ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಪಾಂಡೆ ಪ್ರಕರಣ: ಮಧ್ಯಂತರ ವರದಿಯಷ್ಟೇ ಸಾಧನೆ

Last Updated 23 ನವೆಂಬರ್ 2017, 19:42 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಆರ್‌.ವಿ. ದೇಶಪಾಂಡೆ ಪ್ರಕರಣ ಸೇರಿದಂತೆ ನಗರ ಜಿಲ್ಲೆಯ ಅರಣ್ಯ ಜಮೀನು ಒತ್ತುವರಿ ಪ್ರಕರಣಗಳ ಕುರಿತು ಪರಿಶೀಲಿಸಲು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು ಅಂತಿಮ ವರದಿಯನ್ನೇ ಸಲ್ಲಿಸಿಲ್ಲ. ಆದರೆ, ಸಮಿತಿಯ ಅವಧಿ ಪೂರ್ಣವಾಗಿದೆ.

ಮುಖ್ಯ ಕಾರ್ಯದರ್ಶಿ ನೇತೃತ್ವದ 16 ಅಧಿಕಾರಿಗಳ ಸಮಿತಿಯ ಅವಧಿ 2017ರ ಅಕ್ಟೋಬರ್‌ 26ಕ್ಕೆ ಮುಕ್ತಾಯಗೊಂಡಿದೆ. ಎರಡು ವರ್ಷಗಳ ಅವಧಿಯಲ್ಲಿ ಸಮಿತಿ ಏಳು ಸಭೆಗಳನ್ನಷ್ಟೇ ನಡೆಸಿತ್ತು.

‘ಜಕ್ಕೂರು ವಾಯುನೆಲೆ ಪಕ್ಕದ 177 ಎಕರೆ 28 ಗುಂಟೆ ಅರಣ್ಯ ಜಮೀನು ಒತ್ತುವರಿ ಆಗಿದೆ. ಒತ್ತುವರಿ ಮಾಡಿಕೊಂಡವರಲ್ಲಿ ರಾಧಾ ಮತ್ತು ಆರ್‌.ವಿ. ದೇಶಪಾಂಡೆ (ಐದು ಎಕರೆ ಒತ್ತುವರಿ) ಸೇರಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು 2015ರ ಸೆಪ್ಟೆಂಬರ್‌ 21ರಂದು ಆರೋಪ ಮಾಡಿದ್ದರು.

ಆ ಬಳಿಕ ಉನ್ನತ ಮಟ್ಟದ ಸಮಿತಿಯನ್ನು 2015ರ ಅಕ್ಟೋಬರ್‌ 26ರಂದು ರಚಿಸಲಾಗಿತ್ತು. ‘ಸಮಿತಿ ತಿಂಗಳಿಗೆ ಕನಿಷ್ಠ ಎರಡು ಸಭೆ ನಡೆಸಬೇಕು. ಪ್ರತಿ ತಿಂಗಳು ಮಧ್ಯಂತರ ವರದಿಯನ್ನು ಇಲಾಖೆಗೆ ಸಲ್ಲಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

‘ಸಮಿತಿಗೆ ವಹಿಸಿದ್ದ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ನಗರ ಅರಣ್ಯಗಳ ಜಂಟಿ ಸಮೀಕ್ಷೆ ನಡೆಯುತ್ತಿದೆ. ನಗರದಲ್ಲಿ ಜಾಗದ ಬೆಲೆ ಗಗನಕ್ಕೆ ಏರಿದೆ. ಹಲವು ಕಡೆಗಳಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದೆ. ಕೆಲವು ಕಡೆಗಳಲ್ಲಿ ಭೋಗ್ಯಕ್ಕೆ ಕೊಡಲಾಗಿದೆ. ಅರಣ್ಯ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಅರಣ್ಯ ಹಾಗೂ ಕಂದಾಯ ಇಲಾಖೆಗಳ ನಡುವೆ ಅಭಿಪ್ರಾಯಭೇದ ಇದೆ. ಇದಕ್ಕೆಲ್ಲ ಒಂದು ತಾರ್ಕಿಕ ಅಂತ್ಯ ಕಂಡುಹಿಡಿಯಬೇಕು. ಹೀಗಾಗಿ ಸಮಿತಿಯ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಬೇಕು’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಅವರು  2016ರ ಅಕ್ಟೋಬರ್‌ 25ರಂದು ಪ್ರಸ್ತಾವ ಸಲ್ಲಿಸಿದ್ದರು. ‘ಈ ಸಮಿತಿಯ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ’ ಎಂದು ಈ ವರ್ಷದ ಜನವರಿ 23ರಂದು ಆದೇಶ ಹೊರಡಿಸಲಾಗಿತ್ತು.

ಮಧ್ಯಂತರ ವರದಿ ಸಲ್ಲಿಕೆ: ಸಮಿತಿಯು 2015ರ ಡಿಸೆಂಬರ್‌ 26ರಂದು (ಮುಖರ್ಜಿ ಅವರು ನಿವೃತ್ತಿಯಾಗುವುದಕ್ಕೆ ನಾಲ್ಕು ದಿನ ಮುಂಚೆ) ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿತ್ತು.

‘ಜಕ್ಕೂರು– ಅಲ್ಲಾಳಸಂದ್ರ ಪ್ಲಾಂಟೇಷನ್‌ ಒತ್ತುವರಿಯಾಗಿದೆ ಎನ್ನಲಾದ ಜಾಗವು ಅರಣ್ಯ ಇಲಾಖೆಗೆ ಸೇರಿದ್ದಲ್ಲ’ ಎಂದು ವರದಿಯಲ್ಲಿ ತಿಳಿಸಿತ್ತು. ‘ಜಕ್ಕೂರು–ಅಲ್ಲಾಳಸಂದ್ರ ಪ್ಲಾಂಟೇಷನ್‌ ಮೀಸಲು ಅರಣ್ಯದ ಜಾಗವು 1949 ಹಾಗೂ 1956ರ ಸಮಯದಲ್ಲಿ ಅರಣ್ಯದ ಸ್ವರೂಪ ಕಳೆದುಕೊಂಡಿತ್ತು. ಈ ಜಾಗವನ್ನು ಕಂದಾಯ ಇಲಾಖೆಗೆ ಹಿಂತಿರುಗಿಸಲಾಗಿತ್ತು’ ಎಂದು ತಿಳಿಸಿತ್ತು. ‘ಸಮಿತಿಯ ಸದಸ್ಯರೊಂದಿಗೆ ಚರ್ಚಿಸದೆ ಕೌಶಿಕ್‌ ಮುಖರ್ಜಿ ಈ ವರದಿ ಸಲ್ಲಿಸಿದ್ದರು. ದೇಶಪಾಂಡೆ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಈ ವರದಿ ಇತ್ತು. ವರದಿಯ ಬಗ್ಗೆ ಸಮಿತಿಯ ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡಿದ್ದರು’ ಎಂದು ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿನಾರಾಯಣ ತಿಳಿಸಿದರು. ಸಮಿತಿಯ ಸದಸ್ಯರಾಗಿದ್ದ ಲಕ್ಷ್ಮಿನಾರಾಯಣ, ಮೂರು ತಿಂಗಳ ಹಿಂದೆ ನಿವೃತ್ತರಾಗಿದ್ದರು.

24 ದಿನಗಳಲ್ಲೇ ಸಮಿತಿ ಬದಲು: ಒತ್ತುವರಿಯ ಪರಿಶೀಲನೆ ನಡೆಸಲು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯು.ವಿ. ಸಿಂಗ್‌ ನೇತೃತ್ವದ 16 ಸದಸ್ಯರ ಸಮಿತಿಯನ್ನು ಅರಣ್ಯ ಇಲಾಖೆ 2015ರ ಅಕ್ಟೋಬರ್‌ 2ರಂದು ರಚಿಸಿತ್ತು. ಸಮಿತಿಯ ಕಾಲಾವಧಿ 2 ವರ್ಷ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಸಮಿತಿ ಅಕ್ಟೋಬರ್‌ 8ರಂದು ಮೊದಲ ಸಭೆ ನಡೆಸಿತ್ತು. ಈ ಸಮಿತಿ ವ್ಯಾಜ್ಯ ಇರುವ 25 ಅರಣ್ಯ ಪ್ರದೇಶಗಳ ಪರಿಶೀಲನೆಗೆ ಸಿದ್ಧತೆ ಮಾಡಿಕೊಂಡಿತ್ತು. ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಲು ಇರುವ ಅಧಿಕಾರದ ಬಗ್ಗೆ ಅರಣ್ಯ ಇಲಾಖೆಯಿಂದ ಸಮಿತಿ ಸ್ಪಷ್ಟನೆ ಕೇಳಿತ್ತು.

ಕೆಲವೇ ದಿನಗಳಲ್ಲಿ ಅರಣ್ಯ ಇಲಾಖೆ ಈ ಸಮಿತಿಯನ್ನು ರದ್ದುಪಡಿಸಿತ್ತು. ಅಕ್ಟೋಬರ್‌ 26ರಂದು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿ ಆದೇಶಿಸಲಾಗಿತ್ತು. ಯು.ವಿ. ಸಿಂಗ್‌ ಅವರನ್ನು ಸಮಿತಿಯ ಸದಸ್ಯರನ್ನಾಗಿ ಉಳಿಸಿಕೊಳ್ಳಲಾಗಿತ್ತು. ಮೊದಲ ಸಮಿತಿಯಲ್ಲಿದ್ದ ನಿವೃತ್ತ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟಸುಬ್ಬಯ್ಯ ಅವರನ್ನು ಸಮಿತಿಯಿಂದ ಕೈಬಿಡಲಾಗಿತ್ತು. ಸಮಿತಿಯ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಲಾಗಿತ್ತು.

‘ಅರಣ್ಯ ಒತ್ತುವರಿ ತನಿಖೆ ಮತ್ತು ತೆರವು ವಿಚಾರ ಒಂದಕ್ಕಿಂತ ಹೆಚ್ಚು ಇಲಾಖೆಗಳ ವ್ಯಾಪ್ತಿಗೆ ಬರುವುದರಿಂದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಲಾಗಿದೆ’ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಸ್ಪಷ್ಟನೆ ನೀಡಿದ್ದರು.

‘ನಗರದಲ್ಲಿ ಅಳಿದುಳಿದಿರುವ ಅರಣ್ಯ ಪ್ರದೇಶಗಳ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರದೇಶ ಕುಗ್ಗುತ್ತಿದೆ. ಸುಮಾರು 6 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಆದರೆ, ಸಮಿತಿ ಒಂದೇ ಒಂದು ಗುಂಟೆ ಅರಣ್ಯ ಭೂಮಿಯನ್ನೂ ವಾಪಸ್‌ ಪಡೆಯಲು ಶಿಫಾರಸು ಮಾಡಿಲ್ಲ’ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT