ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದ ಮೇಲೆ ತೀರ್ಪುಗಾರರು!

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚಿಣ್ಣರ ಷೋಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳು ಮನರಂಜನೆ ನೀಡುವಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ರಾಮಾ ಜೂನಿಯರ್ಸ್‌ 2’ ಕಾರ್ಯಕ್ರಮ ನಾಡಿನಾದ್ಯಂತ ಪ್ರೇಕ್ಷಕರ ಮನಗೆದ್ದಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ಜನರಿಗೆ ನಗುವಿನ ಕಚಗುಳಿ ಇಡುವ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ತೀರ್ಪುಗಾರರು ಮಕ್ಕಳ ನಟನೆ ಅವಲೋಕಿಸಿ ಅಂಕ ನೀಡುವುದು ವಾಡಿಕೆ. ಸಲಹೆ ನೀಡುವ ಜತೆಗೆ ಉತ್ತಮವಾಗಿ ಅಭಿನಯ ಮಾಡದ ಮಕ್ಕಳಿಗೆ ಹೋಂವರ್ಕ್‌ ನೀಡುವುದಷ್ಟೇ ಅವರ ಕೆಲಸ. ಆದರೆ, ಮಕ್ಕಳೊಂದಿಗೆ ತೀರ್ಪುಗಾರರಿಗೂ ನಟಿಸಲು ವೇದಿಕೆ ಕಲ್ಪಿಸುವ ಮೂಲಕ ಜೀ ಕನ್ನಡ ವಾಹಿನಿಯು ಹೊಸ ಪ್ರಯೋಗಕ್ಕೆ ನಾಂದಿ ಹಾಡಲು ಹೊರಟಿದೆ.

‘ಜನಪದ ಕಲೆಯಾದ ದೊಡ್ಡಾಟ, ಕಾವ್ಯ ದಿಗ್ಗಜರಾದ ದ.ರಾ. ಬೇಂದ್ರೆ, ಕೆ.ಎಸ್‌. ನರಸಿಂಹಸ್ವಾಮಿ ಅವರ ಬದುಕಿನ ಜೊತೆಗೆ ಪಾಶ್ಚಿಮಾತ್ಯ ನಾಟಕಗಳ ಕಥಾವಸ್ತುಗಳನ್ನೂ ವೇದಿಕೆಗೆ ತರುವ ಮೂಲಕ ಈ ಕಾರ್ಯಕ್ರಮ ಸದಭಿರುಚಿಯ ಸ್ವಾಸ್ಥ್ಯ ಕಾಪಾಡಿದೆ’ ಎನ್ನುತ್ತಾರೆ ಷೋ ನಿರ್ದೇಶಕ ಶರಣಯ್ಯ ತಿಮ್ಮಾಪೂರ್.

ತೀರ್ಪುಗಾರರಾದ ಹಿರಿಯ ನಟಿ ಲಕ್ಷ್ಮೀ ಅವರು ಅಮ್ಮ ಮತ್ತು ಸೊಸೆಯ ನಡುವಿನ ಬಾಂಧವ್ಯದಲ್ಲಿಯೂ ಅಮ್ಮ, ಮಗಳ ಬಾಂಧವ್ಯವನ್ನು ಗಟ್ಟಿಗೊಳಿಸಬಹುದು ಎಂಬ ಸಂದೇಶ ಸಾರಲು ಬರುತ್ತಿದ್ದಾರೆ. ಲಕ್ಷ್ಮೀ ಅಮ್ಮನ ಪಾತ್ರಧಾರಿಯಾದರೆ ‘ಜೂನಿಯರ್‌ ಲಕ್ಷ್ಮೀ’ ಎಂದೇ ಖ್ಯಾತಿ ಪಡೆದಿರುವ ವಂಶಿ ಸೊಸೆಯ ಪಾತ್ರ ನಿರ್ವಹಿಸಲಿದ್ದಾರೆ.

‘ಮುಖ್ಯಮಂತ್ರಿ’ ನಾಟಕ ರಂಗಭೂಮಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಹಿರಿಮೆ ಹೊಂದಿದೆ. ಹಲವು ಪ್ರಯೋಗಗಳನ್ನು ಕಂಡಿರುವ ಈ ನಾಟಕ ‘ಮುಖ್ಯಮಂತ್ರಿ’ ಚಂದ್ರು ಅವರಿಗೆ ಹೊಸ ಇಮೇಜ್‌ ತಂದುಕೊಟ್ಟಿತು. ಮೂರು ದಶಕ ಕಳೆದರೂ ಈ ನಾಟಕ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಇದೇ ಮೊದಲ ಬಾರಿಗೆ ಡ್ರಾಮಾ ಜೂನಿಯರ್ಸ್‌ ಕಾರ್ಯಕ್ರಮದಲ್ಲಿ ಈ ನಾಟಕದ ಪ್ರದರ್ಶನ ನಡೆಯಲಿದೆ.

‘ಮುಖ್ಯಮಂತ್ರಿ’ ಚಂದ್ರು ಅವರೆ ‘ಮುಖ್ಯಮಂತ್ರಿ’ ಪಾತ್ರ ನಿರ್ವಹಿಸಲಿದ್ದಾರೆ. ಅವರಿಗೆ ಸುಮಿತ್ ಸಂಕೋಜಿ, ಶ್ರೀಷಾ, ಶ್ರಾವ್ಯಾ ಆಚಾರ್ಯ, ಆರಾಧ್ಯಾ ಶೆಟ್ಟಿ ಸಾಥ್‌ ನೀಡಲಿದ್ದಾರೆ.

ನಟ ವಿಜಯ್‌ ರಾಘವೇಂದ್ರ ಬಾಲನಟನಾಗಿರುವಾಗಲೇ ‘ಚಿನ್ನಾರಿಮುತ್ತ’, ‘ಕೊಟ್ರೇಶಿ ಕನಸು’, ‘ಪಂಚಾಕ್ಷರಿ ಗವಾಯಿ’ಗಳಂತಹ ಚಿತ್ರಗಳ ಮೂಲಕ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಹೆಗ್ಗಳಿಕೆ ಹೊಂದಿದ್ದಾರೆ. ಅವರು ಮೊದಲ ಬಾರಿಗೆ ರಂಗವೇದಿಕೆ ಏರಲಿದ್ದಾರೆ. ಅರ್ಧ ದಶಕದಷ್ಟು ಹಳೆಯದಾದ ‘ಭಕ್ತ ಅಂಬರೀಷ’ ಭಕ್ತಿ ಪ್ರಧಾನ ನಾಟಕ.

ಇದು ವೇದಿಕೆಯಲ್ಲಿ ಪ್ರದರ್ಶನ ಕಾಣಲಿದೆ. ಭಕ್ತ ಅಂಬರೀಷನಾಗಿ ವಿಜಯ್‌ ರಾಘವೇಂದ್ರ ಕಾಣಿಸಿಕೊಂಡರೆ ರಮಾಕಾಂತನಾಗಿ ಪ್ರೀತಂ, ಘಂಟಾಕರ್ಣ ಮತ್ತು ಸುದರ್ಶನ ಚಕ್ರವಾಗಿ ವೀಕ್ಷಾ ಅಭಿನಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT