ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಂ ಹಗರಣ: 592 ಜನರ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌

Last Updated 23 ನವೆಂಬರ್ 2017, 14:00 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯ ಪ್ರದೇಶ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಮತ್ತು ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 592 ಜನರ ವಿರುದ್ಧ ಸಿಬಿಐ ಗುರುವಾರ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿ(ವ್ಯಾಪಂ)ಯ ಮಾಜಿ ಅಧಿಕಾರಿಗಳಾದ ಪಂಕಜ್‌ ತ್ರಿವೇದಿ, ನಿತಿನ್‌ ಮೋಹಿಂದ್ರ, ಅಜಯ್‌ ಕುಮಾರ್ ಸೇನ್ ಹಾಗೂ ಸಿಕೆ ಮಿಶ್ರಾ ಸೇರಿ ಹಲವು ವೈದ್ಯಕೀಯ ಕಾಲೇಜುಗಳ ಪ್ರಮುಖರ ಹೆಸರು ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿದೆ.

ಹಗರಣದಿಂದ ಕಳೆದ ತಿಂಗಳು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಸಿಬಿಐ ಕ್ಲೀನ್‌ ಚಿಟ್‌ ನೀಡಿತ್ತು. ಸುಪ್ರೀಂ ಕೋರ್ಟ್‌ 2015ರ ಜುಲೈ 9ರಂದು ನೀಡಿದ ಆದೇಶದಂತೆ ಸಿಬಿಐ ಬಹುಕೋಟಿ ವ್ಯಾಪಂ ಹಗರಣದ ತನಿಖೆ ನಡೆಸುತ್ತಿದೆ.

ಹಗರಣದ ಹಿನ್ನೆಲೆ:
ಸ್ವಾಯತ್ತ ಸಂಸ್ಥೆಯಾಗಿರುವ ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಳಿಯು ನಡೆಸಿರುವ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿಯು ‘ವ್ಯಾಪಂ’  (Vyapam - MP Vyavasayik Pariksha Mandal) ಹಗರಣ ಎಂದೇ ಕುಖ್ಯಾತಿ ಪಡೆದಿದೆ. 

ವೃತ್ತಿ ಶಿಕ್ಷಣ ಪ್ರವೇಶ, ವೈದ್ಯರು, ಕಾನ್‌ಸ್ಟೆಬಲ್, ಶಿಕ್ಷಕರು ಮತ್ತಿತರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳನ್ನು ಈ ಮಂಡಳಿ ನಡೆಸಿತ್ತು. ಮಧ್ಯವರ್ತಿಗಳು ರಾಜಕಾರಣಿಗಳು ಮತ್ತು ಅಧಿಕಾರಿಗಳ ನೆರವಿನಿಂದ ನಡೆಸಿದ ಅಕ್ರಮಗಳಿಂದಾಗಿ ಅನರ್ಹರೂ ಕೂಡ ವೈದ್ಯಕೀಯ ಕಾಲೇಜು ಪ್ರವೇಶ ಪಡೆಯಲು, ಸರ್ಕಾರಿ ನೌಕರಿ ಗಿಟ್ಟಿಸಲು ಸಾಧ್ಯವಾಗಿತ್ತು.

ವೈದ್ಯ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಪರವಾಗಿ ಬೇರೊಬ್ಬರು ಭಾಗಿಯಾಗಿರುವ ಪ್ರಕರಣಗಳು ಬಹಿರಂಗವಾದ ನಂತರ 2013ರಲ್ಲಿ ಈ ಹಗರಣವು ಹೊರ ಬಂದಿತು. ಪರೀಕ್ಷೆ ಅಕ್ರಮ ಕುರಿತು 2013ಕ್ಕೂ ಮುಂಚೆಯೇ ಹಲವು ಪ್ರಕರಣಗಳು ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದವು. 2008–09ರಿಂದಲೇ ಇಂತಹ ಅಕ್ರಮಗಳು ನಡೆದಿದ್ದವು.

2013ರ ಜುಲೈ ತಿಂಗಳಲ್ಲಿ ಇಂದೋರ್ ಪೊಲೀಸರು ಪ್ರಕರಣದ ರೂವಾರಿ ಡಾ.ಜಗದೀಶ್‌ ಸಾಗರ್‌ನನ್ನು ಮುಂಬೈನಲ್ಲಿ ಬಂಧಿಸಿದ ನಂತರ ಹಗರಣವು ಹೆಚ್ಚು ಸುದ್ದಿಯಾಯಿತು. 100–150 ಅನರ್ಹ ವೈದ್ಯರು ಅಕ್ರಮ ಮಾರ್ಗದಲ್ಲಿ ಪದವಿ ಪಡೆದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾಗಿರುವುದಾಗಿ ಸಾಗರ್‌, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ.

ವ್ಯಾಪಂ ಹಗರಣದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಭಾಗಿಯಾದವರಲ್ಲಿ 40ಕ್ಕೂ ಹೆಚ್ಚು ಜನರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿ 2000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT