ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ನಾಲ್ಕರ ಬಾಲಕನ ಮೇಲೆ ಅತ್ಯಾಚಾರ ದೂರು

Last Updated 23 ನವೆಂಬರ್ 2017, 19:54 IST
ಅಕ್ಷರ ಗಾತ್ರ

ನವದೆಹಲಿ: ತನ್ನ ಸಹಪಾಠಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದೆಹಲಿಯ ಖಾಸಗಿ ಶಾಲೆಯೊಂದರ ನಾಲ್ಕೂವರೆ ವರ್ಷದ ಬಾಲಕನ ಮೇಲೆ ಪೊಲೀಸರು ಪೋಕ್ಸೊ ಅಡಿ ಪ್ರಕರಣ ದಾಖಲಿಸಿದ್ದಾರೆ.

‘ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ ನಾಲ್ಕೂವರೆ ವರ್ಷದ ಬಾಲಕನನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ವಿಚಾರಣೆಗೆ ಒಳಪಡಿಸಬಹುದೇ ಎಂಬ ಪ್ರಶ್ನೆ ಎದುರಾಗಿದೆ. ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಐಪಿಸಿ ಕೆಲವು ವಿನಾಯಿತಿಗಳನ್ನು ನೀಡುತ್ತದೆ. ಹೀಗಾಗಿ ಈ ಪ್ರಕರಣವನ್ನು ಬಹಳ ಸೂಕ್ಷ್ಮವಾಗಿ ನಿರ್ವಹಿಸುತ್ತಿದ್ದೇವೆ’ ಎಂದು ದೆಹಲಿ ಪೊಲೀಸ್ ವಕ್ತಾರ ದೀಪೇಂದ್ರ ಪಾಠಕ್ ಮಾಹಿತಿ ನೀಡಿದ್ದಾರೆ‌.

‘ಮಗಳು ರಾತ್ರಿ ಮನೆಯಲ್ಲಿ ಅಳುತ್ತಿದ್ದಳು. ಏಕೆ ಎಂದು ವಿಚಾರಿಸಿದಾಗ ನಡೆದ ಸಂಗತಿಯನ್ನು ಹೇಳಿದಳು. ಆತ ನನ್ನ ಮಗಳ ಖಾಸಗಿ ಅಂಗವನ್ನು ಬೆರಳು ಮತ್ತು ಮೊನಚಾದ ಪೆನ್ಸಿಲ್‌ನಿಂದ ತಿವಿದಿದ್ದಾನೆ. ‘ತರಗತಿ ಕೊಠಡಿ ಮತ್ತು ಶೌಚಾಲಯದಲ್ಲಿ ಹಾಗೆ ಮಾಡಿದ. ಆಗ ತರಗತಿಯಲ್ಲಿ ಶಿಕ್ಷಕಿ ಇರಲಿಲ್ಲ. ಶೌಚಾಲಯದಲ್ಲಿ ಆಯಾ ಇರಲಿಲ್ಲ’ ಎಂದು ನನ್ನ ಮಗಳು ಹೇಳಿದ್ದಾಳೆ’ ಎಂದು ಸಂತ್ರಸ್ತ ಬಾಲಕಿಯ ತಾಯಿ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

‘ದೌರ್ಜನ್ಯ ನಡೆದಿರುವುದು ತಿಳಿದ ನಂತರ ಅವರು ತಮ್ಮ ಮಗಳ ತರಗತಿ ಶಿಕ್ಷಕರಿಗೆ ಅದೇ ರಾತ್ರಿ ಎಸ್‌ಎಂಎಸ್‌ ಮೂಲಕ ವಿಷಯ ಮುಟ್ಟಿಸಿದ್ದಾರೆ. ಮಾರನೆಯ ದಿನ ಶಾಲೆಗೆ ಬರುವಂತೆ ಶಿಕ್ಷಕಿ ಆ ಮಹಿಳೆಗೆ ಸೂಚಿಸಿದ್ದಾರೆ. ‘ನಿಮ್ಮ ಮಗಳನ್ನು ಶಾಲೆಗೆ ಕಳುಹಿಸಿ. ಆ ಬಾಲಕನನ್ನು ಬೇರೆ ವಿಭಾಗಕ್ಕೆ ಕಳುಹಿಸಿದ್ದೇವೆ’ ಎಂದು ಶಾಲೆಯ ಪ್ರಾಂಶುಪಾಲರು ಸೂಚಿಸಿದ್ದಾರೆ. ಈ ಬಗ್ಗೆ ಅಸಮಾಧಾನಗೊಂಡಿರುವ ಮಹಿಳೆ ಶಾಲೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಆ ಸಂಬಂಧವೂ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಬಾಲಕನನ್ನು ಶಾಲೆಯಿಂದ ತೆಗೆದು ಹಾಕುವಂತೆ ಸಂತ್ರಸ್ತ ಬಾಲಕಿಯ ತಾಯಿ ಒತ್ತಾಯಿಸಿದ್ದಾರೆ. ಬಾಲಕನ ಆಪ್ತಸಮಾಲೋಚನೆಗೆ ಸ್ವಯಂ ಸೇವಾ ಸಂಸ್ಥೆಯೊಂದು ಮುಂದಾಗಿದೆ. ನಿರ್ಲಕ್ಷ್ಯದ ಆರೋಪವನ್ನು ಶಾಲಾ ಆಡಳಿತ ಮಂಡಳಿ ನಿರಾಕರಿಸಿದೆ.

‘ಶಾಲೆಯ ಕೊಠಡಿ ಮತ್ತು ಶೌಚಾಲಯದಲ್ಲಿ ಇರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯ ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಶಾಲೆಗೆ ನೋಟಿಸ್
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರು ಮತ್ತು ಮೂವರು ಸಿಬ್ಬಂದಿಗೆ ದೆಹಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನೋಟಿಸ್ ಜಾರಿ ಮಾಡಿದೆ. ನವೆಂಬರ್ 27ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಆಯೋಗ ಸೂಚಿಸಿದೆ.

ಪ್ರಕರಣ ಸಂಬಂಧ ಕ್ರಮ ತೆಗದುಕೊಂಡಿರುವ ಬಗ್ಗೆ ಏಳು ದಿನಗಳ ಒಳಗೆ ವರದಿ ನೀಡಿ ಎಂದು ದೆಹಲಿ ಪೊಲೀಸರಿಗೂ ನೋಟಿಸ್ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT