ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ ಕಾನ್‌ಕಾರ್ಡ್‌ ಶಾಲೆ ವಿರುದ್ಧ ಪ್ರತಿಭಟನೆ

Last Updated 23 ನವೆಂಬರ್ 2017, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಯಾಣ ನಗರದ ರಾಯಲ್ ಕಾನ್‍ಕಾರ್ಡ್ ಅಂತರರಾಷ್ಟ್ರೀಯ ಶಾಲೆಯ ಕಟ್ಟಡಕ್ಕೆ ಅಳವಡಿಸಿದ್ದ ಗಾಜು ಕಳಚಿ ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದರಿಂದ ಆಕ್ರೋಶಗೊಂಡ ಪೋಷಕರು ಶಾಲೆಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಪೋಷಕರು ಹಾಗೂ ಶಿಕ್ಷಕರ ಅಸೋಸಿಯೇಷನ್ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ನೂರಾರು ಪೋಷಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಜೆಡಿಎಸ್ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಅವರಿಗೆ ಸೇರಿದ ಕಾನ್‌ಕಾರ್ಡ್‌ ಶಾಲೆ ಇದಾಗಿದೆ. ಇಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಬಗ್ಗೆ ಸಾಕಷ್ಟು ಬಾರಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ, ಆಡಳಿತ ಮಂಡಳಿಯು ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಕಿಡಿಕಾರಿದರು.

ಈ ಶಾಲೆಯಲ್ಲಿ ಮಕ್ಕಳಿಗೆ ರಕ್ಷಣೆ ಇಲ್ಲ. ಬುಧವಾರ ನಡೆದ ಅವಘಡದಿಂದ ಇತರ ಮಕ್ಕಳೂ ಭಯಗೊಂಡಿದ್ದಾರೆ. ಹೀಗಾಗಿ, ಅವರನ್ನು ಶಾಲೆಗೆ ಕಳುಹಿಸುವುದಿಲ್ಲ. ಈ ಹಿಂದೆಯೂ ಇಂಥ ಅನಾಹುತಗಳು ಸಂಭವಿಸಿದ್ದರೂ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.

ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಶಿವರಾಮೇಗೌಡ ಅವರು ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಪೋಷಕರ ಮನವೊಲಿಸಿದರು. ಜತೆಗೆ ಶಾಲೆಗೆ ಗುರುವಾರದಿಂದ (ನ.23) ಮೂರು ದಿನಗಳ ಕಾಲ ರಜೆ ಘೋಷಿಸಿದರು.

ಘಟನೆ ವಿವರ: ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಶಾಲೆಯ ಕಾರಿಡಾರ್‌ನಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಇದೇ ವೇಳೆ ಕಟ್ಟಡದ ಮೂರನೇ ಮಹಡಿಯಿಂದ ಗಾಜು ಕೆಳಗೆ ಬಿದ್ದಿದೆ. ಅಲ್ಲೇ ಇದ್ದ ನಾಲ್ವರು ವಿದ್ಯಾರ್ಥಿಗಳ ತಲೆ ಹಾಗೂ ದೇಹಕ್ಕೆ ಗಾಜಿನ ಚೂರುಗಳು ಬಡಿದಿವೆ ಎಂದು ಶಾಲಾ ಸಿಬ್ಬಂದಿ ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಶಾಲಾ ಸಿಬ್ಬಂದಿ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವಾಟ್ಸ್‌ಆ್ಯಪ್ ಮೂಲಕ ಪೋಷಕರ ಗಮನಕ್ಕೆ ತಂದಿದ್ದಾರೆ. ಅವಘಡದಿಂದ ಆತಂಕಗೊಂಡ ಪೋಷಕರು ಶಾಲೆಯ ಮುಂದೆ ಬೆಳಿಗ್ಗೆ ಸೇರಿ ಪ್ರತಿಭಟನೆ ಮಾಡಿದರು ಎಂದು ಪೊಲೀಸರು ತಿಳಿಸಿದರು.

ನಾಲ್ವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ. ಇನ್ನಿಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT