ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಸುದಾರನ ಎಡವಟ್ಟು– ಶವ ಅದಲುಬದಲು

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ದಾವಣಗೆರೆ: ವಾರಸುದಾರರೊಬ್ಬರ ಎಡವಟ್ಟಿನಿಂದಾಗಿ ಶವ ಅದಲು–ಬದಲಾಗಿ, ಗೊಂದಲಕ್ಕೆ ಎಡೆಮಾಡಿದ ಪ್ರಸಂಗ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಆ ವ್ಯಕ್ತಿ, ತಮ್ಮ ಕುಟುಂಬದಲ್ಲದ ಶವವನ್ನು ತೆಗೆದುಕೊಂಡು ಹೋಗಿದ್ದಲ್ಲದೆ, ಅಂತ್ಯಸಂಸ್ಕಾರವನ್ನೂ ಮುಗಿಸಿದ್ದು ವೈದ್ಯರು ಹಾಗೂ ಮತ್ತೊಂದು ಶವದ ವಾರಸುದಾರ ಕುಟುಂಬದ ನಡುವೆ ಜಟಾಪಟಿಗೆ ಕಾರಣವಾಯಿತು.

ಮಲೇಬೆನ್ನೂರಿನ ಗುರುರಾಜ್‌ ಎಂಬುವವರು ಶವಾಗಾರದಲ್ಲಿದ್ದ ತನ್ನ ಅಕ್ಕ ಶಿಲ್ಪಾ (40) ಶವವನ್ನು ತೆಗೆದುಕೊಂಡು ಹೋಗುವ ಬದಲು ದಾವಣಗೆರೆ ತಾಲ್ಲೂಕಿನ ದೊಡ್ಡಬೂದಿಹಾಳ ಗ್ರಾಮದ ನಿವಾಸಿ ಕೆಂಚಮ್ಮ (62) ಹೆಸರಿನ ಮತ್ತೊಂದು ಶವದ ಮರಣೋತ್ತರ ಪರೀಕ್ಷೆ ಮಾಡಿಸಿ ತೆಗೆದುಕೊಂಡು ಹೋಗಿ ಮೃತ ದೇಹದ ಮುಖ ಕೂಡ ನೋಡದೇ ಅಂತ್ಯಕ್ರಿಯೆ ನಡೆಸಿದರು.

ಕೆಂಚಮ್ಮ ಅವರ ಮಕ್ಕಳು ಹಾಗೂ ಸಂಬಂಧಿಕರು ಗುರುವಾರ ಬೆಳಿಗ್ಗೆ 9 ಗಂಟೆಗೆ ಶವಾಗಾರಕ್ಕೆ ಬಂದು ಕೆಂಚಮ್ಮ ಶವವನ್ನು ಮರಣೋತ್ತರ ಪರೀಕ್ಷೆ ಮಾಡಿ ಎಂದು ವೈದ್ಯರಿಗೆ ಹೇಳಿದಾಗಲೇ ಶವವನ್ನು ಮತ್ತೊಬ್ಬರು ತೆಗೆದುಕೊಂಡು ಹೋಗಿರುವುದು ಕಂಡುಬಂದಿದೆ.

ಸಿಟ್ಟಿಗೆದ್ದ ಕೆಂಚಮ್ಮ ಸಂಬಂಧಿಕರು, ‘ನಮ್ಮ ಅವ್ವನ ಶವ ಕೊಡ್ರಿ’ ಎಂದು ರೋದಿಸಿದರು. ಇದರಿಂದ ಶವಾಗಾರದ ಎದುರು ಕೆಲಕಾಲ ಬಿಗುವಿನ ವಾತಾವಾರಣ ನಿರ್ಮಾಣವಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕೆಂಚಮ್ಮ ಸಂಬಂಧಿಕರನ್ನು ಸಮಾಧಾನಪಡಿಸಲು ಯತ್ನಿಸಿದರು.

‘ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ನಿರ್ಲಕ್ಷ್ಯದಿಂದಾಗಿ ಶವ ಅದಲು ಬದಲಾಗಿದೆ. ಸಂಬಂಧಿಸಿದ ವ್ಯೆದ್ಯರನ್ನು ಅಮಾನತುಗೊಳಿಸಬೇಕು’ ಎಂದು ಸ್ಥಳದಲ್ಲಿದ್ದ ಪಾಲಿಕೆ ಸದಸ್ಯ ಎಂ.ಹಾಲೇಶ್‌, ಪಾಲಿಕೆ ಸಿಬ್ಬಂದಿ ಗೋವಿಂದರಾಜ್‌, ದಲಿತ ಮುಖಂಡರಾದ ವೀರಭದ್ರಪ್ಪ, ಹೆಗ್ಗೆರೆ ರಂಗಪ್ಪ ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ ಸಮ್ಮುಖದಲ್ಲೇ ವೈದ್ಯರ ಹಾಗೂ ಪ್ರತಿಭಟನಾಕಾರ ನಡುವೆ ಮಾತಿನ ಚಕಮಕಿ ನಡೆಯಿತು.

ಕೆಂಚಮ್ಮ ಶವ ತೆಗೆಕೊಂಡು ಹೋಗಿ ಸುಟ್ಟುಹಾಕಿದ್ದ ಮಲೇಬೆನ್ನೂರಿನ ಗುರುರಾಜ್‌ ಅವರನ್ನು ಪೊಲೀಸರು ಕರೆಸಿ ವಿವರ ಪಡೆದರು.

‘ಅಚಾತುರ್ಯದಿಂದಾಗಿ ಈ ಘಟನೆ ನಡೆದಿದೆ. ಮಲೇಬೆನ್ನೂರಿಗೆ ತೆರಳಿ ಸುಟ್ಟು ಹಾಕಿದ್ದ ಕೆಂಚಮ್ಮ ಅವರ ಚಿತಾಭಸ್ಮವನ್ನು ತಂದು ಅಂತ್ಯಕ್ರಿಯೆ ನಡೆಸಬೇಕು. ಇದಕ್ಕೆ ಸಂಬಂಧಪಟ್ಟವರಿಂದ ಪರಿಹಾರವನ್ನೂ ಕೊಡಿಸಲಾಗುವುದು’ ಎಂದು ಪೊಲೀಸರು ಭರವಸೆ ನೀಡಿದ ನಂತರ ಕೆಂಚಮ್ಮ ಅವರ ಸಂಬಂಧಿಕರು ಸಮಾಧಾನಗೊಂಡರು.

ಶವ ಸರಿಯಾಗಿ ಗುರುತಿಸದೇ ಮರಣೋತ್ತರ ಪರೀಕ್ಷೆ!
‘ದೊಡ್ಡ ಬೂದಿಹಾಳ್‌ ಗ್ರಾಮದ ಕೆಂಚಮ್ಮ ಅವರು, ಕೆಲ ದಿನಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕೀಟನಾಶಕ ಸಿಂಪಡಿಸಿದ್ದ ಟೊಮೆಟೊ ಹಣ್ಣು ತಿಂದು ಅಸ್ವಸ್ಥಗೊಂಡಿದ್ದರು. ಜಿಲ್ಲಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಬುಧವಾರ ರಾತ್ರಿ ಮೃತರಾಗಿದ್ದರು’ ಎಂದು ಎಂ. ಹಾಲೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಶವಾಗಾರದಲ್ಲಿ ಇರಿಸಲಾಗಿದ್ದ ಕೆಂಚಮ್ಮ ಶವದ ಮರಣೋತ್ತರ ಪರೀಕ್ಷೆ ಮಾಡಿಕೊಡಿ ಎಂದು ಡಾ.ಮೋಹನ್‌ ಕುಮಾರ್‌ ಅವರಲ್ಲಿ ಮನವಿ ಮಾಡಲಾಗಿತ್ತು. ಈಗಾಗಲೇ ಸಮಯವಾಗಿದ್ದು, ಬೆಳಿಗ್ಗೆ ಪರೀಕ್ಷೆ ಮಾಡಿಕೊಡಲಾಗುವುದು ಎಂದು ವೈದ್ಯರು ಹೇಳಿ ಕಳುಹಿಸಿದ್ದರು. ಆದರೆ, ಶವಾಗಾರದಲ್ಲಿದ್ದ ಮಲೇಬೆನ್ನೂರಿನ ಶಿಲ್ಪಾ ಶವವನ್ನು ಪಡೆಯಲು ಬಂದಿದ್ದ ಗುರುರಾಜ್‌, ವೈದ್ಯರಲ್ಲಿ ಮನವಿ ಮಾಡಿ ಮಧ್ಯರಾತ್ರಿಯೇ ತರಾತುರಿಯಲ್ಲಿ ಸೋದರಿಯ ಶವವನ್ನು ಗುರುತಿಸದೇ ಕೆಂಚಮ್ಮ ಶವದ  ಮರಣೋತ್ತರ ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದಾನೆ’ ಎಂದು ವಿವರ ನೀಡಿದರು.

ವೈದ್ಯರು ನಿರ್ಲಕ್ಷಿಸಿಲ್ಲ: ಡಾ. ನೀಲಾಂಬಿಕೆ
ವೈದ್ಯಕೀಯ ನಿಯಮದ ಅನ್ವಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಂಬಂಧಿಕರು ಪೊಲೀಸರ ಸಮಕ್ಷಮದಲ್ಲಿ ತಮಗೆ ಸೇರಿದ ಶವವನ್ನು ಗುರುತಿಸಿದಾಗಲೇ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ನಡೆದಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT