ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಂಬಿಗಲ್‌ ಹಾಲ್‌ ಮರು ನಿರ್ಮಾಣ: ಪುರಾತತ್ವ ಇಲಾಖೆಗೆ ಮನವಿ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಕುಸಿದಿದ್ದ ಕೃಂಬಿಗಲ್‌ ಉಪನ್ಯಾಸ ಹಾಲ್‌ ಅನ್ನು ಮರು ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆಯು ಪುರಾತತ್ವ ಇಲಾಖೆಗೆ ಮನವಿ ಮಾಡಿದೆ.

‘ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಹಾಲ್‌ನ ಭಾಗಶಃ ಕಟ್ಟಡವು 5 ದಿನಗಳ ಹಿಂದೆ ಕುಸಿದಿತ್ತು. ಅದರ ಅವಶೇಷಗಳನ್ನು ಬುಧವಾರ ತೆರವುಗೊಳಿಸುವಾಗ ಉಳಿದ ಭಾಗವೂ ಕುಸಿದಿತ್ತು’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಂ.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುರಾತತ್ವ ಇಲಾಖೆಯ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆಯ ಆಯುಕ್ತರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ, ಈ ಕಟ್ಟಡದ ಮರು ನಿರ್ಮಾಣವನ್ನು ಪುರಾತತ್ವ ಇಲಾಖೆಯೇ ವಹಿಸಿಕೊಳ್ಳಬೇಕು. ಇದರ ನೀಲನಕ್ಷೆ, ಅಂದಾಜು ಪಟ್ಟಿ ಸಲ್ಲಿಸಿದರೆ, ಅದಕ್ಕೆ ತಗಲುವ ವೆಚ್ಚವನ್ನು ತೋಟಗಾರಿಕೆ ಇಲಾಖೆ ನೀಡಲಿದೆ ಎಂದು ಆಯುಕ್ತರು ತಿಳಿಸಿದರು. 4–6 ವಾರಗಳಲ್ಲಿ ಅಂದಾಜು ಪಟ್ಟಿ ಸಲ್ಲಿಸುವುದಾಗಿ ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದರು’ ಎಂದರು.

‘ಕೃಂಬಿಗಲ್‌ ಹಾಲ್‌ನ ಸಾಮರ್ಥ್ಯದ ಬಗ್ಗೆ ಸಿವಿಲ್‌– ಏಡ್‌ ಟೆಕ್ನೋಕ್ಲಿನಿಕ್‌ ಪ್ರೈವೇಟ್‌ ಲಿಮಿಟೆಡ್‌ 2007ರಲ್ಲಿ ತಾಂತ್ರಿಕ ವರದಿ ಸಲ್ಲಿಸಿತ್ತು. ಕಟ್ಟಡದ ಗಾರೆ, ಕಬ್ಬಿಣವು ಸಾಮರ್ಥ್ಯ ಕಳೆದುಕೊಂಡಿವೆ. ಕಬ್ಬಿಣ ತುಕ್ಕು ಹಿಡಿದು ದುರ್ಬಲಗೊಂಡಿದೆ. ಈ ಕಟ್ಟಡವನ್ನು ನವೀಕರಣ ಮಾಡಬಹುದಾದರೂ ಅದಕ್ಕೆ ಅಧಿಕ ಹಣ ಖರ್ಚಾಗುತ್ತದೆ. ಜತೆಗೆ ಅದು ದೀರ್ಘಾವಧಿಯವರೆಗೆ ಸುಸ್ಥಿತಿಯಲ್ಲಿ ಇರುವುದಿಲ್ಲ. ಈ ಕಟ್ಟಡವನ್ನು ಕೆಡವಿ, ಮರು ನಿರ್ಮಾಣ ಮಾಡುವುದೇ ಸೂಕ್ತ ಎಂದು ವರದಿಯಲ್ಲಿ ಹೇಳಲಾಗಿತ್ತು’ ಎಂದು ವಿವರಿಸಿದರು.

‘ಈ ವರದಿಯನ್ನು ಲೋಕೋಪಯೋಗಿ ಇಲಾಖೆಯ ಪರಿಶೀಲನೆಗೆ ಕಳುಹಿಸಿಕೊಟ್ಟಿದ್ದೆವು. ಅದನ್ನು ಪರಿಶೀಲಿಸಿದ್ದ ಅಧಿಕಾರಿಗಳು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಿ, ಮರು ನಿರ್ಮಾಣ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು’ ಎಂದು ತಿಳಿಸಿದರು.

‘ಈ ಕಟ್ಟಡವನ್ನು ₹1.95 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಕೊಡುವುದಾಗಿ ಇಂಟ್ಯಾಕ್‌ ಸಂಸ್ಥೆಯು ಅಂದಾಜು ಪಟ್ಟಿ ಸಲ್ಲಿಸಿತ್ತು. ಲೋಕೋಪಯೋಗಿ ಇಲಾಖೆಯು ₹1.1 ಕೋಟಿ ವೆಚ್ಚದಲ್ಲಿ ನಿರ್ಮಿಸುವುದಾಗಿ ಅಂದಾಜು ಪಟ್ಟಿ ಸಲ್ಲಿಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಕೃಂಬಿಗಲ್‌ ಹಾಲ್‌ ಪುರಾತನ ಕಟ್ಟಡವಾಗಿರುವುದರಿಂದ ಪುರಾತತ್ವ ಇಲಾಖೆಯೇ ನಿರ್ಮಿಸಿದರೆ ಚೆನ್ನಾಗಿರುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಹೇಳಿದರು.

‘ಲಾಲ್‌ಬಾಗ್‌ನ ದಕ್ಷಿಣ ಗೇಟ್‌ ಬಳಿ ಪಾಳು ಬಿದ್ದ ಕಟ್ಟಡವಿತ್ತು. ಅದು ಸಹ ಕುಸಿದಿದ್ದು, ಅದರ ಅವಶೇಷಗಳನ್ನು ತೆರವುಗೊಳಿಸಿದ್ದೇವೆ. ಉದ್ಯಾನದಲ್ಲಿ ಸಂಗ್ರಹಗೊಳ್ಳುವ ಬಾಟಲಿ, ಪ್ಲಾಸ್ಟಿಕ್‌ ತ್ಯಾಜ್ಯವನ್ನು ಈ ಕಟ್ಟಡದಲ್ಲಿ ಹಾಕುತ್ತಿದ್ದೆವು. ಬಳಿಕ ಅದನ್ನು ತೆರವು ಮಾಡುತ್ತಿದ್ದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT