ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಷಿನ್ ಟೂಲ್ ಪಾರ್ಕ್‌ ನಿರ್ಮಾಣ

ಎರಡು ದಿನಗಳ ಹೂಡಿಕೆದಾರರ ಶೃಂಗಸಭೆ ಉದ್ಘಾಟನೆ
Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ₹ 500 ಕೋಟಿ ವೆಚ್ಚದಲ್ಲಿ ಮಷಿನ್ ಟೂಲ್ ಪಾರ್ಕ್‌ ನಿರ್ಮಿಸಲಾಗುವುದು’ ಎಂದು ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಹೂಡಿಕೆದಾರರ ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚೆನ್ನೈ–ಬೆಂಗಳೂರು– ಚಿತ್ರದುರ್ಗ ಕೈಗಾರಿಕಾ ಕಾರಿಡಾರ್‌ಗೆ ಹೊಂದಿಕೊಂಡಂತೆ ತುಮಕೂರು ಬಳಿ 500 ಎಕರೆ ಪ್ರದೇಶದಲ್ಲಿ ಈ ಬೃಹತ್ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ 2019 ರ ಮಾರ್ಚ್‌ ವೇಳೆಗೆ ಇನ್ನೂ 15 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದಲ್ಲಿ 2013–14ರಿಂದ  2017–18 ರವರೆಗೆ 14 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಇದು ದೇಶದ ಸರಾಸರಿಗಿಂತ ಹೆಚ್ಚಿಗೆ ಇದೆ. 1.88 ಲಕ್ಷ ಬೃಹತ್ ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಟಿಯಾಗಿವೆ. ಇದಲ್ಲದೆ, ಆಹಾರ ಸಂಸ್ಕರಣೆ, ಉತ್ಪನ್ನಗಳ ಮೌಲ್ಯವರ್ಧನೆ ಮುಂತಾದ ಕ್ಷೇತ್ರಗಳಲ್ಲಿ 5.79 ಲಕ್ಷ ಉದ್ಯೋಗಗಳು ಸಿದ್ಧವಾಗುತ್ತಿವೆ.

‘ಕೈಗಾರಿಕಾ ಕ್ರಾಂತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ದೇಶದಲ್ಲಿ ಜಿಡಿಪಿಗೆ ಉತ್ಪಾದನಾ ವಲಯದ ಕೊಡುಗೆ ಶೇ 14ರಷ್ಟಿದ್ದರೆ, ಕರ್ನಾಟಕದಲ್ಲಿ ಇದು ಶೇ 14.76ರಷ್ಟಿದೆ. 2025ರ ವೇಳೆಗೆ ಇದನ್ನು ಶೇ 25ಕ್ಕೆ ಹೆಚ್ಚಳ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

‘ಆಟೊಮೊಬೈಲ್, ಏರೊಸ್ಪೇಸ್, ರಕ್ಷಣೆ ಮತ್ತು ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಉತ್ಪಾದನೆಯಲ್ಲಿ ಕರ್ನಾಟಕ ಪ್ರಮುಖ ಸ್ಥಾನದಲ್ಲಿದೆ. ದೊಡ್ಡ ಕೈಗಾರಿಕೆಗಳು ಬೆಳೆಯಬೇಕಾದರೆ ಸಣ್ಣ ಕೈಗಾರಿಕೆಗಳು ಅದಕ್ಕೆ ಬೆನ್ನೆಲುಬು ಇದ್ದಂತೆ. ಸಣ್ಣ ಕೈಗಾರಿಕೆಗಳ ಬೆಳವಣಿಗೆಗೂ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ.

‘ರಾಜ್ಯದ ಎಲ್ಲ ಭಾಗದಲ್ಲೂ ಕೈಗಾರಿಕೆಗಳನ್ನು ಬೆಳೆಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. 2025ರ ವೇಳೆಗೆ ಭಾರತ ಅತಿಹೆಚ್ಚು ಯುವಕರನ್ನು ಹೊಂದಿದಂತಹ ದೇಶ ಆಗುತ್ತದೆ. ಯುವಕರು ಕೇವಲ ಉದ್ಯೋಗಗಳನ್ನು ಕೇಳದೆ, ಸ್ವಯಂ ಉದ್ಯಮಿಗಳಾಗುವಂತಹ ಅವಕಾಶ ರಾಜ್ಯದಲ್ಲಿ ಸಾಕಷ್ಟಿದೆ. ಅದನ್ನು ಬಳಸಿಕೊಳ್ಳಬೇಕು.

‘ಬಂಡವಾಳ ಹೂಡುವವರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು 24 ತಾಸಿನ ಬದಲು ಕೇವಲ ನಾಲ್ಕು ತಾಸಿನಲ್ಲಿ ಎಲ್ಲ ಪರವಾನಗಿಗಳನ್ನು ನೀಡಬೇಕು ಎಂಬುದು ನನ್ನ ಉದ್ದೇಶ. ಅದಕ್ಕಾಗಿ ಅನೇಕ ಹಂತಗಳಲ್ಲಿ ಆನ್‌ಲೈನ್ ವ್ಯವಸ್ಥೆ ತರಲಾಗಿದೆ. ಕೆಲವು ಪರವಾನಗಿಗಳನ್ನು ಸಕಾಲ ವ್ಯಾಪ್ತಿಗೂ ಒಳಪಡಿಸಲಾಗಿದೆ’ ಎಂದರು.

ಬಯೋಕಾನ್ ಲಿಮಿಟೆಡ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಮಾತನಾಡಿ, ‘ಉದ್ಯೋಗ ಸೃಷ್ಟಿ ಇಲ್ಲದಂತಹ ಆರ್ಥಿಕ ಅಭಿವೃದ್ಧಿ ಅಪಾಯಕಾರಿ. ಎಲೆಕ್ಟ್ರಿಕ್ ವಾಹನಗಳು, ರೋಬಾಟ್‌, ಡ್ರೋನ್ ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ಅದಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗಬೇಕು. ಕರ್ನಾಟಕದ ಕೈಗಾರಿಕೆಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ಗಮನ ಸೆಳೆಯುವ ಪ್ರದರ್ಶನ ಮಳಿಗೆ
ಹೂಡಿಕೆದಾರರ ಶೃಂಗಸಭೆಯಲ್ಲಿ ಪ್ರದರ್ಶನ ಮಳಿಗೆಗಳು ಗಮನ ಸೆಳೆಯುತ್ತವೆ. ಸಣ್ಣ ಮತ್ತು ಬೃಹತ್ ಕೈಗಾರಿಕೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿವೆ.

ಬೃಹತ್ ಕೈಗಾರಿಕೆಗಳಿಗೆ ಪೂರಕವಾದ ಬಿಡಿ ಭಾಗಗಳನ್ನು ಉತ್ಪಾದಿಸುವ ಅನೇಕ ಸಣ್ಣ ಕೈಗಾರಿಕೆಗಳನ್ನು ಇಲ್ಲಿ ಕಾಣಬಹುದು. ಏರೋಸ್ಪೇಸ್, ರಕ್ಷಣೆ ಮತ್ತು ನಿರ್ಮಾಣ ಉದ್ಯಮಕ್ಕೆ ಪೂರಕವಾದ ಮತ್ತು ಇತ್ತೀಚೆಗೆ ಅಭಿವೃದ್ಧಿಪಡಿಸಿರುವ ಉತ್ಪನ್ನಗಳ ಬಗ್ಗೆ ಇಲ್ಲಿ ಮಾಹಿತಿ ದೊರೆಯುತ್ತದೆ.

ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ 700 ಮಳಿಗೆಗಳು ಮತ್ತು ಬೃಹತ್ ಕೈಗಾರಿಕೆಗಳ 300 ಮಳಿಗೆಗಳು ಇಲ್ಲಿವೆ. ಶುಕ್ರವಾರವೂ (ನ.24) ಪ್ರದರ್ಶನ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT