ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಕಿ ಭಾಂಬ್ರಿಗೆ ಸಾಟಿಯಾಗದ ಪ್ರಜ್ಞೇಶ್

ಕ್ಲಾರ್ಕ್‌ಗೆ ರೋಚಕ ಜಯ: ಡಬಲ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ ದಿವಿಜ್ ಜೋಡಿ
Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏಸ್‌ಗಳಿಗೆ ಬೆದರದೆ, ಸ್ವಯಂ ತಪ್ಪುಗಳು ಎಸಗಿದಾಗ ಎದೆ ಗುಂದದೆ ಮುನ್ನುಗ್ಗಿದ ಮೂರನೇ ಶ್ರೇಯಾಂಕದ ಆಟಗಾರ ಭಾರತದ ಯೂಕಿ ಭಾಂಬ್ರಿ ತಾಳ್ಮೆಯಿಂದ ಆಡಿ ಗೆದ್ದರು.

ಈ ಮೂಲಕ ಎಟಿಪಿ ಚಾಲೆಂಜರ್‌ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು. ಕಳೆದ ವಾರ ನಡೆದ ಪುಣೆ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಇಲ್ಲಿಗೆ ಬಂದಿರುವ ಭಾಂಬ್ರಿ ಭಾರತದವರೇ ಆದ ಪ್ರಜ್ಞೇಶ್‌ ಗುಣೇಶ್ವರನ್ ಅವರನ್ನು ಗುರುವಾರ 7–5, 6–2ರಿಂದ ಮಣಿಸಿದರು.

ಕೆ.ಎಸ್‌.ಎಲ್‌.ಟಿ.ಎ ಕೋರ್ಟ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಕಳೆದ ಮೂರು ದಿನ ‌ಉತ್ತಮವಾಗಿ ಆಡಿದ್ದ ಗುಣೇಶ್ವರನ್‌ ಗುರುವಾರದ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ಆಟಗಾರ ಎಂದೇ ಪರಿಗ ಣಿಸಲಾಗಿತ್ತು. ಆರಂಭದಲ್ಲಿ ಅವರು ಇದಕ್ಕೆ ತಕ್ಕಂತೆ ಆಡಿದರು. ಮೊದಲ ನಿಮಿಷದಲ್ಲೇ ಎರಡು ಏಸ್‌ಗಳನ್ನು ಸಿಡಿಸಿ ಮೊದಲ ಗೇಮ್ ಗೆದ್ದುಕೊಂಡ ಅವರು ಎರಡನೇ ಗೇಮ್‌ನಲ್ಲೂ ಎರಡು ಏಸ್ ಸಿಡಿಸಿ ಮಿಂಚಿದರು. ಆದರೆ ಯೂಕಿ ಭಾಂಬ್ರಿ ತಾಳ್ಮೆ ಕಳೆದುಕೊಳ್ಳದೆ ಸೆಟ್‌ನಲ್ಲಿ 3–3ರ ಸಮಬಲ ಸಾಧಿಸಿದರು.

ನಿಧಾನಕ್ಕೆ ಲಯ ಕಂಡುಕೊಂಡ ಅವರು ನಂತರ ಗುಣೇಶ್ವರನ್‌ಗೆ ಸಮರ್ಥ ಉತ್ತರ ನೀಡಿದರು. ಎರಡು ಬ್ರೇಕ್ ಪಾಯಿಂಟ್‌ಗಳ ಪೈಕಿ ಒಂದರಲ್ಲಿ ಜಯಿಸಿದ ಅವರು ಪ್ರಯಾಸದಿಂದಲೇ ಮೊದಲ ಸೆಟ್ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ಅಮೋಘ ಆಟವಾಡಿ ಎದುರಾಳಿಯನ್ನು ಕಳೆಗುಂದಿಸಿದರು. ಚಾಕಚಕ್ಯತೆಯಿಂದ ಆಡಿ ಎರಡು ಬ್ರೇಕ್ ಪಾಯಿಂಟ್‌ಗಳನ್ನು ಸಂಪಾದಿಸಿದರು. ಒಂಬತ್ತು ಏಸ್‌ಗಳನ್ನು ಸಿಡಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರೂ ಪಂದ್ಯ ಗೆಲ್ಲಲು ಗುಣೇಶ್ವರನ್‌ಗೆ ಸಾಧ್ಯವಾಗಲಿಲ್ಲ.

ಕ್ಲಾರ್ಕ್‌ಗೆ ಭಾರಿ ಪೈಪೋಟಿ ನೀಡಿದ ಪಾವಿಕ್ ಒಂದನೇ ಅಂಕಣದಲ್ಲಿ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಬ್ರಿಟನ್‌ನ ಜೇ ಕ್ಲಾರ್ಕ್‌ ಗೆದ್ದರು. ಅವರು ಕ್ರೊವೇಷಿಯಾದ ಆ್ಯಂಟೆ ಪಾವಿಕ್‌ ಅವರ ಭಾರಿ ಸವಾಲನ್ನು ಎದುರಿಸಬೇಕಾಯಿತು. ಬಲಶಾಲಿ ಹೊಡೆತಗಳಿಗೆ ಹೆಸರಾಗಿರುವ ಕ್ಲಾರ್ಕ್‌ ಮೊದಲ ಸೆಟ್‌ 6–2ರಿಂದ ಸುಲಭವಾಗಿ ಗೆದ್ದು ಬೀಗಿದರು.

ಎರಡನೇ ಸೆಟ್‌ನಲ್ಲೂ ಉತ್ತಮ ಆರಂಭ ಮಾಡಿದರು. ಆದರೆ ನಂತರ ಪಾವಿಕ್‌ ಮೇಲುಗೈ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಐದು ಏಸ್‌ಗಳನ್ನು ಸಿಡಿಸಿದ ಅವರು ಎರಡನೇ ಸೆಟ್‌ನಲ್ಲೂ ಐದು ಏಸ್‌ ಸಿಡಿಸಿ ಮಿಂಚಿದರು. ಮೂರು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಂಡು 6–4ರಿಂದ ಸೆಟ್ ಗೆದ್ದು ಪಂದ್ಯವನ್ನು ರೋಚಕ ಹಂತಕ್ಕೆ ತಲುಪಿಸಿರು.

ಮೂರನೇ ಸೆಟ್‌ನಲ್ಲಿ ಉಭಯ ಆಟಗಾರರು ಪಟ್ಟು ಬಿಡದೆ ಕಾದಾ ಡಿದರು. ಮೂರು ಏಸ್‌ಗಳನ್ನು ಸಿಡಿಸಿದ ಪಾವಿಕ್‌ ಐದರಲ್ಲಿ ನಾಲ್ಕು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿ ಕ್ಲಾರ್ಕ್‌ ಅವರನ್ನು ದಂಗುಬಡಿಸಿದರು.

ಕ್ಲಾರ್ಕ್ ಕೂಡ ಪಂದ್ಯವನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಪ್ರಬಲ ಹೊಡೆತಗಳ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಿ 6–6ರಿಂದ ಸಮಬಲ ಸಾಧಿಸಿದರು. ಟೈ ಬ್ರೇಕರ್‌ನಲ್ಲಿ ಕ್ಲಾರ್ಕ್‌  ಚುರುಕಿನ ಆಟವಾಡಿ ಗೆದ್ದರು.

ಸೆಂಟರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ತೈಪೆಯ ಸಂಗ್ ಹುವಾ ಯಾಂಗ್ ಮತ್ತು ಫ್ರಾನ್ಸ್‌ನ ಆ್ಯಂಟೊನಿ ಎಸ್ಕೊಫಿಯರ್‌ ಪ್ರೇಕ್ಷಕರನ್ನು ರಂಜಿಸಿದರು. ಪಂದ್ಯದಲ್ಲಿ ತೈಪೆ ಆಟಗಾರ ಗೆದ್ದರು.

ಫಲಿತಾಂಶಗಳು
ಡಬಲ್ಸ್‌ (ಸೆಮಿಫೈನಲ್‌):
ಕ್ರೊವೇ ಷಿಯಾದ ಇವಾನ್‌ ಸಬನೊವ್‌–ಮಟೆಜ್‌ ಸಬನೊವ್ ಜೋಡಿಗೆ ಬೋಸ್ನಿಯಾದ ತೊಮಿಸ್ಲಾವ್ ಬ್ರಿಕ್–ಕ್ರೊವೇಷಿಯಾದ ಆಂಟೆ ಪಾವಿಕ್ ಜೋಡಿ ವಿರುದ್ಧ 7–6(3), 6–4ರಿಂದ ಜಯ; ರಷ್ಯಾದ ಮಿಖಾಯಲ್‌ ಎಲ್ಜಿನ್‌–ಭಾರತದ ದಿವಿಜ್ ಶರಣ್ ಜೋಡಿಗೆ ಭಾರತದ ಎನ್‌.ಶ್ರೀರಾಮ್ ಬಾಲಾಜಿ–ವಿಷ್ಣು ವರ್ಧನ್ ಜೋಡಿ ವಿರುದ್ಧ 6–4, 4–6, 10–8ರಿಂದ ಜಯ.

ಕಾವ್ಸಿಕ್‌ಗೆ ಆಘಾತ ನೀಡಿದ ಸುಮಿತ್ ನಗಾಲ್‌
ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಯೂಕಿ ಭಾಂಬ್ರಿ ಮತ್ತು ಸುಮಿತ್ ನಗಾಲ್ ಸೆಣಸುವರು. ಶುಕ್ರವಾರ ಸಂಜೆ 4.30ರ ನಂತರ ಈ ಪಂದ್ಯ ನಡೆಯಲಿದೆ. ಗುರುವಾರ ಸಂಜೆ ನಡೆದ ರೋಚಕ ಹಣಾಹಣಿಯಲ್ಲಿ ಸುಮಿತ್ ನಗಾಲ್‌ ಅಗ್ರ ಶ್ರೇಯಾಂಕದ ಸ್ಲೊವಾಕಿಯಾ ಆಟಗಾರ ಬ್ಲಾಜ್ ಕಾವ್ಸಿಕ್‌ ಅವರನ್ನು ಮಣಿಸಿದರು.

ಮೊದಲ ಎರಡು ಸುತ್ತಿನ ಪಂದ್ಯಗಳಲ್ಲಿ ಪ್ರಯಾಸದ ಜಯ ಗಳಿಸಿದ ಕಾವ್ಸಿಕ್‌ ಕ್ವಾರ್ಟರ್ ಫೈನಲ್‌ನಲ್ಲಿ ನಗಾಲ್ ಅವರ ಕೆಚ್ಚೆದೆಯ ಆಟಕ್ಕೆ ತಲೆ ಬಾಗಿದರು. ಐದರಲ್ಲಿ ಮೂರು ಬ್ರೇಕ್ ಪಾಯಿಂಟ್‌ಗಳನ್ನು ಗೆದ್ದ ನಗಾಲ್‌ ಯಾವುದೇ ಕ್ಷಣದಲ್ಲಿ ಉದ್ವೇಗಕ್ಕೆ ಒಳಗಾಗದೆ ಪಂದ್ಯ ಗೆದ್ದರು. ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಜೇ ಕ್ಲಾರ್ಕ್‌ ಮತ್ತು ತ್ಸಂಗ್ ಹುವಾ ಯಾಂಗ್ ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT