ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರ ನಿರ್ಮಾಣದ ನಿರ್ಣಯ ನಿರೀಕ್ಷೆ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಉಡುಪಿ: ಮೂರು ದಿನಗಳ ಕಾಲ ನಡೆಯುವ ಧರ್ಮ ಸಂಸತ್‌ ಸಮ್ಮೇಳನ ಹಾಗೂ ಹಿಂದೂ ಸಮಾಜೋತ್ಸವಕ್ಕೆ ಉಡುಪಿ ಸಕಲ ರೀತಿಯಿಂದಲೂ ಸಜ್ಜಾಗಿದೆ. ಧರ್ಮ ರಕ್ಷಣೆ, ಜಾಗೃತಿ ಹಾಗೂ ಧರ್ಮದಲ್ಲಿರುವ ಹುಳುಕುಗಳನ್ನು ನಿವಾರಣೆ ಮಾಡುವ ಉದ್ದೇಶದಿಂದ ಮಹತ್ವದ ನಿರ್ಣಯ ಕೈಗೊಳ್ಳಲು ಒಂದೂವರೆ ಸಾವಿರಕ್ಕೂ ಅಧಿಕ ಸಂತರು ಉತ್ಸುಕರಾಗಿದ್ದಾರೆ.

ನಗರದ ರಾಯಲ್ ಗಾರ್ಡನ್‌ನಲ್ಲಿ ಸಿದ್ಧವಾಗಿರುವ ‘ನಾರಾಯಣ ಗುರು’ ಸಭಾ ಮಂದಿರದ ‘ಭರಣಯ್ಯ’ ಬೃಹತ್ ವೇದಿಕೆಯಲ್ಲಿ ಬೆಳಿಗ್ಗೆ 10 ಗಂಟೆಗೆ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಕಿರಿಯ ಸಿದ್ಧಲಿಂಗ ಸ್ವಾಮೀಜಿ, ಆದಿಚುಂಚನಗುರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ ಭಾಗವತ್ ಅವರು ಉಪಸ್ಥಿತರಿರುವರು. ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಮಾರ್ಗದರ್ಶನ ನೀಡುವರು.

ಮಧ್ಯಾಹ್ನ 3.30ರಿಂದ ಸಭಾಗೋಷ್ಠಿ ನಡೆಯಲಿದ್ದು, ‘ಶ್ರೀರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಮುಂದಿನ ದಾರಿ’, ‘ಗೋ ಸಂರಕ್ಷಣೆ ಮತ್ತು ಸಂವರ್ಧನೆ’ ವಿಷಯದ ಬಗ್ಗೆ ಸಂತರು ಚರ್ಚೆ ನಡೆಯಲಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಈ ಸಭೆಗೆ ಭಾರಿ ಮಹತ್ವವಿದ್ದು ‘ರಾಮ ಮಂದಿರ ನಿರ್ಮಾಣದ’ ಘೋಷಣೆ ಹಾಗೂ ದಿನಾಂಕ ನಿಗದಿಯಾಗುವ ನಿರೀಕ್ಷೆ ಇದೆ.

ಉಡುಪಿಯಲ್ಲಿ 1985ರಲ್ಲಿ ನಡೆದಿದ್ದ ಸಂಸತ್‌ನಲ್ಲಿ ರಾಮ ಮಂದಿರದ ಬೀಗ ತೆರೆಯಬೇಕು ಎಂಬ ನಿರ್ಣಯ ಮಾಡಲಾಗಿತ್ತು. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಮಂದಿರದ ಬೀಗ ತೆರೆದಿತ್ತು. ಮುಂದಿನ ಹೋರಾಟಕ್ಕೆ ಅದು ಚೈತನ್ಯ ತುಂಬಿದ್ದನ್ನು ಸ್ಮರಿಸಬಹುದು.

ಕೇಸರಿ ಉತ್ಸಾಹ: ಧರ್ಮ ಸಂಸತ್ ಹಾಗೂ ಹಿಂದೂ ಸಮಾಜೋತ್ಸ ವಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಉಡುಪಿ, ಮಣಿಪಾಲ, ಮಲ್ಪೆಯಲ್ಲಿ ಕೇಸರಿ ಪತಾಕೆ ಹಾಗೂ ಭಗವಾಧ್ವಜ ಹಾರಾಟ ಗಮನ ಸೆಳೆಯುತ್ತಿದೆ. ಇಡೀ ನಗರ ಕೇಸರಿಮಯವಾಗಿದ್ದು, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸದಸ್ಯರು ಉತ್ಸಾಹ ದಿಂದಿದ್ದಾರೆ.  ಜನಸಾಮಾನ್ಯರೂ ಧರ್ಮ ಸಂಸತ್‌ ಬಗ್ಗೆ ವಿಶೇಷವಾಗಿ ಗಮನ ಹರಿಸುವಂತಹ ವಾತಾವರಣ ಇಲ್ಲಿ ನಿರ್ಮಾಣವಾಗಿದೆ.

ಸಂತರ ಸಮಾವೇಶಕ್ಕೆ 30 ಸಾವಿರ ಚದರ ಅಡಿಯ ಸಭಾಂಗಣ ನಿರ್ಮಾಣವಾಗಿದೆ. 150 ಮಂದಿ ಸಂತರು ಕುಳಿತುಕೊಳ್ಳಲು ಅವಕಾಶ ಇರುವಂತಹ ಬೃಹತ್ ವೇದಿಕೆಯೂ ಆಕರ್ಷವಾಗಿದೆ.

ಕಾರ್ಯಕ್ರಮದ ಸ್ಥಳಕ್ಕೆ ಸಂತರನ್ನು ಕರೆತರಲು ಹಾಗೂ ವಾಪಸ್ ಕರೆದುಕೊಂಡು ಹೋಗಲು 100ಕ್ಕೂ ಅಧಿಕ ವಾಹನ ಬಳಸಿಕೊಳ್ಳಲಾಗುತ್ತಿದೆ.

24 ಮತ್ತು 25ರಂದು ಸಂತರು, ಆಹ್ವಾನಿತ ಮುಖಂಡರು ಹಾಗೂ ಕಾರ್ಯಕರ್ತರು ಮಾತ್ರ ಭಾಗವಹಿಸುವರು. 26ರಂದು ಎಂಜಿಎಂ ಮೈದಾನ
ದಲ್ಲಿ ನಡೆಯುವ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನ ಭಾಷಣ ಮಾಡುವರು. ಧರ್ಮ ಸಂಸತ್ ನಿರ್ಣಯಗಳನ್ನು ಅಂದು ಅಧಿಕೃತವಾಗಿ ಘೋಷಿಸಲಾಗುತ್ತದೆ. ಗಣ್ಯರು ಹಾಗೂ ಸಂತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಕಾರ್ಯಕ್ರಮ ಇದಾಗಿರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT