ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂಬಾಕು ಉತ್ಪನ್ನ ಮಾರಾಟಕ್ಕೆ ಪರವಾನಗಿ ಕಡ್ಡಾಯಗೊಳಿಸಿ’

Last Updated 23 ನವೆಂಬರ್ 2017, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ, ಮಳಿಗೆಗಳು ಪರವಾನಗಿ ಪಡೆಯುವುದನ್ನು ಕಡ್ಡಾಯ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಒತ್ತಾಯಿಸಿದರು.

ತಂಬಾಕು ಮುಕ್ತ ಕರ್ನಾಟಕ ಒಕ್ಕೂಟವು ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ತಂಬಾಕುಮುಕ್ತ ಮಕ್ಕಳು’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನು ಬಿಡಿಯಾಗಿ ಮಾರಾಟ ಮಾಡದಂತೆ ಆದೇಶ ಹೊರಡಿಸಲಾಗಿದೆ. ಆದರೆ, ಅದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈ ಉತ್ಪನ್ನಗಳನ್ನು ಎಷ್ಟು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಗುತ್ತಿಲ್ಲ. ಕೆಲವೆಡೆ ಬೀಡಿ, ಸಿಗರೇಟು ಜತೆಗೆ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಮಕ್ಕಳು ಇವುಗಳ ದಾಸರಾಗುತ್ತಿದ್ದಾರೆ. ಪರವಾನಗಿ ಪಡೆಯುವುದರಿಂದ ಅಂಗಡಿಗಳ ನಿಖರ ಮಾಹಿತಿ ಸಿಗುವ ಜತೆಗೆ, ಚಿಲ್ಲರೆ ಮಾರಾಟಕ್ಕೂ ಕಡಿವಾಣ ಹಾಕಬಹುದು’ ಎಂದು ತಿಳಿಸಿದರು.

‘ದೆಹಲಿಯಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಅದೇ ರೀತಿ, ರಾಜ್ಯದಲ್ಲೂ ಈ ಉತ್ಪನ್ನಗಳನ್ನು ನಿಷೇಧಿಸಬೇಕು ಎಂಬ ಪ್ರಸ್ತಾವವನ್ನು ಆರೋಗ್ಯ ಸಚಿವರಿಗೆ ಸಲ್ಲಿಸಿದ್ದೇನೆ’ ಎಂದು ಹೇಳಿದರು.

‘ದೇಶದಲ್ಲಿ ಪ್ರತಿದಿನ 1 ಲಕ್ಷ ಮಕ್ಕಳು ತಂಬಾಕು ಉತ್ಪನ್ನಗಳ ವ್ಯಸನಿಗಳಾಗುತ್ತಿದ್ದಾರೆ. ಇದರಲ್ಲಿ ಶೇ 50ರಷ್ಟು ಮಕ್ಕಳು ಅತಿಯಾದ ಧೂಮಪಾನ ಮಾಡುತ್ತಿದ್ದಾರೆ’ ಎಂದರು.

ಕ್ರೀಡಾಪಟು ಅರ್ಜುನ್‌ ದೇವಯ್ಯ, ‘ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬೀಡಿ–ಸಿಗರೇಟು ಮಾರಾಟ ನಿಷೇಧಿಸಬೇಕು. ಇ–ಸಿಗರೇಟು ನಿಷೇಧದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಚಲನಚಿತ್ರ, ವಾಹಿನಿ, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ವೇಮನ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಪ್ರದ್ಯುಮ್ನ, ‘ತಂಬಾಕು ಉತ್ಪನ್ನಗಳು ದೇಶದ ಅಭಿವೃದ್ಧಿಗೆ ಮಾರಕವಾಗಿವೆ. ಅವುಗಳನ್ನು ಯುವಜನರಿಂದ ದೂರವಿಡುವಂತೆ ನೋಡಿಕೊಳ್ಳಬೇಕು’ ಎಂದರು.

ಎನ್‌ಬಿಎನ್‌ ವಿದ್ಯಾ ಮಂದಿರ, ಆಚಾರ್ಯ ತಾಂತ್ರಿಕ ಕಾಲೇಜು, ಆರ್‌ಜೆಎನ್‌ ಪ್ರಥಮ ದರ್ಜೆ ಕಾಲೇಜು ಸೇರಿ 10 ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ‘ತಂಬಾಕು ಬೇಡ, ನಮ್ಮ ಭವಿಷ್ಯ ಉಳಿಸಿ’, ‘ಮಕ್ಕಳ ರಕ್ಷಣೆ ಉದ್ದೇಶದಿಂದ ತಂಬಾಕು ನಿಯಂತ್ರಿಸಿ’, ‘ಬೀಡಿ–ಸಿಗರೇಟು, ಇ–ಸಿಗರೇಟು ನಿಷೇಧ ಜಾರಿಗೊಳಿಸಿ’ ಎಂಬ ಘೋಷವಾಕ್ಯಗಳ ಫಲಕಗಳನ್ನು ಹಿಡಿದು ಅರಿವು ಮೂಡಿಸಿದರು.

‘ಸೈನೈಡ್‌ಗಿಂತ ನಿಕೋಟಿನ್‌ ವಿಷಕಾರಿ’
‘ಒಂದು ಸಿಗರೇಟಿನಲ್ಲಿ 1 ಮಿಲಿ ಗ್ರಾಂ ನಿಕೋಟಿನ್‌ ಇರುತ್ತದೆ. ಇದು ಸೈನೈಡ್‌ಗಿಂತಲೂ ಹೆಚ್ಚಿನ ವಿಷಕಾರಿಯಾದದ್ದು. ಇದನ್ನು ಚುಚ್ಚುಮದ್ದಿನ ಮೂಲಕ ನೀಡಿದರೆ ಮನುಷ್ಯ ಕ್ಷಣಮಾತ್ರದಲ್ಲೇ ಸಾಯುತ್ತಾನೆ’ ಎಂದು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ತಿಳಿಸಿದರು.

‘ಎಲ್ಲ ಸೊಪ್ಪುಗಳನ್ನೂ ತಿನ್ನುವ ಕುರಿ, ಆಡುಗಳು ಹೊಗೆಸೊಪ್ಪನ್ನು ತಿನ್ನುವುದಿಲ್ಲ. ಅವುಗಳಿಗೆ ಇರುವಷ್ಟು ಪ್ರಜ್ಞೆ ಮನುಷ್ಯರಿಗಿಲ್ಲ. ತಂಬಾಕು ಉತ್ಪನ್ನಗಳ ಸೇವನೆಯಿಂದ ಮಿದುಳು, ಹೃದಯ, ಶ್ವಾಸಕೋಶಕ್ಕೆ ಹಾನಿ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಜನ ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT