ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಅಧಿಕಾರಿಯಿಂದ ಪೊಲೀಸರಿಗೆ ಧಮಕಿ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ವಿಜಯಪುರ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಬಂಧನದ ವಾರೆಂಟ್‌ ತಂದಿದ್ದ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸರಿಗೆ, ಕೆಎಎಸ್‌ ಅಧಿಕಾರಿ ಎಚ್.ಭಾಗ್ಯಲಕ್ಷ್ಮಿ ಅವರು ಆಲಮಟ್ಟಿಯಲ್ಲಿ ಗುರುವಾರ ಧಮಕಿ ಹಾಕಿದ್ದು, ಅದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರ ವಿರುದ್ಧ ₹1.4 ಲಕ್ಷ ಚೆಕ್‌ ಬೌನ್ಸ್‌ ಆರೋಪ ಇದೆ.

ಬೆಂಗಳೂರಿನಿಂದ ಬಂದಿದ್ದ ಮಹಿಳಾ ಪೊಲೀಸರು, ಆಲಮಟ್ಟಿ ಪೊಲೀಸರ ಸಹಕಾರದಿಂದ ಭಾಗ್ಯಲಕ್ಷ್ಮಿ ಅವರನ್ನು ಬಂಧಿಸಲು ಗುರುವಾರ ಬೆಳಿಗ್ಗೆ ಸರ್ಕಾರಿ ವಸತಿ ಗೃಹಕ್ಕೆ ತೆರಳಿದ್ದರು. ವಾರೆಂಟ್ ಕೊಟ್ಟು ಬಂಧನದ ಬಗ್ಗೆ ತಿಳಿಸುತ್ತಿದ್ದಂತೆ, ಗರಂ ಆದ ಮಹಿಳಾ ಅಧಿಕಾರಿ ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ‘ನಾನು ಕೂಡಾ ಕಮಿಷನರ್, ವಾರೆಂಟ್ ಕೊಟ್ಟೀರಲ್ಲ... ನಡೀರಿ... ಧಮ್‌ ಇದ್ದರೆ ನನ್ನ ಟಚ್ ಮಾಡಿ ನೋಡ್ತೀನಿ...’ ಎಂಬಿತ್ಯಾದಿ ಪದಗಳನ್ನು ಬಳಸಿ ಅರ್ಧ ತಾಸಿಗೂ ಹೆಚ್ಚಿನ ಅವಧಿ ಪೊಲೀಸರ ವಿರುದ್ಧವೇ ರೇಗಾಡಿದ್ದಾರೆ. ಈ ದೃಶ್ಯಾವಳಿಯ ವಿಡಿಯೊ ತುಣುಕು ವೈರಲ್‌ ಆಗಿದೆ.

ಪೊಲೀಸರ ಜತೆಗಿನ ವಾಗ್ವಾದದ ಬಳಿಕ ಭಾಗ್ಯಲಕ್ಷ್ಮಿ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ ಕುಮಾರ್ ಜೈನ್‌ ಅವರನ್ನು ಸಂಪರ್ಕಿಸಿ, ಬಂಧಿಸದಂತೆ ಕೋರಿದರು. ಖುದ್ದಾಗಿ ಇದೇ 28ರಂದು ನ್ಯಾಯಾಲಯಕ್ಕೆ ಹಾಜರಾಗುತ್ತೇನೆ ಎಂದು ಮನವಿ ಮಾಡಿದರು. ಬಳಿಕ ಬಂಧಿಸದಂತೆ ಬೆಂಗಳೂರು ಪೊಲೀಸರಿಗೆ ಎಸ್ಪಿ ಸೂಚಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

‘ನ್ಯಾಯಾಲಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಬಂಧಿಸದಂತೆ ಸೂಚನೆ ನೀಡಿದ್ದೇನೆ. 28ರಂದು ಹಾಜರಾಗದಿದ್ದರೆ ಬಂಧನ ಖಚಿತ’ ಎಂದು ಜೈನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT