ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿಗೆ ಹೊರಟಿತು ಮಹಿಳಾ ಪಡೆ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬಹುದೂರದ ಕಾರುಚಾಲನೆ (ಲಾಂಗ್‌ ಡ್ರೈವ್) ಬಹುಮಂದಿಗೆ ಇಷ್ಟ. ದೂರಚಾಲನೆ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರೂ ಈ ನಿಟ್ಟಿನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಮಹಿಳೆಯರನ್ನು ಈ ಕ್ಷೇತ್ರಕ್ಕೆ ಕರೆತರಲು ಶ್ರಮಿಸುತ್ತಿರುವ ಸಂಸ್ಥೆ ‘ಜಿರೋಯಿನ್’. ಸಂಸ್ಥೆಯು ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ‘ಮಹಿಳಾ ಕಾರು ರ‍್ಯಾಲಿ ಆಯೋಜಿಸುತ್ತಿದೆ.

ಇಂದು (ನ.24) ಸಂಜೆ 3 ಗಂಟೆಗೆ ನಗರದ ಸೇಂಟ್ ಮಾರ್ಕ್ಸ್‌ ರಸ್ತೆಯ ಬೌರಿಂಗ್ ಇನ್‍ಸ್ಟಿಟ್ಯೂಟ್‌ನಿಂದ ಆರಂಭವಾಗಲಿರುವ ರ‍್ಯಾಲಿಗೆ ಮಡಿಕೇರಿ ಗಮ್ಯ. ಎರಡು ದಿನಗಳ ಅವಧಿಯ ಈ ರ‍್ಯಾಲಿಯಲ್ಲಿ 200ಕ್ಕೂ ಅಧಿಕ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ.

ಕಾರ್ಪೋರೇಟ್‌ ಸಂಸ್ಥೆಗಳು, ರೆಸ್ಟೋರೆಂಟ್‌ಗಳು, ಫ್ಯಾಷನ್‌ ಡಿಸೈನಿಂಗ್, ಮಾರ್ಕೆಟಿಂಗ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೂರ ಕಾರುಚಾಲನೆ ಮೂಲಕ ಏಕತಾನತೆಯನ್ನು ಮೀರಿ ಹೊಸದನ್ನು ಕಂಡುಕೊಳ್ಳುವ ಸದವಕಾಶ ಇಲ್ಲಿದೆ.

ನಗರವಾಸಿಯಾಗಿರುವ, ಗಡಿಬಿಡಿ ಬದುಕಿನ ಒತ್ತಡದ ಮಧ್ಯೆ ಬದುಕುವ ಮಹಿಳೆಯರಿಗೆ ಗ್ರಾಮೀಣ ಪ್ರಪಂಚದ ಸೊಗಡು, ಸೌಂದರ್ಯವನ್ನು ಪರಿಚಯಿಸುವುದು ಮತ್ತು ಗ್ರಾಮೀಣ ಜನರ ಬದುಕು–ಬವಣೆಗಳನ್ನು ತಿಳಿಸುವುದು ಈ ರ‍್ಯಾಲಿಯ ಇನ್ನೊಂದು ಉದ್ದೇಶ.

ಮಿಸೆಸ್ ಇಂಡಿಯಾ 2017ರ ಮುಖ್ಯ ಅತಿಥಿಯಾಗಿದ್ದ ತೃಪ್ತಿ ರಾವ್, ವನಿತಾ ಅಶೋಕ್, ಅನಿತಾ ಖೋಲೆ, ದೀಪಿಕಾ, ತ್ರೆಹಾನ್ ಮತ್ತಿತರರು ರ‍್ಯಾಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮಹಿಳೆಯರಿಗೆ ಕಾರು ಚಾಲನೆಯನ್ನು ವೃತ್ತಿಯಾಗಿಸಿಕೊಳ್ಳುವ ಅವಕಾಶದ ಕುರಿತು ಸಾಮಾಜಿಕ ಉದ್ಯಮ ಸಂಸ್ಥೆಯೊಂದು ತರಬೇತಿ ನೀಡಲಿದೆ.

ಪ್ರಸಕ್ತ ವರ್ಷದ  ಕಾರು ಚಾಲನಾ ರ‍್ಯಾಲಿಯನ್ನು ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಬೆಂಗಳೂರಿನಿಂದ ಆರಂಭವಾಗಲಿರುವ ರ‍್ಯಾಲಿಯು ರೇಷ್ಮೆನಾಡು ರಾಮನಗರ ಹಾದು ಮಡಿಕೇರಿ ತಲುಪಲಿದೆ. ಮಂಡ್ಯ, ರಂಗನತಿಟ್ಟು, ಬಿಳಿಕೆರೆ, ಹುಣಸೂರು, ಕುಶಾಲನಗರ, ತಲಕಾವೇರಿಯಂಥ ಪ್ರವಾಸಿ ಆಕರ್ಷಣೆಯ ಪ್ರದೇಶಗಳನ್ನು ಹೊಕ್ಕು ಸಾಗಲಿದೆ. ಕಾರು ಚಾಲನೆ ಮೂಲಕ ಮಹಿಳೆಯರು ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.

ರ‍್ಯಾಲಿಯು ಮಡಿಕೇರಿಯಲ್ಲಿ ಒಂದು ದಿನ ತಂಗಲಿದ್ದು, ನ.26ರಂದು ಮರಳಿ ಬೆಂಗಳೂರಿಗೆ ಮರಳಲಿದೆ. ಚಾಲನೆ ಮಾಡುವವರು ನ್ಯಾವಿಗೇಟರ್ ‍ಸಹಾಯವನ್ನು ಪಡೆಯಬಹುದು. ಕಾರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಚಾಲನಾ ಪರವಾನಗಿ ಪತ್ರ ಹೊಂದಿರುವುದು ಕಡ್ಡಾಯ. ಕಾರುಗಳಿಗೆ ಕರ್ನಾಟಕ ಮೋಟಾರ್ ಸ್ಪೋರ್ಟ್ ಕ್ಲಬ್‍ನ ಅನುಮತಿಪತ್ರ ಇರಬೇಕು. ವಯಸ್ಸಿನ ಮಿತಿ ಇಲ್ಲ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರಾದ ವಿವೇಕ್ ಮೋರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT