ಟ್ಯಾಗೋರ್ ವೈಭವದಲ್ಲಿ ಮರೆಯಾದ ಆದಿವಾಸಿಗಳು

ಟ್ಯಾಗೋರ್ ಅವರು ತ್ರಿಪುರಾಕ್ಕೆ ನೀಡಿದ್ದ ಏಳು ಭೇಟಿಗಳ ಬಗ್ಗೆ ಬಿಕಚ್ ಚೌಧರಿ ಅವರು ಪುಸ್ತಕವೊಂದನ್ನು ಬರೆದಿದ್ದಾರೆ. ಅಗರ್ತಲಾದ ಜ್ಞಾನ್ ಬಿಚಿತ್ರ ಪ್ರಕಾಶಿನಿ ಈ ಪುಸ್ತಕವನ್ನು ಪ್ರಕಟಿಸಿದೆ.

ಟ್ಯಾಗೋರ್ ವೈಭವದಲ್ಲಿ ಮರೆಯಾದ ಆದಿವಾಸಿಗಳು

ಸುಮಾರು ಹತ್ತು ವರ್ಷಗಳ ಹಿಂದೆ ನಾನು ಶಾಂತಿನಿಕೇತನಕ್ಕೆ ಹೋಗಿದ್ದಾಗ ಅಲ್ಲಿ ಬೌದ್ಧ ಭಿಕ್ಕುವೊಬ್ಬರನ್ನು ಭೇಟಿಯಾಗಿದ್ದೆ. ಕೆಂಪು ದಿರಿಸಿನಲ್ಲಿದ್ದ ಅವರು ಕುಲಪತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಅವರು ತ್ರಿಪುರಾದವರು. ರವೀಂದ್ರನಾಥ ಟ್ಯಾಗೋರ್ ಅವರ ಈ ವಿಶ್ವವಿದ್ಯಾಲಯ ಆರಂಭ ಆದಾಗಿನಿಂದಲೂ ಅಲ್ಲಿಗೆ ತ್ರಿಪುರಾದಿಂದ ಸಾಕಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ.

ಅಲ್ಪಕಾಲದ ಬಳಿಕ ನಾನು ಮಣಿಪುರಕ್ಕೆ ಹೋಗಿದ್ದೆ. ಆ ರಾಜ್ಯದ ನೃತ್ಯ ಮತ್ತು ಸಂಗೀತದ ಪರಂಪರೆಗಳನ್ನು ಕಂಡು ಬೆರಗುಗೊಂಡಿದ್ದೆ. ಟ್ಯಾಗೋರ್ ಯಾವತ್ತೂ ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ. ಆದರೆ, ಅವರು ತ್ರಿಪುರಾದ ಮಹಾರಾಜನ ಅರಮನೆಯಲ್ಲಿ ನೃತ್ಯ ಪ್ರದರ್ಶನಗಳನ್ನು ಕಂಡಿದ್ದರು ಎಂಬುದನ್ನು ಅಲ್ಲಿ ನನಗೆ ಯಾರೋ ಹೇಳಿದರು. ಅದು ಅವರಿಗೆ ಎಷ್ಟು ಇಷ್ಟವಾಗಿತ್ತೆಂದರೆ ಬಳಿಕ ಅವರು ಅಲ್ಲಿಂದ ನೃತ್ಯ ಗುರುಗಳನ್ನು ಶಾಂತಿನಿಕೇತನಕ್ಕೆ ಕರೆದೊಯ್ದು ಮಣಿಪುರಿ ನೃತ್ಯವನ್ನು ಅಲ್ಲಿನ ಪಠ್ಯಕ್ರಮದ ಭಾಗವಾಗಿ ಸೇರಿಸಿದ್ದರು.

ಟ್ಯಾಗೋರ್ ಅವರು ತ್ರಿಪುರಾಕ್ಕೆ ನೀಡಿದ್ದ ಏಳು ಭೇಟಿಗಳ ಬಗ್ಗೆ ಬಿಕಚ್ ಚೌಧರಿ ಅವರು ಪುಸ್ತಕವೊಂದನ್ನು ಬರೆದಿದ್ದಾರೆ. ಅಗರ್ತಲಾದ ಜ್ಞಾನ್ ಬಿಚಿತ್ರ ಪ್ರಕಾಶಿನಿ ಈ ಪುಸ್ತಕವನ್ನು ಪ್ರಕಟಿಸಿದೆ. ಈ ತಿಂಗಳ ಆರಂಭದಲ್ಲಿ ಮೊದಲ ಬಾರಿಗೆ ತ್ರಿಪುರಾಕ್ಕೆ ಭೇಟಿ ನೀಡಿದ್ದಾಗ ಆ ಪುಸ್ತಕವನ್ನು ಎತ್ತಿಕೊಂಡೆ. ಹಿಂದಿರುಗುವ ಮೊದಲು, ಆ ರಾಜ್ಯದ ದೀರ್ಘಕಾಲದ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್ ಅವರ ಬಗ್ಗೆ ಜನರು ಒಳ್ಳೆಯ ಮಾತನಾಡುವುದನ್ನು ಕೇಳಿಸಿಕೊಂಡೆ. ಅವರ ಪ್ರಾಮಾಣಿಕತೆ ಮತ್ತು ಸದಾ ಎಲೆಮರೆಯ ಕಾಯಿಯಂತೆ ಇರುವ ಮನೋಭಾವ, ಶಿಕ್ಷಣದಲ್ಲಿ ಅವರಿಗೆ ಇರುವ ವಿಶೇಷ ಆಸಕ್ತಿಗಳ ಬಗ್ಗೆ ಜನರು ಮಾತನಾಡುತ್ತಾರೆ. ಈ ಗ್ರಹಿಕೆಗಳು ಎಷ್ಟು ಸರಿ ಎಂದು ತ್ರಿಪುರಾದಲ್ಲಿ ನಾನು ಮಾತನಾಡಿಸಿದ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸಿದೆ.

ನಿರೀಕ್ಷಿಸಿದಂತೆಯೇ, ನನಗೆ ದೊರೆತ ಪ್ರತಿಕ್ರಿಯೆಗಳು ಏಕರೂಪದ್ದಾಗಿರಲಿಲ್ಲ. ನರೇಂದ್ರ ಮೋದಿ ಅಥವಾ ಮಮತಾ ಬ್ಯಾನರ್ಜಿ ಅವರ ಹಾಗೆ ಎಲ್ಲೆಡೆಯೂ ಸರ್ಕಾರ್ ತಮ್ಮ ಪೋಸ್ಟರ್‌ಗಳನ್ನು ಹಾಕಿಸಿಕೊಂಡಿಲ್ಲ ಎಂದು ಒಬ್ಬ ವಿದ್ಯಾರ್ಥಿ ಹೇಳಿದರು. ತಾವು ಜನರಿಗೆ ಹತ್ತಿರ ಎಂಬುದು ಅವರ ನಿತ್ಯದ ಕೆಲಸಗಳಲ್ಲಿಯೇ ಕಾಣಿಸಿಕೊಳ್ಳುತ್ತದೆ. ಇದು ತ್ರಿಪುರಾದ ಜನರಲ್ಲಿ ಅವರ ಬಗ್ಗೆ ಅಕ್ಕರೆಗೆ ಕಾರಣವಾಗಿದೆ ಎಂದೂ ಅವರು ಹೇಳಿದರು.

ಎರಡನೆಯ ವಿದ್ಯಾರ್ಥಿಯೂ ಸರ್ಕಾರ್ ಅವರನ್ನು ಹೊಗಳಿದರು. ಜೊತೆಗೆ ಅವರ ಮಿತಿಯನ್ನೂ ಹೇಳಿದರು. ‘ಸರ್ಕಾರ್‌ ಪ್ರಾಮಾಣಿಕ ಎಂಬುದರಲ್ಲಿ ಅನುಮಾನವೇ ಇಲ್ಲ, ಆದರೆ ಉದ್ಯಮ ಮತ್ತು ಕೈಗಾರಿಕೆಯನ್ನು ಉತ್ತೇಜಿಸಲು ಅವರು ಇನ್ನಷ್ಟು ಪ್ರಯತ್ನಿಸಬೇಕು’ ಎಂದು ಹೇಳಿದರು.

ತ್ರಿಪುರಾದ ಸಾಕ್ಷರತೆ ಪ್ರಮಾಣ ಮೆಚ್ಚುಗೆ ಮೂಡುವಷ್ಟು ಹೆಚ್ಚಾಗಿದೆ. ಆದರೆ ಸುಶಿಕ್ಷಿತ ಯುವಕ ಯುವತಿಯರಿಗೆ ಉತ್ತಮವಾದ ಕೆಲಸಗಳನ್ನು ಕೊಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ ಎಂದು ಕಾಣುತ್ತದೆ. ಭೌಗೋಳಿಕವಾಗಿ ಪ್ರತ್ಯೇಕವಾಗಿರುವ ಸ್ಥಿತಿ ಮತ್ತು ಸಂಪರ್ಕದ ಕೊರತೆ ಕೂಡ ಈ ಸಮಸ್ಯೆಗೆ ಕಾರಣ. ಈ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಕೆಲಸ ಮಾಡಿಲ್ಲ ಎಂಬುದೂ ಹೌದು.

ಮಾಣಿಕ್ ಸರ್ಕಾರ್ ಅವರ ಸರ್ಕಾರದ ಬಗ್ಗೆ ಮೂರನೇ ವಿದ್ಯಾರ್ಥಿ ಹೆಚ್ಚು ಹರಿತವಾದ ವಿಮರ್ಶಾತ್ಮಕ ನೋಟವನ್ನು ನೀಡಿದರು. ತ್ರಿಪುರಾದ ಶೇ 30ರಷ್ಟು ಜನರು ಬುಡಕಟ್ಟು ಸಮುದಾಯಗಳಿಗೆ ಸೇರಿದವರು. ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಇದು ಶೇ 50ರಷ್ಟಿತ್ತು. ಇದೊಂದು ದೊಡ್ಡ ಅಲ್ಪಸಂಖ್ಯಾತ ಗುಂಪು. ಬಂಗಾಳಿ ಭಾಷೆ ಮಾತನಾಡುವ ಬಹುಸಂಖ್ಯಾತರು ಇವರನ್ನು ಸೂಕ್ಷ್ಮವಾಗಿ ಮತ್ತು ನೇರವಾಗಿ ತಾರತಮ್ಯದಿಂದ ನೋಡುತ್ತಾರೆ.

ಅಗರ್ತಲಾದಲ್ಲಿ ಭಾರಿ ಮೇಲ್ಸೇತುವೆಗಳು ನಿರ್ಮಾಣವಾಗುತ್ತಿದ್ದರೆ ಬುಡಕಟ್ಟು ಜಿಲ್ಲೆಗಳ ಹಳ್ಳಿಗಳಲ್ಲಿ ಸರಿಯಾದ ರಸ್ತೆ, ಶಾಲೆ, ಆಸ್ಪತ್ರೆಗಳು ಇಲ್ಲ. ಈ ತಾರತಮ್ಯವು ರಾಜಕಾರಣ ಅಥವಾ ಅರ್ಥ ವ್ಯವಸ್ಥೆಗೆ ಮಾತ್ರ ಸೀಮಿತವಲ್ಲ; ಇದು ಸಾಂಸ್ಕೃತಿಕ ರೂಪವನ್ನೂ ಪಡೆದುಕೊಂಡಿದೆ. ಕೆಲವೊಮ್ಮೆ ಅನಗತ್ಯವಾಗಿ ಕೂಡ, ಸಾರ್ವಜನಿಕ ಸ್ಥಳಗಳಿಗೆ ಬಂಗಾಳಿ ಹೀರೊಗಳ ಹೆಸರು ಇರಿಸಲಾಗುತ್ತಿದೆ.

ರಾಜಧಾನಿಯ ಹೃದಯಭಾಗದಲ್ಲಿ ಇರುವ, ಹಿಂದಿನಿಂದಲೂ ಕುದುರೆಗಳಿಗೆ ಮೀಸಲಾಗಿರುವ ಬಯಲನ್ನು ಅಸ್ತಬಲ್ (ಕುದುರೆ ಲಾಯದ ಸಂಸ್ಕೃತ ಪದ) ಎಂದು ಕರೆಯಲಾಗುತ್ತಿತ್ತು. ಇತ್ತೀಚೆಗೆ ಇಲ್ಲಿ ಒಂದು ವೇದಿಕೆ ನಿರ್ಮಿಸಲಾಗಿದೆ. ಈ ಬಯಲಿಗೆ ಸ್ವಾಮಿ ವಿವೇಕಾನಂದ ಸ್ಟೇಡಿಯಂ ಎಂದು ಹೆಸರು ಇರಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಜತೆಗಿನ ಮಾತುಕತೆಯ ನಡುವೆ ನಾನು ‘ತ್ರಿಪುರಾ ಸ್ಟೇಟ್ ಮ್ಯೂಸಿಯಂ’ಗೆ ಭೇಟಿ ಕೊಟ್ಟೆ. ಒಂದು ಕಾಲದಲ್ಲಿ ಅರಮನೆಯಾಗಿದ್ದ ಮಿರುಗುವ ಈ ಬಿಳಿ ಕಟ್ಟಡದ ಹೊರಗೆ ಕೆರೆಗಳಿದ್ದರೆ, ಕಟ್ಟಡಕ್ಕೆ ಹೋಗಲು ಮಧ್ಯದಲ್ಲಿ ಉದ್ದದ ದಾರಿ ಇದೆ. ವಸ್ತುಸಂಗ್ರಹಾಲಯದ ಮೊದಲಿನ ಹಲವು ಸಣ್ಣ ಕೊಠಡಿಗಳಲ್ಲಿ ತ್ರಿಪುರಾದ ಸಾಂಸ್ಕೃತಿಕ ಮತ್ತು ಪಾರಿಸರಿಕ ವೈವಿಧ್ಯವನ್ನು ಬಿಂಬಿಸುವ ವಸ್ತುಗಳಿವೆ.

‘ನಾಡು ಮತ್ತು ಜನ’ ಎಂಬ ಹೆಸರಿನ ಒಂದು ಕೊಠಡಿಯಲ್ಲಿ ‘ವಿವಿಧ ಜಾತಿಗಳು, ಸಮುದಾಯಗಳು, ಬುಡಕಟ್ಟುಗಳು ಮತ್ತು ಧರ್ಮಗಳಿಗೆ ಸೇರಿದ ಜನರು ವಿವಿಧ ಸಾಮಾಜಿಕ, ರಾಜಕೀಯ ಮತ್ತು ಚಾರಿತ್ರಿಕ ಕಾರಣಗಳಿಂದಾಗಿ ಹೇಗೆ ಉತ್ತಮ ನೆರೆಹೊರೆಯವರಾಗಿ ಜೀವಿಸುತ್ತಿದ್ದಾರೆ’ ಎಂಬು
ದನ್ನು ಬಿಂಬಿಸಲಾಗಿದೆ.

‘ಸಸ್ಯ ಮತ್ತು ಜೀವ ಸಂಪತ್ತು’ ಎಂಬ ಹೆಸರಿನ ಕೋಣೆಯಲ್ಲಿ ರಾಜ್ಯದ ನೈಸರ್ಗಿಕ ಸೌಂದರ್ಯವನ್ನು ತೋರುವ ಚಿತ್ರಗಳಿವೆ. ‘ಭವ್ಯವಾಗಿ ನಿಂತಿರುವ ಮನೋಹರ ಗುಡ್ಡಗಳು ಮತ್ತು ಕಣಿವೆಗಳು ಕಣ್ಣನ್ನು ತಂಪಾಗಿಸುತ್ತವೆ’.

ಸಂಸ್ಕೃತಿ ಮತ್ತು ನಿಸರ್ಗದ ಬಳಿಕ ಬುಡಕಟ್ಟು ಕಲೆಗಳು ಮತ್ತು ಕರಕೌಶಲವನ್ನು ಬಿಂಬಿಸುವ ವಸ್ತುಗಳಿವೆ. ಇತರ ಕೆಲವು ಕೊಠಡಿಗಳಲ್ಲಿ ರಾಜರು ಮತ್ತು ಸಾಮಾನ್ಯ ಜನರ ಚಿತ್ರಗಳಿವೆ. ಪ್ರಾದೇಶಿಕವಾಗಿ ತ್ರಿಪುರಾ ಇರುವ ಸ್ಥಳದ ಬಗ್ಗೆ ಆಕರ್ಷಕ ವಿವರಗಳಿವೆ; ಇತರ ಈಶಾನ್ಯ ರಾಜ್ಯಗಳು, ಬಾಂಗ್ಲಾದೇಶ ಮತ್ತು ಆಗ್ನೇಯ ಏಷ್ಯಾದ ಬಗ್ಗೆಯೂ ಮಾಹಿತಿ ಇದೆ.

ಇತರ ಸರ್ಕಾರಿ ವಸ್ತುಸಂಗ್ರಹಾಲಯಗಳಿಗೆ ಹೋಲಿಸಿದರೆ ಇದು ಸಾಕಷ್ಟು ಚೆನ್ನಾಗಿಯೇ ಇದೆ. ಸಣ್ಣ ರಾಜ್ಯ ತ್ರಿಪುರಾಕ್ಕೆ ಇರುವ ಸಂಪನ್ಮೂಲವೂ ಅತ್ಯಲ್ಪ. ಈ ಮಿತಿಯಲ್ಲಿಯೇ ವಸ್ತುಸಂಗ್ರಹಾಲಯವನ್ನು ನಿರ್ವಾಹಕರು ಚೆನ್ನಾಗಿಯೇ ಇರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಜತೆಗಿನ ಮಾತುಕತೆಯ ಬಳಿಕ ವಸ್ತುಸಂಗ್ರಹಾಲಯಕ್ಕೆ ನೀಡಿದ ಭೇಟಿ, ಬಂಗಾಳಿ ಯಜಮಾನಿಕೆಯ ಬಗ್ಗೆ ಅವರು ಮಾಡಿದ ಟೀಕೆಯನ್ನು ದೃಢಪಡಿಸಿತು.

ಟ್ಯಾಗೋರ್ ಮತ್ತು ತ್ರಿಪುರಾ ಎಂಬ ಒಂದು ಪ್ರತ್ಯೇಕ ಕೋಣೆಯೇ ಇದೆ. ಅದು ನ್ಯಾಯಯುತವೂ ಹೌದು. ಆದರೆ, ವಸ್ತುಸಂಗ್ರಹಾಲಯದ ಅತ್ಯಂತ ದೊಡ್ಡ ಕೊಠಡಿ ಟ್ಯಾಗೋರ್ ಅವರ ಜೀವನ ಮತ್ತು ಕೃತಿಗಳಿಗೆ ಮೀಸಲಾಗಿದೆ. ಇಲ್ಲಿ ಟ್ಯಾಗೋರ್ ಅವರ ಬಾಲ್ಯ ಮತ್ತು ಜೀವನದ ದೊಡ್ಡ ದೊಡ್ಡ ಚಿತ್ರಗಳಿವೆ. ಆಲ್ಬರ್ಟ್ ಐನ್‍ಸ್ಟೀನ್ ಅವರಂತಹ ಜಾಗತಿಕ ವ್ಯಕ್ತಿಗಳನ್ನು ಅವರು ಭೇಟಿಯಾದ ಚಿತ್ರಗಳಿವೆ. ಟ್ಯಾಗೋರ್ ಅವರ ಬಹುತೇಕ ಎಲ್ಲ ಕೃತಿಗಳ ಮುಖಪುಟಗಳಿವೆ. ಅವರು ಬರೆದ ಚಿತ್ರಗಳ ಪ್ರತಿಗಳೂ ಇವೆ.

ಇದು ಟ್ಯಾಗೋರ್ ಗೀಳಿನ ಪರಮಾವಧಿ. ಇಂತಹುದು ಕೋಲ್ಕತ್ತದಲ್ಲಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಅಲ್ಲಿನ ‘ರಾಜ್ಯ ವಸ್ತುಸಂಗ್ರಹಾಲಯ’ದಲ್ಲಿ ಟ್ಯಾಗೋರ್ ಅವರ ಜತೆಗೆ ರಾಮಮೋಹನ್ ರಾಯ್, ಬಂಕಿಮಚಂದ್ರ ಚಟರ್ಜಿ, ವಿವೇಕಾನಂದ, ಬೋಸ್, ರೇ, ನಜ್ರುಲ್ ಮತ್ತು ಬಂಗಾಳದ ಇತರ ಹೀರೊಗಳೂ ಇದ್ದಾರೆ. ಆದರೆ ನೀವು ಆರಾಧಿಸಬೇಕಾದ ಮತ್ತು ಮೆಚ್ಚಬೇಕಾದ ವ್ಯಕ್ತಿ ಟ್ಯಾಗೋರ್‌ ಎಂದು ತ್ರಿಪುರಾದ ಜನರಿಗೆ ಹೇಳಲಾಗಿದೆ.

ಆಧುನಿಕ ತ್ರಿಪುರಾದಲ್ಲಿ ಬುಡಕಟ್ಟು ಮತ್ತು ಬಂಗಾಳಿ ಸಂಬಂಧಗಳ ಬಗ್ಗೆ ಇತಿಹಾಸಕಾರ ಮೋನಿಶಂಕರ್ ಮಿಶ್ರಾ ಅವರು ಅತ್ಯುತ್ತಮವಾದ ಪ್ರಬಂಧವೊಂದನ್ನು ಬರೆದಿದ್ದಾರೆ. ಮಿಶ್ರಾ ಅವರು ಹೇಳುವಂತೆ, 1950ರ ದಶಕದಲ್ಲಿ ಬುಡಕಟ್ಟು ಜನರು ಕಮ್ಯುನಿಸ್ಟ್ ಪಕ್ಷದೊಂದಿಗೆ ಗುರುತಿಸಿಕೊಂಡರೆ, ಬಂಗಾಳಿ ವಲಸಿಗರು ಕಾಂಗ್ರೆಸ್ ಪರವಾಗಿದ್ದರು. ಶಿಕ್ಷಣ ಪಡೆದ ಬುಡಕಟ್ಟು ಜನರು 1960ರ ದಶಕದಲ್ಲಿ ಈ ಎರಡೂ ಪಕ್ಷಗಳನ್ನು ಬಿಟ್ಟು ತಮ್ಮದೇ ರಾಜಕೀಯ ಅಸ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದರು.

1970ರ ದಶಕದಲ್ಲಿ ಹಲವು ಜನಾಂಗೀಯ ಸಂಘರ್ಷಗಳು ನಡೆದವು ಮತ್ತು ಅದರ ನಂತರದ ದಶಕದಲ್ಲಿ ಪೂರ್ಣ ಪ್ರಮಾಣದ ದಂಗೆಯೇ ನಡೆದು ಬುಡಕಟ್ಟು ಜನರು ಮತ್ತು ಬಂಗಾಳಿಗಳ ನಡುವೆ ಗಲಭೆ ಏರ್ಪಟ್ಟಿತು. ಬಳಿಕ ರಾಜ್ಯದಲ್ಲಿ ಶಾಂತಿ ನೆಲೆಸಿದರೂ ವಸ್ತುಸಂಗ್ರಹಾಲಯದ ನಿರ್ವಾಹಕರು ಕಲ್ಪಿಸಿದಂತೆ ತ್ರಿಪುರಾದ ಸಾಂಸ್ಕೃತಿಕ ರಚನೆ ಸಮ್ಮಿಳಿತಗೊಂಡು ಒಂದಾಗಿ ಉಳಿಯಲಿಲ್ಲ. ಈಗ, ಸತತ ಮೂರು ಅವಧಿಗೆ ಸಿಪಿಎಂ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಮತ್ತು ಸಂಪುಟದ ಬಹುಭಾಗ ಬಂಗಾಳಿಗಳೇ ಇದ್ದಾರೆ. ಒಂದು ಕಾಲದಲ್ಲಿ ತಮ್ಮ ಹೆತ್ತವರು ಬೆಂಬಲಿಸುತ್ತಿದ್ದ ಪಕ್ಷವನ್ನು ಈಗ ಬುಡಕಟ್ಟು ವಿದ್ಯಾರ್ಥಿಗಳು ಅನುಮಾನದಿಂದಲೇ ನೋಡುತ್ತಾರೆ.

ತ್ರಿಪುರಾ ತನ್ನ ಭೂತ ಮತ್ತು ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳುತ್ತಿದೆ ಎಂಬುದರ ಕತೆಯನ್ನು ವಸ್ತುಸಂಗ್ರಹಾಲಯದ ಟ್ಯಾಗೋರ್ ವಿಭಾಗವು ಹೇಳುತ್ತದೆ. ವಸ್ತುಸಂಗ್ರಹಾಲಯದ ದ್ವಾರದಲ್ಲಿರುವ ಸಣ್ಣ ಪ್ರತಿಮೆ ಮತ್ತೊಂದು ಕತೆ ಹೇಳುತ್ತದೆ. ವಸ್ತುಸಂಗ್ರಹಾಲಯ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಣ್ಣ ಪುತ್ಥಳಿ ಎದುರಾದರೆ ದೂರದಲ್ಲಿ ಉಜ್ಜಯಂತ ಅರಮನೆ ಕಾಣಿಸುತ್ತದೆ. ತ್ರಿಪುರಾದ ಮುಖ್ಯಮಂತ್ರಿ ದಶರಥ ದೇಬ್ ಅವರು 1995ರಲ್ಲಿ ಪುತ್ಥಳಿಯನ್ನು ಅನಾವರಣಗೊಳಿಸಿದರು ಎಂದು ಅಲ್ಲಿರುವ ಫಲಕ ಹೇಳುತ್ತದೆ.

‘ಭಾರತದಲ್ಲಿ ದಮನಕ್ಕೆ ಒಳಗಾದ ಜನರ ಪರವಾದ ಬಹುದೊಡ್ಡ ಹೋರಾಟಗಾರ’ ಎಂದು ಅಂಬೇಡ್ಕರ್ ಅವರನ್ನು ಇಲ್ಲಿ ವಿವರಿಸಲಾಗಿದೆ. ಅದು ನಿಜ ಕೂಡ. ಅದೇ ರೀತಿಯಲ್ಲಿ, ತ್ರಿಪುರಾದಲ್ಲಿ ದಮನಕ್ಕೆ ಒಳಗಾದ ಜನರ ಪರವಾಗಿ ಹೋರಾಡಿದ ಮೊದಲ ದೊಡ್ಡ ವ್ಯಕ್ತಿ ಎಂದು ದಶರಥ ದೇಬ್ ಅವರನ್ನೂ ಬಣ್ಣಿಸಬಹುದು. ಬುಡಕಟ್ಟು ಹಿನ್ನೆಲೆಯಿಂದ ಬಂದ ದೇಬ್ ಅವರು ಸಿಪಿಐ ಸೇರುವುದಕ್ಕೆ ಮೊದಲು ಕ್ರಾಂತಿಕಾರಿ ರೈತ ಸಂಘಟಕರಾಗಿ ವೃತ್ತಿ ಜೀವನ ಆರಂಭಿಸಿದರು.

ಈ ಮಧ್ಯೆ ಅವರು ಕೇಂದ್ರ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟದಲ್ಲಿಯೂ ಭಾಗಿಯಾಗಿದ್ದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ಅವರು 1952ರಲ್ಲಿ ಆಯುಧ ಕೆಳಗಿಟ್ಟರು. ನಾಲ್ಕು ಅವಧಿಗೆ ಸಂಸದರಾಗಿ ಕೆಲಸ ಮಾಡಿದರು. 1970ರ ದಶಕದಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿದ ದೇಬ್ 1993ರಲ್ಲಿ ತ್ರಿಪುರಾದ ಮುಖ್ಯಮಂತ್ರಿಯಾದರು.

ಅಂಬೇಡ್ಕರ್ ಅವರು ಆಧುನಿಕ ಭಾರತದ ಶ್ರೇಷ್ಠ ನಿರ್ಮಾತೃಗಳಲ್ಲಿ ಒಬ್ಬರು ಎಂದು ಈಗ ಗುರುತಿಸಲಾಗುತ್ತದೆ. ಆದರೆ, 1995ರಲ್ಲಿಯೇ ಮರಣೋತ್ತರವಾಗಿ ಅಂಬೇಡ್ಕರ್ ಅವರ ಗುರುತಿಸುವಿಕೆ ಆರಂಭವಾಗಿತ್ತು. ವಿಶೇಷವಾಗಿ ಕಮ್ಯುನಿಸ್ಟರು ಅಂಬೇಡ್ಕರ್‌ ಅವರನ್ನು ನಿರ್ಲಕ್ಷಿಸಿದ್ದರು; ಅದಕ್ಕೆ ಒಂದು ಕಾರಣ, ಜಗತ್ತಿನ ಎಲ್ಲೆಡೆಯಂತೆ ಭಾರತದ ಕಮ್ಯುನಿಸ್ಟರು ಕೂಡ ಜಾತಿಗಿಂತ ವರ್ಗವೇ ಹೆಚ್ಚು ಮುಖ್ಯ ಎಂದು ಭಾವಿಸಿದ್ದಾಗಿತ್ತು. ನಿರಂಕುಶವಾದಿ ರಾಜಪ್ರಭುತ್ವದ ವಿರುದ್ಧ ಗಣತಂತ್ರ ಪ್ರಜಾತಂತ್ರದ ಗೆಲುವನ್ನು ಸೂಚಿಸುವಂತೆ ಉಜ್ಜಯಂತ ಅರಮನೆಯ ಮುಂದೆ 1995ರಲ್ಲಿ ಅಂಬೇಡ್ಕರ್ ಅವರನ್ನು ಸ್ಥಾಪಿಸಿದ್ದು ರಾಜಕೀಯ ದಾರ್ಶನಿಕನೊಬ್ಬನ ಸಾಂಕೇತಿಕ ನಡೆ.

ಪಶ್ಚಿಮ ಬಂಗಾಳದಲ್ಲಿ ಕೂಡ ಹಲವು ದಶಕಗಳ ಕಾಲ ಸಿಪಿಎಂ ಅಧಿಕಾರದಲ್ಲಿದ್ದಾಗ ದಲಿತರು ಮತ್ತು ಆದಿವಾಸಿಗಳು ಸಾಮಾಜಿಕವಾಗಿ ದಮನಕ್ಕೆ ಒಳಗಾಗುವುದು ಮುಂದುವರಿದೇ ಇತ್ತು. ರಾಜಕೀಯವಾಗಿಯೂ ಅವರು ತೀರಾ ಅಂಚಿನಲ್ಲಿಯೇ ಇದ್ದರು. ಪಶ್ಚಿಮ ಬಂಗಾಳದ ಸಿಪಿಎಂ ದಶರಥ ದೇಬ್ ಅಂಥವರನ್ನು ಕಾಣಲೇ ಇಲ್ಲ. ಅಂಬೇಡ್ಕರ್ ಅವರ ಮಹತ್ವವನ್ನು ಜ್ಯೋತಿ ಬಸು ಅವರು ಗ್ರಹಿಸಲೇ ಇಲ್ಲ. ಆದರೆ, ತ್ರಿಪುರಾದ ಕೆಲವು ಕ್ರಾಂತಿಕಾರಿಗಳಿಗೆ ಅದು ಅರ್ಥವಾಗಿತ್ತು. ಈ ರಾಜ್ಯದಲ್ಲಿ ಈಗ ಆ ಚಿಂತನೆಯನ್ನು ಮರುಶೋಧಿಸಿ ಪುನಶ್ಚೇತನಗೊಳಿಸುವ ಅಗತ್ಯ ಇದೆ.

Comments
ಈ ವಿಭಾಗದಿಂದ ಇನ್ನಷ್ಟು
ಲೆನಿನ್‍ ಬದಲಿಗೆ ಭಗತ್‍ ಸಿಂಗ್‍ ಯಾಕಾಗದು?

ಗುಹಾಂಕಣ
ಲೆನಿನ್‍ ಬದಲಿಗೆ ಭಗತ್‍ ಸಿಂಗ್‍ ಯಾಕಾಗದು?

16 Mar, 2018
ಪ್ರಸಿದ್ಧಿಯ ಜತೆಗೇ ಇದೆ ವಿಶ್ವಾಸಾರ್ಹತೆಯ ಹೊಣೆ

ಗುಹಾಂಕಣ
ಪ್ರಸಿದ್ಧಿಯ ಜತೆಗೇ ಇದೆ ವಿಶ್ವಾಸಾರ್ಹತೆಯ ಹೊಣೆ

2 Mar, 2018
‘ಜೋಳಿಗೆದಾಸ’ ಅರ್ಥಶಾಸ್ತ್ರಜ್ಞನ ಜತೆಗೊಂದು ದಿನ

ಗುಹಾಂಕಣ
‘ಜೋಳಿಗೆದಾಸ’ ಅರ್ಥಶಾಸ್ತ್ರಜ್ಞನ ಜತೆಗೊಂದು ದಿನ

16 Feb, 2018
ಬುಡಕಟ್ಟು ಬದುಕಿಗಾಗಿ ಸೆಣಸಿದ ಆದಿವಾಸಿ

ಗುಹಾಂಕಣ
ಬುಡಕಟ್ಟು ಬದುಕಿಗಾಗಿ ಸೆಣಸಿದ ಆದಿವಾಸಿ

2 Feb, 2018
ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

ಗುಹಾಂಕಣ
ಕೊಹ್ಲಿ: ಶ್ರೇಷ್ಠತೆ ಮೇಲೆ ಸೊಕ್ಕಿನ ನೆರಳು

19 Jan, 2018