ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂದಾಗಿಸುವ ಅಂದಗಾರ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕೆದರಿದ ಕೂದಲು, ಗಲ್ಲ-ತುಟಿಯ ಮಧ್ಯದಲ್ಲೊಂದು ಹೊಳೆವ ಮುತ್ತು. ನೀಲಿ ರಂಗಲ್ಲಿ ಮಿಂದೆದ್ದ ತುಟಿ, ಮತ್ತೇರಿಸುವ ಕಣ್ಣು. ತುಟಿಯ ಬಣ್ಣಕ್ಕೆ ಹೊಂದುವ ಸರ, ಕಪ್ಪನೆಯ ದಿರಿಸು ತೊಟ್ಟು ನಿಂತಿರುವ ಪೋಸಿಗೆ ಹರೆಯದ ಹೃದಯಗಳ ಏರಿಳಿತ ಹೆಚ್ಚಿದೆ. ಫ್ರೇಂ ತುಂಬಿಕೊಂಡ ಬೆಳಕು ಚೆಲುವಿಗೆ ಮುತ್ತಿಕ್ಕುತ್ತಿದೆ.

ನಾನಾ ಬ್ರಾಂಡ್‌ಗಳ ಇಂಥ ಅನೇಕ ಫೋಟೊಶೂಟ್‌ಗಳು ನೋಡುಗರ ಮನಸೆಳೆದಿರುತ್ತವೆ. ಉತ್ಪನ್ನ, ರೂಪದರ್ಶಿಗಳನ್ನಷ್ಟೇ ಅಲ್ಲ, ಚಿತ್ರದ ಫ್ರೇಂ ಕೂಡ ಅಂದವಾಗಿಸುವ ಕೈಚಳಕವನ್ನು ತೋರುವವರು ಸ್ಟೈಲಿಸ್ಟ್‌ಗಳು. ಫ್ಯಾಷನ್‌ ಎಂದರೆ ರೂಪದರ್ಶಿಗಳು, ವಿನ್ಯಾಸಕಾರರು, ಕೇಶವಿನ್ಯಾಸಕರು, ಮೇಕಪ್‌ ಮ್ಯಾನ್‌ಗಳು ಎಂಬುದಷ್ಟೇ ಅನೇಕರ ಕಲ್ಪನೆ. ಆದರೆ ಇದಕ್ಕೂ ಮೀರಿ ಫ್ಯಾಷನ್‌ ಜಗತ್ತಿನ ಸೌಂದರ್ಯವನ್ನು ಜನರ ಮುಂದೆ ಇನ್ನಷ್ಟು ಸುಂದರವಾಗಿ ಬಿತ್ತಿರಿಸುವವರು ಸ್ಟೈಲಿಸ್ಟ್‌ಗಳು.

ಐದಾರು ವರ್ಷಗಳಿಂದ ಇದೇ ವೃತ್ತಿಯಲ್ಲಿ ಹೆಸರು ಮಾಡುತ್ತಿರುವ, ಬಹುಬೇಡಿಕೆಯ ಸ್ಟೈಲಿಸ್ಟ್‌ ಪ್ರಶಾಂತ್‌ ಪ್ರಿಯದರ್ಶಿ. ಪಾಟ್ನಾ ಮೂಲದ ಅವರು ಕಳೆದ ಆರು ವರ್ಷಗಳಿಂದ ಬೆಂಗಳೂರಿನ ಬಣ್ಣದ ಜಗತ್ತನ್ನು ಅಂದಗಾಣಿಸುತ್ತಿದ್ದಾರೆ. ಬಣ್ಣ ಬಣ್ಣದ ಬಟ್ಟೆ, ವಿಶಿಷ್ಟ ಕೇಶವಿನ್ಯಾಸದೆಡೆಗೆ ಬಾಲ್ಯದಿಂದಲೂ ಅವರಿಗೆ ಒಲವಿತ್ತು. ಅದರಲ್ಲೂ ಬಟ್ಟೆ ಹಿಡಿದು ಬಗೆಬಗೆ ವಿನ್ಯಾಸ ಮಾಡುವುದರ ಬಗೆಗೆ ಅವರಿಗೆ ವಿಶೇಷ ಆಸಕ್ತಿ ಇತ್ತು. ಈ ಎಲ್ಲಾ ಆಸೆಗಳನ್ನು ಮನಸ್ಸಿನಲ್ಲಿ ಅದುಮಿಟ್ಟಿದ್ದ ಅವರು ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿಯನ್ನೂ ಪಡೆದಿದ್ದಾರೆ.

ಪದವಿ ಪಡೆಯಲು ಬೆಂಗಳೂರಿಗೆ ಬಂದ ಅವರು ಮನದಾಸೆಯ ಫ್ಯಾಷನ್‌ ಜಗತ್ತಿಗೆ ನಿಧಾನವಾಗಿ ತೆರೆದುಕೊಂಡರು. ಸ್ಟೈಲಿಸ್ಟ್‌ ಹಾಗೂ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಅವರು ಪ್ರಮುಖ ಫ್ಯಾಷನ್‌ ಬ್ರಾಂಡ್‌ಗಳಿಗೆ ನೆಚ್ಚಿನ ಸ್ಟೈಲಿಸ್ಟ್‌. ಬ್ರಾಂಡ್‌ನ ಪ್ರಚಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸವಾಗಲಿ ಅದರ ಹಿಂದೆ ಪ್ರಶಾಂತ್‌ ಅವರ ಕಲಾ ನೈಪುಣ್ಯ ಕೆಲಸ ಮಾಡಿರುತ್ತದೆ. ಪ್ರಶಾಂತ್‌ ಅವರ ಕಲ್ಪನೆಯಲ್ಲಿ ನಡೆದ ಫೋಟೊಶೂಟ್‌ಗಳ ವೈವಿಧ್ಯ ಪ್ರಶಾಂತ್‌ ಪ್ರತಿಭೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.

‘ಸ್ಟೈಲಿಸ್ಟ್‌, ಫ್ಯಾಷನ್‌ ಜಗತ್ತಿನ ಪ್ರತಿಯೊಂದು ಸಣ್ಣ ಪುಟ್ಟ ಅಂಶಗಳ ಬಗೆಗೂ ಯೋಚಿಸಬೇಕಾಗುತ್ತದೆ. ಮೊದಲು ಗ್ರಾಹಕರ ಜೊತೆ ಮಾತನಾಡಿ ಅವರ ನಿರೀಕ್ಷೆಗಳೇನು ಎಂಬುದನ್ನು ತಿಳಿದುಕೊಳ್ಳುತ್ತೇವೆ. ನಂತರ ಉತ್ಪನ್ನಗಳನ್ನು ವೀಕ್ಷಿಸಿ ಅದರ ಚೆಲುವು ಜನರ ಮನತಲುಪಲು ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಚರ್ಚಿಸುತ್ತೇವೆ. ಕೇಶವಿನ್ಯಾಸ, ಮೇಕಪ್‌, ತೊಡುವ ದಿರಿಸು, ಚಪ್ಪಲಿ, ಆಭರಣ, ನೇಲ್‌ ಪಾಲಿಶ್‌, ವೇದಿಕೆ ವಿನ್ಯಾಸ, ಚಿತ್ರದ ಹಿನ್ನೆಲೆ ಹೇಗಿರಬೇಕು, ಯಾವ ಬ್ರಾಂಡ್‌ನ ಶೂಟಿಂಗ್‌ ಯಾವ ಲೊಕೇಶನ್‌ನಲ್ಲಿ ಆದರಷ್ಟೇ ಚೆಂದ, ಯಾವ ಮೈಕಟ್ಟಿಗೆ ಎಂಥ ಉಡುಪು ಒಪ್ಪುತ್ತದೆ, ಯಾವ ಬಣ್ಣವನ್ನು ಎಲ್ಲಿ ಹೇಗೆ ಬಳಸಿಕೊಳ್ಳಬೇಕು, ಯಾವ ದಿರಿಸಿನೊಂದಿಗೆ ಎಂಥ ಆಕ್ಸಸರೀಸ್‌ಗಳನ್ನು ಜೋಡಿಸಬೇಕು, ರೂಪದರ್ಶಿಯ ಭಾವಭಂಗಿ ಹೇಗಿರಬೇಕು... ಹೀಗೆ ಪ್ರತಿಯೊಂದರ ನಿರ್ಧಾರ, ಯಶಸ್ಸು ಸ್ಟೈಲಿಸ್ಟ್‌ನ ಕೌಶಲವನ್ನವಲಂಬಿಸಿರುತ್ತದೆ’ ಎನ್ನುತ್ತಾರೆ ಪ್ರಶಾಂತ್‌.

ಅಮೆಜಾನ್‌ ಫ್ಯಾಷನ್‌, ಲೈಫ್‌ಸ್ಟೈಲ್‌, ಸ್ವರೋಸ್ಕಿ, ಮ್ಯಾಕ್ಸ್ ಫ್ಯಾಷನ್‌, ಮಿಂಟ್ರಾ, ಆ್ಯಡ್‌ ಹಾಡಿ ಇನ್ನೂ ಮುಂತಾದ ಜನಪ್ರಿಯ ಕಂಪೆನಿಗಳೊಂದಿಗೆ ಕೆಲಸ ಮಾಡಿರುವ ಪ್ರಶಾಂತ್‌ ಅವರಿಗೆ ಫ್ಯಾಷನ್‌ ಜಗತ್ತಿಗೆ ಬರಲು ಅನೇಕರು ಸ್ಫೂರ್ತಿ. ಅವರಲ್ಲಿ ವೋಗ್‌ನ ಮುಖ್ಯ ಸಂಪಾದಕಿಯಾಗಿರುವ ಅನ್ನಾ ವಿಂಟರ್‌ ಪ್ರಮುಖರು. ಅವರ ಪ್ರತಿ ಹೆಜ್ಜೆಯನ್ನೂ ಹಿಂಬಾಲಿಸುವ ಪ್ರಶಾಂತ್‌ ಪ್ರಕಾರ ಕಠಿಣ ಪರಿಶ್ರಮವಿದ್ದರಷ್ಟೇ ಇಲ್ಲಿ ಬೆಲೆ. ತನ್ನನ್ನು ತಾನು ನಿರಂತರವಾಗಿ ಅಪ್‌ಡೇಟ್‌ ಆಗುವ ಸಲುವಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್‌ ಜಗತ್ತಿನ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ವೀಕ್ಷಿಸುತ್ತಾರೆ.

ಫ್ಯಾಷನ್‌ಗೆ ಸಂಬಂಧಿಸಿದ ಮ್ಯಾಗಜಿನ್‌ ಓದುವುದು, ಟಿ.ವಿಗಳಲ್ಲಿ ಸುದ್ದಿ ವೀಕ್ಷಣೆ, ಯಾವ ಬ್ರಾಂಡ್‌ ತಮ್ಮ ಉತ್ಪನ್ನಗಳನ್ನು ಎಷ್ಟು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತಿದೆ, ದೇಶದ ಯಾವ ಮೂಲೆಯಲ್ಲಿ ಹೊಸದೇನು ಪ್ರಯೋಗವಾಯಿತು ಎಂಬ ಎಲ್ಲಾ ಮಾಹಿತಿಯ ಬಗ್ಗೆ ಪ್ರಶಾಂತ್‌ ಗಮನವಿರುತ್ತದೆ.

‘ಚೆಂದಾಗುವುದು ಯಾರಿಗಿಷ್ಟವಿಲ್ಲ. ಸೌಂದರ್ಯಪ್ರಜ್ಞೆಯನ್ನೇ ಬಂಡವಾಳವಾಗಿಸಿಕೊಂಡು ಬೆಳೆಯುತ್ತಿರುವ ಫ್ಯಾಷನ್‌ ಲೋಕದಲ್ಲಿ ಸ್ಟೈಲಿಶ್‌ಗಳಿಗೆ ಅವಕಾಶಗಳ ಬರವಿಲ್ಲ. ಅಂತೆಯೇ ಇಲ್ಲಿ ಸ್ಪರ್ಧೆಯೂ ಚುರುಕಾಗಿದೆ. ನಮ್ಮ ಕ್ರಿಯಾಶೀಲತೆ ಗಮನಿಸಿ ಅವಕಾಶಗಳ ಬಾಗಿಲು ತೆರೆಯುತ್ತದೆ. ವೃತ್ತಿ ಜೀವನದ ನಮ್ಮ ಹೆಜ್ಜೆಗಳು ಗಟ್ಟಿಯಾಗಿದ್ದಷ್ಟೂ ಮುಂದಿನ ಪ್ರಾಜೆಕ್ಟ್‌ಗಳು ಬರುತ್ತವೆ. ಫ್ಯಾಷನ್‌ ಜಗತ್ತಿನ ಬಗೆಗೆ ಅಗಾಧವಾದ ಜ್ಞಾನ ಹೊಂದಿರುವ ಕ್ರಿಯಾಶೀಲ ಮನಸ್ಸನ್ನು ಇಲ್ಲಿ ಎಲ್ಲರೂ ಸ್ವಾಗತಿಸುತ್ತಾರೆ’ ಎನ್ನುತ್ತಾರೆ ಪ್ರಶಾಂತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT