ್ತು ಪ್ರಾಸಿಕ್ಯೂಟರ್‌ ಒಳಗೊಂಡ ಸಮಿತಿ ವಿಚಾರಣೆ ನಡೆಸಲಿದೆ. ವೈದ್ಯಕೀಯ ಪರಿಷತ್ ಕಾಲಮಿತಿಯೊಳಗೆ ವರದಿ ನೀಡಬೇಕು. ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ವಸೂಲು ಮಾಡಿದರೆ ದಂಡ ವಿಧಿಸಲು ಅವಕಾಶ ಇದೆ’ ಎಂದು ಕೆ.ಆರ್‌. ರಮೇಶಕುಮಾರ್‌ ಹೇಳಿದರು.

‘ಜೈಲು ಶಿಕ್ಷೆ ಇಲ್ಲ ನಿಜ. ಆದರೆ, ನಕಲಿ ವೈದ್ಯರು, ಪರವಾನಗಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸುವವರಿಗೆ ಮೂಲ ಕಾಯ್ದೆಯಲ್ಲಿ ಇದ್ದಂತೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಮಸೂದೆಯಲ್ಲಿರುವ ಎಲ್ಲ ಅಂಶಗಳನ್ನು ಸೇರಿಸಿ ನಿಯಮಗಳನ್ನು ರಚಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಮೊದಲು ಮಂಡಿಸಿದ ಮಸೂದೆ ಪರಿಷ್ಕರಿಸುವಂತೆ ಆಗ್ರಹಿಸಿ ವೈದ್ಯರು ಮುಷ್ಕರ ನಡೆಸುತ್ತಿದ್ದರೂ ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ವಿಳಂಬ ಮಾಡಿತು. ಇದರಿಂದ ಚಿಕಿತ್ಸೆ ಸಿಗದೆ ಹಲವರು ಸತ್ತರು. ಇದು ಸರ್ಕಾರದ ದೌರ್ಬಲ್ಯ ತೋರಿಸುತ್ತದೆ’ ಎಂದು ಟೀಕಿಸಿದರು.‌

‘ಸರ್ಕಾರದ ಆರೋಗ್ಯ ಯೋಜನೆಗಳಿಗೆ ಶುಲ್ಕ ನಿಗದಿಪಡಿಸುವ ಮೂಲಕ ಖಾಸಗಿ ಆಸ್ಪತ್ರೆಗನ್ನು ನಿಯಂತ್ರಿಸಲು ಅವಕಾಶ ಇದೆ. ಆದರೆ, ಸರ್ಕಾರದ ಯಾವುದೇ ನೆರವು ಪಡೆಯದ ಆಸ್ಪತ್ರೆಗಳನ್ನು ನಿಯಂತ್ರಿಸಲು ಕಾನೂನು ರಚಿಸುವ ಮೊದಲು ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಆಗ್ರಹಿಸಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಮಸೂದೆ ಕುರಿತಂತೆ ಉಂಟಾದ ಗೊಂದಲಕ್ಕೆ ಸರ್ಕಾರ ಮತ್ತು ಖಾಸಗಿ ವೈದ್ಯರ ನಡುವಿನ ವಿಶ್ವಾಸದ ಕೊರತೆಯೇ ಕಾರಣ. 2007ರಲ್ಲಿ ಮಸೂದೆ ತಂದಾಗ ಅದರಲ್ಲಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಇತ್ತು. ಆದರೆ, ಯಾರೂ ಪ್ರತಿಭಟನೆ ನಡೆಸಿರಲಿಲ್ಲ. ಈಗ ಮಾಡಿರುವ ತಿದ್ದುಪಡಿಗಳ ಬಗ್ಗೆ ಸರ್ಕಾರ ಮೊದಲೇ ತೀರ್ಮಾನ ತೆಗೆದುಕೊಂಡಿದ್ದರೆ ಅನಾಹುತಗಳು ಸಂಭವಿಸುತ್ತಿರಲಿಲ್ಲ’ ಎಂದು ಹೇಳಿದರು.

‘ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ. ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಧ್ಯಾಹ್ನ 3.30ರ ಬಳಿಕ ವೈದ್ಯರೇ ಇರುವುದಿಲ್ಲ. ಇತ್ತೀಚೆಗೆ ನೇಮಕಗೊಂಡಿರುವ ತಜ್ಞ ವೈದ್ಯರಿಗೆ ಮೂರು ತಿಂಗಳಿನಿಂದ ವೇತನ ನೀಡಿಲ್ಲ’ ಎಂದೂ ಕುಮಾರಸ್ವಾಮಿ ಟೀಕಿಸಿದರು.

ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ. ರವಿ, ಜೆಡಿಎಸ್‌, ಎಚ್‌.ಕೆ. ಕುಮಾರಸ್ವಾಮಿ. ಎ.ಎಸ್‌. ಪಾಟೀಲ ನಡಹಳ್ಳಿ ಚರ್ಚೆಯಲ್ಲಿ ಭಾಗವಹಿಸಿದ್ದರು.

ಬಳಿಕ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಲಾಯಿತು.

ದರೋಡೆಕೋರರು, ಲೂಟಿಕೋರರು ಎಂದು ಹೇಳಿಲ್ಲ

‘ವೈದ್ಯರನ್ನು ಗೌರವದಿಂದ ಕಂಡಿದ್ದೇನೆ. ಅವರನ್ನು ದರೋಡೆಕೋರರು, ಲೂಟಿಕೋರರು ಎಂದು ಕರೆದಿಲ್ಲ’ ಎಂದೂ ರಮೇಶ್‌ ಕುಮಾರ್‌ ಭಾವೋದ್ವೇಗದಿಂದ ಹೇಳಿದರು.

‘ಎಲ್ಲ ಕ್ಷೇತ್ರಗಳಲ್ಲೂ ಕೆಟ್ಟವರು ಇರುತ್ತಾರೆ. ನಮ್ಮ ಸಮಾಜವೇ ಈ ರೀತಿ ಇದೆ’ ಎಂದರು.

‘ಕೆಲವು ಮಾಧ್ಯಮಗಳು ಸುದ್ದಿ ತಿರುಚಿವೆ. ಅನೇಕರು ಮಂಥರೆ ತರಹ ಹುಳಿ ಹಿಂಡಿದ್ದಾರೆ. ಅವರ ಸಹವಾಸವೇ ಬೇಡ’ ಎಂದು ರಮೇಶ್‌ ಕುಮಾರ್‌ ನುಡಿದರು.

ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರು ಪರಿಶೀಲನೆ

‘ಉದ್ದೇಶಿತ ಸ್ವತಂತ್ರ ನಿಯಂತ್ರಣ ಆಯೋಗ ಖಾಸಗಿ ವೈದ್ಯಕೀಯ ಕ್ಷೇತ್ರದ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆಯೂ ಪರಿಶೀಲನೆ ನಡೆಸಲಿದೆ’ ಎಂದು ಸಚಿವ ರಮೇಶ್‌ ಕುಮಾರ್‌ ತಿಳಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಸಚಿವರು, ‘ಈ ಆಯೋಗ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲ ಆಸ್ಪತ್ರೆಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ಪರಿಹಾರ ಒದಗಿಸಲಿದೆ’ ಎಂದೂ ಸ್ಪಷ್ಟಪಡಿಸಿದರು.

* ವೈದ್ಯಕೀಯ ಸೇವೆಯಲ್ಲಿರುವ ಎಲ್ಲರೂ ಪುಣ್ಯಕೋಟಿ ಕಥೆ ಓದಬೇಕು

–ರಮೇಶ ಕುಮಾರ್‌, ಆರೋಗ್ಯ ಸಚಿವ 

ಮುಖ್ಯಾಂಶಗಳು

* ಸ್ವತಂತ್ರ ಆಯೋಗಕ್ಕೆ ನ್ಯಾಯಾಧೀಶರು

* ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ

* ಸರ್ಕಾರಿ ಆಸ್ಪತ್ರೆ ಬಲವರ್ಧನೆಗೆ ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT